ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಪ್ರಹಸನ

ಕಿಮ್ಮನೆ –ಆರ್‌ಎಂಎಂ ಡಬಲ್‌ ಇಂಜಿನ್‌ ರಿಪೇರಿ ತಲೆಬಿಸಿಯಲ್ಲಿ ಕಾರ್ಯಕರ್ತರು
ಬಣ ಕಿತ್ತಾಟದಲ್ಲಿ ಅಧಿಕಾರಕ್ಕೆ ಏರಿದ ರತ್ನಾಕರ ಶೆಟ್ಟಿ
ಆರಗಗೆ ಹಾದಿ ಸುಗಮವೆಂದು ಮೆಸೇಜ್‌ ನೀಡಿದ 3ನೇ ಭಿನ್ನಮತೀಯರು!?

ಸರಿ ಸುಮಾರು 25 ವರ್ಷಗಳ ನಂತರ ಬಿಜೆಪಿಗೆ ರೆಸ್ಟ್ ನೀಡಿದ ಪಟ್ಟಣದ ಮತದಾರರು ಕಾಂಗ್ರೆಸ್ ಪಕ್ಷವನ್ನು ಪಟ್ಟಣ ಪಂಚಾಯತ್ ಅಧಿಕಾರದ ಗದ್ದುಗೆಗೆ ತಂದಿದ್ದರು. ಅದಕ್ಕೆ ಸರಿಯಾಗಿ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ. ಮಂಜುನಾಥ್ ಗೌಡರ ಡಬ್ಬಲ್ ಇಂಜಿನ್ ಸಪೋರ್ಟ್ ಇರುವ ಕಾರಣ ಕಾಂಗ್ರೆಸ್ ಜನಪರ ಆಡಳಿತ ನೀಡಿ ಬಿಜೆಪಿಯನ್ನು ಧೂಳಿಪಟ ಮಾಡಲಿದೆ ಎಂದೇ ಅಂದಾಜು ಮಾಡಲಾಗಿತ್ತು.

ತಮ್ಮದೇ ಸರ್ಕಾರ ಎಲ್ಲ ಅನುಕೂಲವಿದ್ದರೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪದೇ ಪದೇ ಎಡವಟ್ಟು ಮಾಡಿಕೊಂಡು ಕಾಂಗ್ರೆಸ್ ನಗೇಪಾಟಲಿಗೀಡಾಗಿದೆ. ಮೊದಲಿಗೆ ಶಬನಮ್, ಸುಶೀಲ ಶೆಟ್ಟಿ, ಗೀತಾ ರಮೇಶ್ ನಡುವೆ ತಲಾ ಹತ್ತು ತಿಂಗಳು ಅಧಿಕಾರ ಹಂಚಿಕೆ ಏರ್ಪಡಾಗಿತ್ತು. ಶಬನಮ್ ತಮ್ಮ ಅವಧಿ ಮುಗಿಸಿದ ಬಳಿಕ ಅಧಿಕಾರ ಹಿಡಿದ ಸುಶೀಲ ಶೆಟ್ಟಿಮೂರು ತಿಂಗಳು ಹೆಚ್ಚಿನ ಅವಧಿ ಸಾಧಿಸಿ ಮುಂದೆ ಗೀತಾ ರಮೇಶ್ ಗೆ 6 ತಿಂಗಳ ಅವಧಿ ಮಾತ್ರ ದೊರೆಯಿತು. ಅಲ್ಲಿಗೆ ಮೊದಲ 30 ತಿಂಗಳ ಮೀಸಲು ಅವಧಿ ಮುಗಿದಿತ್ತು.

ನಂತರ ಮುಂದಿನ 30 ತಿಂಗಳ ಅವಧಿಗೆ ಮೀಸಲು ಗೊಂದಲ ಏರ್ಪಟ್ಟು 5 ತಿಂಗಳು ಆಡಳಿತಾಧಿಕಾರಿ ಬರುವಂತಾಯಿತು. ಬಳಿಕ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ಬಂದ ನಂತರ ಅಸಲಿ ಆಟಗಳು ಶುರುವಾದವು. ಸಾಮಾನ್ಯ ವರ್ಗದಲ್ಲಿ ಕಾಂಗ್ರೆಸ್ ಅದರಲ್ಲಿಯೂ ಕಿಮ್ಮನೆ ರತ್ನಾಕರ್ ಬಣದಿಂದ ನೆಚ್ಚಿನ ಅಭ್ಯರ್ಥಿ ಆಗಿದ್ದು ಜಯ ಪ್ರಕಾಶ್ ಶೆಟ್ಟಿ. ಹಿರಿತನ ಮತ್ತು ಪಕ್ಷ ನಿಷ್ಠೆಯಲ್ಲಿ ಪ್ರಶ್ನಾತೀತ ವ್ಯಕ್ತಿ ಆದ ಕಾರಣ ಮೊದಲ ಆಯ್ಕೆ ಜೈಯುದಾಗಿತ್ತು. ಈ ಪ್ರಕಾರ ತಲಾ ಹತ್ತು ತಿಂಗಳು ಜಯಪ್ರಕಾಶ್ ಮತ್ತು ಆಸಾದಿಗೆ ಅಧಿಕಾರ ಹಂಚುವ ನಿರ್ಧಾರ ಮಾಡಲಾಯಿತು.

ಆದರೆ ಫೀಲ್ಡಿಗಿಳಿದ ಅಸಾದಿ ಅಲ್ಪಸಂಖ್ಯಾತ ಕಾರ್ಡ್‌ ಪ್ರಯೋಗಿಸಿ ಮೊದಲ ಅವಧಿ ತನಗೆ ಬೇಕೆಂದು ಪಟ್ಟು ಹಿಡಿದಿದ್ದರು. ಆ ಸಂದರ್ಭದಲ್ಲಿ ಸುಶೀಲ ಶೆಟ್ಟಿ ಅಧ್ಯಕ್ಷರಾಗಿ ಬಹಳ ಸಮಯ ಕಳೆಯದ ಕಾರಣ ಮತ್ತೊಮ್ಮೆ ಬಂಟ ಸಮುದಾಯದ ಜೈಯುಗೆ ತಕ್ಷಣವೇ ಅಧಿಕಾರ ನೀಡುವ ಬದಲು ಆಸಾದಿಗೆ ಅಧಿಕಾರ ನೀಡುವುದು ಒಳ್ಳೆಯದು ಎಂಬ ಚಿಂತನೆ ಪಕ್ಷದಲ್ಲಿ ನಡೆದು ಅವಕಾಶ ಒದಗಿ ಬಂದಿದ್ದರು ಪಟ್ಟು ಹಿಡಿಯದ ಜೈಯು ಹೇಗೂ ಹತ್ತು ತಿಂಗಳು ಎಂದು ಪಕ್ಷದ ಆಜ್ಞೆಗೆ ಬದ್ಧರಾಗಿ ಸುಮ್ಮನಾದರು.

ಮುಂದೆ ಹತ್ತು ತಿಂಗಳು ಒಳ್ಳೆ ಆಡಳಿತವನ್ನೇ ನೀಡಿದ ಅಸಾದಿ ಅವಧಿ ತೀರುತ್ತಿದಂತೆ ಅಧಿಕಾರ ಉಳಿಸಿಕೊಳ್ಳಲು ದಿನಕ್ಕೊಂದು ಮೆಸೇಜ್ ನೀಡಲು ಆರಂಭ ಮಾಡಿದಾಗ ಡಬ್ಬಲ್ ಎಂಜಿನ್‌ನಲ್ಲಿ ಒಬ್ಬರಾದ ಆರ್.ಎಂ. ಮಂಜುನಾಥ್ ಗೌಡರು ಅತ್ತ ಎಂಎಡಿಬಿ ಮತ್ತು ಇತ್ತ ಡಿಸಿಸಿ ಬ್ಯಾಂಕ್ ಎಂದು ಅಲ್ಲೂ ಡಬ್ಬಲ್ ಇಂಜಿನ್ ಚಾಲನೆ ಮಾಡಿಕೊಂಡು ಇರುವಾಗ ಸದ್ಯ ಇಲ್ಲಿ ಒಂಟಿ ಇಂಜಿನ್ ಆಗಿದ್ದ ಕಿಮ್ಮನೆಯವರಿಗೆ ರೇಗಿತು.

ಆಸಾದಿ ಮೊದಲಿಗೆ ಎರಡು ತಿಂಗಳು ಹೆಚ್ಚಿನ ಅವಧಿ ಕೇಳಿ ತಮ್ಮ ಅಪೂರ್ಣ ಕೆಲಸಗಳ ಪಟ್ಟಿ ನೀಡಿ ಅದರಲ್ಲಿಯೇ ಎರಡು ತಿಂಗಳು ಕಾಲ ಕಳೆದರು. ಕಿಮ್ಮನೆ ಕೊಟ್ಟ ಮಾತಿನಂತೆ ಅಸಾದಿಯನ್ನು ಇಳಿಸಲು ಪ್ರಯತ್ನ ಪಟ್ಟರೆ. ಮೊದಲು ಜನತಾ ದಳದಲ್ಲಿ ಸದಸ್ಯ ಬಳಿಕ ಬಿಜಿಪಿಯಲ್ಲಿ ಅಧ್ಯಕ್ಷ ಮತ್ತೆ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಹೀಗೆ ಮೂರು ಕೆರೆ ನೀರು ಕುಡಿದಿದ್ದ ಆಸಾದಿ ಕಿಮ್ಮನೆಯವರ ಯಾವ ಅಸ್ತ್ರಕ್ಕೂ ಬಗ್ಗದೆ ಕುಳಿತು ಬಿಟ್ಟರು.

ಕಡೆಗೆ ಅನಿವಾರ್ಯವಾಗಿ ಆವಿಶ್ವಾಸ ನಿರ್ಣಯದ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಅಸಾದಿಯನ್ನು ಇಳಿಸುವ ಪ್ರಯತ್ನ ಮಾಡಲಾಯಿತು. ಆದರೆ ಕಿಲಾಡಿ ಆಟ ಆಡಿದ ಆಸಾದಿ ತಾನು ಕೂಡ ಆವಿಶ್ವಾಸ ನಿರ್ಣಯದ ಪರ ಮತ ಚಲಾಯಿಸಿ ತನ್ನ ಸದಸ್ಯತ್ವ ಉಳಿಸಿಕೊಂಡು ಹೈಕೋರ್ಟ್ ತಡೆಯಾಜ್ಞೆ ತಂದು ಅಧಿಕಾರ ಹಂಚಿಕೆ ವಿಷಯ ಹಾದಿ ಬೀದಿ ರಂಪಾಟ ಆಗುವ ಹಾಗೆ ಮಾಡಿದರು.

ಅಂತೂ ಹೈಕೋರ್ಟ್ನಲ್ಲಿ ಕೇಸು ಬಿದ್ದು ಮತ್ತೆ ಅಧ್ಯಕ್ಷ ರ ಚುನಾವಣೆ ಆಗುವ ಹೊತ್ತಿಗೆ ತನ್ನ ಜೊತೆಗೆ ಸುಶೀಲ ಶೆಟ್ಟಿ ಹಾಗೂ ನಮ್ರತ್‌ ಸೇರಿಸಿಕೊಂಡು ಭಿನ್ನ ಮತೀಯ ತಂಡ ಕಟ್ಟಿಕೊಂಡಿದ್ದ ಆಸಾದಿ ಯಾವ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು ಎಂಬ ಸನ್ನಿವೇಶ ಸೃಷ್ಟಿಸಿದರು.

ಅಕಸ್ಮಾತ್ ಸದಸ್ಯತ್ವ ಹೋದರೂ ಹೋಗಲಿ ಎಂದು ಸುಶೀಲ, ನಮ್ರತ್ ಬಿಜೆಪಿಗೆ ಓಟು ಮಾಡಿದರೆ ತಾವೇ ಅಧ್ಯಕ್ಷ ಎಂಬ ನಿರೀಕ್ಷೆಯಲ್ಲಿ ಬಿಜೆಪಿಯ ಸೊಪ್ಪುಗುಡ್ಡೆ ರಾಘವೇಂದ್ರ ಗಡಿಬಿಡಿಯಲ್ಲಿ ಹೊಸ ಟವೆಲ್‌ ಹಾಸಿ ನಾಮ ಪಾತ್ರ ಸಲ್ಲಿಸಿದರು.

ಹಾಗೂ ಹೀಗೂ ಎಲ್ಲಾ ರೀತಿಯಲ್ಲೂ ಭಿನ್ನರನ್ನು ಸಂತೃಪ್ತಗೊಳಿಸಿ ಇನ್ನೇನು ಜೈಯು ಅಧ್ಯಕ್ಷ ಎನ್ನುವ ಹೊತ್ತಿಗೆ ಮತ್ತೆ ಕೊಕ್ಕೆ ಇಟ್ಟ ಆಸಾದಿ ಮತ್ತು ತಂಡ ಜೈಯು ಅಂದರೆ ಆಗಲ್ಲ ರತ್ನಾಕರ ಶೆಟ್ಟಿ ಆದರೆ ಮಾತ್ರ ನಮ್ಮ ಬೆಂಬಲ ಮತ್ತೆ ಅದರ ವ್ಯಾಲಿಡಿಟಿ ಕೂಡ ದಿನಗಳಲ್ಲ ಕೆಲವೇ ಗಂಟೆಗಳಾದರೂ ಆಗಬಹುದು ಎಂದು ಮುಗುಮ್ಮಾಗಿ ಕಣ್ಣು ಮಿಟುಕಿಸಿದಾಗ ಕಿಮ್ಮನೆಯಂತ ಅನುಭವಿ ರಾಜಕಾರಣಿಯೇ ದಂಗು ಬಡಿದರು. ಜೈಯು ಸಿಟ್ಟು ತಾಳಲಾರದೇ ರಾಮೇಶ್ವರ ದೇವಾಲಯಕ್ಕೆ ಓಡಿದರು.

ಇನ್ನು ಸನ್ನಿವೇಶದ ಕೂಸಾದ ರತ್ನಾಕರ್ ಶೆಟ್ಟಿ ಇದೆ ಮೊದಲ ಸಲ ಅಧ್ಯಕ್ಷರಾಗುವ ಅವಕಾಶ ಪಡೆದುಕೊಂಡರು. ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ರತ್ನಾಕರ ಶೆಟ್ಟಿಯನ್ನು ಅಭಿನಂದಿಸಿ ಮಾತನಾಡಿದ ಕಿಮ್ಮನೆ ಪಟ್ಟಣ ಪಂಚಾಯಿತಿಯಲ್ಲೇ ರತ್ನಾಕರ್‌ ಶೆಟ್ಟರನ್ನು ಅಭಿನಂದಿಸುತ್ತಿದ್ದೆ ಆದರೆ ಅಲ್ಲಿ ನಾಲ್ಕು ಜನ ಕಳ್ಳರು ಇದ್ದ ಕಾರಣ ನನಗೆ ಅಲ್ಲಿ ಕ್ಷಣಕಾಲವೂ ಇರಲು ಇಷ್ಟವಾಗಲಿಲ್ಲ. ಇಲ್ಲೂ ಅಷ್ಟೇ ಇನ್ನುಮುಂದೆ ಆ ಕಳ್ಳರು ಇಲ್ಲಿಗೆ ಕಾಲಿಟ್ಟರೆ ನಾನು ಇಲ್ಲವೇ ಅವರಷ್ಟೇ ಇರಬೇಕು ಎಂದು ಅಬ್ಬರಿಸಿದರು. ಆ ನಾಲ್ಕುಜನ ಯಾರೆಂಬುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇಡೀ ಪ್ರಹಸನ ಗಮನಿಸಿದರೆ ಇದರಲ್ಲಿ ಕಿಮ್ಮನೆಯವರಿಗೆ ಮುಖಭಂಗ ಉಂಟು ಮಾಡುವ ಏಕಮೇವ ಉದ್ದೇಶ ಇರುವುದು ಸ್ಪಷ್ಟ. ಏಕೆಂದರೆ ರತ್ನಾಕರ್ ಶೆಟ್ಟಿ ಮಂಜುನಾಥ್ ಗೌಡರ ಕಟ್ಟಾ ಹಿಂಬಾಲಕರು.

ಈ ಪ್ರಹಸದ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಕಿಮ್ಮನೆ, ಆರ್‌ಎಂಎಂ ಬಣ ಜೊತೆಗೆ ತಮಗೆ ಲಾಭ ಆಗದಿದ್ದರೆ ಪಕ್ಷ ನಾಶ ಆದರೂ ಸರಿ ಎನ್ನುವ ಮನಸ್ಥಿತಿಯ ಮೂರನೇ ಬಣವೂ ಇರುವುದು ಕೂಡ ಜಗಜ್ಜಾಹೀರಾಯಿತು. ಆದರೆ ವಿಧಾನಸಭೆ ಚುನಾವಣೆಗೆ ಇನ್ನೊಂದೆರಡು ವರ್ಷ ಇರುವಾಗ ಬಿಜೆಪಿಯ ಏಕಮೇವದ್ವಿತೀಯ ನಾಯಕ ಆರಗ ಜ್ಞಾನೇಂದ್ರ ಮುಂದೂ ಕೂಡ ನಾನೇ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಣೆ ಮಾಡಿಕೊಂಡಿರುವಾಗ ತೀರ್ಥಹಳ್ಳಿ ಕಾಂಗ್ರೆಸ್ನ ಡಬ್ಬಲ್ ಇಂಜಿನ್ ರಿಪೇರಿ ಕಡೆ ಸಾಗುತ್ತಿರುವುದು ಕಂಡು ಯುವ ಕಾಂಗ್ರೆಸ್ ಹುಡುಗರು ಕಂಗಾಲಾಗಿದ್ದಾರೆ. ಜೊತೆಗೆ ಈ ಬಾರಿ ಕೂಡ ತಲಾ 5 ತಿಂಗಳು ರತ್ನಾಕರ ಶೆಟ್ಟಿ ಜೈಯು ಶೆಟ್ಟಿಗೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎನ್ನಲಾಗಿದೆ. ಆದರೆ ಈಗಾಗಲೇ “ಅಸಾದಿ ಮಾದರಿ” ಜನಪ್ರಿಯಗೊಂಡಿರುವುದರಿಂದ ಮುಂದೂ ಅದು ಪ್ರಯೋಗವಾದಲ್ಲಿ ರತ್ನಾಕರ ಶೆಟ್ಟಿ ಪೂರ್ಣಾವಧಿ ಅಧ್ಯಕ್ಷರಾಗಲಿದ್ದಾರೆ!

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post