ಹಳ್ಳದಲ್ಲಿ ಕೊಚ್ಚಿಹೋದ ವ್ಯಕ್ತಿ ಸಾವು
ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಮನೆ, ಜಾನುವಾರು ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಬುಧವಾರ ಸಂಜೆ ಮೇಗರವಳ್ಳಿಯ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ಹಳ್ಳದಲ್ಲಿ ಕೊಚ್ಚಿಹೋದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಹೆಗ್ಡೆಕೇರಿಯ ರಾಘವೇಂದ್ರ (40) ಎಂದು ಗುರಿತಿಸಲಾಗಿದೆ. ಮೃತದೇಹ ಗುರುವಾರ ಸಮೀಪದಲ್ಲೇ ಸಿಕ್ಕಿದೆ.ಮೃತ ವ್ಯಕ್ತಿ ಹೆಗ್ಡೆಕೇರಿ ನಿವಾಸಿಗಳಾದ ವೆಂಕಟೇಶ ಮತ್ತು ಪದ್ಮಾವತಿ ಅವರ ಏಕೈಕ ಪುತ್ರರಾಗಿದ್ದು ಗ್ರಾಮ ಹಾಗೂ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
