ಆರೋಪ-ಪ್ರತ್ಯಾರೋಪಗಳ ನಡುವೆ ಅಡಿಕೆ ಬಣ್ಣ ಬಯಲು
ವಿವಾದದ ಕೇಂದ್ರ ಬಿಂದುವಾದ ಮ್ಯಾಮ್ಕೋಸ್
|
ಸಾಂದರ್ಭಿಕ ಚಿತ್ರ
|
ಮ್ಯಾಮ್ಕೋಸ್ ಕಾರ್ಯನಿರ್ವಹಣೆ
ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಅಮ್ರಪಾಲಿ ಸುರೇಶ್ ಟೀಕಾಪ್ರಹಾರ ಮಾಡುತ್ತಿದ್ದಂತೆಯೇ
ಮ್ಯಾಮ್ಕೋಸ್ ಸಾರ್ವಜನಿಕ ವಲಯದಲ್ಲಿ ಮುಖ್ಯವಾಗಿ ಅಡಿಕೆ ಬೆಳೆಗಾರರ ನಡುವೆ ಚರ್ಚೆಯ ವಸ್ತುವಾಗತೊಡಗಿದೆ.
ಮ್ಯಾಮ್ಕೋಸ್‌ನಲ್ಲಿ ಕಳಪೆ ಅಡಿಕೆ ದಂಧೆಯ ಸ್ವರೂಪ ಪಡೆದಿದ್ದು ಅದೇ ಕಾರಣಕ್ಕೆ ಪ್ರಮುಖ ಖರೀದಿದಾರರಾದ
ಉತ್ತರ ಭಾರತದ ಗುಟ್ಕಾ, ಪಾನ್ ಮಸಾಲ ಉದ್ಯಮಿದಾರರು ಹಿಂದಿರುಗಿಸಿದ್ದಾರೆ. ಹಾಗಾಗಿ ಶಿವಮೊಗ್ಗ ಅಡಿಕೆ
ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ ಎಂದು ಅಮ್ರಪಾಲಿ ಹೇಳಿದರುವುದಲ್ಲದೇ ಅಡಿಕೆ ತೂಕದಲ್ಲಿ ವ್ಯತ್ಯಾಸ
ಮತ್ತು ಬೆಳೆಗಾರರಿಗೆ ನಿಜವಾದ ದರ ಕೂಡ ದೊರಕುತ್ತಿಲ್ಲ ಎಂದಿದ್ದರು. ಪ್ರತಿಯಾಗಿ ಮ್ಯಾಮ್ಕೋಸ್ ಉಪಾಧ್ಯಕ್ಷ
ಹುಲ್ಕುಳಿ ಮಹೇಶ್ ಮ್ಯಾಮ್ಕೋಸ್ ಮೇಲಿನ ಆರೋಪ ಅಲ್ಲಗಳೆದು ವರ್ಷದಿಂದ ಪ್ರತಿವರ್ಷವೂ ಮ್ಯಾಮ್ಕೋಸ್
ಅಡಿಕೆ ವಹಿವಾಟು ಏರುಗತಿಯಲ್ಲಿದೆ. ಅಲ್ಲದೇ ರೈತರಿಗೆ ಸ್ಥಿರವಾಗಿ ಉತ್ತಮ ಧಾರಣೆ ದೊರಕುತ್ತಿದೆ ಎಂದು
ಅಂಕಿ ಅಂಶಗಳನ್ನು ನೀಡಿದ್ದರು ಮತ್ತು ಅಮ್ರಪಾಲಿ ಸುರೇಶ್ ಆರೋಪವನ್ನು ದಾಖಲೆ ಸಹಿತ ರುಜುವಾತುಪಡಿಸುವಂತೆ
ಸವಾಲು ಹಾಕಿದ್ದರು. ಒಂದು ಹಂತದ ಸವಾಲು ಪ್ರತಿಸವಾಲು ಮುಗಿಯುತ್ತಿದಂತೆಯೇ ಬಿಜೆಪಿ ಯುವ ಮುಖಂಡ ಮತ್ತು
ಪಟ್ಟಣ ಪಂಚಾಯಿತಿ ಸದಸ್ಯ ಬೆಟ್ಟಮಕ್ಕಿ ನವೀನ್ (ಯತಿರಾಜ್) ಮ್ಯಾಮ್ಕೋಸ್ ವಿರುದ್ಧ ನೇರವಾಗಿ ಪತ್ರಿಕಾ
ಹೇಳಿಕೆ ನೀಡಿದ್ದು ದರ ನಿಗದಿಯಲ್ಲಿ ಮ್ಯಾಮ್ಕೋಸ್‌ನಲ್ಲಿ ಪಕ್ಷಪಾತ ನಡೆಸುತ್ತಿದೆ. 50 ಸಾವಿರ ರೂಪಾಯಿ
ರಾಶಿ ಇಡಿಗೆ 35 ಸಾವಿರ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರೆಡ್ ಆಕ್ಸೈಡ್
ಅಡಿಕೆ ದಂಧೆಗೆ ಹೊಣೆ ಯಾರು ?
ಇದೆಲ್ಲದರ ನಡುವೆ
ಷೇರುದಾರರ ಸಂಸ್ಥೆಯಾಗಿರುವ ಮ್ಯಾಮ್ಕೋಸ್‌ನಲ್ಲಿ ಉತ್ತರದಾಯಿತ್ವ ಇಲ್ಲ. ಹಿಂದಿರುಗಿಸಲಾಗುತ್ತಿರುವ
ಅಡಿಕೆಗೆ ಬಿಲ್ ಅಥವಾ ಕಾರಣ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಒಂದೇ ಗುಂಪಿನ ಆಡಳಿತ
ನಡೆಯುತಿದ್ದು ಷೇರುದಾರ ಅಡಿಕೆ ಬೆಳೆಗಾರರ ಹಿತ ಕಾಯುವಲ್ಲಿ ಮ್ಯಾಮ್ಕೋಸ್ ವಿಫಲವಾಗುತ್ತಿದೆ ಎಂಬ ಪ್ರಬಲ
ಅಭಿಪ್ರಾಯ ವ್ಯಕ್ತವಾಗತೊಡಗಿದೆ. ಮುಖ್ಯವಾಗಿ ಕಳೆದ ಬಾರಿ ಧಾರಾಳ ಪ್ರಮಾಣದಲ್ಲಿ ರೆಡ್ ಆಕ್ಸೈಡ್
ಅಥವಾ ಹಣ್ಣು ಗೋಟಿಗೆ ಬಣ್ಣ ಬಳಿದ ಅಡಿಕೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಗೆ ಬಂದಿತ್ತು.
ಇದು ಅಡಿಕೆ ಬೆಳೆಗಾರರಿಗಿಂತಲೂ ಮಾರಾಟ ಮಾಡುವವರ ಕಿತಾಪತಿಯಾಗಿದ್ದು ಅದನ್ನು ಸಮರ್ಪಕವಾಗಿ ಪತ್ತೆ
ಹಚ್ಚದೆ ಕೈಚೆಲ್ಲಲಾಗಿದೆ ಎಂಬ ಆರೋಪ ರೈತರಿಂದ ಕೇಳಿ ಬಂದಿದೆ. ಅಲ್ಲದೇ ತೀರ್ಥಹಳ್ಳಿಯ ಪ್ರಮುಖ ಮಾರಾಟಗಾರರೇ
ಇದರ ಹಿಂದೆ ಇದ್ದಾರೆ ಎಂಬ ಅಭಿಪ್ರಾಯವು ಹರಿದಾಡುತ್ತಿದೆ. ಇದರ ಜೊತೆಗೆ ಶಿರಸಿಯಲ್ಲಿ ಕೆಲವು ಸಮಯದ
ಹಿಂದೆ ತೀರ್ಥಹಳ್ಳಿಯ ಇಬ್ಬರು ಪ್ರಮುಖರಾದ ದೊಡ್ಡ ಮಟ್ಟದ ಅಡಿಕೆ ವರ್ತಕರ ರೆಡ್ ಆಕ್ಸೈಡ್ ಮಿಕ್ಸ್
ಮಾಡಿದ ಅಡಿಕೆ ಲಾರಿಗಳು ಸೀಸ್ ಆಗಿದ್ದು ಸುದ್ದಿಯಾಗಲಿಲ್ಲ. ಅದರ ಹಿಂದೆ ಇದ್ದವರು ಯಾರೆಂಬ ಚರ್ಚೆ
ನಡೆಯುತ್ತಿರುವ ನಡುವೆ ಕೋಣಂದೂರಿನ ವ್ಯಾಪಾರಿಯೊಬ್ಬರು, ಅಡಿಕೆ ವ್ಯಾಪಾರ ಮಾಡುವ ತೀರ್ಥಹಳ್ಳಿಯ ಪಟ್ಟಣದ ಪ್ರಮುಖ ಯುವ ರಾಜಕಾರಣಿ ಮೇಲೆ ಗುಮಾನಿ ಹರಿದಾಡುತ್ತಿದೆ.
ಅಡಿಕೆ ಬೆಳೆಗಾರರ
ಪಾಲಿನ ದೊಡ್ಡ ಧ್ವನಿಯಾಗಬೇಕಿದ್ದ ಮ್ಯಾಮ್ಕೋಸ್ ಹಾಗಾಗದೇ ಒಂದು ಪಕ್ಷ, ಸಿದ್ಧಾಂತದ ಗುಂಪಾಗಲು ಅದರ
ಚುನಾವಣಾ ಪ್ರಕ್ರಿಯೆಯೇ ಕಾರಣ ಎಂದು ಪ್ರಮುಖ ಅಡಿಕೆ ಬೆಳೆಗಾರ ಮತ್ತು ಸಹಕಾರಿ ಮುಖಂಡ ಕಡ್ತೂರು ದಿನೇಶ್
ಅಭಿಪ್ರಾಯಪಟ್ಟಿದ್ದಾರೆ. ಮ್ಯಾಮ್ಕೋಸ್‌ನಲ್ಲಿ 19 ನಿರ್ದೇಶಕ ಸ್ಥಾನಗಳಿದ್ದು ಚುನಾವಣೆಯ ಕ್ಷೇತ್ರ
ವಿಂಗಡಣೆಯಾಗಿಲ್ಲ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 31 ಸಾವಿರ ಷೇರುದಾರರಿದ್ದು
ಕ್ಷೇತ್ರವಾರು ಚುನಾವಣೆ ನಡೆಯುತ್ತಿಲ್ಲ. ಹಾಲು ಉತ್ಪಾದಕರ ಒಕ್ಕೂಟ, ಶಿವಮೊಗ್ಗ ಡಿಸಿಸಿ ಬ್ಯಾಂಕ್,
ಪಿಎಲ್‌ಡಿ ಬ್ಯಾಂಕ್ ಹೀಗೆ ಬಹುತೇಕ ಎಲ್ಲಾ ಕಡೆ ಈಗ ಕ್ಷೇತ್ರವಾರು ಚುನಾವಣೆ ನಡೆಯುವುದು ಸಾಮಾನ್ಯವಾಗಿದೆ.
ಆದರೆ ಕ್ಷೇತ್ರವಾರು ಚುನಾವಣೆಗೆ ಒಪ್ಪದ ಮ್ಯಾಮ್ಕೋಸ್ ಹಳೆಯ ವಿಧಾನವನ್ನೇ ಮುಂದುವರಿಸಿಕೊಂಡು ಹೋಗಲು
ಪಟ್ಟು ಹಿಡಿದಂತೆ ಕಾಣುತ್ತಿದೆ. ಇದರಿಂದ ಮ್ಯಾಮ್ಕೋಸ್ ಅಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುವ
ಒಂದು ಜಿಲ್ಲೆಯ ಅಭ್ಯರ್ಥಿಗಳಿಗೆ ಮತ್ತೊಂದು ಜಿಲ್ಲೆಯ ಷೇರುದಾರ ಸದಸ್ಯರು ಪರಿಚಯ ಇಲ್ಲದೇ ಪಕ್ಷದ ಕಾರಣಕ್ಕೆ
ಮತ ನೀಡುವ ಅನಿವಾರ್ಯ ಸೃಷ್ಟಿಯಾಗಿದೆ. ಇಲ್ಲಿ ಕೇವಲ ಪಕ್ಷ ಮತ್ತು ಸಿದ್ಧಾಂತದ ಪ್ರಚಾರದ ಆಧಾರದ ಮೇಲೆ
ಚುನಾವಣೆ ನಡೆಯುತ್ತಿದೆ. ಇದು ತೊಲಗದ ಹೊರತು ಮ್ಯಾಮ್ಕೋಸ್ ಉತ್ತರದಾಯಿತ್ವ ಅಳವಡಿಸಿಕೊಳ್ಳುವುದು
ಅನುಮಾನ ಎನ್ನುತ್ತಾರೆ ದಿನೇಶ್. ಮೊದಲು ಮತ ನೀಡಲು ಕೂಡ ಶಿವಮೊಗ್ಗದ ಕೇಂದ್ರ ಸ್ಥಾನಕ್ಕೆ ತೆರಳಬೇಕಾದ
ಪರಿಸ್ಥಿತಿ ಇತ್ತು. 2013ರಲ್ಲಿ ಕಿಮ್ಮನೆ ರತ್ನಾಕರ್ ಸಚಿವರಾದ ಬಳಿಕ ಅದನ್ನು ಸರಿಪಡಿಸಿ ಎಲ್ಲಾ
ತಾಲ್ಲೂಕು ಕೇಂದ್ರದಲ್ಲಿ ಮತ ನೀಡುವ ವ್ಯವಸ್ಥೆ ರೂಪಿಸಲಾಯಿತು. ಅದೇ ರೀತಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಕ್ಷೇತ್ರವಾರು ಸ್ಥಾನ ನಿಗದಿಪಡಿಸಬೇಕು ಎಂಬುದು ದಿನೇಶ್ ಅವರ ಅಭಿಪ್ರಾಯವಾಗಿದೆ.