ವಾರ್ಷಿಕ ವಹಿವಾಟಿನಲ್ಲಿ ಒಟ್ಟು 54.73 ಲಕ್ಷ ಲಾಭ - ಬಸವಾನಿ ವಿಜಯದೇವ್
ನಬಾರ್ಡ್ ಆರ್ಥಿಕ ನೆರವು ಕಡಿಮೆ ಆಗಿರುವ ಕಾರಣದಿಂದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಸೊರಗುತ್ತಿವೆ. ಅಂತಹ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿಯೂ ತೀರ್ಥಹಳ್ಳಿಯ ಭೂ ಬ್ಯಾಂಕ್ ಮಾತ್ರ ವ್ಯವಹಾರ, ಸಾಲ ವಿತರಿಸಿ ಲಾಭಾಂಶ ಹಂಚಿಸಿಕೊಳ್ಳುತ್ತಿದೆ. ಜೊತೆಗೆ ರೈತರಿಗೆ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ನಿರತವಾಗಿದೆ.ಸುಮಾರು 85 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅತ್ಯುತ್ತಮ ವ್ಯವಹಾರ ನಡೆಸಿ, ಈ ವರ್ಷವೂ ಸುಮಾರು 54.73 ಲಕ್ಷ ಲಾಭ ಗಳಿಸಿ ಬ್ಯಾಂಕಿನ ಷೇರುದಾರರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿಕೊಂಡಿದೆ. ಲಾಂಭಾಂಶದಲ್ಲಿ ಶೇ.10 ರ ಲಾಭಾಂಶವನ್ನು ಷೇರುದಾರ ಸದಸ್ಯರಿಗೆ ಹಂಚಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಚ್. ಎನ್. ವಿಜಯದೇವ್ ಅವರು ಹೇಳಿದರು.
ತೀರ್ಥಹಳ್ಳಿಯ ಪಿಎಲ್ ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನೇಕ ಹಿರಿಯರ ಸಹಕಾರಿಗಳ ನೆರವು, ಸಹಕಾರ ಹಾಗೂ ಪರಿಶ್ರಮದಿಂದ ಪ್ರಾರಂಭಗೊಂಡ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ತಾಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ. ಹೊಸ ತೋಟ ಬೆಳೆಸಲು, ಹಳೆಯ ತೋಟಗಳ ಅಭಿವೃದ್ಧಿ, ಬೇಲಿ ನಿರ್ಮಿಸಲು, ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿತ್ತು. ತಾಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್ ಕೊಡುಗೆ ಬಹು ದೊಡ್ಡದಾಗಿದೆ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕ್ ಗಳಲ್ಲಿ ಒಂದಾಗಿದ್ದು, ನಬಾರ್ಡ್ ಪುರಸ್ಕೃತ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಳೆದ ಸುಮಾರು 10 ವರ್ಷಗಳಿಂದ ಭೂ ಬ್ಯಾಂಕಿನ ಅಧ್ಯಕ್ಷರಾಗಿ ಬಸವಾನಿ ವಿಜಯದೇವ್ ಸರ್ಕಾರದ ಆರ್ಥಿಕ ನೆರವು ಇಲ್ಲದಿದ್ದರೂ, ಆರ್ಥಿಕ ಸಂಕಷ್ಟದಿಂದ ಬ್ಯಾಂಕನ್ನು ಮೇಲೆತ್ತುವಲ್ಲಿ ಅಪಾರ ಶ್ರಮ ಹಾಕಿದ್ದೇವೆ. ತೀರ್ಥಹಳ್ಳಿ ಪಿಎಲ್ ಡಿಬಿ ಬ್ಯಾಂಕ್ ಮಾತ್ರ ಉತ್ತಮ ವ್ಯವಹಾರ, ಲಾಭ ಹಂಚಿಕೆ, ಸಾಲ ವಿತರಣೆ,ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸುವಲ್ಲಿ ವಿಶೇಷ ಶ್ರಮ ತೋರಿಸಿದೆ ಎಂದು ಬ್ಯಾಂಕಿನ ಉಪಾಧ್ಯಕ್ಷ ಇರೇಗೋಡು ಶ್ರೀಧರಮೂರ್ತಿ ಹೇಳಿದರು.
ಪ್ರಕೃತಿ ವೈಪರೀತ್ಯ, ಅನಾವೃಷ್ಟಿ, ಕೊಳೆರೋಗ ಮತ್ತು ಎಲೆಚುಕ್ಕಿ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿಯ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭಗಳಿಸಿರುವ ಬ್ಯಾಂಕುಗಳಲ್ಲಿ ಒಂದಾಗಿ ಗಮನ ಸೆಳೆದಿದೆ. ಒಟ್ಟು 5392 ಮಂದಿ ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 9 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ ' ಎ' ಗ್ರೇಡ್ ಪಡೆದಿದೆ. ಶೇ. 84.57 ವಸೂಲಾತಿ ಮಾಡಿ ಸುಮಾರು 46.28 ಕೋಟಿ ವ್ಯವಹಾರ ನಡೆಸಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡದೆ ನಿರಂತರ ಸುಸ್ತಿದಾರರಾದ ಸಾಲಗಾರ ಸದಸ್ಯರ ಮೇಲೆ ದಾವೆ ಹೂಡಲಾಗಿದೆ ಎಂದು ವಿಜಯದೇವ್ ತಿಳಿಸಿದರು.
ತಾನು ಅಧ್ಯಕ್ಷನಾದ ಬಳಿಕ ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆಯಾಗಿ ನಿರಂತರ ಶ್ರಮಿಸಲಾಗುತ್ತಿದೆ. ವಿವಿಧ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕರಿಸುತ್ತಿರುವುದಕ್ಕೆ ವಿಜಯದೇವ್ ಸಂತಸ ವ್ಯಕ್ತಪಡಿಸಿದರು.
ಬರುವ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆ ನಡೆಯಲಿದ್ದು, ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ಈ ಸಂದರ್ಭದಲ್ಲಿ ವಿನಂತಿಸಿದರು. ಈ ವರ್ಷವೂ ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರಿಸಿದೆ. ತೀರ್ಥಹಳ್ಳಿ ಭೂ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ರಾಜ್ಯ ಭೂ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ಸಹಕಾರಿ ದಿಗ್ಗಜ ದಿ. ಬಿ.ಎಸ್. ವಿಶ್ವನಾಥ್ ಅವರು ಯಾವತ್ತೂ ತೀರ್ಥಹಳ್ಳಿ ಭೂ ಬ್ಯಾಂಕಿಗೆ ನೀಡಿದ್ದ ನೆರವನ್ನು ಸದಾ ಕಾಲ ಸ್ಮರಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದರು.
ಕೇವಲ ಸಾಲ ವಿತರಣೆ, ವಸೂಲಾತಿ, ಲಾಭಾಂಶ ಹಂಚಿಕೆಗಷ್ಟೆ ಬ್ಯಾಂಕನ್ನು ಸೀಮಿತಗೊಳಿಸದೆ ಲಾಭಾದಾಯಕವಾದ ಉದ್ಯಮಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಈಗಾಗಲೆ ತಾನು ಮುನ್ನಡೆಸುತ್ತಿರುವ ಇತರ ಸಹಕಾರಿ ಸಂಸ್ಥೆಗಳಡಿಯಲ್ಲಿ ಚೀಟಿ ನಿಧಿ, ಪೆಟ್ರೋಲ್ ಬಂಕ್ ಪ್ರಾರಂಭಿಸಿ ಯಶಸ್ಸಿನ ಹೆಜ್ಜೆ ಇರಿಸಲಾಗಿದ್ದು, ಭೂ ಬ್ಯಾಂಕನ್ನು ಆರ್ಥಿಕವಾಗಿ ಮೇಲೆತ್ತಲು ಚೀಟಿನಿಧಿ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಮುಂತಾದ ಉದ್ಯಮಗಳನ್ನು ಭೂ ಬ್ಯಾಂಕ್ ಆಶ್ರಯದಡಿ ತೆರೆಯುವ ಯೋಚನೆಯಿದೆ ಎಂದೂ ನುಡಿದ ವಿಜಯದೇವ್ ಅವರು, ಬ್ಯಾಂಕಿನ ಆಡಳಿತ ಮಂಡಳಿ ಉಪಾಧ್ಯಕ್ಷ ಹಿರೇಗೋಡು ಶ್ರೀಧರಮೂರ್ತಿ, ವ್ಯವಸ್ಥಾಪಕರಾದ ಸಂಜಯ್, ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ಪ್ರತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.
