ಕೆರೋಡಿ ಬಳಿ 8ಕ್ಕೂ ಹೆಚ್ಚು ಜಾನುವಾರು ವಶ

ತೂದೂರು ಬಳಿಯಲ್ಲಿ ಅಕ್ರಮ ಗೋ ಸಾಗಾಣೆ
ಶಾಸಕರೇ ಕ್ಷೇತ್ರದಲ್ಲಿ ಇದೇನ್ ನಡೆಯುತ್ತಿದೆ...

ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೋಡಿ ಗ್ರಾಮದಲ್ಲಿ 8ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಅಶೋಕ್ ಲೇ ಲ್ಯಾಂಡ್ ರೀತಿಯ ವಾಹನದಲ್ಲಿ ಜಾನುವಾರುಗಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು 5 ಜಾನುವಾರು ಹಾಗೂ 3 ಕರುಗಳು ಇರುವುದಾಗಿ ತಿಳಿದು ಬಂದಿದೆ.

ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಂಡಗದ್ದೆ ಮತ್ತು ತೂದೂರು ಗ್ರಾಮದ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮಂಡಗದ್ದೆ, ತೂದೂರು, ಬೇಗುವಳ್ಳಿ, ಮುಡುಬ, ನೆಲ್ಲಿಸರ ಭಾಗದಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪಗಳು ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಕೆಲವು ಸರ್ಕಾರಿ ಇಲಾಖೆಯೊಳಗೆ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಒಂದಿಬ್ಬರು ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ದೂರುಗಳು ಇವೆ.

ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಅಕ್ರಮ ಗೋ ಸಾಗಾಣಿಕೆ ಬೇಕಾಬಿಟ್ಟಿ ನಡೆಯುತ್ತಿದ್ದರು ಯಾವುದೇ ರೀತಿಯ ಕಠಿಣ ಕ್ರಮಗಳು ಜರುಗಿಸುತ್ತಿಲ್ಲ ಎಂಬ ದೂರುಗಳು ಇವೆ. ಸಾಲದಕ್ಕೆ ಗೋವಿನ ಹೆಸರಿ‌ನಲ್ಲಿ ರಾಜಕಾರಣ ಮಾಡುವ ಕೆಲವು ಕಳ್ಳ ಕದೀಮರು ಕೂಡ ಜಾನುವಾರು ಅಕ್ರಮ ಸಾಗಾಣೆ ದಂಧೆಯಲ್ಲಿ ಪಾಲ್ಗೊಳ್ಳುತ್ತಾರೆಂಬ ಆರೋಪಗಳಿವೆ. ಅಂತವರು ಬೆಳಿಗ್ಗೆ ಘಂಟಾ ಘೋಷವಾಗಿ ಗೋಪ್ರೇಮದ ನಾಟಕ ಹೂಡುತ್ತಾರೆ. ರಾತ್ರಿ ಮಾತ್ರ ದಂಧೆಯಲ್ಲಿರುತ್ತಾರೆ ಎಂಬ ಬಗ್ಗೆ ಹೆಚ್ಚೇನು ಹೇಳಬೇಕಾದ ಅವಶ್ಯಕತೆ ಇಲ್ಲ.

ಮಾಳೂರು ಪೊಲೀಸರು ಅಕ್ರಮ ಸಾಗಾಣೆ ದಂಧೆ ಮಾಡುವವರನ್ನು ಈಗಾಗಲೇ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟು ಹೊರ ಬೀಳಬೇಕಿದೆ.

ಇಷ್ಟೆಲ್ಲಾ ಅಕ್ರಮ ದಂಧೆಯಲ್ಲಿ ತಾಲ್ಲೂಕಿನ ಕದೀಮರೇ ಭಾಗಿದಾರರು ಆಗುತ್ತಿದ್ದರು ಕ್ರಮ ಮಾತ್ರ ಆಗುತ್ತಿಲ್ಲ. ಸಾರ್ವಜನಿಕರು ಶಾಸಕರೇ ಇದೇನ್ ನಿಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಪ್ರಶ್ನಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post