ಆಗುಂಬೆ-ಬಿದರಗೋಡು ಗ್ರಾಮಸ್ಥರ ನಿರಂತರ ಬೇಡಿಕೆಗೆ ಸಿಗಲಿಲ್ಲ ಮನ್ನಣೆ
ಕಾಡಾನೆ ಬಿಟ್ಟು ಗ್ರಾಮಸ್ಥರ ಒಕ್ಕಲೆಬ್ಬಿಸುವ ಆತಂಕ
ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮಕ್ಕೆ ಮಂಗಳವಾರ ಕಾಡಾನೆ ನುಗ್ಗಿದ್ದು ರೈತರು ಬೆಳೆದ ಬಹುಪಾಲು ಭತ್ತದ ಗದ್ದೆಗಳನ್ನು ಹುಡಿಮಾಡಿದೆ.
ವರ್ಷದ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಆನೆಯ ಅವಾಂತರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಅನೇಕ ವರ್ಷಗಳಿಂದ ಕಾಡಾನೆ ಸಾಗಾಣೆ ಮಾಡಬೇಕೆಂಬ ಬೇಡಿಕೆ ಸಲ್ಲಿಸುತ್ತಿದ್ದರು ಯಾವುದೇ ಆಡಳಿತ ಪಕ್ಷವಾಗಲಿ, ಶಾಸಕರಾಗಲಿ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸೋಮೇಶ್ವರ ಅಭಯಾರಣ್ಯ ಪ್ರದೇಶದಲ್ಲಿ ಹಿಂದೆಂದೂ ಕಾಡಾನೆ ವಾಸವಾಗಿದ್ದ ಉದಾಹರಣೆಗಳು ಇರಲಿಲ್ಲ. ಸುತ್ತಮುತ್ತಲ ಪ್ರದೇಶದ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿ, ಬೃಹತ್ ಯೋಜನೆ ಕಾರಣದಿಂದ ದಾರಿ ತಪ್ಪಿ ಆಗುಂಬೆ ಕಾಡಿಗೆ ನುಗ್ಗುತ್ತಿದೆ. ಆನೆ ಹೆಜ್ಜೆಗುರುತು ಇಲ್ಲದ ಕಾಡಿನಲ್ಲಿ ಕಾರಿಡಾರ್ ಮಾಡಲು ಸಂಚು ರೂಪಿಸುತ್ತಿದೆ. ಆನೆಯನ್ನು ಗ್ರಾಮಕ್ಕೆ ಬಿಟ್ಟು ಜನರ ಜೀವನ ಮಾಡದ ಸ್ಥಿತಿಯನ್ನು ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಹೀಗೆ ಮುಂದುವರೆಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬೇಕು ಎಂಬ ಪಿತೂರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.