ಬಿಇಓ ವಿಷಯದಲ್ಲಿ ಕಾಂಗ್ರೆಸ್ - ಬಿಜೆಪಿಗೂ ಮಾರಾಮಾರಿ
ಕಾಂಗ್ರೆಸ್ ಪ್ರತಿಭಟನೆಗೆ ಕಡ್ತೂರು ಯಶಸ್ವಿ ಕೆಂಡಮಂಡಲ
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿಯನ್ನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಂತೆ ಮಾಡಿದ ಉತ್ತಮ ಅಧಿಕಾರಿ ವಿರುದ್ಧ ಪ್ರತಿಭಟನೆ ಸಮಂಜಸವಲ್ಲ. ನಮ್ಮ ಮಲೆನಾಡಿನ ಹಿಂದುಳಿದ ಸಮಾಜ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಾಹಣೆಯಿಂದ ಪದೋನ್ನತಿ ಹೊಂದಿದ್ದಾರೆ. ಮೂಡಬಿದ್ರೆಯಲ್ಲಿ ಶಿಕ್ಷಣಧಿಕಾರಿಯಾಗಿ ಅಲ್ಲಿ ಎಲ್ಲರಿಂದಲೂ ಪ್ರಶಂಸೆ ಪಡೆದಿದ್ದಾರೆ. ತೀರ್ಥಹಳ್ಳಿಗೆ ಎರಡು ವರ್ಷಗಳ ಹಿಂದೆ ಬಂದ ಅವರು ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವಲ್ಲಿ ಶ್ರಮಿಸಿದ್ದಾರೆ. ಅಂತಹ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವಿರುದ್ಧ ಪ್ರತಿಭಟನೆ ನಡೆಸಿರುವುದು ಶೈಕ್ಷಣಿಕ ಪ್ರಗತಿಗೆ ಅಡ್ಡಗಾಲು ಹಾಕಿದಂತಾಗುತ್ತದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಡ್ತೂರು ಯಶಸ್ವಿ ತಿಳಿಸಿದ್ದಾರೆ.
ಎಲ್ಲಾ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಚಾರದ ಲವಲೇಷವೂ ಇಲ್ಲದೇ ಆಡಳಿತ ನಡೆಸುತ್ತಿರುವ ಗಣೇಶ್ ಅವರು ಸರ್ಕಾರಿ ವಾಹನ ಇರಲಿ ಇಲ್ಲದೇ ಇರಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಸಮಯದ ಮಿತಿ ಇಲ್ಲದೇ ನಿರಂತರ ಪ್ರವಾಸ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿಗೊಳಿಸುವ ಯೋಚನೆ ಹೊಂದಿದ್ದಾರೆ ಎಂಬುದು ಎಲ್ಲಾ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿಯ ಅಭಿಪ್ರಾಯವಾಗಿದೆ.
ಸ್ಥಳೀಯ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು, ಸಂಸದರು ಇದ್ದ ಪಕ್ಷಾತೀತ ವೇದಿಕೆಯಲ್ಲಿ, ಶಿಕ್ಷಣಾಧಿಕಾರಿಯಾಗಿ ಕ್ಷೇತ್ರದ ಶಾಸಕರ, ಸಂಸದರ ಸೂಚನೆ ಪಾಲಿಸುವ ಕರ್ತವ್ಯ ಮಾಡಿದ್ದಾರೆ. ಅಧಿಕಾರಿಗೂ ಬ್ಯಾಗ್ ವಿತರಣೆ ಕಾರ್ಯಕ್ರಮದ ಶಿಷ್ಟಾಚಾರಕ್ಕೂ ಏನೂ ಸಂಬದವಿಲ್ಲದೇ ಇದ್ದರು ರಾಜಕೀಯ ಕಾರಣಕ್ಕೆ ಒಬ್ಬ ಜನಸ್ನೇಹಿ, ಶಿಕ್ಷಕ ಸ್ನೇಹಿ, ಶಿಕ್ಷಣ ಪ್ರೇಮಿ ಅಧಿಕಾರಿಯ ವಿರುದ್ಧ ಪ್ರತಿಭಟಿಸುವುದು ಸರಿಯಲ್ಲ. ಇದು ಸ್ನೇಹಿತರು, ಅಭಿಮಾನಿಗಳು, ಕುಟುಂಬದವರು ಮಾತ್ರವಲ್ಲಾ, ನೂರಾರು ಶಿಕ್ಷಕ-ಶಿಕ್ಷಕಿಯರ ಭಾವನೆಗಳಿಗೆ ನೋವು ಮಾಡಿದoತಾಗುತ್ತದೆ. ನಾವು ಕೂಡ ಬಿಇಓ ಅವರ ನಯ, ವಿನಯ, ಸರಳ ಸಂಪನ್ನತೆಯನ್ನು ಗೌರವಿಸುವ ಅವರ ಮಾತುಗಾರಿಕೆಯ ಅಭಿಮಾನಿಯಾಗಿದ್ದೇವೆ. ಅವರಿಗಾಗುವ ಅಗೌರವ ಅವಮಾನ ಸಹಿಸಲಾರೆವು. ಸರ್ಕಾರಿ ಶಾಲೆಯ ಬಡವರ ಮಕ್ಕಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಿಸುವುದರಲ್ಲೂ ರಾಜಕಾರಣ ಬೇರೆಸುವುದು ಕೆಟ್ಟ ಬೆಳವಣಿಗೆಯಾಗಿದೆ. ಜನಪರವಾದ ಅಧಿಕಾರಿಯನ್ನು ಅವಮಾನಿಸುವುದು ಇಲಾಖೆಗೆ, ಸರ್ಕಾರಕ್ಕೆ, ರಾಜಕೀಯ ಪಕ್ಷಗಳಿಗೆ ಶೋಭೆ ತರುವ ವಿಚಾರವಲ್ಲಾ ಎಂದು ಕಡ್ತೂರು ಯಶಸ್ವಿ ಬೇಸರಿಸಿದ್ದಾರೆ.
