ಪಕ್ಷದ ಜವಾಬ್ದಾರಿ ವಹಿಸಿದ ಬಿಜೆಪಿ ನಾಯಕರು
ಅದು 2009 ರ ಸಮಯ. ಈಗಿನ ಸಂಸದ ಬಿ.ವೈ. ರಾಘವೇಂದ್ರ ಆಗಿನ್ನೂ ಕೇವಲ ಸಿಎಂ ಯಡಿಯೂರಪ್ಪ ಮಗ ಎಂಬ ಕಾರಣದಿಂದ ಪಕ್ಷದ ವಲಯದಲ್ಲಿ ಪರಿಚಿತರಾಗಿದ್ದರು. ಅಲ್ಲಿಯ ತನಕ ಅವರ ಸಾರ್ವಜನಿಕ ಸೇವೆ ಎಂದರೆ ಶಿಕಾರಿಪುರ ಪುರಸಭೆ ಸದಸ್ಯನಾಗಿದ್ದುದು.ಆಗಲೇ ಮತ್ತೊರ್ವ ದೈತ್ಯ ಶಕ್ತಿಯ ರಾಜಕಾರಣಿ ಎಸ್.ಬಂಗಾರಪ್ಪ ಬಿಜೆಪಿ, ಸಮಾಜವಾದಿ ಪಕ್ಷದಿಂದ ಸಂಸದ ಆಗಿ ಬಳಿಕ ಮತ್ತೆ ಕಾಂಗ್ರೆಸ್ ಹುರಿಯಾಳಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
ಬಿಜೆಪಿಯಿಂದ ಅವರ ವಿರುದ್ಧ ಸ್ಪರ್ಧೆ ಮಾಡುವುದು ಯಾರೆಂಬುದು ಒಂದು ಸಭೆಯಲ್ಲಿ ಜೋರಾಗಿ ಚರ್ಚೆ ಆಗುತ್ತದೆ. ಆಗೆಲ್ಲ ಆಯನೂರು ಮಂಜುನಾಥ್ ಅಥವಾ ಭಾನುಪ್ರಕಾಶ್ ನಿರಂತರವಾಗಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುತ್ತಿದ್ದರು.
ಸಭೆಯಲ್ಲಿ ಚರ್ಚೆ ಆಗುತ್ತಿದ್ದಂತೆ ಆಗಿನ್ನೂ ತೀರ್ಥಹಳ್ಳಿ ತಾಲೂಕು ಯುವ ಮೋರ್ಚಾದಲ್ಲಿ ಉಪಾಧ್ಯಕ್ಷನಾಗಿದ್ದ ಚಂದವಳ್ಳಿ ಸೋಮಶೇಖರ್ ದಿಟ್ಟವಾಗಿ ಎದ್ದು ನಿಂತು ಬಿ.ವೈ.ರಾಘವೇಂದ್ರ ಅವರೆ ನಿಲ್ಲಲಿ ಅವರೇ ಸೂಕ್ತ ಅಭ್ಯರ್ಥಿ ಎಂದಾಗ ಇಡೀ ಸಭೆಯಲ್ಲಿ ಗಲಿಬಿಲಿ ಉಂಟಾಗುತ್ತದೆ. ಒಂದು ಆಗಲೂ ಮತ್ತು ಈಗಲೂ ಬಿಜೆಪಿ ಸಭೆಯಲ್ಲಿ ಮೊದಲು ದೊಡ್ಡವರು ಬಳಿಕ ಕಿರಿಯರು ಅದರಲ್ಲೂ ಸೂಚನೆ ದೊರೆತರೆ ಮಾತ್ರ ಮಾತಾಡಲು ಅವಕಾಶ ಅಲ್ಲದೆ ಆಗಿನ್ನೂ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಸಂಸ್ಕೃತಿ ಆರಂಭವಾಗಿರಲಿಲ್ಲ. ಇದನ್ನು ಯಡಿಯೂರಪ್ಪ ಕೂಡ ಒಪ್ಪವುದು ಕಷ್ಟವಿತ್ತು. ಆದರೆ ಸೋಮುವಿನ ಮಾತು ಅಲ್ಲಿದ್ದ ಯುವಕರಿಗೆ ಮಾತ್ರ ವಿದ್ಯುತ್ ಸಂಚಾರ ಮೂಡಿಸಿತು. ಸ್ಪರ್ಧೆಗೆ ರಾಘವೇಂದ್ರ ಪರ ಒತ್ತಡ ಹೆಚ್ಚಿ ಅಂತಿಮವಾಗಿ ಅವರು ಅಭ್ಯರ್ಥಿಯಾಗಿ ಹೊರ ಹೊಮ್ಮಿದರು ಮಾತ್ರವಲ್ಲ ಮೊದಲ ಸ್ಪರ್ಧೆಯಲ್ಲಿಯೇ ಬಂಗಾರಪ್ಪರಂತಹ ಮೇರು ರಾಜಕಾರಣಿಯನ್ನು ಸೋಲಿಸಿದರು. ಈಗ ರಾಘವೇಂದ್ರ ದೇಶದ ಅತ್ಯಂತ ಕ್ರಿಯಾಶೀಲ ಸಂಸದರಲ್ಲಿ ಒಬ್ಬರಾಗಿ ಹೆಸರು ಮಾಡಿದ್ದಾರೆ. ಆಗ ಪರಿಣಾಮ ಲೆಕ್ಕಿಸದೆ ರಾಘವೇಂದ್ರರ ಹೆಸರು ಹೇಳಿದ್ದ ಸೋಮಶೇಖರ್ ಈಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಗೆ ಏರಿದ್ದಾರೆ. ಈ ಮೊದಲು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಹೀಗೆ ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಅತ್ಯಂತ ಸಾಮಾನ್ಯ ರೈತ ಕುಟುಂಬದ ಸೋಮು ಮೊದಲು ಸಾರ್ವಜನಿಕ ಕ್ಷೇತ್ರದ ಪ್ರವೇಶ ಮಾಡಿದ್ದು ತಾಲೂಕು ಯುವಜನ ಒಕ್ಕೂಟದ ಪದಾಧಿಕಾರಿಯಾಗಿ. ನಂತರ ತಮ್ಮ ಕ್ರಿಯಾಶೀಲತೆ, ಹಾಗೂ ಸಂಘಟನೆ ಶಕ್ತಿಯಿಂದ ಮುಂದೆ ಅಧ್ಯಕ್ಷರಾದರು ಮಾತ್ರವಲ್ಲ ತಾಲೂಕು ಪುರಾ ಸುತ್ತಾಡಿ ಒಂದು ಹಂತದಲ್ಲಿ 40ರಿಂದ 50 ತಂಡಗಳು ಭಾಗವಹಿಸುವಂತೆ ಮಾಡಿ ಯುವಜನ ಮೇಳಗಳಿಗೆ ವೈಭವದ ಸ್ಪರ್ಶ ನೀಡಿದರು. ಅಲ್ಲದೆ ಇಲಾಖೆಯ ಮಂದಿ ತೀರ್ಥಹಳ್ಳಿ ಕಡೆ ತಿರುಗಿ ನೋಡುವಂತೆ ಮಾಡಿದರು. ನಂತರ ರಾಜಕೀಯ ಪ್ರವೇಶ ಮಾಡಿದ ಅವರು ತಾಲೂಕು ಪಂಚಾಯತ್ ಸದಸ್ಯನಾಗಿ ಉತ್ತಮ ಕಾರ್ಯ ನಿರ್ವಹಿಸಿದರು. ಇದಲ್ಲದೆ ಕಳೆದ 25 ವರ್ಷ ದಿಂದ ತಾಲೂಕು ಒಕ್ಕಲಿಗ ಸಂಘದ ನಿರ್ದೇಶಕ, ಉಪಾಧ್ಯಕ್ಷನಾಗಿಯೂ ಗಮನ ಸೆಳೆದಿದ್ದಾರೆ. ಬಗರ್ ಹುಕುಂ ಸಮಿತಿ ಸದಸ್ಯನಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹೀಗೆ ದೊರೆತ ಎಲ್ಲ ಅವಕಾಶಗಳಲ್ಲೂ ತನ್ನ ಗುರುತು ಮೂಡಿಸಿರುವ ಸೋಮು ಅಗ್ರಹಾರ ಹೋಬಳಿಯಲ್ಲಿ ಜನಪ್ರಿಯ ಮುಖಂಡ ಮತ್ತು ಆರಗ ಜ್ಞಾನೇಂದ್ರ ನಂತರದ ಸಾಲಿನಲ್ಲಿ ತಾಲೂಕಿನಲ್ಲಿ ಪ್ರಮುಖವಾಗಿ ಕಾಣುವ ಬಿಜೆಪಿ ಯುವ ನಾಯಕರಲ್ಲಿ ಸೋಮು ಕೂಡ ಪ್ರಮುಖರು.
ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸಿ ಒಂದು ಜವಾಬ್ದಾರಿ ನೀಡುವಾಗ ಸಾಕಷ್ಟು ವಿಮರ್ಶೆ ನಡೆಯುತ್ತದೆ. ಅದರಲ್ಲಿ ಸೋಮು ಆಯ್ಕೆ ನಡೆದಿದೆ ಎಂದರೆ ದೊಡ್ಡ ಜವಾಬ್ದಾರಿ ಹೊರಲು ಅವರು ಶಕ್ತ ಎಂಬುದನ್ನು ಪಕ್ಷ ಗುರುತಿಸಿದೆ ಎಂದರ್ಥ. ದಿಟ್ಟ, ಸ್ನೇಹಮಯ ಸ್ವಭಾವದ ಸೋಮು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವ ನಿರೀಕ್ಷೆ ಪಕ್ಷದಲ್ಲಿದೆ.
