ಹಾಜಿ ಶೇಖ್‌ ಅಹಮ್ಮದ್‌ ಫೌಂಡೇಶನ್‌ ಚಾರಿಟೇಬಲ್ ಟ್ರಸ್ಟ್‌

9‌ ಲಕ್ಷದ 47 ಸಾವಿರ ವಿದ್ಯಾರ್ಥಿ ವೇತನ ವಿತರಣೆ
ವಿದ್ಯಾರ್ಥಿಗಳು ಜ್ಞಾನದ ಆಧಾರದ ಮೇಲೆ ಶಿಕ್ಷಣ ಪಡೆಯಿರಿ – ಕೆನರಾ ಬ್ಯಾಂಕ್ ಎಜಿಎಂ ಸಿ ಜಯಪ್ರಕಾಶ್

ತೀರ್ಥಹಳ್ಳಿಯ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಭಾನುವಾರ ನ್ಯಾಷನಲ್‌ ಸಮೂಹ ಸಂಸ್ಥೆ ಹಾಗೂ ಹಾಜಿ ಶೇಖ್‌ ಅಹಮ್ಮದ್‌ ಫೌಂಡೇಶನ್‌ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 307 ವಿದ್ಯಾರ್ಥಿಗಳಿಗೆ ಸುಮಾರು 9 ಲಕ್ಷದ 47 ಸಾವಿರ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್ ಮಣಿಪಾಲ್ ಜನರಲ್ ಮ್ಯಾನೇಜರ್ ಸಿ ಜಯಪ್ರಕಾಶ್ ಮಾತನಾಡಿ, ವಿದ್ಯಾದಾನದಿಂದ ಜ್ಞಾನದ ಸಂಪತ್ತು ವೃದ್ಧಿಸುತ್ತದೆ. ಹಾಗಾಗಿ ಜ್ಞಾನ ಬದುಕಿಗೆ ಅಕ್ಷಯ ಪಾತ್ರೆ ಇದ್ದಂತೆ. ಹಣ, ಅಂತಸ್ತು ಶಾಶ್ವತವಾಗಿ ಉಳಿಯುವುದಿಲ್ಲ. ಯಾವಾಗ ಬೇಕಾದರೂ ನಾಶವಾಗಬಹುದು ಅಥವಾ ಕಳವು ಮಾಡಬಹುದು. ಸರಿಯಾದ ಶಿಕ್ಷಣದಿಂದ ಸಂಪತ್ತುಗಳಿಕೆಗೂ ಅನುಕೂಲವಾಗಿದೆ. ಅಂಬೇಡ್ಕರ್ ಬಡತನದಲ್ಲಿ ಕಲಿತ ಶಿಕ್ಷಣದಿಂದ ಭಾರತ ಇಂದು ಪ್ರಕಾಶಿಸುತ್ತಿದೆ ಎಂದರು.

ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳು ವಿಶ್ವದ ನಾನಾ ದೇಶಗಳಿಗೆ ಸಂಪತ್ತಾಗಿದ್ದಾರೆ. ವಿದೇಶದ ಮೂಲೆ ಮೂಲೆಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಪಸರಿಸುತ್ತಿದ್ದಾರೆ. ನಾಸಾದಂತಹ ಬಾಹ್ಯಾಕಾಶ ಸಂಸ್ಥೆಯಲ್ಲಿಯೂ ಭಾರತೀಯ ಮೂಲದ ವಿಜ್ಞಾನಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಭಾರತದಲ್ಲಿ ಅಂತಹ ವೈವಿಧ್ಯಪೂರ್ಣ ಶಕ್ತಿ ಇದೆ. ಮಕ್ಕಳು ಅಥವಾ ಪೋಷಕರು ಪ್ರತಿಭೆಯ ತಿಳುವಳಿಕೆ ಇಲ್ಲದೆ ಡಾಕ್ಟರ್, ಇಂಜಿನಿಯರ್ ಎಲ್ಲರ ದಾರಿಯನ್ನು ಹಿಡಿಯುವ ಬದಲು ಉತ್ತಮ ಅವಕಾಶ ಸಿಗಬಹುದಾದ ಶಿಕ್ಷಣ ಪಡೆಯಬೇಕು. ದೇಶದಲ್ಲಿ ಎಲ್ಲಾ ಬಗೆಯ ಅವಕಾಶಗಳು ಇವೆ. ತಪ್ಪು ದಾರಿಯನ್ನು ಆಯ್ಕೆ ಮಾಡುವ ಬದಲು ತಮ್ಮ ಸಂತೋಷ, ಖುಷಿ, ತಿಳುವಳಿಕೆ ಆಧಾರದ ಮೇಲೆ ಓದು ಮುಂದುವರಿಸಬೇಕು ಎಂದರು.

ಹಾಜಿ ಶೇಖ್‌ ಅಹಮ್ಮದ್‌ ಫೌಂಡೇಶನ್‌ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಯೂಸೂಫ್ ಹೈದರ್ ಮಾತನಾಡಿ, "ಪೋಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನ ಬೆಳೆದಂತೆ ವಯೋಸಹಜ ಅನುಭವಗಳು ಮಕ್ಕಳಲ್ಲಿ ಹೆಚ್ಚಿದೆ. ಸಾಮಾಜಿಕ ಜಾಲತಾಣ, ಮೊಬೈಲ್ ಗೀಳಿನಿಂದ ಹೊರಗೆ ಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜಾತಿ, ಮತ ಮೀರಿದ ಮಾನವೀಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಕೆನರಾ ಬ್ಯಾಂಕ್ ಶಿವಮೊಗ್ಗ ಡಿಜಿಎಂ ಆರ್.ದೇವರಾಜ್, ತೀರ್ಥಹಳ್ಳಿ ಶಾಖೆ ವ್ಯವಸ್ಥಾಪಕ ಮಹಮ್ಮದ್‌ ಸಾಬೀರ್, ಟ್ರಸ್ಟಿಗಳಾದ ಇಬ್ರಾಹಿಂ ಷರೀಫ್, ಡಿ.ಎಸ್. ಅಬ್ದುಲ್ ರೆಹಮಾನ್, ಮೊಯ್ದಿನ್ ಕಬೀರ್, ಅಬ್ದುಲ್ ಕಲಾಂ ಆಜಾದ್, ಸುಲೆಮಾನ್, ಪ್ರಮುಖರಾದ ಮಂಜುನಾಥ ಮಲ್ಯ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post