80 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಬಯಲು ರಂಗಮಂದಿರ

3 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಸಿದ್ಧತೆ
ತೀರ್ಥಹಳ್ಳಿ ಪಟ್ಟಣ ಇನ್ನುಮುಂದೆ ಸಿಸಿಟಿವಿ ಕಣ್ಗಾವಲಿಗೆ

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಲಕ್ಷ ವೆಚ್ಚದಲ್ಲಿ ಮೂರು ಸಾವಿರ ಜನರು ಕುಳಿತುಕೊಳ್ಳಬಹುದಾದ ಸಾರ್ವಜನಿಕ ಬಯಲು ರಂಗಮಂದಿರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈ ಸಲುವಾಗಿ ಡಿಪಿಆರ್‌ ತಯಾರಿ ಮಾಡಲಾಗುತ್ತಿದ್ದು ಆರಂಭಿಕವಾಗಿ ಸ್ಥಳ ಗುರುತು, ಶಂಕುಸ್ಥಾಪನೆಗೆ ಅಗತ್ಯವಾದ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದೆ ಶಾಂತವೇರಿ ಗೋಪಾಲಗೌಡ ರಂಗಮಂದಿರ ನಿರ್ಮಾಣದ ಸಂದರ್ಭ ನೀಲನಕ್ಷೆ ಇರಲಿಲ್ಲ. ಹಾಗಾಗಿ ಅನುದಾನ, ಪೂರ್ಣ ಪ್ರಮಾಣದ ರಂಗಮಂದಿರ ವಿನ್ಯಾಸದಲ್ಲಿ ತೊಡಕು ಉಂಟಾಗಿತ್ತು. ಈ ಬಾರಿ ಪೂರ್ಣವಾದ ನಕ್ಷೆಯ ಮೂಲಕ ಹಂತಹಂತದ ಕಾಮಗಾರಿಗೆ ಚಾಲನೆ ನೀಡಲು ಪಟ್ಟಣ ಪಂಚಾಯಿತಿ ಆಡಳಿತ ನಿರ್ಣಯಿಸಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್‌ ಉಲ್ಲಾ ಅಸಾದಿ ಹೇಳಿದರು.

2012ರ ಹಿಂದೆ ತೀರ್ಥಹಳ್ಳಿ ಪಟ್ಟಣದಾದ್ಯಂತ ಸಿಸಿಟಿವಿ ಕಣ್ಗಾವಲು ಇತ್ತು. ರಸ್ತೆ ಅಗಲೀಕರಣದ ಸಂದರ್ಭ ಅವೆಲ್ಲಾ ಹಾಳಾಗಿದ್ದರಿಂದ ಇದೀಗ ಹೊಸದಾಗಿ ಸಿಸಿಟಿವಿ ಅಳವಡಿಸಬೇಕಾದ ಅವಶ್ಯಕತೆ ಇದೆ. ಕೊಪ್ಪ ಸರ್ಕಲ್‌ನಿಂದ ಮುಖ್ಯ ಬಸ್‌ ನಿಲ್ದಾಣದ ವರೆಗೆ ರಸ್ತೆ ಅಗಲೀಕರಣ ನಡೆಯುವ ಹಿನ್ನಲೆ ಅಲ್ಲಿ ಮುಂಜಾಗ್ರತೆಯಿಂದ ಕ್ಯಾಮೆರಾ ಅಳವಡಿಸಲಾಗುತ್ತದೆ. ಮುಖ್ಯ ರಸ್ತೆ, ವಾಣಿಜ್ಯ ಕೇಂದ್ರ, ಜನಸಂದಣಿ ಪ್ರದೇಶಗಳನ್ನು ಒಳಗೊಂಡಂತೆ ಪೊಲೀಸ್‌ ವ್ಯವಸ್ಥೆಗೆ ಅಗತ್ಯವಾದ ಸಿಸಿಟಿವಿ ಅಳವಡಿಕೆಗೆ ಪಟ್ಟಣ ಪಂಚಾಯಿತಿ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈಗಾಗಲೇ ₹10 ಲಕ್ಷ ಮೀಸಲಿಟ್ಟಿದ್ದು ದಾನಿಗಳ ಸಹಾಯ ಕೇಳಲಾಗುವುದು ಎಂದು ತಿಳಿಸಿದ್ದಾರೆ.

ಅಂದಾಜು 3 ಕೋಟಿಗೂ ಹೆಚ್ಚಿನ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುಮತಿ ದೊರೆತಿದೆ. ನೀರಿನ ತೆರಿಗೆ ನಿಧಿಯಲ್ಲಿ 1.20 ಕೋಟಿ, ಉದ್ಯಮ ನಿಧಿಯಿಂದ 80 ಲಕ್ಷ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ. ಉಳಿದಂತೆ 4 ಲಕ್ಷ ಮೀನು ಮಾರುಕಟ್ಟೆ ಸ್ವಚ್ಚತೆ, 21 ಲಕ್ಷ ಶಾಂತವೇರಿ ಗೋಪಾಲಗೌಡ ರಂಗಮಂದಿರ, 19 ಲಕ್ಷ ಅಂಬೇಡ್ಕರ್‌ ಭವನದ ಮೇಲ್ಛಾವಣಿ ಕಾಮಗಾರಿಗಳು ನಡೆಯುತ್ತಿದೆ. ಪೌರ ಕಾರ್ಮಿಕರಿಗೆ ವಿಮಾನದ ಅಧ್ಯಯನ ಪ್ರವಾಸಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತರೆ ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ರಾಜ್ಯದ ಮೊದಲ ಸ್ಥಳೀಯ ಸಂಸ್ಥೆಯಾಗಿ ಗುರುತಾಗಲಿದೆ. ಜನಪ್ರತಿನಿಧಿಗಳಿಗೆ ಸಾಮಾನ್ಯವಾಗಿ ಅವಕಾಶ ಕಲ್ಪಿಸಲಾಗಿತ್ತು. ಪೌರ ಕಾರ್ಮಿಕರ ಪ್ರವಾಸ ಮೊದಲ ಪ್ರಯತ್ನ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಕ್ಲೀನಿಕ್‌ ತೆರೆಯಲು ಸಿದ್ಧತೆ ನಡೆಯುತ್ತಿದೆ. ದಿನವೊಂದಕ್ಕೆ 30 ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು. ಹೊನಲು ಬೆಳಕಿನ ವಾಲಿಬಾಲ್‌ ಕೋರ್ಟ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ದಸರಾ ಸಂಭ್ರಮಾಚರಣೆಯೊಳಗೆ ಮಿರ್ಜಾ ಇಸ್ಮಾಯಿಲ್‌ ನಿರ್ಮಿಸಿದ ಕುಶಾವತಿಯ ವಿಜಯ ಮಂಟಪ ನವೀಕರಣ ಆಗಲಿದೆ ಎಂದು ಹೇಳಿದರು.

ತುಂಗಾ ನದಿಯ ದಂಡೆಯ ಮೇಲೆ ಜೋಪಡಿಯೊಳಗೆ ವಾಸಿಸುವ 23 ಜನರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅವರೆಲ್ಲರಿಗೂ ಹೊರಬೈಲಿನಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ವಸತಿ, ಮನೆ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿತ್ತನಗದ್ದೆಯಲ್ಲಿ 15 ಎಕರೆ ಪ್ರದೇಶವನ್ನು ಆಶ್ರಯ ಯೋಜನೆಗೆ ಒದಗಿಸಲು ಕೋರಲಾಗಿದೆ. ವೈದ್ಯ ನಾರಾಯಣಸ್ವಾಮಿ ಹೆಸರಿನಲ್ಲಿ ಸಭಾಂಗಣ ತೆರೆಯಲಾಗಿದೆ ಎಂದರು.

ಉಪಾಧ್ಯಕ್ಷೆ ಗೀತಾ ರಮೇಶ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post