ಬುಡಕಟ್ಟು ಪರಿಶಿಷ್ಟ ಕುಟುಂಬಕ್ಕೆ ರಕ್ಷಣೆ ನೀಡಿ

ಅರಣ್ಯಹಕ್ಕು ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿ
ದೌಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಡ

ಅಧಿಕಾರದ ಬಲದಲ್ಲಿ ಪರಿಶಿಷ್ಟ ಕುಟುಂಬದ ಮೇಲೆ ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ. ಅವರ ಮೇಲೆ ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅರಣ್ಯವಾಸಿ, ಬುಡಕಟ್ಟು, ಅಲೆಮಾರಿ ದಲಿತ ಕುಟುಂಬಕ್ಕೆ ಕಾನೂನು ರಕ್ಷಣೆ ಕೊಡಿ. ಅರಣ್ಯಹಕ್ಕು ಕಾಯ್ದೆಯಡಿ ನಮೂನೆ 53, 57ರಡಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಬುಧವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಹರಡವಳ್ಳಿ ಗ್ರಾಮದ ಸ.ನಂ.12ರಲ್ಲಿ ಅನೇಕ ವರ್ಷಗಳಿಂದ ಅರಣ್ಯ ಭೂ ಪ್ರದೇಶದಲ್ಲಿ ದಲಿತ ಕುಟುಂಬದ ಮಂಜುನಾಥ್ ವಾಸದ ಮನೆ, ಸಾಗುವಳಿ ಜಮೀನು ಹೊಂದಿದ್ದಾರೆ. ತೀರ್ಥಹಳ್ಳಿ ವಲಯಾರಣ್ಯಾಧಿಕಾರಿ ಆಗಿದ್ದ ಲೋಕೇಶ್ ಸಿಬ್ಬಂದಿ ಜೊತೆಗೂಡಿ ಅಕ್ರಮವಾಗಿ ಸಾಗುವಳಿ ಪ್ರದೇಶದ ಅಡಿಕೆ, ತೆಂಗು, ಬಾಳೆ ಸಸಿಗಳನ್ನು ಕಡಿದು ನಾಶ ಮಾಡಿದ್ದಾರೆ.

ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ಕೃತ್ಯವನ್ನು ತಡೆಯಲು ಮುಂದಾದ ಮಂಜುನಾಥ್ ಅವರ ಪತ್ನಿ ರೇಣುಕಾ ಮೇಲೆ ತೀರ್ಥಹಳ್ಳಿ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸಿರುವುದು ಖಂಡನೀಯ. ಮಹಿಳೆ ನೀಡಿದ ದೂರನ್ನು ಸಿಪಿಐ ಮುಚ್ಚಿಟ್ಟು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು.

ಬುಡಕಟ್ಟು ಪಾರಂಪರಿಕ ಅರಣ್ಯ ವಾಸಿಗಳ ಹಕ್ಕು ಕಾಯ್ದೆಯಡಿ ವಾಸದಮನೆ, ಸಾಗುವಳಿ ಪ್ರದೇಶ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಸದರಿ ಪ್ರದೇಶದ ಜಿಪಿಎಸ್ ಸರ್ವೆಗೆ ಒಳಪಟ್ಟಿದ್ದು ಗ್ರಾಮ ಅರಣ್ಯ ಸಮಿತಿ ಸಭೆ 3 ಎಕರೆ ಪ್ರದೇಶ ಮಂಜೂರಾತಿಗೆ ನಿರ್ಣಯಿಸಿದೆ. ಜಿಲ್ಲಾಧಿಕಾರಿ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪ್ರತಿಭಟನೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು. ತಹಶೀಲ್ದಾರ್ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಪ್ರತಿಭಟನಾ ನಿರತರನ್ನು ಪೋನ್ ಮೂಲಕ ಸಂಪರ್ಕಿಸಿ ಮುಂದಿನ ಬುಧವಾರ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವಂತೆ ವಿನಂತಿಸಿದರು.

ಪರಿಶಿಷ್ಟ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಹಾಲೇಶಪ್ಪ, ಕಾಸರವಳ್ಳಿ ಶ್ರೀನಿವಾಸ್, ಕೀಗಡಿ ಕೃಷ್ಣಮೂರ್ತಿ, ಹಾರೋಗೊಳಿಗೆ ವಿಶ್ವನಾಥ್, ರಾಜಕುಮಾರ್, ಪ್ರಕಾಶ್ ಲೀಗಾಡಿ, ಗುರುರಾಜ್, ಶಿವಾಜಿ, ಹರಡವಳ್ಳಿ ಮಂಜುನಾಥ್, ಕಿಟ್ಟಪ್ಪ, ರೈತ ಮುಖಂಡರಾದ ಕೋಡ್ಲು ವೆಂಕಟೇಶ್, ಹೊರಬೈಲು ರಾಮಕೃಷ್ಣ, ಕಂಬಳಿಗೆರೆ ರಾಜೇಂದ್ರ, ನೆಂಪೆ ದೇವರಾಜ್, ನಿಶ್ಚಲ್ ಜಾದೂಗಾರ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post