ಅಧಿಕಾರಿಗೆ ಕಾರು ಹತ್ತಿಸಿ ಕೊಲ್ಲುವುದಾಗಿ ಬೆದರಿಕೆ…!

ಅಕ್ರಮಕ್ಕೆ ಸಹಿ ಹಾಕದಿದ್ದರೆ ಕೊಲೆ ಮಾಡುವೆ ಎಂದ ಸಿಬ್ಬಂದಿ…!
ತೀರ್ಥಹಳ್ಳಿ ತಾಲ್ಲೂಕು ಸರ್ವೆ ಇಲಾಖೆಯಲ್ಲಿ ಅರಾಜಕತೆ?
ಅಧಿಕಾರಿಗಳು ಗಪ್‌ ಚುಪ್ – ಸಾರ್ವಜನಿಕರಿಗೆ ಆಘಾತ

ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳ ಅಟ್ಟಹಾಸ ತಾರಕಕ್ಕೆ ಏರಿದೆ. ತಹಶೀಲ್ದಾರ್ ಆದಿಯಾಗಿ ಜಿಲ್ಲಾಧಿಕಾರಿಗಳ ಆದೇಶಕ್ಕೂ ಯಾವುದೇ ಬೆಲೆ ಇಲ್ಲದಂತಹ ಅರಾಜಕತೆ ಆಡಳಿತದಲ್ಲಿ ನಡೆಯುತ್ತಿದೆ. ಶಾಸಕ ಆರಗ ಜ್ಞಾನೇಂದ್ರ ಕ್ಷೇತ್ರದ ಉದ್ದಾರಕ್ಕಾಗಿ ಸಾಕಷ್ಟು ಬಿಗಿ ಕ್ರಮ ಕೈಗೊಂಡಿದ್ದೇನೆ. ಅಕ್ರಮಗಳಿಗೆ ಯಾವುದೇ ರೀತಿಯ ಬೆಂಬಲ ಇಲ್ಲ. ತಪ್ಪು ಮಾಡಿದವರನ್ನು ಶಿಕ್ಷಿಸಿಯೇ ಸಿದ್ಧ ಎಂದು ಆಗಾಗ ತಾಲ್ಲೂಕು ಕಚೇರಿಗೆ ಸಡನ್ ಭೇಟಿ ನೀಡುತ್ತಿದ್ದರೂ ನೌಕರರ ಹಂತದಲ್ಲಿ ಇದಕ್ಕೆ ಪುಡಿಗಾಸಿನ ಬೆಲೆ ಇಲ್ಲದಂತಾಗಿದೆ.

ಸಾರ್ವಜನಿಕರ ಕೆಲಸಕ್ಕಾಗಿ ತಬರನಂತೆ ಅಲೆಯುವ ವಾತಾವರಣ ಬಹುಕಾಲದಿಂದ ಸುಧಾರಣೆಯಾಗಿಲ್ಲ. ಈಗ ಹತ್ತಾರು ವರ್ಷಗಳ ಕಾಲ ತಾಲ್ಲೂಕಿನಲ್ಲೇ ಜಾಂಡಾ ಹೂಡಿರುವ ಸಿಬ್ಬಂದಿಗಳು ಇಲ್ಲಸಲ್ಲದ ನೆಪದಲ್ಲಿ ಅಕ್ರಮಕ್ಕೆ ಮುಂದಾಗುತ್ತಿರುವ ಊಹಾಪೋಹಗಳು, ನ್ಯಾಯಾಲಯ ಸೇರಿದಂತೆ ಜಿಲ್ಲಾಧಿಕಾರಿಗಳ ಸಮಕ್ಷಮಕ್ಕೂ ಗೊತ್ತಿರುವ ವಿಚಾರವಾಗಿದೆ. ಇದೀಗ ಹೊಸ ಬಗೆಯ ಹದಗೆಟ್ಟ ಆಡಳಿತ ವ್ಯವಸ್ಥೆ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವುದು ವಿಷಾಧನೀಯ ಬೆಳವಣಿಗೆಯಾಗಿದೆ.

ಇತ್ತೀಚೆಗೆ ಸರ್ವೆ ಇಲಾಖೆಯಲ್ಲಿ ಸಿಬ್ಬಂದಿಯೊಬ್ಬರು ಅಕ್ರಮದ ಫೈಲ್ ಒಂದಕ್ಕೆ ಸಹಿ ಹಾಕುವಂತೆ ಅಧಿಕಾರಿಗೆ ದಬಾಯಿಸಿದ್ದಾರೆ. ಅಕ್ರಮಕ್ಕೆ ಬೆಂಬಲ ಮಾಡುವುದಿಲ್ಲ ಕಾನೂನು ತೊಡಕು ಉಂಟಾಗುತ್ತದೆ ಎಂದು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಸಿಬ್ಬಂದಿ “ಮುಚ್ಚಿಕೊಂಡು ಸಹಿ ಹಾಕು, ಇಲ್ಲದಿದ್ದರೆ ನಿನ್ನ ಮೇಲೆ ಕಾರು ಹತ್ತಿಸಿ ಕೊಲೆ ಮಾಡುತ್ತೇನೆಎಂದು ನಾಗರೀಕರ ಎದುರಿಗೆ ಬೆದರಿಕೆ ಒಡ್ಡಿರುವ ಸಂಗತಿ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗುತ್ತಿದೆ.

ನೌಕರರ ಕಿತ್ತಾಟ ತಡೆಯುವಲ್ಲಿ ಹೇಗೆ ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ. ಹೊರ ಜಿಲ್ಲೆಯಿಂದ ಆಗಮಿಸಿರುವ ಅಧಿಕಾರಿಗಳಿಗೆ ಸ್ಥಳೀಯರ ನೆಪದಲ್ಲಿ ಕಾರು ಹತ್ತಿಸಿ ಕೊಲ್ಲುತ್ತೇನೆ ಎಂದು ಹೆದರಿಸುವುದಾದರೆ ಆಡಳಿತ ಏನು ಕ್ರಮ ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ತನ್ನದೇ ನೌಕರರ ಹಿತಾಸಕ್ತಿಯನ್ನು ಪಾಲಿಸುವಲ್ಲಿ ಎಷ್ಟು ನಿರ್ಲಜ್ಜಗೇಡಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ಶುರುವಾಗಿದೆ. ಒಂದೇ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಜಾಂಡಾ ಹೂಡಿರುವ ಸಿಬ್ಬಂದಿಯನ್ನು ಏಕೆ ಉಳಿಸಿಕೊಳ್ಳುತ್ತಿದೆ. ಅವರ ಉಪಯೋಗವನ್ನು ಜನಪ್ರತಿನಿಧಿಗಳು ಪಡೆಯುತ್ತಿದ್ದಾರೆಯೇ ಎಂಬ ಊಹಾಪೋಹಗಳು ಹರಿಬಿದ್ದಿದೆ.

ಇಂತಹ ಲಜ್ಜೆಗೇಡಿ ಸಿಬ್ಬಂದಿಗಳನ್ನು ತಕ್ಷಣಕ್ಕೆ ಅಮಾನತ್ತು ಮಾಡಬೇಕು. ಕೊಲೆ ಬೆದರಿಕೆ ಪ್ರಕರಣದ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಕಚೇರಿಯಲ್ಲಿ ಅನೇಕ ವರ್ಷ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post