ಬಿಇಓಗೆ ಕಡ್ಡಾಯ ರಜೆ ಘೋಷಿಸಿದ ಡಿಡಿಪಿಐ
ಶಾಸಕ ಆರಗ ಜ್ಞಾನೇಂದ್ರ ಅವರ ಅಪ್ಪನ ಮನೆಯಿಂದ ಬ್ಯಾಗ್ ಹಂಚಿದ್ರಾ - ಡಿ.ಎಸ್.ವಿ.
ಕ್ಷೇತ್ರ ಶಿಕ್ಷಣಾಧಿಕಾರಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಮಿಷನ್ ಯೋಜನೆಯಡಿ ಶಾಲಾ ಬ್ಯಾಗ್, ಸ್ವೆಟರ್ ವಿತರಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಕಾಂಗ್ರೆಸ್ ಪಕ್ಷ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಡಿಡಿಪಿಇ ಬೆಳಿಗ್ಗೆಯೇ ಆಗಮಿಸಿದ್ದರು.
ಪ್ರತಿಭಟನಾ ಸಭೆಯ ನಂತರ ಡಿಡಿಪಿಇಗೆ ಮನವಿ ಸಲ್ಲಿಸಲು ಕಾಂಗ್ರೆಸ್ ಮುಖಂಡರು ಮುಂದಾದರು ಜೊತೆಗೆ ಅವರನ್ನು ಅಮಾನತ್ತು ಮಾಡಬೇಕೆಂದು ಪಟ್ಟು ಹಿಡಿದರು. ಅದಕ್ಕೆ ಒಪ್ಪದ ಡಿಡಿಪಿಐ ಗ್ರೇಡ್-1 ಅಧಿಕಾರಿಯನ್ನು ಅಮಾನತ್ತು ಮಾಡುವ ಅಧಿಕಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಹಾಗಾದರೆ ಅಮಾನತ್ತು ಮಾಡುವ ಅಧಿಕಾರಿ ಆಗಮಿಸುವ ವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕಡ್ಡಾಯ ರಜೆಯ ಮೇಲೆ ಕಳುಹಿಸುವುದಾಗಿ ತಿಳಿಸಿದರು. ಪ್ರತಿಭಟನೆ ತಾರ್ಕಿಕ ಅಂತ್ಯ ಕಂಡಿತು.
ಇನ್ನು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಡಿ.ಎಸ್. ವಿಶ್ವನಾಥ ಶೆಟ್ಟಿ ಶಾಸಕರು ಹಿಂದೆಲ್ಲ ಕಾಂಗ್ರೆಸ್ ಗ್ಯಾರಂಟಿಯನ್ನು ಹಂಗಿಸುತ್ತಿದ್ದರು. ಅದೊಂದು 420 ಅಂದಿದ್ದಾರೆ. ಸಿದ್ದರಾಮಯ್ಯ ಅವರ ಅಪ್ಪನ ದುಡ್ಡಿನಲ್ಲಿ ಕೊಡುತ್ತಾರಾ. ಸರ್ಕಾರದ ಹಣ ಸಾರ್ವಾಜನಿಕರದ್ದು ಎಂದೆಲ್ಲ ಹೇಳಿಕೆ ನೀಡಿದ್ದಾರೆ. ಈಗ ಕೇಂದ್ರ ಸರ್ಕಾರ ಮೋದಿಯ ಜೇಬಿನಿಂದ ಬ್ಯಾಗ್ ವಿತರಿಸಿದೆಯೇ. ಶಾಸಕರ ಆರಗ ಜ್ಞಾನೇಂದ್ರ ಇವಾಗ ಅವರ ಅಪ್ಪನ ಮನೆಯಿಂದ ಸ್ವೆಟರ್ ಹಂಚಿದ್ರಾ ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿ ರಾಜ್ಯಾದ್ಯಂತ ಇಂಗ್ಲೀಷ್ ಮೀಡಿಯಾ ಶಾಲೆ ತೆರೆಯಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶಿಸಿದ್ದಾರೆ. ಆದರೆ ಶಿಕ್ಷಣಾಧಿಕಾರಿ ಅವರ ಹೆಸರನ್ನು ಹೇಳುವ ಬದಲು ಆರಗ ಜ್ಞಾನೇಂದ್ರ ಅವರ ಶಿಫಾರಸ್ಸಿನಿಂದ ಇಂಗ್ಲೀಷ್ ಮೀಡಿಯಂ ಶಾಲೆ ಬಂದಿದೆ ಎಂದು ಹೇಳಿದ್ದಾರೆ. ಇವೆಲ್ಲಾ ಶಿಕ್ಷಣ ಸಚಿವರನ್ನು ಕುಗ್ಗಿಸುವ ಪ್ರಯತ್ನ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯೆ ಶಬನಮ್, ಬಿ.ಗಣಪತಿ, ಮಂಜುಳಾ ಮುಖಂಡರಾದ ಬಿ.ಆರ್.ರಾಘವೇಂದ್ರ ಶೆಟ್ಟಿ, ಟಿ.ಎಲ್.ಸುಂದರೇಶ್, ಜೀನಾ ವಿಕ್ಟರ್, ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ರವಿ ಹೊಸ್ಕೆರೆ ಮುಂತಾದವರು ಇದ್ದರು.
.jpg)