ಜಿಲ್ಲಾ ಉಸ್ತುವಾರಿ
ಸಚಿವ ಮಧು ಬಂಗಾರಪ್ಪ ಸ್ಪಷ್ಟ ನುಡಿ
ಇದು ಭರವಸೆಯಾಗಿ
ಉಳಿಯದಿರಲಿ ಸಂತ್ರಸ್ತರ ನಿರೀಕ್ಷೆ
ತೂದೂರಿನಲ್ಲಿ ಶನಿವಾರ
ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಗರ್ ಹುಕುಂ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯ
ಕುರಿತು ಆಶಾವಾದ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 6 ದಶಕಕ್ಕಿಂತಲೂ ಹೆಚ್ಚಿನ ಸಮಯದಿಂದ ಇದು
ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಎಸ್ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಗರ್ ಹುಕುಂ ಕಾನೂನು
ದಿಟ್ಟವಾಗಿ ಜಾರಿಗೆ ತರುವ ಮೂಲಕ ಶರಾವತಿ ಸೇರಿದಂತೆ ಒಂದಿಷ್ಟು ಅಸಾಹಾಯಕ ರೈತರಿಗೆ ಸಣ್ಣ ಪ್ರಮಾಣದ
ಭೂಮಿಯ ಹಕ್ಕು ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅರಣ್ಯ ಹಾಗೂ ಕಂದಾಯ ಇಲಾಖೆ ನಡುವಿನ ಕಾಳಜಿ,
ಹೊಂದಾಣಿಕೆಯ ಕೊರತೆ ಮತ್ತು ರೈತರ ಕಾನೂನು ಜ್ಞಾನದ ತಿಳುವಳಿಕೆಯ ಪ್ರಮಾದದಿಂದ ಬಹುತೇಕ ಮುಳುಗಡೆ ಹಾಗೂ
ಬಗರ್‌ಹುಕುಂ ಸಂತ್ರಸ್ತರ ಸಮಸ್ಯೆ ಇಂದು ಮುಂದುವರೆದಿದೆ.
ಈ ಕುರಿತು ಸ್ಪಷ್ಟವಾಗಿ
ಮಾತನಾಡಿದ ಮಧು ಬಂಗಾರಪ್ಪ ಅಭಿವೃದ್ಧಿ ಯೋಜನೆಯಡಿ ಸಂತ್ರಸ್ತರಾಗುವ ಕುಟುಂಬವನ್ನು ಸರ್ಕಾರ ಕೈಬಿಡುವುದಿಲ್ಲ.
ಅನುಷ್ಟಾನದ ವೇಳೆ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ. ಅರಣ್ಯ, ಕಂದಾಯ ಪ್ರದೇಶದ ಭೂ ಹಕ್ಕಿನ ಬಿಕ್ಕಟ್ಟು
ಇತ್ಯರ್ಥಪಡಿಸಿದರೆ ರಾಜ್ಯದ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಕಂದಾಯ ಸಚಿವರೊಂದಿಗೆ ಚರ್ಚಿಸಿ ಶರಾವತಿ
ಸಂತ್ರಸ್ತರಿಂದಲೇ ಭೂಹಕ್ಕಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದು ವೈಯಕ್ತಿಕವಾಗಿಯೂ
ನನಗೆ ಬಹಳ ಕಾಲದಿಂದ ಕಾಡುತ್ತಿರುವ ವಿಚಾರ ಮತ್ತು ದಶಕದ ಹಿಂದೆಯೆ ನಾನು ಈ ಕುರಿತು ಪಾದಯಾತ್ರೆಯ ಕುರಿತು
ಅಂದಿನ ಸರ್ಕಾರಗಳನ್ನು ಎಚ್ಚರಿಸಿದ್ದೇನೆ ಎಂದಿದ್ದಾರೆ.
ಸದ್ಯ ಬಗರ್‌ಹುಕುಂ
ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದ್ದು ಈ ಸಮಸ್ಯೆಯ ಮೂಲವಿರುವ
ಸಾಗರ, ಸೊರಬ, ತೀರ್ಥಹಳ್ಳಿ ರೈತರ ಅಳಲಿನ ಕುರಿತು ಸ್ಪಷ್ಟ ಅರಿವು ಇರುವ ಮಧು ಬಂಗಾರಪ್ಪ ಇದನ್ನು ಸವಾಲಾಗಿ
ಸ್ವೀಕರಿಸಿ ಶೀಘ್ರದಲ್ಲಿಯೇ ಸಮಸ್ಯೆಗೊಂದು ತಾರ್ಕಿಕ ಅಂತ್ಯ ಹಾಡಬೇಕೆಂಬ ಒಕ್ಕೊರಲ ಒತ್ತಾಯ ಸಂತ್ರಸ್ತ
ರೈತ ಸಮುದಾಯದಿಂದ ಕೇಳಿ ಬಂದಿದೆ.
ಸಭೆಯಲ್ಲಿ ಎಂಎಡಿಬಿ
ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ದೇವರಾಜ್, ಉಪಾಧ್ಯಕ್ಷ
ಅರವಿಂದ್ ಎಂ.ಡಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಮುಖಂಡರಾದ ಮುಡುಬ ರಾಘವೇಂದ್ರ,
ಮಧುರಾಜ ಹೆಗ್ಡೆ, ಆರ್.ಎನ್.ಭುಜಂಗ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ
ವೈ.ಗಣೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಆಶಾಲತಾ ಇದ್ದರು.
