ಲಕ್ಷ್ಮೀಶ್ ಪತ್ರಿಕೆ ಸಂಪಾದಕ ಲಕ್ಷ್ಮೀಶ್ ಇನ್ನಿಲ್ಲ
ತೀರ್ಥಹಳ್ಳಿಯನ್ನೇ ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ತನ್ನ ಮೊನಚು ಬರವಣಿಗೆಯ ಮೂಲಕ ಮನೆಮಾತಾಗಿದ್ದ ಲಕ್ಷ್ಮೀಶ್ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಾ.ಸು. ಲಕ್ಷ್ಮೀಶ್ (62) ಹೊಸವರ್ಷದ ಸಂಭ್ರಮದ ಮುನ್ನಾ ದಿನವೆ ಇಹಲೋಕ ತ್ಯಜಿಸಿದರೆಂದು ತಿಳಿಸಲು ವಿಷಾಧಿಸುತ್ತೇವೆ.ತೀರ್ಥಹಳ್ಳಿಯ ಬೊಬ್ಬಿ ಸಮೀಪದ ಮಾಕೋಡಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಪ್ರತಿಷ್ಠಿತ ಕಾಸರವಳ್ಳಿ ಕುಟುಂಬದರಾದ ಕಾ.ಸು.ಲಕ್ಷ್ಮೀಶ್ ಬಾಲ್ಯದಿಂದಲೇ ಚುರುಕು ವ್ಯಕ್ತಿತ್ವವನ್ನು ಹೊಂದಿದವರು ಎಂಬುದು ಅವರ ಬರವಣಿಗೆಗಳಿಂದಲೇ ತಿಳಿಯುತ್ತಿತ್ತು. ನೇರ ನಿಷ್ಟೂರದ ನಡೆಯನ್ನು ಬದುಕಿನುದ್ದಕ್ಕೂ ಸವಾಲಾಗಿ ಸ್ವೀಕರಿಸಿದವರು. ಪ್ರಚಲಿತ ವಿದ್ಯಮಾನ, ರಾಜಕೀಯ ಬೆಳವಣಿಗೆ, ಪುರಾಣ, ಐತಿಹ್ಯ, ವೇದ, ಉಪನಿಷತ್ತು, ಇತಿಹಾಸವನ್ನು ನಿಖರವಾಗಿ ವಿಶ್ಲೇಷಣೆ ಮಾಡುವ ಜಾಯಮಾನವನ್ನು ಹೊಂದಿದ್ದರು.
ತಮ್ಮ ಕಟು ಬರವಣಿಗೆಯ ಮೂಲಕ ಹಲವರ ವಿರೋಧಕಟ್ಟಿಕೊಂಡ ಅವರು ತಮ್ಮ ವರದಿಗಾರಿಕೆಗಾಗಿ ಅನೇಕಬಾರಿ ಹಲ್ಲೆಗೊಳಗಾಗಿದ್ದರು. ಅಧಿಕಾರಿಗಳ, ಉದ್ಯಮಿಗಳ, ಸಾರ್ವಜನಿಕರ ನಡುವೆ ಸದಾ ಒಂದಿಲ್ಲೊಂದು ಸಂಘರ್ಷದಲ್ಲಿ ತೊಡಗಿರುತ್ತಿದ್ದ ಲಕ್ಷ್ಮೀಶ್ ಪತ್ರಿಕೆಯನ್ನು ನಿರಂತರವಾಗಿ ಓದುಗರಿಗೆ ತಲುಪಿಸುತ್ತಿದ್ದರು. ಯಾವುದೇ ಸಬೂಬು ಹೇಳದೆ ಪತ್ರಿಕೆಯನ್ನು ಅಚ್ಚುಹಾಕಿಸದೆ ಉಳಿದ ಸಂದರ್ಭಗಳು ಬಹಳ ವಿರಳ. ಇತ್ತೀಚಿನವರೆಗೂ ಪ್ರತಿವಾರ ಪತ್ರಿಕೆಯ ಮುದ್ರಣದ ಸವಾಲುಗಳನ್ನು ಮೀರಿ ಪ್ರಕಟಿಸುತ್ತಲೇ ಬಂದಿದ್ದರು. ಒಂದು ವೇಳೆ ಪತ್ರಿಕೆ ಹೊರ ತರಲಾಗದಿದ್ದರೆ ಆ ಮಾಹಿತಿಯನ್ನು ಓದುಗರಿಗೆ ಮೊದಲೇ ತಿಳಿಸಿ ಓದುಗ ಬಳಗವನ್ನು ಕಾಪಿಟ್ಟುಕೊಳ್ಳುವ ಛಾತಿ ಅವರಲ್ಲಿತ್ತು. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುತ್ತಿದ್ದ ಕಾರಣದಿಂದ ಈಚೆಗೆ ಸಕ್ರೀಯವಾಗಿ ಪತ್ರಿಕೆ ಹೊರತರಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಅವರದ್ದಾಗಿತ್ತು.
ಪತ್ರಿಕೆ ಚಂದಾ ಹಣವನ್ನು ಅಚ್ಚುಕಟ್ಟಾಗಿ ವಸೂಲಿ ಮಾಡುತ್ತಿದ್ದರು. ಅದು ಅವರ ವಿಶೇಷತೆಯಾಗಿತ್ತು. ಆದ್ದುದ್ದರಿಂದಲೇ ಏನೋ ಪ್ರತಿವಾರವೂ ಪತ್ರಿಕೆಯನ್ನು ನಿರಂತರವಾಗಿ ಓದುಗರ ಕೈಸೇರಲು ನೆರವಾಗುತ್ತಿತ್ತು.
ಪ್ರತಿಯೊಂದು ಬೆಲೆ ಇದೆ ಎಂದು ಓದುಗರಿಗೆ ಮನದಟ್ಟು ಮಾಡುತ್ತಿದ್ದರು. ಪತ್ರಕರ್ತ ಸಮಾಜದ ಏರುಪೇರುಗಳನ್ನು ತಿದ್ದಿದರೂ ಸಮಾಜ ಅದಕ್ಕೆ ಪ್ರತಿಯಾಗಿ ಬೆಲೆ ಕೊಡುವುದಿಲ್ಲ. ಕಷ್ಟ ಕಾಲದಲ್ಲಿ ಯಾರು ಸಹಾಯಕ್ಕೆ ಬರುವುದಿಲ್ಲ ಎಂದು ಕಿರಿಯ ಪತ್ರಕರ್ತರಿಗೆ ಸಲಹೆ ನೀಡುತ್ತಿದ್ದರು. ಅವರ ಜೀವನದ ಕೊನೆ ಕಾಲದಲ್ಲಿ ಅದೇ ನಡೆಯಿತು. ಬೆಟ್ಟಮಕ್ಕಿ ಮನೆ ಕಳೆದುಕೊಂಡು ಮಾರಿಗುಣಿಯಲ್ಲಿ ಕೆಲಕಾಲ ವಾಸವಾಗಿದ್ದರು. ಅನಂತರ ಈಗಿರುವ ಮಾಕೋಡಿನಲ್ಲಿ ನೆಲೆಸಿದ್ದರು. ಎರಡು ದಿನಗಳ ಹಿಂದೆ ಜಮೀನು ವ್ಯಾಜ್ಯಗಳು ನಡೆದಾಗ ತಹಶೀಲ್ದಾರ್ ಮತ್ತು ಲಕ್ಷ್ಮೀಶ್ ಅವರ ಮಧ್ಯೆ ವಾದವಿವಾದ ನಡೆದಿತ್ತು. ಇಳಿವಯಸ್ಸಿನಲ್ಲಿ ಜೀವನದ ಏರಿಳಿತಗಳಿಂದ ಸೊರಗಿದ್ದ ಅವರು ಇರುವ ಜಮೀನಿಗೆ ಆತಂಕ ಎದುರಾದಾಗ ತೀವ್ರ ನೋವಿಗೆ ಒಳಗಾಗಿದ್ದರು. ಆಡಳಿತ ತೆಗೆದುಕೊಂಡ ಕ್ರಮಗಳಿಂದಲೇ ಚಿಂತಕ್ರಾಂತರಾಗಿದ್ದ ಅವರಿಗೆ ಬ್ರೈನ್ ಹ್ಯಮರೇಜ್ ಆಗಿದೆ. ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿ ಬದುಕಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ.
ಲಕ್ಷ್ಮೀಶ್ ಅವರಿಗೆ ಪತ್ನಿ ವಸಂತಿ, ಪುತ್ರ ಅಗ್ನಿಮಿತ್ರ, ಪುತ್ರಿ ಅಗ್ನಿವರ್ಷ ಇದ್ದರು.


