ಭಾರತದ ಆತ್ಮವಿರುವುದು ಸಂವಿಧಾನದಲ್ಲಿ

ಕುವೆಂಪು ನಾಡಗೀತೆಯ ಆಶಯದಲ್ಲಿಯೂ ಸಂವಿಧಾನವಿದೆ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

ಭಾರತದ ಆತ್ಮವಿರುವುದೇ ಸಂವಿಧಾನದಲ್ಲಿ ಹಾಗಾಗಿ ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಕುರಿತು ವಿಶೇಷ ಕಾಳಜಿಯಿಂದ ನಿತ್ಯ ಪೀಠಿಕೆ ಪಠಣಕ್ಕೆ ಅದೇಶಿಸಿದೆ. ಇದು ಮಕ್ಕಳ ಭವಿಷ್ಯದ ಜೊತೆಗೆ ದೇಶವನ್ನು ಗಟ್ಟಿಗೊಳಿಸುತ್ತದೆ. ಕುವೆಂಪು ವಿರಚಿತ ನಾಡಗೀತೆಯಲ್ಲಿ ಇರುವುದು ಕೂಡ ಸಂವಿಧಾನದ ಆಶಯವೇ. ಇದು ಕೂಡ ಪ್ರತಿಯೊಬ್ಬರ ಮಕ್ಕಳ ಹೃದಯವನ್ನು ತಲುಪಬೇಕು. ನಾಡಗೀತೆ ಕಡೆಗಣನೆ ಸಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಈಚೆಗೆ ಬೇಗುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮತ್ತು ಶಾಲೆಗೆ 2 ಎಕರೆ ಹಕ್ಕುಪತ್ರ ವಿತರಿಸಿ ಹೇಳಿದ್ದಾರೆ.

ಸರ್ಕಾರಿ ಶಾಲೆಯ ಶಿಕ್ಷಕರ ಕೊರತೆ ಶೀಘ್ರದಲ್ಲೇ ಬಗೆಹರಿಯಲಿದೆ. ಈಗಾಗಲೇ 13 ವರೆ ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉತ್ತರ ಕರ್ನಾಟಕದ 7 ಜಿಲ್ಲೆಯ ಅನುದಾನಿತ ಶಾಲೆಗಳಿಗೆ ಶೇಕಡಾ 80 ರಷ್ಟು ಶಿಕ್ಷಕರನ್ನು ಭರ್ತಿ ಮಾಡುವ ಕೆಲಸ ನಡೆಯತ್ತಿದೆ. ಮಕ್ಕಳು ಓದುವ ಸಂದರ್ಭದಲ್ಲಿ ಪೋಷಕರು ಜಾತ್ರೆ, ಹಬ್ಬ ಎಂಬ ಅಲೆದಾಡಿಸಬೇಡಿ. ಶಿಕ್ಷಣ ಕಳೆದುಕೊಂಡ ನಂತರ ಮಕ್ಕಳಿಗೆ ಮತ್ತೆ ಸಿಗಲ್ಲ ಎಂದು ಕಿವಿ ಮಾತು ಹೇಳಿದರು.

ಶಾಲೆಗೆ ಈಗಾಗಲೇ ಶಾಸಕರು 2 ಕೊಠಡಿ ನೀಡಿದ್ದಾರೆ. ನಾನು ಕೊಡಲೊಪ್ಪಿದ 2 ಕೊಠಡಿ ಬದಲಿಗೆ 4 ಕೊಠಡಿ ಕೊಡುತ್ತೇನೆ. ಪ್ರಸ್ತುತ ಸಾಲಿನಲ್ಲಿ ಶಾಲಾ ದಾಖಲಾತಿ ಪ್ರಮಾಣ ಹೆಚ್ಚಿಸಿದರೆ ಕಾಮಗಾರಿ ಮುಗಿಯುವುದರೊಳಗೆ ಮತ್ತೆರಡು ಕೊಠಡಿ ಕೊಡುತ್ತೇನೆ. ಸಾರ್ವಜನಿಕರ ಸಹಭಾಗಿತ್ವ ಪಡೆದು ಶಾಲೆಯ ಕಾಂಪೌಂಡ್‌, ಶೌಚಾಲಯ ಮುಂತಾದ ಸೌಲಭ್ಯ ಪಡೆದುಕೊಳ್ಳಿ. ಗ್ರಾಮಸ್ಥರು ಹೆಚ್ಚಿನ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ “ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ಎಂಟುವರೆ ಸಾವಿರ ಕಟ್ಟಡ ಮಂಜೂರು ಮಾಡಲಾಗಿದೆ. ಕ್ಷೇತ್ರಕ್ಕೆ 57 ತಂದಿದ್ದೇನೆ. ಬೇಗುವಳ್ಳಿ ಶಾಲೆಗೆ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಜಾಗ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ” ಎಂದರು.

ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಮಾತನಾಡಿ, ಸರ್ಕಾರಿ ಶಾಲೆಯ ಉಳಿವು ಹಾಗೂ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಸರ್ಕಾರ ವಿಶೇಷ ಕಾಳಜಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪೋಷಕರು ಕೂಡ ಇದಕ್ಕೆ ಪ್ರಮಾಣಿಕವಾಗಿ ಸ್ಪಂದಿಸುವ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಲ್ಲಿ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ದೇವರಾಜ್‌, ಉಪಾಧ್ಯಕ್ಷ ಅರವಿಂದ್‌ ಎಂ.ಡಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಮುಖಂಡರಾದ ಮುಡುಬ ರಾಘವೇಂದ್ರ, ಮಧುರಾಜ ಹೆಗ್ಡೆ, ಆರ್‌.ಎನ್.ಭುಜಂಗ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾಲತಾ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post