ಮಂಡಗದ್ದೆಯಲ್ಲಿ ವಿದ್ಯುತ್‌ ಉಪಕೇಂದ್ರ ಉದ್ಘಾಟನೆ

ಇನ್ಮುಂದೆ ಮಾಳೂರು, ಮಂಡಗದ್ದೆ, ಸಿಂಗನಬಿದರೆ ಗ್ರಾ.ಪಂ.ಗೆ ಫುಲ್‌ ಓಲ್ಟೇಜ್‌ !
“ಏ.. ಎಇಇ ಸರಿಯಾಗಿ ಮಾತಾಡೋದು ಕಲಿ”

ಕಳೆದ ವರ್ಷ ಶಿವಮೊಗ್ಗದ ಎಪಿಎಂಸಿ ಸಮುಚ್ಚಯ 150 ಕೋಟಿಗೂ ಅಧಿಕ ಜಿಎಸ್‌ಟಿ ಪಾವತಿಸಿದೆ. ಇದು ರೈತರು ಮತ್ತು ರೈತ ಉತ್ಪನ್ನಗಳ ಮಾರಾಟದ ಪ್ರಾಬಲ್ಯವನ್ನು ಎತ್ತಿ ಹಿಡಿಯುತ್ತದೆ. ನಿಯಮಿತವಾದ ವಿದ್ಯುತ್‌ ರೈತರಿಗೆ ಸಿಕ್ಕರೆ ಅದು ಭಾರತದ ಆರ್ಥಿಕತೆ ಮೇಲಕ್ಕೆತ್ತಲು ಸಹಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಮಧುಬಂಗಾರಪ್ಪ ಅಭಿಪ್ರಾಯಿಸಿದರು.

ಬುಧವಾರ ಮಂಡಗದ್ದೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 110/11 ಕೆವಿ ವಿದ್ಯುತ್‌ ಉಪಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉಚಿತ ವಿದ್ಯುತ್‌ ಸೌಲಭ್ಯ ನೀಡಿದ್ದರಿಂದ ರೈತರು ನಿರಮ್ಮಳವಾಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಶರಾವತಿ ಜಲವಿದ್ಯುತ್‌ ಯೋಜನೆಯಿಂದ ರಾಜ್ಯಕ್ಕೆ ಉತ್ತಮ ವಿದ್ಯುತ್‌ ಸೌಲಭ್ಯ ಸಿಗುತ್ತಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರು ವಾಸಿಸುವ ಪ್ರದೇಶ ಯಾವುದೇ ಕಾರಣಕ್ಕೂ ಕತ್ತಲಿನಲ್ಲಿ ಇರಬಾರದು. ಶಿವಮೊಗ್ಗದ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ಇದ್ದರೆ ಅದನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

“ಹಿಂದೆ ತಾಲ್ಲೂಕಿನಲ್ಲಿ ನಾಮಕಾವಸ್ಥೆಯ ವಿದ್ಯುತ್‌ ಪ್ರಸರಣ ಸಂಪರ್ಕ ಇತ್ತು. ಮಂಡಗದ್ದೆಗೆ ಮುತ್ತಿನಕೊಪ್ಪದಿಂದ ವಿದ್ಯುತ್‌ ಕೇಬಲ್‌ ಬರುತ್ತಿತ್ತು. ಮಳೆಗಾಲ, ತುಂಗಾ ನದಿಯ ಪ್ರವಾಹದ ಕಾರಣಕ್ಕೆ ವಾರಗಟ್ಟಲೇ ವಿದ್ಯುತ್‌ ಸಂಪರ್ಕ ವ್ಯತ್ಯಾಸವಾಗುತ್ತಿತ್ತು. ಈಗ ಉಪಕೇಂದ್ರ ಆರಂಭವಾಗಿದ್ದು ರೈತರ ಪಂಪ್ ಸೆಟ್‌ಗಳಿಗೆ ಉತ್ತಮ ವಿದ್ಯುತ್‌ ಲಭಿಸಲಿದೆ. ಕಮ್ಮರಡಿ, ಕೋಣಂದೂರು, ಬೆಜ್ಜವಳ್ಳಿ ಉಪಕೇಂದ್ರಗಳು ಸ್ಥಳೀಯ ಪೂರೈಕೆಯನ್ನು ಸಮಪರ್ಕವಾಗಿ ನಿಭಾಯಿಸುತ್ತಿವೆ. ಎಂ.ಕೆ.ಬೈಲು, ಅಮೃತ, ಬೈಸೆ ಉಪಕೇಂದ್ರಗಳಿಗಾಗಿ ನಿವೇಶನ ಗುರುತು ಪ್ರಕ್ರಿಯೆ ನಡೆಯುತ್ತಿದೆ” ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ,‌ ಮಂಡಗದ್ದೆ ಸೊಸೈಟಿ ಅಧ್ಯಕ್ಷ ಸಿಂಧುವಾಡಿ ಸತೀಶ್, ಮಂಡಗದ್ದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನೀತ ನಾಯ್ಕ್‌, ತೂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರತ್‌ ಕಾವೇರಿ, ಮೆಸ್ಕಾಂ ಇಇ ಮುರಳಿ ಮೋಹನ್‌, ಎಸ್‌.ಸಿ. ಸುರೇಶ್‌, ಮುಖಂಡರಾದ ಕವಿರಾಜ್‌ ಬೇಗುವಳ್ಳಿ, ಪುಟ್ಟೋಡ್ಲು ರಾಘವೇಂದ್ರ, ಮಧುರಾಜ್‌ ಹೆಗಡೆ ಇದ್ದರು.

“ಏ.. ಎಇಇ ಸರಿಯಾಗಿ ಮಾತಾಡೋದು ಕಲಿ”

ಕೆಪಿಟಿಸಿಎಲ್‌ ಎಇಇ ಉದ್ಘಾಟನಾ ಕಾರ್ಯಕ್ರಮದ ಸ್ವಾಗತವನ್ನು ಮಾಡುತ್ತಿದ್ದರು. ಜಿ.ಪಲ್ಲವಿ ಅವರನ್ನು ಪರಿಚಯಿಸುವಾಗ ಸಾಂಬಾರು ಅಭಿವೃದ್ಧಿ ಮಂಡಳಿ ಎಂದರು. ಆಗ ಸಭೆಯಲ್ಲಿ ಕುಳಿತುಕೊಂಡಿದ್ದ ಸಿಂಧುವಾಡಿ ಸತೀಶ್‌ “ಏ... ಎಇಇ ಸರಿಯಾಗಿ ಮಾತಾಡೋದು ಕಲಿ. ಅವರದ್ದು ಸಾಂಬಾರು ಅಭಿವೃದ್ಧಿ ಮಂಡಳಿ ಅಲ್ಲ. ಅಲೆಮಾರಿ ಅಭಿವೃದ್ಧಿ ಮಂಡಳಿ. ನಿನಗೆ ಶಿಷ್ಟಾಚಾರದ ಬಗ್ಗೆ ಗೊತ್ತಿಲ್ಲ ಅಂದರೆ ಹಿರಿಯ ಅಧಿಕಾರಿಗಳಿಂದ ಕೇಳಿ ತಿಳಿದುಕೋ. ಗ್ರಾಮ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೆ ನಿಮ್ಮದು ಎಂತಹ ಕಾರ್ಯಕ್ರಮ ಎಂದು ತಗಾದೆ ತಗೆದರು. ಸಭೆಯಲ್ಲಿ ಕೆಲ ಕಾಲ ಗೊಂದಲ ಸೃಷ್ಟಿಯಾಗುತ್ತಿದ್ದಂತೆ ಮಧುಬಂಗಾರಪ್ಪ, ಆರಗ ಜ್ಞಾನೇಂದ್ರ ಅಸಮಾಧಾನ ಶಮನಗೊಳಿಸಿ ವೇದಿಕೆಗೆ ಆಹ್ವಾನಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post