ಜಿಲ್ಲಾ ಗಣಿ ಇಲಾಖೆ
ಅಧಿಕಾರಿ ಎಲ್ಲಿ
ಚೆಕ್ ಪೋಸ್ಟ್
ತಪ್ಪಿಸಿ ಮರಳು ಸಾಗಿಸುವ ಯತ್ನ, 4 ಮರಳು ಲಾರಿಗಳ ವಶ
ಪೊಲೀಸ್ ಗಸ್ತು
ವ್ಯವಸ್ಥೆಯೇ ದಂಧೆಗೆ ಫುಲ್ ಸಪೋರ್ಟ್ ?
ಮಕಾಡೆ ಮಲಗಿರುವ
ಗಣಿ ಮತ್ತು ಭೂವಿಜ್ಞಾನ ಇಲಾಖೆ
ಆರಗದ ಗೋಪಿನಾಥ ಹಳ್ಳದಿಂದ
ನಿತ್ಯ ಅಕ್ರಮ ಮರಳು ಸಾಗಾಣೆಯಾಗುತ್ತಿದ್ದು ಅದನ್ನು ತಡೆಯುವಲ್ಲಿ ಬಹುತೇಕ ಎಲ್ಲಾ ಇಲಾಖೆಯೂ ವಿಫಲವಾಗಿದೆ.
ಹಳ್ಳದಲ್ಲಿಯೇ ಮರಳು ಸಾಣಿಸಿ ಲಾರಿಗಳಿಗೆ ತುಂಬುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ
ಬಗ್ಗೆ ಸ್ಥಳೀಯರು ದೂರು ನೀಡಿದರೆ ದೂರುದಾರರ ಮಾಹಿತಿಯನ್ನೇ ಬಹಿರಂಗಗೊಳಿಸುವ ಅಧಿಕಾರಿಗಳಿಂದ ಕಠಿಣಕ್ರಮ
ನಿರೀಕ್ಷೆ ಹುಸಿಯಾಗುತ್ತಿದೆ.
ಶುಕ್ರವಾರ ಬೆಳಗ್ಗಿನ
ಜಾವ 3.30ರ ಸುಮಾರಿಗೆ ಮಂಡಗದ್ದೆ ಅರಣ್ಯಾಧಿಕಾರಿ ವಿನಯ್ ಕುಮಾರ್ ನೇತೃತ್ವದ ತಂಡ ಮಹಿಷಿ ಸೇತುವೆ
ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಯನ್ನು ವಿಠಲನಗರ ಅರಣ್ಯ ಇಲಾಖೆ ಡಿಪೋದಲ್ಲಿ ಇಡಲಾಗಿದ್ದು ತನಿಖೆ ಆರಂಭಿಸಿದ್ದಾರೆ. ಅಕ್ರಮ ಮರಳು
ಸಾಗಾಣೆ ಮಾಡುತ್ತಿದ್ದ ಆರೋಪಿಗಳಾದ ಲಾರಿ ಮಾಲೀಕರು, ಚಾಲಕರು ಸಿಕ್ಕಿ ಬಿದ್ದಿದ್ದು ಎಲ್ಲಿಂದ ಮರಳು
ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆರಗದ ಭಾಗದಿಂದ ಆಗಮಿಸುತ್ತಿರುವ
ಲಾರಿ ಇದಾಗಿದ್ದು ಮುಡುಬದ ಬಳಿ ಇರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸುವ ಸಲುವಾಗಿ ಮಹಿಷಿ
ರಸ್ತೆಯನ್ನು ದಾಟುತ್ತಿವೆ. ಮತ್ತಿನಕೊಪ್ಪ ಸಮೀಪದ ಮಾರಿದಿಬ್ಬದ ಬಳಿ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್
ದಾಟಿಸಿ ಶಿವಮೊಗ್ಗ ಸಾಗಿಸುವ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಮಾರಿದಿಬ್ಬದ ಬಳಿ ನಾಜೂಕಿನಿಂದ ಇಲಾಖೆ
ಚೆಕ್ ಪೋಸ್ಟ್ ತಪ್ಪಿಸಿದರೆ ಮುಂದೆ ಯಾರು ಕೇಳುವವರು ಇರುವುದಿಲ್ಲ ಎಂಬ ಕಾರಣಕ್ಕೆ ಮಹಿಷಿ ದಾರಿ
ಹಿಡಿಯುತ್ತಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದ ಗಣಿ
ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮಗಳಿಗೆ ಪೂರ್ಣ ಬೆಂಬಲ ನೀಡುತ್ತಿರುವಂತಿದ್ದು ಮರಳು
ತಿಂದು ತೇಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ತೀರ್ಥಹಳ್ಳಿಗೆ ಕಾಲಿಡದ ಗಣಿ ಅಧಿಕಾರಿ ಎಲ್ಲಾ
ದಂಧೆಕೋರರನ್ನು ಶಿವಮೊಗ್ಗಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಸುತ್ತಮುತ್ತಲು ಅವರದೆ ಕರಾಮತ್ತು
ನಡೆಸುತ್ತಿದ್ದು ದಂಧೆ ತಡೆಯುವುದು ಮಾತ್ರ ಅವರದ್ದಲ್ಲ ಎಂಬ ಜಾಣ ನಿದ್ದೆಗೆ ಜಾರಿದ್ದಾರೆ. ರಾತ್ರಿ
ಬೆಳಗಾಗುವುದರೊಳಗೆ ಜೋಬಿಗೆ ಮರಳು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕವಾಗಿ
ವ್ಯಕ್ತವಾಗುತ್ತಿದೆ.
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ
ಪೊಲೀಸ್ ಗಸ್ತು ವ್ಯವಸ್ಥೆ ಇದ್ದು ಸಕ್ರೀಯತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಗಸ್ತು ಸಿಬ್ಬಂದಿಗಳಿಂದಲೇ
ದಂಧೆಕೋರರಿಗೆ ಮಾಹಿತಿ ಸಿಗುತ್ತಿದೆ ಎಂಬ ದೂರುಗಳು ಇದ್ದು ಪೊಲೀಸ್ ಇಲಾಖೆಯಿಂದಲೂ ಕ್ರಮ ಆಗುತ್ತಿಲ್ಲ.
ಕಂದಾಯ ಇಲಾಖೆ ಮರಳನ್ನು ಲೂಟಿಕೋರರ ವಶಕ್ಕೆ ಬಿಟ್ಟಿದ್ದು ತನಿಖೆ ಮಾತ್ರ ಕೈಗೊಳ್ಳುತ್ತಿಲ್ಲ. ದಂಧೆಯನ್ನು
ಹೀಗೆಯೆ ಬಿಟ್ಟರೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವ
ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ದಂಧೆ ತಡೆಯಲು ಅದೇಶ ರೂಪಿಸಬೇಕು. ಇಲ್ಲದಿದ್ದರೆ ತಾಲ್ಲೂಕಿನಾದ್ಯಂತ
ಹಳ್ಳಗಳು ಜೀವಂತಿಕೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
