ನಾಗರೀಕರ ನೆಮ್ಮದಿ ಹಾಳಾಗಲಿದೆ - ಇಲಿಯಾಜ್
ಕಮ್ಮರಡಿಯ ಕೆಸಲೂರು
ಗ್ರಾಮದ ಸರ್ವೆ ನಂಬರ್ 72 ರಲ್ಲಿ ಪುರುಷೋತ್ತಮ ಎಂಬುವವರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಕೇವಲ
8-10 ಅಡಿ ದೂರದಲ್ಲಿ ಒಂದು ಕಟ್ಟಡ ನಿರ್ಮಿಸಿದ್ದು ಇದರಲ್ಲಿ ಸೊರಬದಿಂದ ಸ್ಥಳಾಂತರಗೊಂಡ ಬಾರ್ ಮತ್ತು
ರೆಸ್ಟೋರೆಂಟ್ ಮಾಡುತ್ತಾರೆ ಎಂಬ ಮಾಹಿತಿ ಇದ್ದು ಇದು ಕಾನೂನು ಹಾಗೂ ಅಕ್ಕಪಕ್ಕದ ನಾಗರೀಕ ಕುಟುಂಬಗಳ
ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗಲಿದೆ. ಈ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಬೇಕು ಇಲ್ಲದಿದ್ದರೆ
ಹೋರಾಟ ಅನಿವಾರ್ಯ ಎಂದು ಅಲ್ಲಿನ ನಿವಾಸಿ ಇಲಿಯಾಜ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಇದು ವಸತಿ ಪ್ರದೇಶವಾಗಿದ್ದು
25ಕ್ಕೂ ಹೆಚ್ಚು ಮನೆಗಳಿವೆ. ಕಾನೂನು ಕಣ್ಣಿಗೆ ಮಣ್ಣೆರಚಲು ರಾತ್ರೋ ರಾತ್ರಿ ಬದಲಿ ರಸ್ತೆಯೊಂದನ್ನು
ಮಾಡಲಾಗಿದೆ. ಈಗಾಗಲೇ ಇದನ್ನು ವಿರೋಧಿಸಿ ಅರಣ್ಯ, ಕಂದಾಯ, ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಆದರೆ ಯಾವ ಇಲಾಖೆಯಿಂದಲೂ ಸೂಕ್ತ ಸ್ಪಂದನೆ ಬಂದಿಲ್ಲ. ಅಲ್ಲದೇ ಇದು ಆರಣ್ಯ ಪ್ರದೇಶವಾಗಿದ್ದರೂ ಇಲ್ಲಿಯವರೆಗೆ
ತಾಲ್ಲೂಕು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿಯವರೆಗೆ ಗ್ರಾಮಸ್ಥರು ಪರಸ್ಪರ
ಶಾಂತಿ ಸೌಹಾರ್ದತೆಯಿಂದ ಜೀವನ ಮಾಡಿಕೊಂಡು ಬಂದಿದ್ದಾರೆ. ಈ ಉದ್ದೇಶಿತ ಹೆಂಡದಂಗಡಿಯಿಂದ ಅಲ್ಲಿನ ವಾತಾವರಣ
ನೆಮ್ಮದಿ ಹಾಳಾಗಕೂಡದು. ನಮ್ಮ ಅನಿವಾರ್ಯತೆ ಅರ್ಥಮಾಡಿಕೊಂಡು ಸಂಬಂದಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು
ಸ್ಪಂದಿಸಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಮತ್ತು ಅಬಕಾರಿ ಕಚೇರಿ ಎದುರು ಟೆಂಟ್ ಹಾಕಿಕೊಂಡು ಬದುಕಬೇಕಾದ
ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ
ಯಾಹ್ಯ, ಅನಿಶಾ, ಮಮತಾಜ್, ನಿಶ್ಮಾ ಇದ್ದರು.
