ಪ್ರಶ್ನಿಸುವವರಿಲ್ಲದೇ ವ್ಯರ್ಥವಾಗುತ್ತಿದೆ ಕೆಡಿಪಿ ಸಭೆ

ನೀವಾದ್ರೂ ಪ್ರಶ್ನೆ ಮಾಡಿ ಶಾಸಕರೇ…? ಜನರಿಗೆ ಕೊಡಿ ಉತ್ತರ!
ತಾಲ್ಲೂಕು ಕಚೇರಿಯಲ್ಲಿ ದುಡ್ಡಿಗೆ ಮಾತ್ರ ಕಿಮ್ಮತ್ತು - ಜನಸಾಮಾನ್ಯರ ಸಮಸ್ಯೆಗಿಲ್ಲ ಸ್ಪಂದನೆ
ಜಿಲ್ಲಾಧಿಕಾರಿ, ತಹಶೀಲ್ದಾರ್‌ ಹೆಸರು ಹೇಳಿದ್ರೂ ಕ್ಯಾರೆ ಎನ್ನದ ಸಿಬ್ಬಂದಿಗಳು

ತ್ರೈಮಾಸಿಕ ಕೆಡಿಪಿ ಸಭೆಗಳು ಪ್ರಶ್ನಿಸುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು ಅರ್ಥಾತ್ ನಾಮನಿರ್ದೇಶಿತ ಜನಪ್ರತಿನಿಧಿಗಳು‌ ಇಲ್ಲದೆ ಕಳೆದ ಮೂರೂವರೆ ವರ್ಷಗಳಿಂದ ಬೇಕಾಬಿಟ್ಟಿ ನಡೆಯುತ್ತಿದೆ. ಶಾಸಕರ ಗಮನಕ್ಕೆ ಬರುವ ಮೊದಲೇ ಅಧಿಕಾರಿಗಳು ಸಮಸ್ಯೆಗಳಿಗೆ ತೇಪೆಹಚ್ಚುವ ಕೆಟ್ಟ ಚಾಳಿಯನ್ನು ಪ್ರತಿ ಕೆಡಿಪಿ ಸಭೆಯಲ್ಲಿ ಗಾಳಿಗೆ ಗುಂಡುಹಾರಿಸಿದಂತೆ ಬಿಡುತ್ತಿದ್ದಾರೆ. ಅದನ್ನೇ ಸತ್ಯವೆಂದು ತಿಳಿದ ಶಾಸಕರು ತಲೆಯಲ್ಲಾಡಿಸಿ ಮುಂದಿನ ವಿಷಯಕ್ಕೆ ಮುಂದಡಿಯಿಡುವ ಸನ್ನಿವೇಶ ಆಡಳಿತದಲ್ಲಿ ನಡೆಯುತ್ತಿರುವುದು ದುರಂತವೇ ಸರಿ.

ತೀರ್ಥಹಳ್ಳಿ ತಾಲ್ಲೂಕು ಕಚೇರಿಗೆ ಗ್ರಾಮೀಣ ಭಾಗದಿಂದ ಆಗಮಿಸುವ ಪ್ರತಿಯೊಬ್ಬ ನಾಗರೀಕನೂ ಅಧಿಕಾರಿಗಳ ಟೇಬಲ್‌ ಮೇಲೆ ದುಡ್ಡು ಚೆಲ್ಲದಿದ್ದರೆ ಬಂದ ಕೆಲಸಕ್ಕೆ ಸುಂಕವಿಲ್ಲವೆಂಬಂತೆ ಹಿಂದಿರುಗಬೇಕು. ಅದು ಬಿಟ್ಟರೆ ಗ್ರಾಮೀಣ ಭಾಗದ ಜನರು ತಾಲ್ಲೂಕು ಕಚೇರಿಯನ್ನು ಅಷ್ಟದಿಕ್ಕುಗಳಲ್ಲಿಯೂ ಸುತ್ತಿವರಿದ ಮದ್ಯವರ್ತಿಗಳ ಕಾಲಿಗೆ ಬೀಳಬೇಕು. ಇದಲ್ಲದಿದ್ದರೆ ಯಾವುದೇ ಕಾರಣಕ್ಕೂ ತಾಲ್ಲೂಕು ಕಚೇರಿಯಲ್ಲಿ ನಯಾಪೈಸೆಯ ಕೆಲಸ ಮಾಡಿಸಿಕೊಳ್ಳುವುದು ದುಸಾಧ್ಯ.

ತಾಲ್ಲೂಕು ಕಚೇರಿಯಲ್ಲದೇ, ತಾಲ್ಲೂಕು ಪಂಚಾಯಿತಿಯ ಬಹುತೇಕ ಇಲಾಖೆಗಳ ಹಣೆಬರಹವೂ ಇದೇ ಆಗಿದೆ. ಯಾವ ಇಲಾಖೆಯೂ ಜನಸಾಮಾನ್ಯರ ಕೈಗೆಟುಕುವುದೇ ಇಲ್ಲ. ರೋಸಿಹೋದ ನಾಗರೀಕರು ಧ್ವನಿಯೇರಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಎಂದರೆ ಅವೆಲ್ಲ ನಾವು ನೋಡಿಕೊಳ್ಳುತ್ತೇವೆ. ಎಲ್ಲರನ್ನು ಅಜೆಸ್ಟ್‌ ಮಾಡಿಕೊಂಡರೆ ನಿಮ್ಮ ಕಂಪ್ಲೆಂಟ್‌ ನಿಷ್ಪ್ರಯೋಜಕ ಎಂಬ ನಿಲುವು ತೋರಿಸುತ್ತಾರೆ. ತೀರ್ಥಹಳ್ಳಿಯ ಆಡಳಿತ ಸುಸ್ಥಿತಿಯಲ್ಲಿದೆಯೇ ಎಂದು ಕೆಲಸ ಮಾಡಿಸಿಕೊಳ್ಳಲು ಪರದಾಡುತ್ತಿರುವ ಅನೇಕರು ನೆಲದಧ್ವನಿ ಬಳಗದೊಂದಿಗೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ತೀರ್ಥಹಳ್ಳಿಯ ಆಡಳಿತ ಹದಗೆಟ್ಟಿದೆ.

ಅಲ್ಲ ಸರ್‌, ಯಾರೋ ಫೋನ್‌ ಮಾಡಿ ಅಥವಾ ನೇರವಾಗಿ ಗ್ರಾಮ ಪಂಚಾಯಿತಿಯ ಮಾಜಿ, ಹಾಲಿ ಸದಸ್ಯರು ಇವರ ಕೆಲಸ ಮಾಡಿಕೊಡಿ ಅಂದ್ರೆ ಮಾತ್ರ ನಮ್ಮ ಫೈಲ್‌ ಕ್ಲಿಯರ್‌ ಆಗುತ್ತೆ. ಹಾಗಾದ್ರೆ ತಾಲ್ಲೂಕು ಕೆಡಿಪಿ ಸಭೆಯಲ್ಲಿ ಶಾಸಕರು ಪ್ರಶ್ನೆ ಮಾಡುವುದಿಲ್ಲವೇ? ಹಂಗಾದ್ರೆ ಕೆಡಿಪಿ ಸಭೆ ಮಾಡುವ ಬದಲು ಅಧಿಕಾರಿಗಳ ಸಭೆ ಮಾಡಿದರೆ ಸಾಕಲ್ಲವೇ. ಪ್ರಶ್ನೆಗಳಿಲ್ಲದ ಆಡಳಿತಕ್ಕೆ ಲಂಗು ಲಗಾಮು ಹಾಕುವವರು ಯಾರು? ಎಂದು ಅನೇಕ ಮಾಜಿ ಸದಸ್ಯರೇ ದೂರುತ್ತಿದ್ದಾರೆ.

ತೀರ್ಥಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆ ಒಂದಿದೆ. ಅದರಿಂದ ಅಡಿಕೆ ಬೆಳೆಗಾರರಿಗೆ ಏನೇನು ಪ್ರಯೋಜ ಸಿಗುವುದಿಲ್ಲ. ಸ್ಥಳೀಯರಿಗೆ ಅಡಿಕೆ ರೋಗಗಳ ಬಗ್ಗೆಯೂ ಮಾಹಿತಿ ಕೊಡುವುದಿಲ್ಲ. ಸಬ್ಸಿಡಿ ಪ್ರಶ್ನೆಯನ್ನು ಕೇಳುವ ಹಾಗೂ ಇಲ್ಲ. ಎಲ್ಲಾ ಕಡೆ ಅಜೆಸ್ಟ್‌ಮೆಂಟ್‌ ಅಂತಾರೆ. ಕಾಂಗ್ರೆಸ್ಸೋ, ಬಿಜೆಪಿಯ ಆಯ್ದ ಕೆಲವು ಮುಖಂಡರಿಗೆ ಮಾತ್ರ ಸಬ್ಸಿಡಿ ಕೊಟ್ಟು ಅವರನ್ನು ತಣ್ಣಗೆ ಮಾಡ್ತಾರೆ. ಉಳಿದದ್ದು ತಮಗೆ ಬೇಕಾದವರಿಗೆ ಹರಾಜು ಹಾಕ್ತಾರೆ. ಸಬ್ಸಿಡಿ ಯಂತ್ರ ಖರೀದಿಯೇ ದೊಡ್ಡ ನಾಟಕವಾಗಿದೆ ಎನ್ನುತ್ತಾರೆ ಅತಿಸಣ್ಣ ಅಡಿಕೆ ಬೆಳೆಗಾರರು.

“ದುಡ್ಡು, ದುಡ್ಡು, ದುಡ್ಡು, ದುಡ್ಡಿಲ್ಲದೇ ಏನೂ ಇಲ್ಲ ಗುರು”

ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ಇಲಾಖೆಯ ಡಿ-ದರ್ಜೆ ನೌಕರರಿಂದ ಹಿಡಿದು ಅಧಿಕಾರಿಗಳವರೆಗೆ ಟೇಬಲ್‌ ಮೇಲೆ, ಕೆಳಗೆ ಹಣ ಓಡಾಡದಿದ್ದರೆ ಸಣ್ಣಪುಟ್ಟ ದಾಖಲೆಗಳು ಕೈಗೆಟುಕುವುದಿಲ್ಲ. ಅಧಿಕಾರಿಗಳು 10 ರೂಪಾಯಿ ಕಾಸಿಗೂ ಅಂಗಲಾಚುತ್ತಾರೆ. ಇವೆಲ್ಲಾ ಜನರ ಸೇವೆ ಮಾಡ್ತಾರಾ. ಬಿಳಿ ಶರ್ಟ್‌ ಹಾಕಿ ಬಂದು ಏರುದನಿಯಲ್ಲಿ ಮಾತನಾಡಿದರೆ ಮಾತ್ರ ಮೇಲಿಂದ ಕೆಳಗೆ ನೋಡ್ತಾರೆ. ಬಡವರು ವರ್ಷಗಟ್ಟಲೇ ಅಲೆಯುತ್ತಿದ್ದರೂ ಸಮಸ್ಯೆ ಬಗೆಹರಿಯುವುದಿಲ್ಲ. “ಜಿಲ್ಲಾಧಿಕಾರಿ, ತಹಶೀಲ್ದಾರ್‌ ಇವತ್ತು ಬರ್ತಾರೆ ನಾಳೆ ಹೋಗ್ತಾರೆ”. ಇಲ್ಲಿ ಶಾಶ್ವತವಾಗಿ ಇರುವುದು ನಾವು. ನಿಮ್ಮ ದೂರು ಲೆಕ್ಕಕ್ಕಿಲ್ಲ. ದುಡ್ಡು ಇಲ್ಲದಿದ್ದರೆ ಇಲ್ಲೇನು ನಡೆಯೋದಿಲ್ಲ ಗುರು. ನಿನ್ನ ದಾರಿ ನಿಂಗೆ. ನಮ್ಮ ದಾರಿ ನಂಗೆ ಎಂದು ಅಧಿಕಾರಿಗಳೇ ಹೇಳ್ತಾರೆ. ಅಲ್ಲಿನ ಫೈಲ್‌ಗಳು ಕಾಂಚಾಣ ಅಲ್ಲಡಿದಂತೇಯೇ ಎದ್ದು ಕುಣಿತಾವೆ. ಎಲ್ಲಾ ಹಣದ ಮಹಿಮೆ ಎಂದು ಅನೇಕ ಮುಖಂಡರೇ ಹೇಳಿಕೊಳ್ಳುತ್ತಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ ಕಡತಗಳ ಸಂಖ್ಯೆ ಹೆಚ್ಚಿತ್ತಿದೆಯೇ ವಿನಃ ವಿಲೇವಾರಿಯಾಗುತ್ತಿಲ್ಲ. ವರ್ಷಾನುಗಟ್ಟಲೇ ಕಾದು ವಿಲೇವಾರಿ ಮಾಡಿಸಿಕೊಳ್ಳುವಷ್ಟರಲ್ಲಿ ವಯಸ್ಸು ಮೀರಿ ಹೋಗುತ್ತಿದೆ. ಶಾಸಕರೇ ಕ್ಷೇತ್ರ ಸುತ್ತುವ ಬದಲು ತಾಲ್ಲೂಕು ಕಚೇರಿಯ ಫೈಲಾದ್ರು ಕ್ಲಿಯರ್‌ ಮಾಡಿಸಿಕೊಡ. ಪ್ರತಿ ತಿಂಗಳು 10 ದಿನ ತಾಲ್ಲೂಕು ಕಚೇರಿಯಲ್ಲಿ ನಿಂತು ನಮ್ಮ ಫೈಲ್‌ ಕ್ಲೀಯರ್‌ ಮಾಡಿಸಿಕೊಡಿ ಎನ್ನುತ್ತಾರೆ ಗ್ರಾಮೀಣ ಭಾಗದ ಸಾರ್ವಜನಿಕರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post