ʼನೀಲಿ ಹೂವಿನ ನೆನಪುಗಳುʼ 21ಕ್ಕೆ ಬಿಡುಗಡೆ
“ಪುಸ್ತಕ ಬಿಡುಗಡೆಗೆ ನಂಕು ಮಾತ್ರ ಇಲ್ಲ”
ಪ್ರಯೋಗಶೀಲ ಯುವ ಕವಿ, ಎಲ್ಲರು ಪ್ರೀತಿಯಿಂದ ನಂಕು ಎಂದೇ ಕರೆಯುವ ನಂದನ ಕುಪ್ಪಳಿ ಬರೆದ ಎರಡನೇ ಕವನ ಸಂಕಲನ "ನೀಲಿ ಹೂವಿನ ನೆನಪುಗಳು" ಪುಸ್ತಕ ಬಿಡುಗಡೆ ಸಮಾರಂಭ ಡಿಸೆಂಬರ್ 21ರ ಭಾನುವಾರ ಬೆಳಿಗ್ಗೆ ಕುಪ್ಪಳಿಯ ಅವರ ಮನೆಯಂಗಳದಲ್ಲಿ ಬಿಡುಗಡೆಯಾಗಲಿದೆ.
ಸುವ್ವಿ ಪಬ್ಲಿಕೇಷನ್ಸ್ ಶಿಕಾರಿಪುರ, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ, ನಂದನ್ ಕುಪ್ಪಳಿ ಅವರ ಸ್ನೇಹಿತರು ಮತ್ತು ಕುಟುಂಬದವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಗಣಪತಿ ಉತ್ತುಂಗ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಪುಸ್ತಕದ ಕುರಿತು ಬರಹಗಾರ, ಸಾಮಾಜಿಕ ಹೋರಾಟಗಾರ ನೆಂಪೆ ದೇವರಾಜ್ ಮಾತನಾಡಲಿದ್ದಾರೆ.
ಅಧ್ಯಕ್ಷತೆಯನ್ನು ಶಿವಮೊಗ್ಗದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಹೆಚ್.ಟಿ. ಕೃಷ್ಣಮೂರ್ತಿ ವಹಿಸಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಂದನ್ ತಂದೆ ರಾಮಸ್ವಾಮಿ, ರೇಖಾಚಿತ್ರ ಕಲಾವಿದ ರಾಂಚಂದ್ರ ಕೊಪ್ಪಲು, ರಾಮನಗರದ ಸಹ ಪ್ರಾಧ್ಯಾಪಕ ಡಾ.ಶಿವಲಿಂಗೇ ಗೌಡ ಡಿ ಹಾಗೂ ಪ್ರಕಾಶಕ ಸುನೀಲ್ ಕುಮಾರ್ ಬಿ.ಎನ್. ಶಿಕಾರಿಪುರ ಉಪಸ್ಥಿತರಿರುತ್ತಾರೆ.
“ಭಾವರೇಖೆ” ಎಂಬ ಕವನ ಸಂಕಲವನ್ನು ಹೊರ ತಂದಿದ್ದ ಅವನು ಅದಾಗಲೇ ಎಂಎನ್ಡಿ ಕಾಯಿಲೆಗೆ ತುತ್ತಾಗಿ ದೈಹಿಕ ಸ್ವಾಧೀನ ಕಳೆದುಕೊಂಡಿದ್ದ. ಆತ ಸೆಪ್ಟೆಂಬರ್ 21 ರಂದು ಸಾಯುವಾಗ ವಯಸ್ಸು ಕೇವಲ 33. ಬಿಸಿ ರಕ್ತದ ಯುವಕನ ಕಣ್ಣುಗಳಲ್ಲಿ ಅದೆಂತಹ ಜೀವನೋತ್ಸಾಹ ಇತ್ತೆಂದರೆ ಸಾಯುತ್ತೇನೆ ಎಂಬ ಸುದ್ದಿ ತಿಳಿದಾಗಲು ಅದಕ್ಕೆ ಮರುಗಿರಲಿಲ್ಲ. ಸಾವು ನಿಶ್ಚಿತ ಎಂಬ ದೃಢ ನಿರ್ಧಾರದಲ್ಲಿಯೇ ಹಾಸಿಗೆ ಹಿಡಿದಾಗಲೂ ತಾನು ಮತ್ತೊಂದು ಕವನ ಸಂಕಲನ ಹೊರ ತರುತ್ತೇನೆ ಎಂದು ಉಸಿರಾಡುತ್ತಿದ್ದ. ಆತ ಸಾಯುವ ಹೊತ್ತಿಗೆ ಪುಸ್ತಕವನ್ನು ಚೆಂದವಾಗಿ ತಯಾರಿಸಿ ಅದರ ಅಚ್ಚುಕಟ್ಟು ಲೇಔಟ್ ಸಿದ್ಧಪಡಿಸಿ ಮುದ್ರಣಕ್ಕೂ ಕಳಿಸಿಯಾಗಿತ್ತು. ಇನ್ನೇನು ಒಂದು ವಾರದಲ್ಲಿ ಪುಸ್ತಕ ಕೈ ಸೇರುತ್ತದೆ ಎಂಬ ದೃಢ ನಿರ್ಧಾರದಲ್ಲಿದ್ದ ನಂದನ್ ಅದೇಕೋ ಉಸಿರು ಚೆಲ್ಲಿಬಿಟ್ಟ. ಭಾನುವಾರ ಪುಸ್ತಕ ಬಿಡುಗಡೆಯಾಗಲಿದೆ. ಆದರೆ ನಂದನ್ ಮಾತ್ರ ವೇದಿಕೆಯಲ್ಲಿ ಇರುವುದಿಲ್ಲ. ಅವನ ನೆನಪು ಮಾತ್ರ ಹಸಿಯಾಗಿದೆ.
