ಸುದ್ದಿಗಳು ಮನರಂಜನೆ ಆಗಿರಬಾರದು - ಶಿವಾನಂದ ಕರ್ಕಿ

ವಾಗ್ದೇವಿ ಶಿಕ್ಷಣ ಸಂಸ್ಥೆಯಿಂದ ಪ್ರತಿಭಾವಂತರಿಗೆ ಹೃದಯ ಸ್ಪರ್ಶಿ ಸನ್ಮಾನ
ತಾಂತ್ರಿಕತೆ ನಡುವೆ ಸಾಮಾಜಿಕ ಬದ್ಧತೆ ನಿರೀಕ್ಷೆ ಅಸಾಧ್ಯ - ಟಿ.ಕೆ.ರಮೇಶ್ ಶೆಟ್ಟಿ

ಪತ್ರಕರ್ತ ಸಮಾಜದಲ್ಲಿ ನಡೆಯುವ ಸುದ್ದಿಗಳನ್ನು ಚಿಕಿತ್ಸಾ ದೃಷ್ಟಿ ಕೋನದಿಂದ ನೋಡಬೇಕು. ಸಕಾಲಿಕ ಸುದ್ದಿ ನಿಷ್ಠೆ ಹೊಂದಿರಬೇಕು. ಸುದ್ದಿ ಮನೋರಂಜನೆ ಆಗಿರಬಾರದು. ಹಾಗಾದರೆ ಅರೋಗ್ಯಕರ ಸಮಾಜಕ್ಕೆ ಮಾರಕ ಎಂದು ಪತ್ರಕರ್ತ, ಚಿಂತಕ ಶಿವಾನಂದ ಕರ್ಕಿ ಹೇಳಿದರು.

ತೀರ್ಥಹಳ್ಳಿಯಲ್ಲಿ ವಾಗ್ದೇವಿ ಶಿಕ್ಷಣ ಸಂಸ್ಥೆ ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿಗೂ ದೃಶ್ಯ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮಗಳು ಸವಾಲುಗಳ ನಡುವೆ ಕೂಡ ವೃತ್ತಿ ಬದ್ಧತೆ ಉಳಿಸಿಕೊಂಡಿವೆ ಎಂದರು.

ಹಿರಿಯ ಪತ್ರಕರ್ತ ಟಿ ಕೆ ರಮೇಶ್ ಶೆಟ್ಟಿ ಮಾತನಾಡಿ ಪತ್ರಿಕೋದ್ಯಮವನ್ನು ಜನಪರವಾಗಿ ಮುನ್ನಡೆಸುವುದು ಸವಾಲಿನ ಕೆಲಸ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ ಜನಪರ ಕಾಳಜಿಗಿಂತಲೂ ಆರ್ಥಿಕ ದೃಷ್ಟಿಕೋನಕ್ಕೆ ಹೆಚ್ಚು ಮಹತ್ವ ಬರತೊಡಗಿದೆ. ಇದರಿಂದ ಸಾಮಾಜಿಕ ಕಾಳಜಿ ಮರೆಯಾಗುತ್ತಿದೆ. ಇದು ಆತಂಕದ ವಿಚಾರ. ಹೊಸದಾಗಿ ಈ ಕ್ಷೇತ್ರ ಪ್ರವೇಶ ಮಾಡುತ್ತಿರುವವರು ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದ್ದಾರೆ. ಆದರೆ ಇದೆ ಅಭಿಪ್ರಾಯವನ್ನು ಸಾಮಾಜಿಕ ಬದ್ಧತೆ ವಿಚಾರದಲ್ಲಿ ನಿರೀಕ್ಷೆ ಮಾಡುವಂತಿಲ್ಲ. ಈ ವಿಚಾರದಲ್ಲಿ ಆತ್ಮವಿಮರ್ಶೆ ಅಗತ್ಯ. ದೇಶದ ಪ್ರಜಾಪ್ರಭುತ್ವ ಇಂದಿಗೂ ಸದೃಢವಾಗಿ ಉಳಿದಿರುವುದಕ್ಕೆ ಸಾಮಾಜಿಕ ಕಳಕಳಿಯ ಪತ್ರಿಕೆ, ಪತ್ರಕರ್ತರು ಕಾರಣ ಎಂಬುದನ್ನು ಮರೆಯಬಾರದು ಎಂದರು.

ಹಿರಿಯ ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ, ಪ್ರಬಲವಾದ ಸಾಮಾಜಿಕ ಕಾಳಜಿ ಇದ್ದರೆ ಸರ್ಕಾರಗಳನ್ನೇ ಅಲ್ಲಾಡಿಸಬಹುದು ಎನ್ನುವುದಕ್ಕೆ ವಡ್ಡರ್ಸೆ ರಘುರಾಮ ಶೆಟ್ಟಿ, ಪಿ.ಲಂಕೇಶ್ ರಂತವರು ಉತ್ತಮ ಉದಾಹರಣೆ. ಪತ್ರಿಕೋದ್ಯಮದಲ್ಲಿ ನಿರಾಯಾಸವಾಗಿ ಹೆಸರು ದೊರಕುವುದಿಲ್ಲ. ವ್ಯವಸ್ಥೆ ಎದುರು ಹಾಕಿಕೊಳ್ಳುವ ಧೈರ್ಯ, ಬರೆದುದನ್ನು ದಕ್ಕಿಸಿಕೊಳ್ಳುವ ಚಾಣಕ್ಷತೆ ಇರಬೇಕು. ಜೊತೆಗೆ ಸಹನೆ ಇದ್ದರೆ ಸಮಾಜ ಹಾಗೂ ವ್ಯವಸ್ಥೆ ಗುರುತಿಸುತ್ತದೆ. ದಿಢೀರ್ ಎಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡಲು ಆಗುವುದಿಲ್ಲ ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ಭಾರತದಲ್ಲಿ ಪತ್ರಿಕೋದ್ಯಮ ಉಗಮವಾಗಿದ್ದೆ ಸ್ವಾತಂತ್ರ ಚಳುವಳಿಯನ್ನು ಕಟ್ಟಿ ಬೆಳೆಸಲು. ಮಹಾತ್ಮಾ ಗಾಂಧಿ, ಅಂಬೇಡ್ಕರ್ ರಂತಹ ಮಹನೀಯರು ಕೂಡ ಪತ್ರಿಕೆಗಳನ್ನು ಮುನ್ನಡೆಸಿದ್ದರು. ಬಳಿಕವೂ ಪತ್ರಿಕೆಗಳು ತಮ್ಮ ಹೆಸರಿಗೆ ತಕ್ಕ ಹಾಗೆ ಸಮಾಜದ ಕಾವಲುಗಾರನ ಪಾತ್ರವನ್ನು ನಿರ್ವಹಿಸಿವೆ. ಆದರೆ ಜಾಗತಿಕರಣದ ನಂತರ ಉದ್ಯಮಿಗಳು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಬಳಿಕ ಅದರ ಸ್ವರೂಪ ಬದಲಾವಣೆ ಕಂಡು ಈಗ ನೈಜ ಪತ್ರಿಕೋದ್ಯಮ ಕವಲು ಹಾದಿಯಲ್ಲಿದೆ. ಸರ್ಕಾರಗಳನ್ನು ಎಚ್ಚರಿಸುವ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳನ್ನು ಜನತೆ ಪ್ರೋತ್ಸಾಹ ಮಾಡುವುದು ಪ್ರಜಾಪ್ರಭುತ್ವ ಹಿತದೃಷ್ಟಿಯಿಂದ ಅಗತ್ಯ ಎಂದರು.

ಪ್ರಧಾನ ಕಾರ್ಯದರ್ಶಿ ಮುರುಘರಾಜ್ ವಂದಿಸಿದರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ನಡುವೆ ಅರ್ಥ ಪೂರ್ಣ ಸಂವಾದ ಏರ್ಪಟ್ಟಿತು.

ವಾಗ್ದೇವಿ ಶಿಕ್ಷಣ ಸಂಸ್ಥೆ ವತಿಯಿಂದ ಪ್ರತಿಭಾವಂತರಿಗೆ ಹೃದಯ ಸ್ಪರ್ಶಿ ಸನ್ಮಾನ.

ವಾಗ್ದೇವಿ ಶಿಕ್ಷಣ ಸಂಸ್ಥೆ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ಇಂದು ಗಾಯತ್ರಿ ಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಥೆಯ ಏಳಿಗೆಗೆ ದುಡಿದ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಹಾರ್ದಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಆಸಾದಿ, ವಾಗ್ದೇವಿ ಶಿಕ್ಷಣ ಸಂಸ್ಥೆ ಮಲೆನಾಡ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾದಾನ ನೀಡುತ್ತ ಇಪ್ಪತೈದು ವರ್ಷದ ವರೆಗೆ ಮುನ್ನಡೆದಿರುವುದು ಸಂಸ್ಥೆಯ ಕುರಿತು ಜನತೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಸಂಸ್ಥೆ ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗಿರದೆ ಕ್ರೀಡೆ ಹಾಗೂ ಸಂಸ್ಕೃತಿಕವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರತಿಭೆಗಳನ್ನು ರೂಪಿಸಿರುವದು ಮೆಚ್ಚುವ ವಿಚಾರ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಕೋಟೆಕೊಪ್ಪ ಶಶಿಧರ್, ನಿವೃತ್ತ ಪ್ರಾಧ್ಯಾಪಕ ಪ್ರಕಾಶ್ ರಾವ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಮತ್ತು ಸಂಸ್ಥೆ ಅಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post