ಶಾಸಕ ಆರಗ ಜ್ಞಾನೇಂದ್ರರಿಗೆ ಮುಖಭಂಗ
ಪಲ್ಟಿ ಹೊಡೆದ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ
ಶಾಸಕ ಆರಗ ಜ್ಞಾನೇಂದ್ರ ಸ್ವಕ್ಷೇತ್ರ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ. ಹಾಲಿ ಅಧ್ಯಕ್ಷ ಅಗಸಾಡಿ ಶಾಮಣ್ಣ ವಿರುದ್ಧ ಶಾಸಕ ಆರಗ ಜ್ಞಾನೇಂದ್ರರೇ ರೂಪಿಸಿದ್ದ ಅವಿಶ್ವಾಸ ನಿರ್ಣಯ ಗುರುವಾರ ಮಂಡನೆಯಾಗಿದೆ. ಅಗಸಾಡಿ ಶಾಮಣ್ಣನ ವಿರುದ್ಧ 6 ಮತ ಚಲಾವಣೆಯಾಗಿದ್ದು 4 ಸದಸ್ಯರು ಗೈರಾಗಿದ್ದಾರೆ. ಇದರಿಂದಾಗಿ ಅವಿಶ್ವಾಸ ನಿರ್ಣಯ ಮಗುಚಿಬಿದ್ದಿದೆ.
ಜಯಪೂಜಾರಿ ಹಿರೇಸರ (ಉಪಾಧ್ಯಕ್ಷರು), ರಾಘವೇಂದ್ರ ಪವರ್, ಸೂರ್ಯಕಲ ರವಿ, ಉಮಚಂದ್ರನಯ್ಕ್, ಗುರುಮೂರ್ತಿ ಗೌಡ್ರು, ಮಮತಾ ಗೋವಿಂದಪ್ಪ ಆವಿಶ್ವಾಸ ಸಭೆಗೆ ಹಾಜರಾಗಿ ಮತ ಚಲಾಯಿಸಿದರು. ಅಧ್ಯಕ್ಷ ಅಗಸಾಡಿ ಶಾಮಪ್ಪ, ಸಂದೇಶ ಶೆಟ್ಟಿ ಜಯಪುರ, ನಾಗರತ್ನ ಯಲ್ಲಪ್ಪ, ಜಯಂತಿ ರಮೇಶ್ ಸಭೆಗೆ ಗೈರಾಗಿದ್ದಾರೆ.
ರಾಜ್ಯದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಬಹಳ ವರ್ಷಗಳಿಂದ ಸ್ವಕ್ಷೇತ್ರ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮೇಲೆ ನಿಯಂತ್ರಣ ಸಾಧಿಸಿದ್ದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬ್ಯಾನರ್ ಹಿಡಿಯುವವರು ಕೂಡ ಇರಲಿಲ್ಲ. ಅವಿಶ್ವಾಸ ನಿರ್ಣಯ ಮಂಡನೆ ತಮ್ಮ ಪರವಾಗಿ ನಡೆದೆ ನಡೆಯುತ್ತದೆ ಎಂಬ ನಂಬಿಕೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಶಾಸಕರಿಗೆ ಮುಖಭಂಗವಾಗಿದೆ.
ಕಟ್ಟ ಬಿಜೆಪಿ ಅಭಿಮಾನಿ, ಆರಗ ಜ್ಞಾನೇಂದ್ರ ಅವರ ಶಿಷ್ಯರಾಗಿದ್ದ ಅಗಸಾಡಿ ಶಾಮಣ್ಣ ಬಿಜೆಪಿ ತಂತ್ರಗಾರಿಕೆಗೆ ತಿರುಮಂತ್ರ ರೂಪಿಸಿದ್ದ ನಾಲ್ವರು ಸದಸ್ಯರು ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಗುಡ್ಡೇಕೊಪ್ಪದಲ್ಲಿ ಹಲವು ವರ್ಷಗಳಿಂದ ಹಿಡಿತ ಸಾಧಿಸಿದ್ದ ಜ್ಞಾನೇಂದ್ರರ ಅಸ್ಥಿತ್ವವೇ ಅಲುಗಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಅಗಸಾಡಿ ಶಾಮಣ್ಣ ಮುಂದುವರೆಸಲು ರಾಜೀ ಮಾಡಿಕೊಳ್ಳಬೇಕೆಂಬ ಅನಿಸಿಕೆಗಳು ವ್ಯಕ್ತವಾಗಿತ್ತು. ಆದರೆ ಶಾಸಕರೆ ಅವಿಶ್ವಾಸ ನಿರ್ಣಯಕ್ಕೆ ರೂಪುರೇಷೆ ಸಿದ್ಧಪಡಿಸಿದ್ದರು. ಆದರೀಗ ಅವರ ತಂತ್ರವೇ ತಿರುಮಂತ್ರವಾಗಿ ಅಸ್ಥಿತ್ವವನ್ನು ಅಲ್ಲಾಡಿಸುವಂತಿದೆ.
ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾಗಿ ಕೆಲಸ ಮಾಡಿದ್ದ ಮಂಗಳಗೋಪಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಸಾಮಾಜ್ಯ ಕೆಡವುತ್ತೇನೆ ಎಂದು ಪಟ್ಟು ಕೂಡ ಹಿಡಿದ್ದರು. ಕೋಣಂದೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ಮುನಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡರು ಕೂಡ ಅವಿಶ್ವಾಸ ನಿರ್ಣಯವನ್ನು ಬೀಳಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿದ್ದರು. ಬಿಜೆಪಿ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದ್ದಂತೆ ಮತ್ತೊಂದು ಆಘಾತ ಎದುರಿಸುವಂತಾಗಿದೆ.