ಮಹಾಬಲೇಶ್ವರ ಹೆಗಡೆ ಸಾರಥ್ಯದಲ್ಲಿ ರಾಜ್ಯದ ಗಮನ ಸೆಳೆದ ಶಿಕ್ಷಕರ ಸೌಹಾರ್ದ ಸಹಕಾರಿ

800 ಕೋಟಿಗೂ ಮಿಕ್ಕಿದ ವಹಿವಾಟು, 106 ಕೋಟಿಗೂ ಸಾಲ ವಿತರಣೆ
16 ಕೋಟಿ ವೆಚ್ಚದ ಶಿಕ್ಷಕರ ಸೌಹಾರ್ದ ಭವನ ಲೋಕಾರ್ಪಣೆ
ಶಿಕ್ಷಕರಿಗಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಚಿಂತನೆ

ರಾಜ್ಯದ ಅತ್ಯಂತ ಸಮರ್ಥ ಸಹಕಾರಿಗಳಲ್ಲಿ ಒಬ್ಬರಾದ ಮಹಾಬಲೇಶ್ವರ ಹೆಗಡೆ ಅವರ ನೇತೃತ್ವದ ಕರ್ನಾಟಕ ರಾಜ್ಯ ಪ್ರಾಥಮಿಕ ಸಹಕಾರಿ ನಿಯಮಿತ ವಿನೂತನ ಆಲೋಚನೆ ಮೂಲಕ ರಾಜ್ಯದ ಸಹಕಾರಿ ವಲಯದ ಗಮನ ಸೆಳೆಯುತ್ತಿದೆ. 2008ರಲ್ಲಿ ಆರಂಭಗೊಂಡು 2015ರಲ್ಲಿ ಸೌಹಾರ್ದ ಸಹಕಾರಿಯಾಗಿ ಬದಲಾವಣೆಗೊಂಡ ಈ ಸಹಕಾರಿ ಈಗ ಹೆಮ್ಮರವಾಗಿ ಬೆಳೆದಿದೆ. ಕೇವಲ 450 ಷೇರುದಾರ ಸದಸ್ಯರೊಂದಿಗೆ ಆರಂಭಗೊಂಡ ಸಂಸ್ಥೆ ಈಗ 7500 ಸಾವಿರ ಸದಸ್ಯರನ್ನು ಹೊಂದಿದ್ದು 10 ಕೋಟಿ 23 ಲಕ್ಷ ಷೇರು ಬಂಡವಾಳ 114 ಕೋಟಿ 43 ಲಕ್ಷ ಠೇವಣಿ, ಒಟ್ಟಾರೆ 143 ಕೋಟಿ ದುಡಿಯುವ ಬಂಡವಾಳ ಹಾಗೂ ವಾರ್ಷಿಕ 800 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸುತ್ತಿದೆ. 15 ವರ್ಷಗಳಲ್ಲಿ 1 ಕೋಟಿ 38 ಲಕ್ಷ 46 ಸಾವಿರ 374 ರೂಪಾಯಿ ಲಾಭಗಳಿಸಿದೆ. ಇಲ್ಲಿಯವರೆಗೆ 2389 ಸದಸ್ಯರಿಗೆ 106 ಕೋಟಿ 65 ಲಕ್ಷ ಸಾಲ ನೀಡಿದೆ.

ವೃತ್ತಿಯಲ್ಲಿ ಈಗಲೂ ಶಿಕ್ಷಕರಾಗಿರುವ ಮಹಾಬಲೇಶ್ವರ ಹೆಗಡೆ ತಮ್ಮ ವೃತ್ತಿಯ ಜೊತೆಗೆ ಉಳಿದ ಅಲ್ಪಾವಧಿಯಲ್ಲಿಯೇ ತಮ್ಮ ಸಮಾನ ಮನಸ್ಕ ಆಡಳಿತ ಮಂಡಳಿಯವರೊಂದಿಗೆ ಸೇರಿಕೊಂಡು ಅವಿರತವಾಗಿ ಪರಿಶ್ರಮ ಪಟ್ಟ ಫಲವೇ ಈ ಅಗಾಧ ಬೆಳವಣಿಗೆ. ಕೇವಲ ಲಾಭವನ್ನಷ್ಟೇ ನೋಡದೆ ತನ್ನ ಷೇರುದಾರ ಸದಸ್ಯರಿಗೆ 12 ಲಕ್ಷ ರೂಪಾಯಿ ವರೆಗೆ ಸಾಲ ನೀಡುತ್ತಿರುವ ಸಂಘ ಅಪತ್ಕಾಲಕ್ಕೆ ಅಗತ್ಯ ಬಿದ್ದಾಗ ಕೇವಲ ಫೋನ್‌ ಕಾಲ್‌ ಮೂಲಕವೇ 25,000 ರೂಪಾಯಿ ತುರ್ತು ನಿಧಿಯನ್ನು ನೀಡುತ್ತಿದೆ. ಇದಲ್ಲದೇ ಅನಗತ್ಯ ಸಮಯ ವ್ಯರ್ಥವಾಗದಂತೆ ಸಾಲದ ಅವಶ್ಯಕತೆ ಇದ್ದಾಗ ಫೋನ್‌ ಮೂಲಕವೇ ಎಲ್ಲಾ ಕಾಗದ ಪತ್ರಗಳನ್ನು ತಯಾರಿ ಮಾಡಿಕೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಬಹುತೇಕ ರಾಜ್ಯದಲ್ಲಿಯೇ ಮೊದಲ ಬಾರಿ ಗೃಹಪಯೋಗಿ ಮಾಲ್‌ ಒಂದನ್ನು ಸ್ಥಾಪಿಸಿದ ಕೀರ್ತಿಯುಳ್ಳು ಈ ಸಂಘ ಅಲ್ಲಿ 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಹೆಗ್ಗಳಿಕೆ ಹೊಂದಿದ್ದು ಒಟ್ಟಾರೆ 9 ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ಅವರ ಕುಟುಂಬಗಳಿಗೆ ಆರ್ಥಿಕ ಸ್ಥಿರತೆ ತಂದಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಸಹಕಾರಿ ತೀರ್ಥಹಳ್ಳಿಯ ಕುವೆಂಪು ನಗರದಲ್ಲಿ ಸ್ವಂತ ನಿವೇಶನದಲ್ಲಿ 16 ಕೋಟಿಯ ಭವ್ಯ ಕಟ್ಟಡವನ್ನು ನಿರ್ಮಿಸಿ ಉದ್ಘಾಟಿಸುತ್ತಿದೆ. ಈ ಕಟ್ಟಡದಲ್ಲಿ ಸಹಕಾರಿಯ ಪ್ರಧಾನ ಕಚೇರಿ, 30 ಬಾಡಿಗೆ ಮನೆಗಳು, 300 ಜನ ಕುಳಿತುಕೊಳ್ಳಬಹುದಾದ ಅತ್ಯಾಧುನಿಕ ವ್ಯವಸ್ಥೆಯ ಸಭಾಂಗಣ, ಹೋಟೆಲ್‌ ಹೀಗೆ ಎಲ್ಲವನ್ನು ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಿದೆ.

ಸಹಕಾರಿಯಿಂದ ಈಗಾಗಲೇ ಸಂಜೀವಿನಿ ಚೀಟಿನಿಧಿಯನ್ನು ಆರಂಭಿಸಲಾಗಿದ್ದು 1 ಲಕ್ಷದಿಂದ 4 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ. ಅಲ್ಲದೇ ಮಾರಣಾಂತಿಕ ಕಾಯಿಲೆಗೆ ಒಳಪಟ್ಟ ಷೇರುದಾರರು ಮತ್ತು ಮರಣ ಹೊಂದಿದರೆ ಇಲ್ಲಿಯವರೆಗೆ 3000 ನೀಡಲಾಗುತ್ತಿದ್ದು ಅದನ್ನು 5000ಕ್ಕೆ ಹೆಚ್ಚಿಸಲು ಅಲೋಚಿಸಲಾಗಿದೆ.

ಕೆರೆನೀರನ್ನು ಕರೆಗೆ ಚೆಲ್ಲಿ ಎಂಬಂತೆ ಪ್ರತಿ ವರ್ಷ ತನ್ನ ಲಾಭಾಂಶದಲ್ಲಿ ಶೇಕಡಾ 10 ರಷ್ಟು ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಿಕ್ಷಕರ ದಿನಾಚರಣೆ, ತಾಲ್ಲೂಕು ಮಟ್ಟಡ ಕ್ರೀಡಾಕೂಟ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ.

ಸರ್ಕಾರದ ನೌಕರನಾಗಿದ್ದುಕೊಂಡು ಇಂತಹ ಒಂದು ಬೃಹತ್ತಾದ ಚಲನಶೀಲ ವ್ಯವಸ್ಥೆಯನ್ನು ಕಟ್ಟುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಮಹಾಬಲೇಶ್ವರ ಹೆಗಡೆಯನ್ನು ಪ್ರಶ್ನಿಸಿದರೆ ಸವಾಲುಗಳು ಮತ್ತು ಟೀಕೆಗಳಿಗೆ ಅಂಜದೆ ಮುನ್ನುಗ್ಗಿದ್ದು ಮತ್ತು ಇದು ಎಲ್ಲಾ ಸಂದರ್ಭದಲ್ಲಿಯೂ ಶಿಕ್ಷಕ ಸಹೋದ್ಯೋಗಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾ ಬಂದಿದ್ದೆ ಕಾರಣ. 16 ವರ್ಷಗಳ ಅವಿರತ ಪರಿಶ್ರಮದಿಂದ ಈ ಹಂತ ತಲುಪಲು ಸಾಧ್ಯವಾಗಿದೆ. ಎಲ್ಲಾ ಸಂದರ್ಭದಲ್ಲಿಯೂ ಸಹಕಾರಿ ದಿಗ್ಗಜರಾದ ಆರ್‌.ಎಂ.ಮಂಜುನಾಥ ಗೌಡ, ಬಸವಾನಿ ವಿಜಯದೇವ್‌, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ ಸೇರಿದಂತೆ ಇಲಾಖೆಯ ಅಧಿಕಾರಿಗಳು ತುಂಬು ಹೃದಯದ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯದ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಬೇಕು. ಹಾಗೂ ಶಿವಮೊಗ್ಗ ಸೇರಿದಂತೆ ಯಾವುದಾರು ನಗರದಲ್ಲಿ ಶಿಕ್ಷಕರಿಗಾಗಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕೆಂಬುದು ನಮ್ಮ ಮುಂದಿನ ಕನಸು ಎನ್ನುತ್ತಾರೆ ಮಹಾಬಲೇಶ್ವರ ಹೆಗಡೆ.

ಸೆಪ್ಟೆಂಬರ್‌ 22 ರ ಭಾನುವಾರ 10 ಗಂಟೆಗೆ ನೂತನ ಕಟ್ಟಡದ ಉದ್ಘಾಟನೆ 10ನೇ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕುವೆಂಪು ಲೇಔಟ್‌ನಲ್ಲಿ ಏರ್ಪಡಿಸಲಾಗಿದ್ದು ಸರ್ವರನ್ನು ಆಡಳಿತ ಮಂಡಳಿಯವರಾದ ಉಪಾಧ್ಯಕ್ಷ ತಿಮ್ಮಪ್ಪ ಎಂ.ಎಸ್.‌, ನಿರ್ದೇಶಕರಾದ ಪುಟ್ಟಪ್ಪ ಕೆ.ವಿ., ಶ್ರೀಕಾಂತ್‌ ಎಸ್‌, ಜಗದೀಶ್‌ ಕಾಗಿನಲ್ಲಿ, ಸತೀಶ್‌ ರಾಮಕೃಷ್ಣ ಹೆಗಡೆ, ಆನಂದ ಎಂ.ಸಿ., ಕರಿಬಸಯ್ಯ ಕೆ.ಎಂ., ಆಂಜನೇಯ ಬಿ, ಬಾಲಚಂದ್ರ ಗಜಾನನ ಭಟ್ಟ, ಕರಿಯಪ್ಪ ಹೆಚ್‌, ಜಗದೀಶ್‌ ಹೆಚ್.ಎಸ್., ಲಲಿತಾ ಹೆಗಡೆ, ಆಶಾ ಹೆಚ್.ಜಿ., ಅಲ್ತಾಪ್‌ ಬೆನಕನಕೊಂಡ, ವಿಜಯಕುಮಾರ್‌ ಸ್ವಾಮಿ ಎಸ್.ವಿ, ಪಾಲಯ್ಯ ಜಿ, ನಾಮನಿರ್ದೇಶಕರಾದ ರವೀಂದ್ರ ಕೃಷ್ಣ ಭಟ್ಟ ಸೂರಿ, ಷಣ್ಮುಕಪ್ಪ ಎಂ.ಪಿ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್‌ ಕುಮಾರ್‌ ವಿ ಸ್ವಾಗತಿಸಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post