ಶರಾವತಿ ಕಾಲೇಜಿಗೆ ಸೇರಿದ ಕಾಡಾನೆಗಳು
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡಿರುವ ಎರಡು ಕಾಡಾನೆಗಳು ಬುಧವಾರ ರಾತ್ರಿ ಹಲುಸಾಲೆ ಗ್ರಾಮದಿಂದ ಹೊರಟಿದ್ದು ಗುರುವಾರ ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ಕೆರೆಯ ಸಮೀಪ ಕಾಣಿಸಿಕೊಂಡಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆ ಓಡಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದ್ದು ಪಟಾಕಿಗಳನ್ನು ಹೊಡೆಯುವ ಮೂಲಕ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಲಾಖೆಯ ಕಣ್ಣು ತಪ್ಪಿಸಿ ಕೋಣಂದೂರಿಗೆ ಬಂದಿದ್ದು ಅಲ್ಲಿಯೇ ಬೆಳಿಗ್ಗೆಯಿಂದ ವಿಶ್ರಾಂತಿ ಪಡೆಯುತ್ತಿವೆ. ದಸರಾ ಮುಗಿಯುವವರೆಗೆ ತೀರ್ಥಹಳ್ಳಿಯ ಪ್ರವಾಸ ಮುಗಿಸಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕೆಂಬ ತಾಲೀಮು ಪಡೆದುಕೊಂಡು ವಿಜಯದಶಮಿಗೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದು ಎಂಬ ತಮಾಷೆ ಹಳ್ಳಿ ಭಾಗದ ಜನರಿಂದ ಕೇಳಿ ಬರುತ್ತಿದೆ.




