ʼಹೆಂಡದಂಗಡಿಗೆ ಶಾಸಕ ಸ್ಥಾನ ಅಡ ಇಟ್ಟರುʼ

ಶಾಸಕ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹ
ಆಸ್ತಿ ಹಗರಣ ಕುರಿತಂತೆ 15 ದಿನಗಳಲ್ಲಿ ದಾಖಲೆ ಬಿಡುಗಡೆ
- ಕಿಮ್ಮನೆ


ಅರಣ್ಯ ಜಾಗದಲ್ಲಿ ಹೆಂಡದಂಗಡಿ ಆರಂಭಕ್ಕೆ ಆರಗ ಜ್ಞಾನೇಂದ್ರ ಶಾಸಕ ಸ್ಥಾನ ಅಡ ಇಟ್ಟಿದ್ದಾರೆ. ಅವರು ಕ್ಷೇತ್ರದ ಘನತೆ ಉಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿ ಕಿಮ್ಮನೆ ರತ್ನಾಕರ ಒತ್ತಾಯಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಾರ್ಯಕರ್ತರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಈಚೆಗೆ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಮುಂಭಾಗ ಹೆಂಡದಂಗಡಿಗಾಗಿ ಪ್ರತಿಭಟನೆ ನಡೆಸಿ ಶಾಸಕ ಸ್ಥಾನಕ್ಕೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅರಣ್ಯ ಜಾಗದಲ್ಲಿ ಹೆಂಡದಂಗಡಿ ಆರಂಭಕ್ಕೆ ಅವಕಾಶ ನೀಡಬಾರದು. ಈ ಸಂಬಂಧ ಸಾರ್ವಜನಿಕರು ನನಗೆ ಪತ್ರ ಬರೆದಿದ್ದು ಸರ್ಕಾರಕ್ಕೆ ಮರು ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಕುವೆಂಪು, ಶಾಂತವೇರಿ ಗೋಪಾಲಗೌಡ, ಯು.ಆರ್.ಅನಂತಮೂರ್ತಿ ಹುಟ್ಟಿದ ತೀರ್ಥಹಳ್ಳಿಯಲ್ಲಿ ಆರಗ ಶಾಸಕರಾಗಿದ್ದೇ ದುರಂತ. ಹೆಂಡದಂಗಡಿ ಬೇಕೆಂದು ಪ್ರತಿಭಟನೆ ನಡೆಸುವ ಶಾಸಕ ಸಮಾಜದಲ್ಲಿ ಕಾಣಲು ಸಾಧ್ಯವೇ ಇಲ್ಲ. ಆರಗ ಜ್ಞಾನೇಂದ್ರ ಆಸ್ತಿ, ಹಗರಣ ಕುರಿತಂತೆ 15 ದಿನದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ಹೆಂಡದಂಗಡಿ ಪಾಲುದಾರರಾಗಿ ಪಿಎಸ್‌ಐ ನೇಮಕಾತಿ ಹಣಗರಣದ ಪ್ರಮುಖ ಆರೋಪಿ. ಇಬ್ಬರು ಆಪ್ತ ಮುಖಂಡರು ಇದ್ದಾರೆ ಎಂದರು.

ಕ್ಷೇತ್ರದ ಸಮಸ್ಯೆ ಆಲಿಸುವ ಬದಲು ಕೇವಲ ನರೇಂದ್ರ ಮೋದಿ ಗುಣಗಾನ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಎರಡನೇ ಹಂತದ ನಾಯಕರನ್ನು ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟಿಲ್ಲ. ಇವರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಆರೋಪಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಅಭಿವೃದ್ಧಿ ಕೆಲಸ ಮಾಡಲು ಬಿಜೆಪಿ ಸದಸ್ಯರು ಬಿಡುತ್ತಿಲ್ಲ. ತುರ್ತಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿಸಲು ಹೊರಟರೆ ಬಿಜೆಪಿ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡುತ್ತಾರೆ. ಇಂತಹ ಕೆಟ್ಟ ರಾಜಕೀಯ ತಾಲ್ಲೂಕಿನಲ್ಲಿ ಸೃಷ್ಟಿಸಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್‌, ಸದಸ್ಯೆ ಸುಶೀಲ ಶೆಟ್ಟಿ, ಭೂ ನ್ಯಾಯಮಂಡಳಿ ಸದಸ್ಯ ಡಿ.ಎಸ್.ವಿಶ್ವನಾಥ ಶೆಟ್ಟಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post