ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಸಿಸಿಟಿವಿ ಕಣ್ಗಾವಲು
ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ರಥಬೀದಿಯಲ್ಲಿ ಅಳವಡಿಸಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಪೊಲೀಸ್ ಡಿ ವೈ ಎಸ್ ಪಿ ಅರವಿಂದ ಎನ್. ಕಲಗುಜ್ಜಿ ತಿಳಿಸಿದರು.
ವಾಹನ ದಟ್ಟಣೆ ಹೆಚ್ಚಾಗುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ತಾಲ್ಲೂಕು ಕ್ರೀಡಾಂಗಣ, ಎಪಿಎಂಸಿ ಆವರಣ, ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲಾ ಕ್ರೀಡಾಗಣದಲ್ಲಿ ನಾಲ್ಕು ಚಕ್ರ ಹಾಗೂ ಕುವೆಂಪು ಶಾಲೆ, ಸಂಸೃತಿ ಮಂದಿರದ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ತೀರ್ಥಸ್ನಾನ, ರಥೋತ್ಸವ, ತೆಪ್ಪೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಜನಸಂದಣಿ ನಿಯಂತ್ರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜಾತ್ರಾ ಸಮಿತಿ, ಪಟ್ಟಣ ಪಂಚಾಯಿತಿ ಸಹಕಾರದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು (ಎಸ್ಡಿಆರ್ಎಫ್) ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಬಳಸಿಕೊಳ್ಳಲಾಗುವುದು. ಕಡ್ಡಾಯವಾಗಿ ಈ ಬಾರಿ ಭಿ ಕ್ಷಾಟನೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಗಾಂಜಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರವಾಗಿದೆ. ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಅಮಾಯಕ ಜನರಿಂದ ಕ್ರಿಪ್ಟೋ ಕರೆನ್ಸಿ, ಮನಿಡಬ್ಲಿಂಗ್, ಆನ್ಲೈನ್ ಮಾರ್ಕೆಟಿಂಗ್, ರಿಯಾಯಿತಿ ದರದಲ್ಲಿ ಲೇಔಟ್ ಮಾಡಿಕೊಡುವ ಜಾಲಗಳು ಹೆಚ್ಚಾಗುತ್ತಿವೆ. ಇಂತಹ ಆಮಿಷಗಳ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ತೀರ್ಥಹಳ್ಳಿ ಇನ್ಸಪೆಕ್ಟರ್ ಇಮ್ರಾನ್ ಬೇಗ್, ಮಾಳೂರು ಇನ್ಸಪೆಕ್ಟರ್ ರಾಜಶೇಖರ್, ಆಗುಂಬೆ ಎಸ್ಐ ಶಿವನಗೌಡ ಇದ್ದರು.