ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್‌ ಅವಿರೋಧ ಆಯ್ಕೆ

ಶ್ರೀ ರಾಮೇಶ್ವರ ದೇವಾಸ್ಥಾನದ ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷರಾಗಿ ಹಾಲಿಗೆ ನಾಗರಾಜ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಡಿ.ಎಸ್.ವಿಶ್ವನಾಥ ಶೆಟ್ಟರ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ ಕಾರಣ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಹಾಲಿಗೆ ನಾಗರಾಜ್‌ ಮೂಲತಃ 1982ರಲ್ಲಿ ವರಾಹಿ ಮುಳುಗಡೆ ಹೋರಾಟ ಸಮಿತಿ ಮೂಲಕ ಬೆಳಕಿಗೆ ಬಂದ ಪ್ರಭಾವಿ ರಾಜಕಾರಣಿಯಾಗಿದ್ದು ಬಳಿಕ ಮಾಜಿ ಶಾಸಕ ಡಿ.ಬಿ.ಚಂದ್ರೇಗೌಡ ಕಾಲದಲ್ಲಿ ಅವರ ಆಪ್ತ ಬಳಗದವರಲ್ಲಿ ಒಬ್ಬರಾಗಿ ಮುಂಚೂಣಿಗೆ ಬಂದಿದ್ದರು. ಚನತಾದಳದಲ್ಲಿ ಉಪಾಧ್ಯಕ್ಷ, ಯುವ ಜನತಾದಳದಲ್ಲಿ ಅಧ್ಯಕ್ಷ, ಕಾರ್ಯದರ್ಶಿಯಾಗಿಯೂ ಗಮನಾರ್ಹ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. 1995ರಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾಗಿಯೂ ಪ್ರಭಾವಶಾಲಿ ಮಾತುಗಳಿಂದ ಗಮನ ಸೆಳೆದಿದ್ದರು. ಮುಂದೆ ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡರು.

ತಾಲ್ಲೂಕು ಹಾಗೂ ಜಿಲ್ಲಾ ಕೃಷಿಕ ಸಮಾಜದ ಸದಸ್ಯನಾಗಿ 20 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಗೆ ಅವರಿಗಿದೆ. 2007ರಿಂದ ಪ್ರತಿಷ್ಟಿತ ಮಲೆನಾಡು ಕ್ಲಬ್‌ ನಿರ್ದೇಶಕರಾಗಿಯೂ ಅವರು ಆಯ್ಕೆಯಾಗಿದ್ದರು. 1996ರಿಂದ 2004ರ ವರೆಗೆ ರಾಮೇಶ್ವರ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಸದಸ್ಯನಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ಕ್ಷೇತ್ರ ದೇವರ ರಥದ ಚಕ್ರಕ್ಕೂ ಕಿರಿಕ್‌

ಶ್ರೀ ರಾಮೇಶ್ವರ ದೇವಸ್ಥಾನ ಪುರಾಣ ಹಾಗೂ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಕ್ಷೇತ್ರ ದೇವತೆ ಎಂಬ ಹೆಗ್ಗಳಿಕೆಯೂ ಈ ದೇವಾಲಯಕ್ಕಿದೆ. ಸುಮಾರು 100 ವರ್ಷಕ್ಕೂ ಹಳೆಯದಾದ ದೇವಳದ ರಥದ ಚಕ್ರ ಶಿಥಿಲಗೊಂಡಿದ್ದು ಉತ್ಸವ ಹಾಗೂ ಸಂಚಾರಕ್ಕೆ ಅದು ಯೋಗ್ಯವಲ್ಲದ ಕಾರಣ ಹೊಸ ಚಕ್ರವನ್ನು ಅಳವಡಿಸಲು ಪ್ರಯತ್ನ ನಡೆದಿತ್ತು. ಈ ಸಂಬಂಧ ಮೇಳಿಗೆಯಲ್ಲಿ ಮರವನ್ನು ಕೂಡ ಸಂಗ್ರಹಿಸಲಾಗಿತ್ತು. ವಿಚಿತ್ರವೆಂದರೆ ಹಾಗೆ ಸಂಗ್ರಹಿಸಿದ ಮರ ದೇವಸ್ಥಾನದ ಉಪಯೋಗಕ್ಕೆ ಎಂದು ಗೊತ್ತಿದ್ದರು ಅರಣ್ಯ ಇಲಾಖೆ ಅದನ್ನು ಅಕ್ರಮ ಎಂದು ಕೇಸು ಜಡಿದು ವಶಪಡಿಸಿಕೊಂಡಿತ್ತು. ಈ ಸುದ್ದಿ ಹತ್ತು ಹಲವು ಊಹಾಪೋಹಗಳಿಗೆ ಕಾರಣವಾಗಿ ಅಂತಿಮವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ತಾವೇ ವೈಯಕ್ತಿಕವಾಗಿ ನಾಟಕ್ಕೆ ತಗಲುವ 2 ಲಕ್ಷ ರೂಗೂ ಹೆಚ್ಚಿನ ಮೊತ್ತವನ್ನು ಪಾವತಿಸಿ ಕಾರ್ಕಳದಿಂದ ಮರದ ದಿಮ್ಮಿಯನ್ನು ತರಿಸಿ ಈಗ ಕೆಲಸ ಪೂರ್ಣಗೊಂಡು ರಥಕ್ಕೆ ಅಳವಡಿಸಲಾಗಿದೆ.

ಆದರೆ ದೇವಾಲಯಕ್ಕೆ ಯಾರೋ ಭಕ್ತಾದಿಗಳು ಕೊಡುಗೆ ನೀಡಿದಾಗಲೂ ಅದನ್ನು ದೇವಸ್ಥಾನಕ್ಕೆ ಉಪಯೋಗಿಸಿಕೊಳ್ಳಲಾರದ ಸನ್ನಿವೇಶ ಏಕೆ ಸೃಷ್ಟಿಯಾಯಿತು ಎನ್ನುವ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಇಷ್ಟು ಸಣ್ಣ ಪ್ರಮಾಣದ ನಾಟಕ್ಕೆ ಕೇಸು ಹಾಕಬೇಡಿ ಎಂದು ವ್ಯವಸ್ಥಾಪನ ಸಮಿತಿ ಕಂಡ ಕಂಡಲ್ಲಿ ಅಲೆದಾಡಿ ಬಳಿಕ ಈ ಪರಿಸ್ಥಿತಿಯಿಂದ ಅಸಮಾಧಾನಗೊಂಡ ಕಿಮ್ಮನೆ ಇದಕ್ಕೆ ಸ್ಪಂದಿಸಬೇಕಾದ ಪರಿಸ್ಥಿತಿ ಯಾಕಾಗಿ ಉದ್ಭವಿಸಿತು ಎನ್ನುವುದಕ್ಕೆ ವ್ಯವಸ್ಥಾಪನ ಮಂಡಳಿ ಸ್ಪಷ್ಟವಾಗಿ ಉತ್ತರಿಸಿಲ್ಲ. ಕಾನೂನು ಪ್ರಕಾರವೇ ಎಲ್ಲವು ಆಗಬೇಕು ಎಂದಾದರೆ ತೀರ್ಥಹಳ್ಳಿಯ ನೂರಾರು ದೇವಾಲಯ, ಜಾತಿ ಸಂಘಗಳಿಗೆ ಲಕ್ಷಾಂತರ ರೂಪಾಯಿ ಮರಳು ಪೂರೈಕೆಯಾದಾಗ ಆರಣ್ಯ, ಪೊಲೀಸ್‌, ಗಣಿಗಾರಿಕೆ ಇಲಾಖೆ ಸಾಮಾಜಿಕ ಕಾಳಜಿಯ ದೆಸೆಯಿಂದ ಸ್ಪಂದಿಸಿದ್ದವು. ಎಲ್ಲೂ ರಾದಾಂತಗಳು ನಡೆದಿರಲಿಲ್ಲ. ಆದರೆ ಶ್ರೀ ರಾಮೇಶ್ವರ ದೇವರ ವಿಚಾರದಲ್ಲಿ ಮಾತ್ರ ಕಾನೂನು ಪ್ರಶ್ನೆ ಉದ್ಭವಿಸಿರುವುದಕ್ಕೆ ಯಾರೆಲ್ಲಾ ಕಾರಣ ಎನ್ನುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post