ಭರತ ಪುಣ್ಯ ಭೂಮಿಯಲ್ಲಿ ಹುಟ್ಟುವುದೇ ಒಂದು ಪುಣ್ಯ. ಅದರಲ್ಲೂ ಕೆಲವೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಯಾವುದೋ ಜನ್ಮದ ಸುಕೃತ.
✍️ಆಚಾರ್ಯ ನಕುಲ್ ಭೀಮನಕಟ್ಟೆ
ಅದರಲ್ಲಿಯೂ ಈ ಮಹಾ ಕುಂಭಮೇಳ ಅತ್ಯಂತ ವಿಶೇಷ. ಈ ಮಹಾ ಕುಂಭಮೇಳ ದಲ್ಲಿ ಪಾಲ್ಗೊಳ್ಳಲು ಕಾರಣಿಭೂತರಾದ ವಿಶ್ವನಾಥ್ ಕುಂಟವಳ್ಳಿ ಕುಟುಂಬಕ್ಕೆ ಮತ್ತು ಯಾತ್ರೆಯ ಜೊತೆಗೆ ಎಲ್ಲಿಯೂ ಬೇಜಾರಾಗದಂತೆ ನಮ್ಮೊಂದಿಗಿದ್ದು ಸಹಕರಿಸಿದ ಉಮೇಶ್ ಸುಳುಗೋಡು ಅವರಿಗೆ ನಮಸ್ಕಾರವನ್ನು ತಿಳಿಸುತ್ತಾ ಯಾತ್ರೆಯ ಕೆಲವೊಂದು ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.
ವಿಶ್ವದ ಅತ್ಯಂತ ಪುರಾತನ ಮತ್ತು ಸದೈವವನ್ನು ಪಾಲಿಸುವ ಶಾಶ್ವತ ಧರ್ಮವೇ ನಮ್ಮ ಸನಾತನ ಧರ್ಮ. ಆತ್ಮದ ಅಮರತ್ವ ಮತ್ತು ಮೋಕ್ಷ ಪ್ರಾಪ್ತಿಗಾಗಿ ಇರುವ ಅನೇಕ ನಂಬಿಕೆಗಳಲ್ಲಿ ಕುಂಭಮೇಳದಲ್ಲಿ ನಡೆಯುವ ಶಾಹಿ ಅಮೃತ ಸ್ನಾನವು ಒಂದು. ಇದು ಜಗತ್ತಿನ ಅತ್ಯಂತ ಶಾಂತಿಯುತ ಧಾರ್ಮಿಕ ಕಾರ್ಯಕ್ರಮವೂ ಹೌದು.
ದೇವರು,ಸಂತರು, ಸನ್ಯಾಸಿಗಳು ಹಾಗೂ ಕೋಟ್ಯಾಂತರ ಹಿಂದೂಗಳು ಬಂದು ಹೋಗುವ ಜಾಗದಲ್ಲಿನ ದೂಳು ಮೈಮೇಲೆ ಹಾರಿದರೆ ಜೀವನ ಧನ್ಯ.... ಅಂತದರಲ್ಲಿ 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭದ ಅಮೃತ ಸ್ನಾನಕ್ಕೆ ತ್ರಿವೇಣಿ ಸಂಗಮದಲ್ಲಿ ದೇವರು ಸಹ ಅವಕಾಶವನ್ನು ಒದಗಿಸಿ ಕೊಟ್ಟ...ನಮಗೆಲ್ಲ ಜೀವನದಲ್ಲಿ ಒಮ್ಮೆ ಮಾತ್ರ ಈ ಅವಕಾಶಗಳು ಸಿಗುತ್ತದೆ.
ಹಾಗೆಯೇ ಒಂದೆರಡು ಪೀಳಿಗೆಗೂ ಈ ಅವಕಾಶ ಸಿಗುವುದಿಲ್ಲ. ಜಗತ್ತಿನ ಅತ್ಯಂತ ದೊಡ್ಡ ಸಮಾಗಮ ಈ ಮಹಾಕುಂಭ ಮೇಳ, ಈ ಮಹಾ ಕುಂಭ ಬ್ರಹ್ಮಾಂಡದ ಸಮ್ಮಿಲನ. ಇದು ನಮ್ಮ ಸನಾತನ ಧರ್ಮದ ಹೆಮ್ಮೆ. ಉತ್ತರ ಭಾರತದ ಗಯಾ,ವಾರಣಾಸಿ,ಆಯೋದ್ಯಾ ದಂತಹ ಪುಣ್ಯ ಕ್ಷೇತ್ರದಲ್ಲಿ ಮಿಂದು ಭಗವಂತನ ದರ್ಶನಮಾಡಿಕೊಂಡು ಪ್ರಯಾಗ್ ರಾಜ್ ಕಡೆಗೆ ನಮ್ಮ ಪ್ರಯಾಣವನ್ನು ಬೆಳೆಸಿದೆವು. ಈ ಬಾರಿಯ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶದ ಯೋಗಿ ಸರ್ಕಾರವು ಅದ್ಬುತ ಯೋಜನೆಯನ್ನು ಮಾಡಿತ್ತು.
ಮಹಾ ಕುಂಭ ಮೇಳದಲ್ಲಿ ಪರಮ ಪವಿತ್ರ ಪುಷ್ಯ ಮಾಸದ ಮೌನಿ ಅಮಾವಾಸ್ಯೆಗೆ ಸ್ನಾನ ಮಾಡಬೇಕೆಂಬ ಉತ್ಕಟ ಸಂಕಲ್ಪದಿಂದ ಅಯೋದ್ಯೆಯಿಂದ ಪ್ರಯಾಗ್ ರಾಜ್ ಗೆ ಕಾರ್ ನಲ್ಲಿ ಹೊರಟಿದ್ದ ನಮಗೆ ಪ್ರಯಾಗ್ ರಾಜ್ ಗೆ ಹೋಗಲು ಇದಿದ್ದು ಕೇವಲ 165km ಗಳು ಮಾತ್ರ. ಅಂದರೆ ನಾವು ಸರಿಯಾಗಿ ಹೋಗುವುದಾದರೆ 2 ಗಂಟೆಯಲ್ಲಿ ತಲುಪಬಹುದಿತ್ತು. ಆದರೆ ನಾವು ತೆಗೆದುಕೊಂಡ ಸಮಯ ಸರಿ ಸುಮಾರು 7ಗಂಟೆಗಳು, ಅಂದರೆ ಕುಂಭಮೇಳಕ್ಕೆ ಹೋಗುತಿದ್ದ ಜನ ಸಂದಣಿಯನ್ನು ಊಹಿಸಬಹುದು.
ಆದರೂ ದೃತ್ತಿಗೆಡದೆ ಪೊಲೀಸ್ ಸಿಬ್ಬಂದಿಗಳು ಮತ್ತು ಅಲ್ಲಿನ ಸ್ಥಳೀಯರು ಟ್ರಾಫಿಕ್ ಅನ್ನು ಕಂಟ್ರೋಲ್ ಮಾಡುತ್ತಿದ್ದ ರೀತಿ ಮತ್ತು ಅಲ್ಲಿನ ಆಡಳಿತ ವ್ಯವಸ್ಥೆ ತೆಗೆದುಕೊಂಡ ನಿರ್ಧಾರ ಖಂಡಿತಾ ಮೆಚ್ಚಲೇಬೇಕು.
ಸರಿಸುಮಾರು 12ಕೋಟಿಗಿಂತ ಅಧಿಕ ಜನರನ್ನು ಮತ್ತು ಕೋಟ್ಯಂತರ ವಾಹನಗಳನ್ನು ನಿಯಂತ್ರಿಸಿ ಎಲ್ಲರಿಗೂ ವ್ಯವಸ್ಥೆ ಮಾಡುವುದು ಸುಲಭದ ಮಾತಾಗಿರಲಿಲ್ಲ. ಆದರೂ ಸಹ ಅಲ್ಲಿನ ಸಿಬ್ಬಂದಿಗಳು ಅದೇ ಸಂಯಮದಿಂದ ಮಾಹಿತಿನೀಡುವುದರ ಜೊತೆಗೆ ಸಹಕರಿಸುತ್ತಿದ್ದರು.ಅಲ್ಲಿ ಬರುವ ಭಕ್ತದಿಗಳಿಗೆ ಪಾರ್ಕಿಂಗ್ ಸ್ಥಳದಿಂದ ಸಂಗಮಕ್ಕೆ ಬಿಡಲು e-ರಿಕ್ಷಾ,ಬೈಕ್, rapido ಮತ್ತು ಕ್ಯಾಬ್ ನಲ್ಲಿ ಬಿಡುವ ವ್ಯವಸ್ಥೆ ಇತ್ತು. ಬಾಡಿಗೆ ಸೈಕಲ್, ಸ್ಕೂಟಿ ವ್ಯವಸ್ಥೆ ಕೂಡ ಮಾಡಿದ್ದರು. ಹಾಗೆಯೇ ಎಲ್ಲಕಡೆಯು ಮೈಕ್ ನಲ್ಲಿ ನಮಗೆ ಬೇಕಾದ ಸಂಪೂರ್ಣ ಮಾಹಿತಿ ಕೊಡುತ್ತಿದ್ದರು.
ಮೇಳದ ವ್ಯವಸ್ಥೆ ಅದ್ಬುತ- ತಾತ್ಕಾಲಿಕ ರಸ್ತೆಗಳು, ಪಂತೂನ್ ಬಿಡ್ಜ್ ಗಳು, ತಾತ್ಕಾಲಿಕ ಬೀದಿ ದೀಪಗಳು, ತಾತ್ಕಾಲಿಕ ಅಂಗಡಿ ಮಳಿಗೆಗಳು, ತಾತ್ಕಾಲಿಕ ಟೆಂಟ್ ಗಳು, ಪಾರ್ಕಿಂಗ್ ವ್ಯವಸ್ಥೆ ಎಲ್ಲವು ಕುಂಭಮೇಳಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದರು. ಈ ಸೆಕ್ಟರ್ ಗಳ ನಡುವೆ ಸಂಪರ್ಕ ಸಾಧಿಸಲು ನದಿಗಳ ಮೇಲೆ 13 ಫಾತೂನ್ ಬ್ರಿಡ್ಜ್ಗಗಳನ್ನು ನಿರ್ಮಾಣ ಮಾಡಲಾಗಿತ್ತು.
ಜನ ಸಂದಣಿ ಯನ್ನು ನಿಯಂತ್ರಿಸಲು ಪ್ರತೀ ಬ್ರಿಡ್ಜ್ ಗಳನ್ನು ಒನ್ ವೆ ಗಳನ್ನಾಗಿ ಮಾಡಿದ್ದರು. ಇನ್ನೂ ಸ್ನಾನಕ್ಕೆ ಇಳಿಯುವ ಜಾಗದಲ್ಲಿ ನದಿಯಲ್ಲಿ ಪ್ಲಾಸ್ಟಿಕ್ ಬ್ಯಾರಿಕೇಡ್ ಗಳನ್ನು ಹಾಕುವ ಮೂಲಕ ಯಾರೂ ನದಿಯಲ್ಲಿ ಮುಂದೆ ಹೋಗಬಾರದು ಮತ್ತು ಯಾವುದೇ ಅಪಾಯ ವಾಗದಂತೆ ಮುಂಜ್ಜಾಗ್ರತೆ ವಹಿಸಿದ್ದರು.
ಸಂಗಮ ಕ್ಷೇತ್ರ, ಪರೇಡ್ ಗ್ರೌಂಡ್, ತಲಿಯರ್ ಗಂಜ್, ಜಂನ್ಸಿ ರಿಜನ್ ಹಾಗೂ ಆರೈಲ್ ಈ ಐದು ಪ್ರಮುಖ ವಿಭಾಗಗಳನ್ನು ಮತ್ತೆ 25 ಸೆಕ್ಟರ್ ಗಳಾಗಿ ವಿಭಜಿಸಿದ್ದರು.
ಇದರಿಂದ ಜನರಿಗೆ ಜಾಗಗಳನ್ನು ಗುರುತಿಸಿ ತಲುಪಲು ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಅನುಕೂಲಕರವಾಗಿತ್ತು. ಪ್ರಯಾಗ್ ರಾಜ್ ಮಹಾಕುಂಭ ಮೇಳಕ್ಕೆ 45 ದಿನಗಳು (ಫೆಬ್ರವರಿ 26, 2025ರವರೆಗೆ) ಆಗಮಿಸುವ ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ಶೌಚ ವ್ಯವಸ್ಥೆ, ಸ್ನಾನ ಹಾಗೂ ಬಟ್ಟೆ ಬದಲಿಸಲು ಕೈಗೊಂಡ ವ್ಯವಸ್ಥೆ ಕ್ರಮಗಳು ಶಬ್ದಕ್ಕೆ ನಿಲುಕದವು. ಸ್ವಚ್ಛತೆ, ನೈರ್ಮಲ್ಯ, ನಿರ್ವಹಣೆ, ಸ್ವಚ್ಛತಾ ಸಿಬ್ಬಂದಿ ಹಾಗೂ ತ್ಯಾಜ್ಯ ನಿರ್ವಹಣೆ ತ್ರಿವೇಣಿ ಸಂಗಮದ ದಂಡೆಯ ಮೇಲೆ ಯೋಜಿಸಿದ ರೀತಿ ವಿಶೇಷ. ಒಟ್ಟು 25 ವಿಭಾಗ ಹಾಗೂ36 ಉಪ ವಿಭಾಗಗಳನ್ನು ಪುಟ್ಟ ನಗರಗಳಂತೆ ರೂಪಿಸಿದ್ದು, ಪ್ರತಿ ವಸತಿಯಲ್ಲಿ ಪುರುಷ, ಮಹಿಳೆ ಹೀಗೆ ಪ್ರತ್ಯೇಕವಾಗಿ, ನೂರು ಶೌಚಾಲಯ ಅಳವಡಿಸಲಾಗಿತ್ತು ಮಲದ ಗುಂಡಿಗಳನ್ನು ರೂಪಿಸಿ, ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ, ಜೋಡಿಸಲಾಗಿತ್ತು ಅವುಗಳಿಗೆ ಬಯೋ ಕಂಪೋಸ್ಟ್ ಏಜೆಂಟ್ ಸೇರಿಸಿ, ಗೊಬ್ಬರವಾಗಿ ಪರಿವರ್ತಿಸುವ ಯೋಜನೆ ಜಾರಿಗೊಳಿಸಿದ್ದರು ಎನ್ನುವ ಈ ಮಾಹಿತಿಯನ್ನು ಬಲ್ಲವರಿಂದ ವಿಚಾರಿಸಿ ತಿಳಿದ್ದಿದ್ದೇನೆ.
ಕುಂಬಾ ನಗರಿಗೆ ಹೋಗಲು ಸಾಧ್ಯವಾಗದವರಿಗೆ ಹಾಗೆಯೇ ಬರೀ ಸ್ನಾನ ಮಾಡಿ ಬರುವ ವ್ಯವಸ್ಥೆಯು ಸಹ ಮಾಡಿದ್ದರು. ಇನ್ನೂ ಅಲ್ಲಲ್ಲಿ ರೆಸ್ಕ್ಯೂ ತಂಡದವರು ಬೋಟ್ ಗಳಲ್ಲಿ ತುರ್ತು ಪರಿಸ್ಥಿತಿ ಯ ನಿರ್ವಹಣೆ ಗೆ ಸದಾ ಸಾಜ್ಜಾಗಿರುತ್ತಾರೆ. underwater ಡ್ರೋನ್ಗಳು ಮತ್ತು ಹೋದಲ್ಲಿ ಎಲ್ಲಕಡೆಯೂ ಸಹ ಕ್ಯಾಮೆರಾಗಳಿವೆ. ಇದಕ್ಕಾಗಿಯೇ ಆರ್ಮಿ ಪೊಲೀಸ್ SDRF, RAF ಗಳು ಸದಾ ತಯಾರಿಯಲ್ಲಿರುತ್ತದೆ.
ಸರಿಯಾಗಿಮಾಹಿತಿಯನ್ನು ಕೇಳಿದರೆ ಅತ್ಯಂತ ಸ್ಪಷ್ಟವಾಗಿ ಅಲ್ಲಿನ ಪೊಲೀಸ್, ಹೋಂ ಗ್ಯಾರ್ಡ್ಸ್ಗಳು , ಸ್ಥಳೀಯರು ತಿಳಿಸಿ ತುಂಬಾ ಸಹಕರಿಸುತ್ತಾರೆ. ಹಾಗೆಯೇ ಈ ಮಹಾ ಕುಂಭಮೇಳಕ್ಕಾಗಿ ಸರ್ಕಾರವೇ ಪ್ರತ್ಯೇಕ ಆಪ್ ಬಿಡುಗಡೆ ಮಾಡಿದೆ. ಮುಖ್ಯವಾಗಿ ಪ್ರತೀ ದಿನ ಕೋಟ್ಯಂತರ ಜನರು ಬಂದರೂ ಸಹ ಸ್ವಚ್ಛತೆ ಯನ್ನು ಮಾಡುವ ದೊಡ್ಡ ಶ್ರಮಿಕರ ತಂಡವೇ ಇದೆ ಮತ್ತು ಅವರು ಸದಾ ತಯಾರಿಯಾಗಿರುತ್ತಾರೆ.
ಲಕ್ಷ ಗಟ್ಟಲೆ ಟಾಯ್ಲೆಟ್ ಗಳು ಬಟ್ಟೆ ಬದಲಿಸುವ ಕೊಠಡಿಗಳು ಇವೆ ಈ ಜನ ಜಂಗೂಲಿಯಲ್ಲಿ ಕಳೆದು ಹೋದರೆ ಹುಡುಕಿಕೊಡುವ ದೊಡ್ಡ ಯೋಜನೆಗೆ ಬೇರೆಯೇ ತಂಡವನ್ನು ರಚಿಸಿದ್ದಾರೆ.
ಸರಕಾರದ ಅನೇಕ ಸಹಾಯವಾಣಿ ಸಂಖ್ಯೆಯನ್ನು ಕೊಟ್ಟು ನಿಮ್ಮ ಸುರಕ್ಷತೆ ಕಾಳಜಿ ವಹಿಸುವ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ.
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವವರಿಗಾಗಿ ಬೋಟ್ ವ್ಯವಸ್ಥೆ ಗೆ ಅವಕಾಶ ಮಾಡಿದೆ (ಶಾಹಿ ಅಮೃತ ಸ್ನಾನದ ದಿನಗಳನ್ನು ಹೊರತು ಪಡಿಸಿ)ಊಟ ವಸತಿಗೆ ಅನೇಕ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಕಡೆ ಆಂಬುಲೆನ್ಸ್ ಅಗ್ನಿ ಶಾಮಕ ದಳ ತುರ್ತು ನಿರ್ವಹಣಾ ತುಕಡಿ ವ್ಯವಸ್ಥಿತವಾಗಿದೆ.
ನಮ್ಮ ಮೌನಿ ಅಮಾವಾಸ್ಯೆಯ ಅಮೃತ ಸ್ನಾನವನ್ನು ಮುಗಿಸಿ ಈ ಎಲ್ಲಾ ವ್ಯವಸ್ಥೆಯನ್ನು ಕಣ್ಣು ತುಂಬಿಕೊಂಡು ಸ್ವರ್ಗವನ್ನು ನೋಡಿದ ಅನುಭವವಾಗಿ ಹೃದಯದಿಂದ ಇಡೀ ಅತ್ಯದ್ಭುತ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಯೋಜಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾದಗಳನ್ನೂ ತಿಳಿಸಿ ಅಲ್ಲಿಂದ ಊರಿನಕಡೆ ಬಾರದ ಮನಸ್ಸಿಂದ ಹೊರಟೆವು
ಇಷ್ಟೆಲ್ಲ ವ್ಯವಸ್ಥೆ ಮಾಡಿದಮೇಲೂ ಸಹ ಅವಘಡ ಸಂಭಾವಿಸಿದೆ -ಕುಂಭಮೇಳ ಕಾಲ್ತುಳಿತಕ್ಕೆ ಸರ್ಕಾರವನ್ನು ದೂಷಿಸುವ ಮೊದಲು... ಕುಂಭಮೇಳದಲ್ಲಿ ಕಾಲ್ತುಳಿತವಾಗಿ 30 ಮಂದಿ ಪ್ರಾಣಬಿಟ್ಟಿದ್ದು ನಿಜಕ್ಕೂ ದುಃಖಕರ. ಕಾಲ್ತುಳಿತಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣವೇ....?
ನಾನು ಈ ಘಟನೆ ನಡೆದ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿದ್ದೆ. ಮೌನಿ ಅಮಾವಾಸ್ಯೆಗೆ ಕೋಟ್ಯಾಂತರ ಭಕ್ತಾದಿಗಳ ಆಗಮನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಮಾಡಿದ್ದು. ಇದನ್ನು ಮೀರಿ ಕಾಲ್ತುಳಿತವಾಗಲು ಜನರ ಹಟಮಾರಿತನ ಮತ್ತು ನಿಯಮಗಳ ನಿರ್ಲಕ್ಷ್ಯ ಕಾರಣ. ನಾವೇ ಮೊದಲು ಅಮೃತಸ್ನಾನ ಮಾಡಬೇಕೆಂದು ಹಿಂದಿನ ರಾತ್ರಿ ಬಂದು ಸಂಗಮ ತಟದಲ್ಲಿ ಬಂದು ಮಲಗಿದರನ್ನು ಪೋಲಿಸರು ಅದೆಷ್ಟು ಬಾರಿ ಕೈಮುಗಿದು ಬೇಡಿಕೊಂಡರೂ ಎದ್ದು ಹೋಗಲು ಸುತರಾಂ ತಯಾರಿರಲಿಲ್ಲ..
ಅದಲ್ಲದ್ದೇ ಕೆಲ ಕಿಡಿಗೇಡಿಗಳು ಪೋಲಿಸರು ವ್ಯವಸ್ಥೆ ಮಾಡಿದ್ದ ಬ್ಯಾರಿಕೇಡ್ ಮುರಿದು ಸಂಗಮ ತಟದತ್ತ ಓಡಿದ್ದೇ ಕಾಲ್ತುಳಿತಕ್ಕೆ ಕಾರಣ. ನಮ್ಮ ತಂಡ ಅದೇ ಸಂಗಮ ತಟದಲ್ಲಿ ಮೌನಿ ಅಮಾವಾಸ್ಯೆಯ ಬೆಳಗ್ಗೆ 7 ಘಂಟೆಗೆ ಪುಣ್ಯಸ್ನಾನ ಮಾಡಿದ್ದೆವು. ಪೋಲಿಸರು ಅದೆಷ್ಟು ಸಂಯಮದಿಂದ ವರ್ತಿಸುತ್ತಿದ್ದರೆಂದರೆ ಯಾವ ಭಕ್ತಾದಿಗಳನ್ನು ಬೈಯುವುದು ಗದರಿಸುವುದು ಕಾಣಸಿಗುತ್ತಿರಲಿಲ್ಲ. ಇಷ್ಟೆಲ್ಲ ಅದ್ಬುತ ವ್ಯವಸ್ಥೆ ಮಾಡಿದ ನಂತರವೂ ಜನತೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸದೆ ಹೋದರೆ ಸರ್ಕಾರ ತಾನೇ ಏನು ಮಾಡಲು ಸಾಧ್ಯ.
ಡಿಜಿಟಲ್ ಯುಗದ ವಿಶೇಷ ದಿಂದಾಗಿ ಈಗ ಎಲ್ಲಾ ಮಾಹಿತಿಗಳು ಎಲ್ಲರಿಗೂ ಲಭ್ಯವಿದೆ ಅಲ್ಲದೇ ಈ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ರವರಿಂದಲೂ ಎಲ್ಲರಿಗೂ ಮಾಹಿತಿ ತಲುಪುತ್ತಿದೆ ಅಲ್ಲದೇ ನಾವು ಸಹ ಈ ಕುಂಬಮೇಳದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಭಾವನೆ ಹುಟ್ಟುವುದು ಸಹ ಅಷ್ಟೇ ಸತ್ಯ.
ಇನ್ನೂ ಕುಂಭ ನಗರಿಯಲ್ಲಿ ಓಡಾಡವುದೇ ಅದೊಂದು ಜೀವಮಾನದ ಅವಿಸ್ಮರಣೀಯ ಕ್ಷಣಗಳು ಅದನ್ನು ಈ ಬರವಣಿಗೆಯಲ್ಲಿ ಬರೆದು ತಿಳಿಸಲು ಸಾಧ್ಯವಿಲ್ಲ ಅದನ್ನು ಅನುಭವಿಸಬೇಕಷ್ಟೆ.
ಇವಿಷ್ಟನ್ನೂ ನಿರಂತರವಾಗಿ 45 ದಿನಗಳ ಕಾಲ ನಿಭಾಯಿಸುವುದು ಸುಲಭದ ಮಾತಲ್ಲ
ಈ ವ್ಯವಸ್ಥೆ ಯನ್ನು ಮಾಡಿದ ಉತ್ತರ ಪ್ರದೇಶ ದ ಸರ್ಕಾರ ಮತ್ತು ಆಡಳಿತ ಅಧಿಕಾರಿಗಳಿಗೆ ಧನ್ಯವಾದಗಳು. ಈ ಒಂದು ಕಾರ್ಯಕ್ರಮ-ಧಾರ್ಮಿಕತೆ ಮತ್ತು ಆರ್ಥಿಕತೆ ಎರಡೂ ಸಹ ದೊಡ್ಡ ಮಟ್ಟಕ್ಕೆ ಇರುತ್ತದೆ, ನಮ್ಮ ಸನಾತನ ಧರ್ಮದ ವಿಶೇಷತೆಯೇ ಇದು.
ಈ ಒಂದು ಮೇಳ ಆರ್ಥಿಕತೆಗೆ ಚೈತನ್ಯ ನೀಡುತ್ತದೆ. ಜಗತ್ತಿನ ಒಂದಲ್ಲ ಎರಡಲ್ಲ ನೂರಾರು ದೇಶಗಳ ಒಂದು ವರ್ಷದ ಪ್ರತ್ಯೇಕ ಪೂರ್ಣ ವಹಿವಾಟಿನ ಮೊತ್ತವನ್ನು ನಮ್ಮ ಭಾರತದ ಒಂದು ಧಾರ್ಮಿಕ ಕಾರ್ಯಕ್ರಮ ಕೇವಲ 45 ದಿನಗಳಲ್ಲಿ ಸಾಧಿಸಿ ಬಿಡುತ್ತದೆ ಎನ್ನುವುದು ನಾವೆಷ್ಟು ಬಲಿಷ್ಠ ರಾಷ್ಟ್ರ ಎನ್ನುವುದನ್ನು ತೋರಿಸುತ್ತದೆ.
ವೈವಿಧ್ಯದಲ್ಲಿ ಏಕತೆಯ ಸಂದೇಶವನ್ನು ನೀಡುತ್ತಾ, ಮಹಾ ಕುಂಭ-2025, ಪ್ರಯಾಗರಾಜ್ ಮಾನವತೆಯ ಕಲ್ಯಾಣದೊಂದಿಗೆ ಸನಾತನದ ಅನುಭವವನ್ನು ಒದಗಿಸುತ್ತದೆ.
ಸನಾತನ್ ಗರ್ವ್, ಮಹಾಕುಂಬ್ ಪ್ರವ್ಹ್
ನಮ್ಮದು ಜಗ್ಗತಿನ ಅತ್ಯಂತ ಪುರಾತನ ಸಂಸ್ಮೃತಿ ಎನ್ನುವ ಹೆಮ್ಮೆಯೊಂದಿಗೆ....
ಹರ ಹರ ಮಹದೇವ್!

