“ನಾನು ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದಾಗ ನೀವು ನನಗೆ ಸಿಗಲೇ ಇಲ್ಲ” -ಮೋಹನ್ ಮುನ್ನೂರು
ತೀರ್ಥಹಳ್ಳಿಯ ಜನಮಾನಸದಲ್ಲಿ ಲಯನ್ಸ್ ಪಾಂಡಣ್ಣ ಎಂದೇ ಜನಪ್ರೀಯವಾಗಿರುವ ಪಾಂಡುರಂಗಪ್ಪನವರಿಗೆ 70ರ ಹರೆಯ. ಮೂಲತಃ ಹೊಸದುರ್ಗ ತಾಲ್ಲೂಕಿನ ದೊಡ್ಡಘಟ್ಟದಲ್ಲಿ ಹೊನ್ನಪ್ಪ ಮತ್ತು ಶಾರದಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರು 45 ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ಕರ್ನಾಟಕ ಕಂಡ ಅಪ್ರತಿಮ ಕೊಡುಗೈ ದಾನಿಗಳಲ್ಲಿ ಒಬ್ಬರಾದ ಸಾರಾಯಿ ಗುತ್ತಿಗೆದಾರ ಇಬ್ರಾಹಿಂ ಸಾಹೇಬರ ಜೊತೆ ಮ್ಯಾನೇಜರ್ ಆಗಿ ತೀರ್ಥಹಳ್ಳಿ ಭಾಗವನ್ನು ನಿರ್ವಹಿಸಲು ಬಂದರು. ಆಗ ಪಾಂಡಣ್ಣನಿಗೆ ತಾವು ತೀರ್ಥಹಳ್ಳಿಯಲ್ಲಿ ನೆಲೆನಿಂತು ಇಲ್ಲೊಬ್ಬ ಪ್ರಮುಖ ವ್ಯಕ್ತಿಯಾಗಿ ಬೆಳೆಯುತ್ತೇನೆ ಎಂಬ ಕಲ್ಪನೆಯೂ ಇದ್ದಿರಲಾರದು.
ಅಂದ ಹಾಗೆ ಶಿವಮೊಗ್ಗ ಜಿಲ್ಲೆಯ ಶ್ರೀಮಂತ ಸಾರಾಯಿ ಗುತ್ತಿಗೆದಾರರಾಗಿದ್ದ ಇಬ್ರಾಹಿಂ ಸಾಹೇಬರಿಂದ ನೆರವು ಪಡೆಯದ ಜಾತಿ ಧರ್ಮದವರೇ ಇಲ್ಲ ಎನ್ನುವಷ್ಟು ಧಾರಾಳವಾಗಿದ್ದ ಸಹೃದಯರು. ಒಂದು ಕಾಲದಲ್ಲಿ ಇಬ್ರಾಹಿಂ ಸಾಹೇಬರು ಸಣ್ಣಪುಟ್ಟ ಮನೆ ಸಮಸ್ಯೆಗಳಿಂದ ಹಿಡಿದು. ಸಾಹಿತ್ಯ ಸಮ್ಮೇಳನದ ವರೆಗೆ ದೊಡ್ಡಮಟ್ಟದ ದಾನವನ್ನು ನೀಡಿದ್ದರು. ದಾನವೆಂಬುದು ಅವರಿಗೆ ಅಕ್ಷರಶಃ ಅವರಿಗೆ ಗೀಳಿನಂತೆಯೇ ಆಗಿ ಕಡೆಗಾಲದಲ್ಲಿ ಎಲ್ಲಾ ಶ್ರೀಮಂತಿಕೆಯೂ ಹೋಗಿ ತೀರಾ ಸಾಮಾನ್ಯನಂತೆ ಬದುಕಬೇಕಾಗಿ ಬಂತು.
ಅಂತಹ ವ್ಯಕ್ತಿಯ ಜೊತೆ ಪಳಗಿದ್ದ ಪಾಂಡುರಂಗಪ್ಪ ಇಬ್ರಾಹಿಂ ಸಾಹೇಬರು ಇಲ್ಲಿಂದ ನಿರ್ಗಮಿಸಿದ ಬಳಿಕ ತಾವೇ ಸ್ವಂತ ಉದ್ಯಮೆಯಲ್ಲಿ ತೊಡಗಿಕೊಂಡರು. ಅನುಭವ ಬಲದಿಂದ ಉದ್ಯಮವನ್ನು ಚೆನ್ನಾಗಿ ವಿಸ್ತರಿಸಿದರೂ ಕೂಡ. ಆರ್ಥಿಕ ಸಂಪನ್ಮೂಲ ಹೆಚ್ಚುತ್ತ ಹೋದಂತೆ ತೀರಾ ವ್ಯವಹಾರಸ್ಥರು ಆಸ್ತಿಯನ್ನು ಹತ್ತಾರುಪಟ್ಟು ವಿಸ್ತರಿಸಲು ಹೋಗುತ್ತಾರೆ. ಆದರೆ ಪಾಂಡಣ್ಣ ಹಾಗೆ ಮಾಡಲಿಲ್ಲ. ತಮ್ಮ ಯಜಮಾನ ಇಬ್ರಾಹಿಂ ಸಾಹೇಬರಂತೆ ಹಣ ಹೆಚ್ಚಾದಂತೆ ದಾರಾಳಿಯಾಗುತ್ತಾ ಹೋದರು. ಎಷ್ಟರ ಮಟ್ಟಿಗೆ ಎಂದರೆ 25 ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಗಣೇಶೋತ್ಸವದಿಂದ ಹಿಡಿದು ತಾಲ್ಲೂಕಿನ ಹಳ್ಳಿಗಾಡಿನಲ್ಲಿ ನಡೆಯುವ ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳೂ ಅವರ ನೆರವಿಲ್ಲದೆ ಮುಂದೆ ಸಾಗುತ್ತಿರಲಿಲ್ಲ.
ಗಣೇಶೋತ್ಸವ, ರಾಜ್ಯೋತ್ಸವ, ಸಂದರ್ಭದಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ರಂತಹ ಮೇರು ಗಾಯಕನಿಂದ ಹಿಡಿದು ಹೆಸರಾಂತ ಕಲಾವಿದರನ್ನು ತೀರ್ಥಹಳ್ಳಿಗೆ ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವಾಗ ಮುಂದೆ ನಿಲ್ಲುತ್ತಿದ್ದುದು ಪಾಂಡಣ್ಣನೆ. ಈಗ ಬಾರಿ ಹೆಸರು ಮಾಡಿರುವ ಯುವ ಚಲನಚಿತ್ರ ನಿರ್ದೇಶಕರೊಬ್ಬರ ತಾಯಿ ನಾಟಕ ಕ್ಯಾಂಪ್ ಒಂದನ್ನು ತೀರ್ಥಹಳ್ಳಿಯಲ್ಲಿ ಏರ್ಪಡಿಸಿ ವಿಪರೀತ ನಷ್ಟ ಅನುಭವಿಸಿದಾಗ ಕಂಗೆಟ್ಟ ಅವರಿಗೆ ಸಹಕರಿಸಿ ಮತ್ತೆ ಚೈತನ್ಯ ತುಂಬಿದ್ದು ಪಾಂಡಣ್ಣ. ಇಂತಹ ನೂರಾರು ಉದಾಹರಣೆಗಳು ಅವರ ವ್ಯಕ್ತಿತ್ವದಲ್ಲಿ ಹುದುಗಿದೆ. ಹಾಗೆಂದು ಜನಪ್ರಿತಿಯತೆಯ ಶಿಖರವೇರಿ ಹತ್ತಾರು ಸಂಸ್ಥೆಗಳ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಾಗಲೂ ಅವರು ಹಿಗ್ಗಲಿಲ್ಲ ಬದಲಾಗಿ ವಿನಮ್ರರಾಗುತ್ತ ಸಾಗಿದರು. 2000 ದಶಕದಲ್ಲಿ ನಾನು ಕಲಾವಿದ, ಗಾಯಕನಾಗಿ ಹೆಸರು ಮಾಡಿದಾಗ ಆಗೊಮ್ಮೆ ಈಗೊಮ್ಮೆ ತಂಡದ ಜೊತೆಗೆ ಆರ್ಥಿಕ ಸಹಾಯ ಯಾಚಿಸಿ. ಅವರಲ್ಲಿ ಹೋಗಿದ್ದುಂಟು. ಆದರೆ ನಿಕಟ ಪರಿಚಯವಿರಲಿಲ್ಲ. ಮುಂದೆ ಸಾಕಷ್ಟು ಆತ್ಮೀಯತೆ ಬೆಳೆದಾಗ ಒಂದೊಮ್ಮೆ ನನ್ನ ಕೈಕುಲುಕಿ “ನಾನು ಉಚ್ಚ್ರಾಯಸ್ಥಿತಿಯಲ್ಲಿ ಇದ್ದಾಗ ನೀವು ನನಗೆ ಸಿಗಲೇ ಇಲ್ಲ” ಎಂದು ಹೇಳಿದ್ದು ಈಗಲೂ ನೆನಪಿಗೆ ಬರುತ್ತಿದೆ. ಆ ಸಂದರ್ಭದಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ತೀರ್ಥಹಳ್ಳಿಯಲ್ಲಿ ಯಾರಾದರೂ ಕಲಾವಿದರು ಆರ್ಥಿಕ ಸಹಾಯಯಾಚಿಸಿ ಹೋದಾಗ ಅವರನ್ನು ಗೌರವದಿಂದ ಕುಳ್ಳಿರಿಸಿ ಅತ್ಯಂತ ಸಹನೆಯಿಂದ ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಂಡು ಬಳಿಕ ಕೈತುಂಬ ಹಣನೀಡಿ ಬೀಳ್ಕೊಡುತ್ತಿದ್ದುದು ಒಬ್ಬರು ಪಾಂಡಣ್ಣ ಮತ್ತೊಬ್ಬರು ಡಾ.ಜೀವಂಧರ್ ಜೈನ್.
ಬಹುತೇಕ ಮೂರು ದಶಕಗಳಲ್ಲಿ ತೀರ್ಥಹಳ್ಳಿಯ ಎಲ್ಲಾ ರೀತಿಯ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾಲಿಗೆ ಅನಿವಾರ್ಯ ವ್ಯಕ್ತಿಯಾಗಿದ್ದ ಪಾಂಡಣ್ಣ ಕಳೆದ ಹಲವಾರು ವರ್ಷಗಳಿಂದ ವಯಸ್ಸಿನ ಕಾರಣಕ್ಕಾಗಿ ಹಿನ್ನೆಲೆಗೆ ಸರಿಯುತ್ತಿದ್ದರೂ ಈಗಲೂ ತಮ್ಮ ವಿನಯವಂತ ವ್ಯಕ್ತಿತ್ವ ಹಾಗೂ ಕೊಡುಗೈ ದಾನದಿಂದ ಪ್ರಸ್ತುತರಾಗಿಯೇ ಉಳಿದಿದ್ದಾರೆ. ಈಗ ಅವರಿಗೆ 70ರ ಹರೆಯ ಎಂದು ಅವರ ಪುತ್ರ ವಿಶಾಲ್ ಕುಮಾರ್ ಹೇಳಿದಾಗ ಕಾಲ ಎಷ್ಟು ಬೇಗ ಸರಿದು ಹೋಗುತ್ತಿದೆ ಎಂದು ಅನಿಸುತ್ತಿದೆ. ಅಂದಹಾಗೆ ಈಗ ಪಾಂಡಣ್ಣ ಸಂಕದಹೊಳೆಯ ಸಮೀಪ ತಮ್ಮ ಸುಂದರ ಅಭಿವೃಚಿಗೆ ತಕ್ಕಹಾಗೆ ಮನೆಯನ್ನು ನಿರ್ಮಿಸಿ ಮೊಮ್ಮಕ್ಕಳೊಂದಿಗೆ ಹಾಯಾಗಿದ್ದಾರೆ. ಪಾಂಡಣ್ಣನಿಗಿಂತಲೂ ಹಲವಾರು ಪಟ್ಟು ದುಡ್ಡು ನೋಡಿದವರು, ದುಡಿದವರು, ಉಳಿಸಿಕೊಂಡವರು ಬೇಕಾದಷ್ಟು ಮಂದಿ ಇದ್ದಾರೆ. ಆದರೆ ಸಮಾಜ ತನಗೆ ನೀಡಿದ ದುಡಿಮೆಯಲ್ಲಿ ನಿಯಮಿತವಾಗಿ ದೊಡ್ಡ ಪಾಲನ್ನು ತಿರುಗಿ ಸಮಾಜಕ್ಕೆ ಎಷ್ಟೇ ಕಷ್ಟವಾದರೂ ಸರಿ ನೀಡಬೇಕೆಂದು ಅವರ ಹಾಗೆ ಆಲೋಚಿಸುವವರು ಮಾತ್ರ ತೀರ ವಿರಳ. ಆ ಮಟ್ಟಿಗೆ ಅವರು ತಮ್ಮ ಯಜಮಾನ ಇಬ್ರಾಹಿಂ ಸಾಹೇಬರಿಗೆ ತಕ್ಕುದಾದ ಶಿಷ್ಯ.
ಪಾಂಡಣ್ಣನಿಗೆ ನಾಲ್ಕು ಮಕ್ಕಳು ವಿಶಾಲ್ ಕುಮಾರ್, ಡಾ.ರೋಹಿತ್, ಇಂಜಿನಿಯರ್ ರೇವಂತ್, ಗೃಹಿಣಿ ಉಷಾ ಮತ್ತು ಮೊಮ್ಮಕ್ಕಳು ಅವರು ಆರೋಗ್ಯವಂತರಾಗಿ ನೂರುಕಾಲ ಬದುಕಲಿ.
.jpg)
