ಶ್ರೀ ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಡಿ.ಎಸ್.ವಿಶ್ವನಾಥ ಶೆಟ್ಟಿ ಅವಿರೋಧ ಆಯ್ಕೆ
ತೀರ್ಥಹಳ್ಳಿಯ ಕ್ಷೇತ್ರ ದೇವತೆ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಸಮಿತಿಯ ಅಧ್ಯಕ್ಷರಾಗಿ ಡಿ.ಎಸ್.ವಿಶ್ವನಾಥ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಶ್ರೀ ರಾಮೇಶ್ವರ ಸಭಾಭವನದಲ್ಲಿ ಸದಸ್ಯ ಎಚ್.ಆರ್. ಮಹಾಬಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ವಿಶ್ವನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಪ್ರಧಾನ ಅರ್ಚಕ ರಾಜಶೇಖರ ಭಟ್, ಎಚ್.ಆರ್. ಮಹಾಬಲ, ಪೂರ್ಣೇಶ ಎಸ್, ಜ್ಯೋತಿ ರವಿ, ತ್ರಿವೇಣಿ ಸುರೇಶ್, ಹಾಲಿಗೆ ನಾಗರಾಜ್, ಶಶಿಧರ ಎಚ್.ಎ., ಎಸ್.ಪ್ರದೀಪ್ ಮುಂದಿನ ಮೂರು ವರ್ಷಗಳ ಅವಧಿಗೆ ಜಿಲ್ಲಾಧಿಕಾರಿ ಆದೇಶದಂತೆ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಎಸ್.ವಿಶ್ವನಾಥ ಶೆಟ್ಟಿ, ದೇವಾಲಯದ ಸಮಗ್ರ ಅಭಿವೃದ್ಧಿಗೆ ಸಮಿತಿಯು ಪ್ರಾಮಾಣಿಕವಾಗಿ ಶ್ರಮಿಸಲಿದೆ. ಮುಂದಿನ ದಿನಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯದ ಪೌಳಿಯ ಸುತ್ತಲೂ ಮೇಲ್ಛಾವಣಿಯನ್ನು ನಿರ್ಮಿಸಲು ಆಲೋಚಿಸಲಾಗಿದೆ. ಅಲ್ಲದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ಆಕರ್ಶಿಸುವ ಸಲುವಾಗಿ ವಿವಿಧ ಸಮಿತಿಗಳನ್ನು ಒಗ್ಗೂಡಿಸಿ ರೂಪುರೇಶೆ ಸಿದ್ಧಪಡಿಸಲಾಗುವುದು. ನೂತನ ಸಮಿತಿ ವ್ಯಾಪ್ತಿಯಲ್ಲಿ ದೇವಸ್ಥಾನದ ಆಡಳಿತ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ವರಲಕ್ಷ್ಮಿ ಮತ್ತು ನಾಗಭೂಷಣ್ ಉಪಸ್ಥಿತರಿದ್ದರು. ಸಭೆಯ ಬಳಿಕ ನೂತನ ಸಮಿತಿ ವತಿಯಿಂದ ತುಂಗಾನದಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.

