ನಿವೃತ್ತಿಯ ಪ್ರಶ್ನೆಯೇ ಇಲ್ಲ....

ಹೋ.. ಸನ್ಮಾನ ಮಾಡಿ ಸಾಕು ಅನ್ನೋ ಸಂದೇಶ ಕೊಡಲಿಕ್ಕೆ ಹೊರಟಿದೀರಾ..?... ರಾಜಕೀಯದಿಂದ ದೂರ ಸರಿಯುವ ಮಾತೇ ಇಲ್ಲ.... ಸನ್ಮಾನ ನಾನು ಸ್ವೀಕಾರ ಮಾಡೋಲ್ಲ.... ಇದು ಶಾಸಕ ಆರಗ ಖಡಕ್ ನುಡಿ....
ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಕುರಿತು ಸಂಚಾಲಕ ಸಮಿತಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದವರು ಶ್ರೀ ರಾಮೇಶ್ವರ ದೇವರ ಜಾತ್ರಾ ಉತ್ಸವ ಸಮಿತಿ ಸದಸ್ಯರು ಇದ್ದರು.
ಮೊದಲಿಗೆ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಜಾತ್ರೆ ತಯಾರಿ ಮತ್ತು ಈ ಬಾರಿಯ ವಿಶೇಷಗಳ ಕುರಿತು ಸಹಜವಾಗಿ ಮಾತಾಡಿದರು‌. ಅವರ ನಾಯಕ ಆರಗ ಜ್ಞಾನೇಂದ್ರ ಅವರ ಕುರಿತು ಮೆಚ್ಚುಗೆ ಮಾತಾಡಿದರು.
ಅವರೇನೂ ವಿಶೇಷವಾಗಿ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ್ ಗೌಡರನ್ನು  ಸ್ತುತಿಸಲು ಹೋಗಲಿಲ್ಲ. ಅವರು ವಿವರಣೆ ನೀಡಿದ ಬಳಿಕ ಇನ್ನೊರ್ವ ಸಂಚಾಲಕ ಟಿ.ಎಲ್. ಸುಂದರೇಶ್ ಬಹಳ ವಿನಯದಿಂದ ಆರಗ ಅವರ 50 ವರ್ಷಗಳ ರಾಜಕೀಯ ಸೇವೆ ಪ್ರಸ್ತಾಪ ಮಾಡಿ ಅವರ ಶಾಶ್ವತ ಎದುರಾಳಿ ಕಿಮ್ಮನೆ ರತ್ನಾಕರ್ ಮತ್ತು 2014ರ ವಿಧಾನಸಭಾ ಚುನಾವಣೆಯಲ್ಲಿ ಅರಗರನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದ ಆರ್.ಎಂ. ಮಂಜುನಾಥ್ ಗೌಡರನ್ನು ಜಾತ್ರಾ ಉತ್ಸವದಲ್ಲಿ ಸನ್ಮಾನ ಮಾಡುವ ಪ್ರಸ್ತಾಪ ಇರಿಸಿದರು. ಈಗೀಗ ಚಂದದ ಕನ್ನಡಕ ಹಾಕಿಕೊಂಡು ಜಬರ್ದಸ್ತಾಗಿ ಕಾಣುವ ಆರಗ ಜ್ಞಾನೇಂದ್ರ ಅವರು ಸುಂದರೇಶ್ ಹಾಗೆ ಹೇಳುತ್ತಿರುವಂತೆಯೇ ಏಕೆ ಸನ್ಮಾನ... ಎಂದು ಕೇಳಿಯೇ ಬಿಟ್ಟರು. ಕನ್ನಡಕ ಹಾಕಿದ್ದ ಕಾರಣ ಅವರ ನೋಟದಲ್ಲಿ ಯಾವ ಭಾವ ಇತ್ತು ಎನ್ನುವುದು ಸುಂದರೇಶರಿಗೆ ಕಾಣಲಿಲ್ಲ ಎನಿಸುತ್ತೆ. ಪೆಚ್ಚಾಗಿ ನೀವು ಹಿರಿಯರು ಐದು ಬಾರಿ ಶಾಸಕ ಆದವರು ಹಾಗಾಗಿ... ಎಂದು ಹೇಳಲು ಹೋದಾಗ... ಹೋ ಏನು ಸನ್ಮಾನ ಮಾಡಿ ಇನ್ನು ಸಾಕು ಮನೆಯಲ್ಲಿ ಇರಿ ಎಂದು ಹೇಳಲು ಹೊರಟಿದೀರಾ... ಅದೆಲ್ಲ ಏನು ಬೇಡ... ನಾನು ಸನ್ಮಾನ ಸ್ವೀಕಾರ ಮಾಡೋಲ್ಲ... ನಮಗೆ ರಿಟೈರ್ಡ್ ಮೆಂಟ್ ಅನ್ನೋದು ಇಲ್ಲ... ಎಂದು ಹೇಳೇ ಬಿಟ್ಟರು ಅಲ್ಲಿಗೆ ಸುಂದರೇಶರ ಹೊಗಳಿಕೆ ಯಾವುದೂ ವರ್ಕೌಟ್ ಆಗದೆ ಜ್ಞಾನೇಂದ್ರ ಅವರ ಹೇಳಿಕೆಗೆ ಕಿಮ್ಮತ್ತೆ ಕೊಡದೆ ಅವರತ್ತ ಕನಿಷ್ಠ ಒಂದು ಮುಗುಳು ನಗು ಕೂಡ ಬೀರಲಿಲ್ಲ. ಇದನ್ನು ಗ್ರಹಿಸಿದ ಸುಂದರೇಶ್ ಬಳಿಕ ಮಾತಿನ ನಾಜೂಕು ಕಡಿಮೆ ಮಾಡಿಕೊಳ್ಳುವುದೋ ಅಥವಾ ವರ್ಶನ್ ಬದಲಾವಣೆ ಮಾಡಿಕೊಳ್ಳುವುದೋ ಎಂದು ಗೊಂದಲಗೊಂಡು ಮನಸಿನಲ್ಲಿಯೇ ಸನ್ಮಾನ ಬೇಡದಿದ್ದರೆ ಹಾಳಾಗಿ ಹೋಗಲಿ.. ಎಂದು ಮುಗುಳು ನಗು ಮುಂದುವರೆಸಿ... ಕಡೇ ಪಕ್ಷ ತೀರ್ಥಹಳ್ಳಿ ಮಹಾಜನತೆಯನ್ನು ಬಾಡಿಗೆ ಹೆಲಿಕಾಪ್ಟರ್ ನಲ್ಲಿ ಆದರೂ ಹಾರಿಸಿ ಎಂದರು. ಅದು ಒಬ್ಬರಿಗೆ 3000 ಸಾವಿರದ ವೆಚ್ಚದಲ್ಲಿ ಎಂದು ಪಂಪ್ ಒತ್ತಿದರು. 
ಈ ಬೇಡಿಕೆಯನ್ನೂ ಕೂಡ ಮತ್ತೆ ಕರುಣೆಯೇ ತೋರದೆ ತಿರಸ್ಕರಿಸಿದ ಆರಗ ಅದನ್ನು ತರಿಸುವ ವೆಚ್ಚವೆ 3 ಲಕ್ಷ ಮೀರುತ್ತದೆ ಅದು ಆಗದ ಕೆಲಸ ಎಂದು ಬಿಟ್ಟರು.
ಇನ್ನು ಪ್ರಯೋಜನ ಇಲ್ಲ ಎಂದು ಕೊಂಡ ಸುಂದರೇಶ್ ಆಗ ಭ್ರಮೆಯಿಂದ  ಹೊರ ಬಂದು ತಾವಿರುವುದು ಕಾಂಗ್ರೆಸ್ ನಲ್ಲಿ ಎಂದು ನೆನಪು ಮಾಡಿಕೊಂಡು ಕಿಮ್ಮನೆ ರತ್ನಾಕರ್ ಎಳ್ಳಮಾವಾಸ್ಯೆ ತೇರಿನ ಚಕ್ರಕ್ಕೆ 2 ಲಕ್ಷ ಸ್ವಂತದ ಹಣ ನೀಡಿದ್ದಾರೆ ಮತ್ತು ಆರ್.ಎಂ. ಮಂಜುನಾಥ್ ಗೌಡರು ಎಂಎಡಿಬಿ ವತಿಯಿಂದ 10 ಲಕ್ಷ ದೇವಸ್ಥಾನದ ಅಭಿವೃದ್ಧಿಗೆ ನೀಡಿದ್ದಾರೆ ಎನ್ನುತ್ತಿರುವಂತೆಯೇ ಅಲ್ಲಿಯೇ ಕುಳಿತಿದ್ದ ಇನ್ನೊರ್ವ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಶಾಸಕರು ಕೂಡ 50 ಲಕ್ಷ ಹಣ ಅಭಿವೃದ್ಧಿಗೆ ಘೋಷಣೆ ಮಾಡಿದ್ದಾರೆ ಎಂದು ತಕ್ಷಣ ನೆನಪಿಸಿದರು. 
ಇಷ್ಟಾಗುತ್ತಿದ್ದಂತೆ  ಸುಂದರೇಶರು  ಯಾವುದೂ ಸರಿ ಆಗುತ್ತಿಲ್ಲ ಎಂದು ಮಾತು ಮುಗಿಸಿ ವಂದನೆ ಸಲ್ಲಿಸಿದರು.
ಆದರೆ ಆರಗ ಜ್ಞಾನೇಂದ್ರ ಮಾತ್ರ ರಾಜಕೀಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸುಂದರೇಶರ ಮಾತಿಗೆ ಉತ್ತರಿಸಿದಂತೆ ಮಾಡಿ ಬರುವ ಚುನಾವಣೆಯಲ್ಲಿ ಸಂಭವನೀಯ ಬಿಜೆಪಿ ಅಭ್ಯರ್ಥಿಗಳು ಎಂದು ಬಿಂಬಿತಗೊಂಡಿರುವ ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್ ಸೇರಿದಂತೆ ಎರಡನೇ ಸಾಲಿನ ಹುಡುಗರಿಗೆ ಸೀನಿಯರ್ ಸಿಟಿಜನ್ ಗಳು ಆಗುವ ತನಕ ಕಾಯಬೇಕು... ಮುಂದಿನ ಸಲ ಕೂಡ ತಾವೇ ಹುರಿಯಾಳು ಎಂಬ ಸ್ಪಷ್ಟ ಸಂದೇಶ ನೀಡುವ ಮೂಲಕ ರಾಜಕೀಯ ಜಾಣ್ಮೆ ತೋರಿದರು. ಅಂತಹ ಅನಾಯಸ ಸನ್ನಿವೇಶವೊಂದನ್ನು ಕಾಂಗ್ರೆಸ್ ನಾಯಕ ಸುಂದರೇಶ್ ಅವರೇ ಸೃಷ್ಟಿ ಮಾಡಿದ್ದು ಕೇವಲ ಕಾಕತಾಳಿಯ. ಸುಂದರೇಶ್ ಸುಖಾ ಸುಮ್ಮನೆ ಆರಗರ ಮಾತಿನ ಚಕ್ರವ್ಯೂಹಕ್ಕೆ ಸಿಲುಕಿ ಹೊರಗಡೆ ಬರಲು ಪ್ರಯಾಸ ಪಡುತ್ತಿರುವಾಗ ಪಕ್ಕದಲ್ಲಿ ಕುಳಿತಿದ್ದ ರಾಘವೇಂದ್ರ ಶೆಟ್ಟರು ಮುಗುಳು ನಗುತ್ತಿದ್ದುದು ಏಕೆಂದು ಅರ್ಥ ಆಗಲಿಲ್ಲ...
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post