ವಿಮೆ ಅರಿವು ಮೂಡಿಸುವಲ್ಲಿ ಎಲ್‌ಐಸಿ ಪ್ರತಿನಿಧಿಗಳ ಪಾತ್ರ ಹಿರಿದು

ಯಶಸ್ವಿಯಾಗಿ ನಡೆದ ಎಲ್‌ಐಸಿ ವಾರ್ಷಿಕ ಮಹಾಸಭೆ, ಅಭಿನಂದನೆ, ಸನ್ಮಾನ
ಸಿಕ್ಸ್‌ ಪಿಲ್ಲರ್‌ ಗುರಿ ತಲುಪಿ ದೇಶದ ಗಮನ ಸೆಳೆದ ತೀರ್ಥಹಳ್ಳಿ-ಹೊಸನಗರ ವಿಮಾ ಶಾಖೆ

ಭಾರತೀಯ ಜೀವವಿಮಾ ನಿಗಮ ಇಡೀ ಜಗತ್ತಿನಲ್ಲಿಯೆ ಅತ್ಯಂತ ವಿಶ್ವಾಸ ಪಾತ್ರ ವಿಮಾ ಸಂಸ್ಥೆಯಾಗಿದೆ. ಭಾರತೀಯರಲ್ಲಿ ವಿಮಾ ಪ್ರಜ್ಞೆ ಮೂಡಿಸುವಲ್ಲಿ ಅದರ ಪ್ರತಿನಿಧಿಗಳ ಪಾತ್ರ ಅದ್ವಿತೀಯ. ಎಲ್ಲಾ ಪ್ರತಿನಿಧಿಗಳು ಮತ್ತು ಸಲಹೆಗಾರರು ಈ ಸಂಸ್ಥೆಯ ವಿಶ್ವಸಾರ್ಹತೆ ಆದಾರದ ಮೇಲೆ ಜನತೆಯಲ್ಲಿ ಇನ್ನಷ್ಟು ಉಳಿತಾಯ ಪ್ರಜ್ಞೆಯನ್ನು ಅವರ ಸುರಕ್ಷಿತ ಭವಿಷ್ಯದ ಹಿತದೃಷ್ಟಿಯಿಂದ ಬೆಳೆಸಬೇಕಾಗಿದೆ ಎಂದು ತೀರ್ಥಹಳ್ಳಿ-ಹೊಸನಗರ ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕೊರಕೋಟೆ ಶ್ರೀನಿವಾಸ್‌ ಹೇಳಿದ್ದಾರೆ.

ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ 2023-24ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ, ಸನ್ಮಾನ ಹಾಗೂ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ನಿಗಮ ನೀಡಿರುವ ಸೆವೆನ್‌ ಪಿಲ್ಲರ್‌ ಗುರಿಯಲ್ಲಿ ಸಿಕ್ಸ್‌ ಪಿಲ್ಲರ್‌ ಗುರಿಯನ್ನು ತೀರ್ಥಹಳ್ಳಿ-ಹೊಸನಗರ ಶಾಖೆ ತಲುಪಿರುವುದು ಅಮೋಘ ಸಾಧನೆಯಾಗಿದೆ. ಇಡೀ ದೇಶದಲ್ಲಿ 5 ರಿಂ 6 ಶಾಖೆಗಳು ಮಾತ್ರ ಸಿಕ್ಸ್‌ ಪಿಲ್ಲರ್‌ ಗುರಿ ತಲುಪಿದ ಸಾಧನೆ ಮಾಡಿದೆ. ಈ ಅದ್ವಿತೀಯ ಸಾಧನೆಗೆ 2023-24ನೇ ಸಾಲಿನ ಹಿರಿಯ ಶಾಖಾಧಿಕಾರಿ ಆರ್.ಡಿ. ಯೋಗೇಂದ್ರ ಮತ್ತು ಹಾಲಿ ಶಾಖಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಂತ ನಾರಾಯಣ ಮಾರ್ಗದರ್ಶನ ಮತ್ತು ತೀರ್ಥಹಳ್ಳಿ ಹಾಗೂ ಹೊಸನಗರ ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘದ ಪರಿಶ್ರಮ ಪ್ರಮುಖ ಕಾರಣ ಎಂದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶ್ರೀಪತಿ ಹಳಗುಂದ, ಸಾರ್ವಜನಿಕರಲ್ಲಿ ವಿಮೆಯ ಮೂಲಕ ಸುರಕ್ಷಿತ ಉಳಿತಾಯದ ಪ್ರವೃತ್ತಿ ಬೆಳೆಸಲು ಪ್ರತಿನಿಧಿಗಳ ಪಾತ್ರ ದೊಡ್ಡದು ಅವರ ನಿರಂತರ ಸೇವೆ ಗ್ರಾಹಕರು ಮತ್ತು ಭಾರತೀಯ ಜೀವವಿಮಾ ನಿಗಮದ ಅಸಾಧಾರಣ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಭಾರತದಲ್ಲೇ ಜೀವವಿಮೆ ಎಂದರೆ ಪರ್ಯಾಯ ಹೆಸರೇ ಭಾರತೀಯ ಜೀವವಿಮಾ ನಿಗಮ ಎಂಬಂತಾಗಿರುವುದು ಅದರ ವಿಶ್ವಾಸಾರ್ಹತೆಗೆ ಜನತೆ ಇಟ್ಟಿರುವ ನಂಬಿಕೆ ಪ್ರಮುಖ ಕಾರಣ ಎಂದರು.

ಕಾರ್ಯಕ್ರಮವನ್ನು ದಕ್ಷಿಣ ಮಧ್ಯವಲಯ ಪೂರ್ವ ಉಪಾಧ್ಯಕ್ಷರಾದ ಕೇಶವಮೂರ್ತಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಟಿ.ಮಂಜುನಾಥ ಜಯಪುರ, ಸಂಘದ ಗೌರವಾಧ್ಯಕ್ಷ ಬಿ.ಕೆ.ವಾದಿರಾಜ್‌, ಶಿವಮೊಗ್ಗ ಲಿಯಾಫಿ ವಿಭಾಗದ ಉಪಾಧ್ಯಕ್ಷ ಮುದ್ದಣ್ಣ ಶೆಟ್ಟಿ, ಉಪಾಧ್ಯಕ್ಷ ಶಿವಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಟಿ.ಚಂದ್ರಶೇಖರ್‌, ಮಾಜಿ ಅಧ್ಯಕ್ಷರುಗಳಾದ ಮಂಜುನಾಥ ಕಾಮತ್‌, ಕೆಸರೆ ಸುಬ್ರಹ್ಮಣ್ಯ, ಮಳಲಿಮಕ್ಕಿ ದಿವಾಕರ್‌, ಕೋಶಾಧಿಕಾರಿ ರಾಘವೇಂದ್ರ ಅಂಬುತೀರ್ಥ, ಉಪಾಧ್ಯಕ್ಷರುಗಳಾದ ಗಾಯತ್ರಿ, ಷಣ್ಮುಖಪ್ಪ, ಅಂಬಳಿಕೆ ಗಿರೀಶ್‌, ಶಕುಂತಲ, ಎಂ.ಕೃಷ್ಣಮೂರ್ತಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪ್ರತಿನಿಧಿಗಳಾದ ಹೊಸನಗರ ಸತ್ಯನಾರಾಣ, ತೀರ್ಥಹಳ್ಳಿ ಪರಮೇಶ್ವರ್‌, ರಮೇಶ್‌ ಹೊಸನಗರ ಇವರನ್ನು ಗೌರವಿಸಲಾಯಿತು.

2024ರಲ್ಲಿ ತೀರ್ಥಹಳ್ಳಿ ಮತ್ತು ಹೊಸನಗರ ಎಂಡಿಆರ್‌ಟಿ ಪ್ರತಿನಿಧಿಗಳಿಗೆ ಮತ್ತು ನೂತನವಾಗಿ ಆಯ್ಕೆಯಾದ ತೀರ್ಥಹಳ್ಳಿ ಹೊಸನಗರ ಶಾಖೆ ಸದಸ್ಯರುಗಳನ್ನು ಗೌರವಿಸಲಾಯಿತು. ರಾಘವೇಂದ್ರ ಪವಾರ್‌ ಜಂಬೆ, ಕೋಣಂದೂರು ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಟಿ.ಚಂದ್ರಶೇಖರ್‌ ಸ್ವಾಗತಕೋರಿದರು. ಹೆಚ್.ಸಿ. ದಿವಾಕರ್‌ ವಂದಿಸಿದರು.

ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಗಮನ ಸೆಳೆದ ಕೊರಕೋಟೆ ಶ್ರೀನಿವಾಸ್

ಇಡೀ ಕಾರ್ಯಕ್ರಮ ತೀರ್ಥಹಳ್ಳಿ ಹಾಗೂ ಹೊಸನಗರ ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕೊರಕೋಟೆ ಶ್ರೀನಿವಾಸ್‌ ಅವರ ಅಧ್ಯಕ್ಷತೆಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದು ಹಿರಿಯ ಶಾಖಾಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು. ವಿಮಾ ವ್ಯವಹಾರದಲ್ಲಿ ಸೆವೆನ್‌ ಪಿಲ್ಲರ್‌ ಎನ್ನುವುದು ಕೇಂದ್ರ ಕಚೇರಿ ನೀಡುವ ಪ್ರಮುಖ ಗುರಿಯಾಗಿರುತ್ತದೆ. ಸಾಧಾರಣವಾಗಿ ಒಂದು ಅಥವಾ ಎರಡು ಪಿಲ್ಲರ್‌ ಸಾಧನೆ ಮಾಡುವುದು ಕಷ್ಟ ಎನ್ನುವಂತಹ ಸಂದರ್ಭದಲ್ಲಿ ಹೊಸನಗರ ಮತ್ತು ತೀರ್ಥಹಳ್ಳಿ ಶಾಖೆ ಸಿಕ್ಸ್‌ ಪಿಲ್ಲರ್‌ ಗುರಿ ತಲುಪಿರುವುದು ಅಸಾಧಾರಣ ಸಾಧನೆ. ಮತ್ತು ಇಡೀ ದೇಶದಲ್ಲಿ ಈ ರೀತಿಯ ಸಾಧನೆಯನ್ನು 5-6 ಶಾಖೆ ಮಾತ್ರ ಮಾಡಿವೆ ಎನ್ನುವ ಮಾಹಿತಿ ಇದೆ. ಆ ಸಂದರ್ಭದಲ್ಲಿ ಶ್ರೀನಿವಾಸ್‌ ಅಧ್ಯಕ್ಷರಾಗಿರುವುದು ಅವರಿಗೆ ಸ್ಮರಣೀಯ ನೆನಪಾಗಿ ಉಳಿಯಲಿದೆ. ಇದಕ್ಕೆ ಎಲ್ಲಾ ಪ್ರತಿನಿಧಿಗಳ ಪ್ರಾಮಾಣಿಕ ಸಾಧನೆ ಕಾರಣ ಎನ್ನುವುದು ಅವರ ವಿನಯದ ಮಾತು. ಮೂಲತಃ ತೀರ್ಥಹಳ್ಳಿ ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ ದಶಕದ ಹಿಂದೆ ಸಾರ್ವಜನಿಕ ಜೀವನ ಪ್ರವೇಶಿಸಿದ ಕೊರಕೋಟೆ ಶ್ರೀನಿವಾಸ್‌ ತಾಲ್ಲೂಕಿನ ವಿಶ್ವಸನೀಯ ಯುವ ನಾಯಕರಲ್ಲಿ ಒಬ್ಬರೆಂಬ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಯುವಜನ ಒಕ್ಕೂಟದ ಅಧ್ಯಕ್ಷರಾಗಿದ್ದಾಗ ಅವರು ಯುವಜನ ಮೇಳಗಳನ್ನು ವೈಭವಪೂರ್ಣವಾಗಿ ಸಂಘಟಿಸುತ್ತಿದ್ದ ರೀತಿ ಮತ್ತು ಸ್ಪರ್ಧಾಳು ಸಂಖ್ಯೆ ಹೆಚ್ಚಿಸಲು ಕಲಾವಿದರಿಂದ ಸ್ಥಳಕ್ಕೆ ತೆರಳಿ ಅವರ ಮನವೊಲಿಸಿ ಸ್ಪರ್ಧೆಗೆ ಕರೆತರುತ್ತಿದ್ದ ಕಾರಣ ಅವರ ಅವಧಿಯಲ್ಲಿ ನಡೆದ ಯುವಜನ ಮೇಳಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದವು ಅಲ್ಲದೇ ಅನೇಕ ಉದಯೋನ್ಮುಖ ಕಲಾವಿದರು ಪ್ರಶಸ್ತಿ ಪಡೆದು ಹೆಸರು ಮಾಡಿದ್ದರು. ಇದಲ್ಲದೇ ಎರಡು ಬಾರಿ ಮುಳುಬಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾಗಿ ಕೂಡ ಶ್ರೀನಿವಾಸ್‌ ಅಪಾರ ಸಾರ್ವಜನಿಕ ಕಾಳಜಿ ಮತ್ತು ನಿಖರ ಅಂಕಿ ಅಂಶ ಮಂಡನೆ ಮೂಲಕ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಹಿರಿಯ ರಾಜಕಾರಣಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದಲ್ಲದೇ ಪ್ರಸಿದ್ಧ ಶ್ರೀ ಸೀತೂರು ವನದುರ್ಗಾ ದೇವಸ್ಥಾನದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಅವರು ಕಳೆದ 15 ವರ್ಷದಿಂದ ನಿಷ್ಕಳಂಕವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಈ ಕಾರ್ಯ ನಿರ್ವಹಣೆ ಹಿಂದೆ ಹಿರಿಯರಾದ ಬಿ.ಕೆ.ವಾದಿರಾಜ್‌, ಕೋಣಂದೂರು ಕೇಶವಮೂರ್ತಿ, ಟಿ.ಮಂಜುನಾಥ, ರಿಪ್ಪನಪೇಟೆ ಮಂಜುನಾಥ ಕಾಮತ್‌, ಕೆ.ಎನ್.ಸುಬ್ರಹ್ಮಣ್ಯ, ಮುದ್ದಣ್ಣ ಶೆಟ್ಟಿ, ಜಿ.ಆರ್.ಶಿವಪ್ಪ ಗೌಡ, ಹೆಚ್.ಸಿ.ದಿವಾಕರ್‌, ಎಲ್ಲಾ ಮಹಿಳಾ ಪ್ರತಿನಿಧಿಗಳು, ಗ್ರಾಹಕರು ಸಿಬ್ಬಂದಿ ವರ್ಗದವರ ಪ್ರೋತ್ಸಾಹ ಮಾರ್ಗದರ್ಶನ ಇದೆ ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post