ಸೇವೆಯ ಗುಣಮಟ್ಟ ಹೆಚ್ಚಳಕ್ಕೆ ಮನೋಲ್ಲಾಸ ಹೆಚ್ಚಿಸುವ ಕಾರ್ಯ ಚಟುವಟಿಕೆಗಳು ಸಹಕಾರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ.ಎಸ್.

ತೀವ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖಾ ಅಧಿಕಾರಿ ನೌಕರರ ಒತ್ತಡ ನಿರ್ವಹಣೆಗೆ ಸೇವೆಯ ಗುಣಮಟ್ಟ ಹೆಚ್ಚಳಕ್ಕೆ ಅವರ ಮನೋಲ್ಲಾಸ ಹೆಚ್ಚಿಸುವ ಕಾರ್ಯ ಚಟುವಟಿಕೆಗಳು ಸಹಕಾರಿಯಾಗಿದೆ. ಅಧಿಕಾರಿ ನೌಕರರಲ್ಲಿ ಸಾಮರಸ್ಯವನ್ನು ತುಂಬುವ. ಉತ್ಸಾಹವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿರುವ ತೀರ್ಥಹಳ್ಳಿ ಆರೋಗ್ಯ ಇಲಾಖಾ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಕೆ ಎಸ್ ನುಡಿದರು. ಅವರು ತೀರ್ಥಹಳ್ಳಿ ಸಂಘದ ವಿಶಿಷ್ಟ "ಸಂಭ್ರಮ" ಕಾರ್ಯಕ್ರಮ ಸರಣಿಯ ಹನ್ನೊಂದನೇ ಕಾರ್ಯಕ್ರಮ "ಸಂಭ್ರಮ-2025" ನ್ನು ಉಧ್ಘಾಟಿಸಿ ಮಾತನಾಡಿದರು.

ಸಂಘದ ಜಿಲ್ಲಾಧ್ಯಕ್ಷ ವೈ ಜಿ ಶಶಿಕುಮಾರ್ ಮಾತನಾಡಿ, ಹತ್ತಾರು ಸಮಸ್ಯೆಗಳು ಅತಂಕಗಳು  ಇಲಾಖೆಯ ಅಧಿಕಾರಿ ನೌಕರರನ್ನು ಕಂಗೆಡಿಸುತ್ತಿವೆ. ಇವುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನವನ್ನು ಸಂಘ ಮಾಡುತ್ತಿದೆ. ಅವುಗಳ ಜೊತೆಗೆ ಇಂತಹ ಚಟುವಟಿಕೆಗಳು ನೌಕರರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡುತ್ತವೆ. ತನ್ನೆಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಘಟಿಸುವ ತೀರ್ಥಹಳ್ಳಿ ತಂಡದ ಶಿಸ್ತು,ಕಾಳಜಿ ಉತ್ಸಾಹಗಳು ನಿಜಕ್ಕೂ ಮಾದರಿ ಎಂದರು.

ಆರೋಗ್ಯ ಇಲಾಖಾ ಸಂಘದ ರಾಜ್ಯ ಸಲಹೆಗಾರ ಮ ಸ ನಂಜುಂಡಸ್ವಾಮಿ ಮಾತನಾಡಿ, ಹತ್ತಾರು ಸಮಸ್ಯೆಗಳು ಗೊಂದಲಗಳು ಸಮಾಜದ ಆರೋಗ್ಯ ರಕ್ಷಣೆಯ ಹೊಣೆ ಹೊತ್ತ ಆರೋಗ್ಯ ಇಲಾಖೆಯ ವೈದ್ಯರು ಸಿಬ್ಬಂದಿಗಳ ಆರೋಗ್ಯವನ್ನೇ ಹಾಳು ಮಾಡುತ್ತಿದೆ. ಇಲ್ಲಿನ ಸಮಸ್ಯೆಗಳೇನು ಎಂಬುದನ್ನ ಗಮನಿಸಿದೆ ಅದನ್ನು ಪರಿಹರಿಸದೇ ಕೇವಲ ಲೋಪಗಳನ್ನೇ ದೊಡ್ಡದಾಗಿ ಬಿಂಬಿಸುವ ಪ್ರವೃತ್ತಿ ಖಂಡಿತಾ ಒಳ್ಳೆಯದಲ್ಲ. ಇದು ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಮನೋಸ್ಥೈರ್ಯವನ್ನೇ ಕಸಿಯುತ್ತಿದೆ. ಇಲ್ಲಿನ ಸಮಸ್ಯೆಗಳನ್ನೂ ಕೇಳುವಂತಾಗಬೇಕು. ಎರಡನೇ ಬಹು ದೊಡ್ಡ ಇಲಾಖೆಯಾದ ಆರೋಗ್ಯ ಇಲಾಖೆಯ ದಿನಾಚರಣೆ ನಡೆಸುವಂತಾಗಬೇಕು.ಪ್ರತೀ ವರ್ಷವೂ ಸಂಭ್ರಮದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಬೇಕು.  ಈ ಬಗ್ಗೆ ಗಮನ ಹರಿಸಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಲ್ಲಿ ಉತ್ಸಾಹ ತುಂಬುವ ಕಾರ್ಯವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಮಾಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತನ್ ಇಲಾಖೆಯ ಕಾಯಕಲ್ಪ ಮತ್ತು ಎನ್ ಕ್ಯು ಎ ಎಸ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಅಧ್ಯಕ್ಷ  ಟಿ ವಿ ಸತೀಶ,  ಆರೋಗ್ಯ ಇಲಾಖೆಯ ವರ್ಷಾವದಿ ಹಬ್ಬದಂತೆ ಸಂಭ್ರಮಿಸುವ ಕಾರ್ಯಕ್ರಮವನ್ನು ಪರಿಸರಾತ್ಮಕ ಮತ್ತು ಸಾಮಾಜಿಕ ಕಾಳಜಿಗಳ ಜೊತೆಗೆ  ಯಶಸ್ವಿಯಾಗಿ ಸಂಘಟಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಎಲ್ಲಾ ಅಧಿಕಾರಿ, ನೌಕರರ ಸಹಕಾರ ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಸತತ ಮೂರು ವರ್ಷಗಳಿಂದ ಕಾರ್ಯಕ್ರಮದ ಸ್ವಾದಿಷ್ಟ ಭೋಜನ ವ್ಯವಸ್ಥೆಯ ಪ್ರಾಯೋಜಕತ್ವ ವಹಿಸುತ್ತಿರುವ ಸಂಘದ ಕಾರ್ಯಾಧ್ಯಕ್ಷೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್ ರವರನ್ನು ಕೃತಜ್ಞತೆಯಿಂದ ಗೌರವಿಸಲಾಯಿತು.

ತೊಂಬತ್ತೆರಡರ ಹರೆಯದ ನಿವೃತ್ತ ಶುಶ್ರೂಷಣಾಧಿಕಾರಿ ಜೆನ್ನಿಬಾಯಿ, ಎಂಬತ್ತೆಂಟರ ಹರೆಯದ ನಿವೃತ್ತ ಶಿಕ್ಷಕ, ಕಲಾವಿದ ಗೇರ್ ಗಲ್ ಚಂದ್ರಮೌಳೇಶ್ವರ ಭಟ್, ಮಂಕುತಿಮ್ಮನ ಕಗ್ಗದ ಅಭಿಮಾನಿ, ವಿಶಿಷ್ಟವಾಗಿ ಹಾಡುವ ಕೆಂಜಿಗುಡ್ಡೆ ಮುಕುಂದ, ಹಿರಿಯ ಶ್ರಮ ಜೀವಿ ಬೊಮ್ಮರಸಯ್ಯನ ಅಗ್ರಹಾರದ ನಾರಾಯಣ ಶೆಟ್ಟಿ , ತೀರ್ಥಹಳ್ಳಿ ರಕ್ತ ನಿಧಿಯ ಅರುಣ್ ರವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ನೈಂಟಿಗೇಲ್ ಪ್ರಶಸ್ತಿ ಪುರಸ್ಕೃತ ಜೆ ಸಿ ಆಸ್ಪತ್ರೆಯ ಮೇಟ್ರನ್ ಜಯಲಕ್ಷ್ಮಿ, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರಾದ ಪ್ರಾ ಆ ಸುರಕ್ಷಾಧಿಕಾರಿ ಭವ್ಯ, ಶುಶ್ರೂಷಣಾಧಿಕಾರಿ ಶೈಲಾ, ಪ್ರತಿಷ್ಡಿತ ಏಮ್ಸ್ ಸಂಸ್ಥೆಗೆ ಆಯ್ಕೆಯಾದ ಪ್ರತಿಭಾನ್ವಿತ ಶುಶ್ರೂಷಣಾಧಿಕಾರಿ ಕೈಲಾಶ್ ರನ್ನು ಅಭಿನಂದಿಸಲಾಯಿತು. 

ವಯೋ ನಿವೃತ್ತಿ ಹೊಂದಿದ ಜೆ ಸಿ ಆಸ್ಪತ್ರೆಯ ಹಿರಿಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ದೇವಪ್ರಸಾದ್ ಮತ್ತಿತರ ಸಿಬ್ಬಂದಿಗಳನ್ನು ಆಶಾ ಕಾರ್ಯಕರ್ತೆಯರನ್ನು, ಮಾದರಿ ಗುತ್ತಿಗೆ,ಹೊರಗುತ್ತಿಗೆ ನೌಕರರನ್ನು ಗೌರವಿಸಲಾಯಿತು. ತಾಲ್ಲೂಕಿಗೆ ಹೊಸದಾಗಿ ಆಗಮಿಸಿದ ವೈದ್ಯರು ಸಿಬ್ಬಂದಿಗಳನ್ನು ಸ್ವಾಗತಿಸಲಾಯಿತು. ನಿವೃತ್ತ ಹಿರಿಯ ಸಹೋದ್ಯೋಗಿಗಳ ಸಹಕಾರವನ್ನು ಸ್ಮರಿಸಲಾಯಿತು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್, ಸಂಘದ ಕಾರ್ಯಾಧ್ಯಕ್ಷೆ ಗೀತಾ ಎಲ್, ಕಾರ್ಯದರ್ಶಿ ಈಶ್ವರ, ಖಜಾಂಚಿ ರಾಘವೇಂದ್ರ ಸಿ ಡಿ, ಸಾಗರ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಲೋಹಿತ್, ಜೆ ಸಿ ಆಸ್ಪತ್ರೆಯ ಮೇಟ್ರನ್ ಶಿವಿಗಂಗಮ್ಮ ವೇದಿಕೆಯಲ್ಲಿದ್ದರು.

ಮನರಂಜಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನಕ್ಕು ನಗಿಸುವ ಆಟೋಟಗಳು, ಸಮಯ ಪಾಲನೆಗೆ, ಆಹಾರ ವ್ಯರ್ಥ ಮಾಡದಂತೆ ಪ್ರೇರೇಪಿಸುವ ಸ್ಪರ್ಧೆಗಳು, ಖ್ಯಾತ ವ್ಯಂಗ್ಯಚಿತ್ರಕಾರ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮೇಗರವಳ್ಳಿ ಸುಬ್ರಮಣ್ಯರ ಆಕರ್ಷಕ ವ್ಯಂಗ್ಯಚಿತ್ರ ಪ್ರದರ್ಶನ, ಪ್ಲಾಸ್ಟಿಕ್ ಮುಕ್ತ ಭೋಜನ ವ್ಯವಸ್ಥೆ ಹೀಗೆ ಹತ್ತು ಹಲವು ವೈಶಿಷ್ಟತೆಗಳಿಂದ ಕೂಡಿದ್ದ "ಸಂಭ್ರಮ-2025" ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಮೀಳ ಪ್ರಾರ್ಥಿಸಿ, ಗುರುಪ್ರಸಾದ್ ಸ್ವಾಗತಿಸಿ, ವಿನಾಯಕ ವಂದಿಸಿದರು.ಲಕ್ಷ್ಮೀ ಶ್ರೀಕಾಂತ್ ಮತ್ತು ವೇದಾಶ್ರೀ ಸೊಗಸಾಗಿ ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post