ಸಹ್ಯಾದ್ರಿ ಸಂಸ್ಥೆ ಸ್ಥಿರಾಸ್ತಿ 72 ಕೋಟಿ ರೂಪಾಯಿ

ವಾರ್ಷಿಕ 1,475 ಕೋಟಿ ರೂಪಾಯಿ ವಹಿವಾಟು
ಸಾರ್ವಜನಿಕರ ಅಚಲ ನಂಬಿಕೆ ಸಹ್ಯಾದ್ರಿ ಸಂಸ್ಥೆ ಯಶಸ್ಸಿಗೆ ಕಾರಣ – ಬಸವಾನಿ ವಿಜಯದೇವ್

ಸ್ಥಳೀಯ ಜನರ ವ್ಯವಹಾರಿಕ ಅನುಕೂಲಕ್ಕೆ ದೂರದೃಷ್ಟಿ  ಉದ್ದೇಶದಲ್ಲಿ  ಆರಂಭಿಸಿದ ಸಹ್ಯಾದ್ರಿ ವಿವಿದೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘ ಕಳೆದ ವಾರ್ಷಿಕ ಸಾಲಿನಲ್ಲಿ ವಿವಿಧ ವಹಿವಾಟಿನಡಿ ಸುಮಾರು 11 ಕೋಟಿ 64 ಲಕ್ಷದ 11 ಸಾವಿರ 745 ರೂಪಾಯಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಸವಾನಿ ವಿಜಯದೇವ್‌ ಹೇಳಿದರು.

ಬುಧವಾರ ಪಟ್ಟಣದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪ್ರಗತಿದಾಯಕ ವ್ಯವಹಾರದ ಮೂಲಕ ಸಂಘ ಸದೃಢ ಸಹಕಾರ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ. ಆಡಿಟ್‌ ವರದಿಯಲ್ಲಿ ಎ ಶ್ರೇಣಿ ಮಾನ್ಯತೆ ಪಡೆದುಕೊಂಡಿದೆ. ಸುಮಾರು 1,475 ಕೋಟಿ ರೂಪಾಯಿ  ಹೆಚ್ಚು ಮೊತ್ತ ವಹಿವಾಟು ನಡೆಸಿ ರಾಜ್ಯದ ಮಾದರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆರ್ಥಿಕ ವ್ಯವಹಾರ ನಿರ್ವಹಣೆ ಇಂದಿನ  ಪರಿಸ್ಥಿತಿಯಲ್ಲಿ ಸುಲಭವಾದ ಸಂಗತಿ ಅಲ್ಲ. ಅನೇಕ ಸಮಸ್ಯೆಗಳ ನಡುವೆ ಸಂಘವನ್ನು ಬಲಿಷ್ಟವಾಗಿ ಕಟ್ಟುವಂತಹ ಪ್ರಯತ್ನ ಮಾಡಲಾಗಿದೆ. ಅನೇಕರು ಸಂಘದ ಏಳಿಗೆಗೆ ನಿರಂತರವಾಗಿ ಸಹಕಾರ ನೀಡಿದ್ದಾರೆ. ಆರ್ಥಿಕವಾಗಿ ಸಂಸ್ಥೆ ಸುಭದ್ರವಾಗಿದ್ದು 72 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಸ್ಥಿರಾಸ್ತಿ ಹೊಂದಿದೆ.

ಸಂಘದಲ್ಲಿ 11,281  ಷೇರುದಾರ ಸದಸ್ಯರಿದ್ದು  140 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಸಾಲ ವಿತರಿಸಲಾಗಿದೆ. ಕಳೆದ ವಾರ್ಷಿಕ ಸಾಲಿನಲ್ಲಿ ಶೇ. 77 ರಷ್ಟು ಸಾಲದ ಮೊತ್ತ ವಾಪಾಸು ಸಂಗ್ರಹಿಸಲಾಗಿದೆ.  ಸಂಘ ಸುಮಾರು 48 ಕೋಟಿ ರೂಪಾಯಿ ಹೆಚ್ಚು ಮೊತ್ತವನ್ನು ವಿವಿಧ ಸ್ಥಳದಲ್ಲಿ ವಿನಿಯೋಗ  ಮಾಡಿದೆ. 97 ಕೋಟಿ ರೂಪಾಯಿ ಹೆಚ್ಚು ಹಣ ಸಂಘದಲ್ಲಿ ಸಾರ್ವಜನಿಕರು ಠೇವಣಿ ಇರಿಸಿದ್ದಾರೆ ಎಂದು ಹೇಳಿದರು.

ರೈತರ ಹಿತ ಕಾಪಾಡುವ ಉದ್ದೇಶದಲ್ಲಿ ಸಂಘದಲ್ಲಿ ಪ್ರಮುಖವಾಗಿ ಅಡಕೆ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಡಕೆ ಮೂಟೆಗಳ ಸಂಗ್ರಹಕ್ಕೆ ಸಂಘ ಸುಸಜ್ಜಿತ ಗೋದಾಮು ನಿರ್ಮಿಸಿದೆ. ಗುಣಮಟ್ಟದ ಸುಣ್ಣ, ಮೈಲುತುತ್ತಾ, ರಾಳ, ಕೃಷಿ ಉಪಯೋಗಿ ಔಷಧ ಮಾರಾಟ ಮಾಡಲಾಗುತ್ತಿದೆ. 2015ರಿಂದ ಸಂಘ ಚೀಟಿನಿಧಿ  ವಹಿವಾಟು ನಡೆಸುತ್ತಿದ್ದು  ಕಳೆದ ವಾರ್ಷಿಕ ಸಾಲಿನಲ್ಲಿ 3 ಕೋಟಿ ರೂಪಾಯಿ ಹೆಚ್ಚು  ಲಾಭಪಡೆದಿದೆ ಎಂದು ಹೇಳಿದರು.

ಸಹ್ಯಾದ್ರಿ‌ ಫ್ಯೂಯೆಲ್ಸ್ ವ್ಯಾಪಾರದಲ್ಲಿ 40 ಲಕ್ಷ, ನಂದಿನಿ ಮಿಲ್ಕ್ ಪಾರ್ಲರ್‌, ಎಮಿಷನ್‌ ವಹಿವಾಟಿನಲ್ಲಿ 6.30 ಲಕ್ಷರೂ, ಸರ್ವೋ ಇಂಡಿಯನ್‌ ಆಯಿಲ್‌  7.70 ಲಕ್ಷ  ರೂ, ಸಹ್ಯಾದ್ರಿ ವಾಟರ್‌ ಪ್ಲಾಂಟ್‌ 8.29 ಲಕ್ಷ ರೂಪಾಯಿ ಲಾಭ ಪಡೆದಿದೆ. ಸಾರ್ವಜನಿಕರು ಇರಿಸಿದ ಅಚಲ ನಂಬಿಕೆ, ಸತತ ಪರಿಶ್ರಮ ಸಂಘದ ಯಶಸಿಗೆ ಕಾರಣವಾಗಿದೆ ಎಂದು ಬಸವಾನಿ ವಿಜಯದೇವ್‌ ತಿಳಿಸಿದರು.

 ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕಿ ಚಂದ್ರಕಲಾ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post