ಪೃಥ್ವಿಶ್ರಮ ಸಂಘದ ಸಾಮಾಜಿಕ ಕಾಳಜಿ ಮೆಚ್ಚಿದ ಗಣ್ಯರು

ಪ್ರೋತ್ಸಾಹದಿಂದ ಶ್ರಮಿಕ ವರ್ಗದ ಮಕ್ಕಳ ಅಭಿವೃದ್ಧಿ ಸಾಧ್ಯ – ಆರಗ
ಶ್ರಮಿಕ ವರ್ಗವನ್ನು ಪ್ರತ್ಯೇಕವಾಗಿ ಗುರುತಿಸಬೇಕು – ಆರ್.ಎಂ. ಮಂಜುನಾಥ ಗೌಡ

ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಾರ್ಮಿಕರ ಮಕ್ಕಳು ತಮಗೆ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕು. ಪೃಥ್ವಿಶ್ರಮ ಕಲ್ಲುಗಣಿ ಮತ್ತು ನಿರ್ಮಾಣ ಶ್ರಮಿಕರ ಸರ್ವೋದಯ ಸಂಘ ಶ್ರಮಿಕರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ. ಉಜ್ವಲ ಭವಿಷ್ಯ ಹೊಂದಲು ಈ ರೀತಿಯ ಪ್ರೋತ್ಸಾಹ ತೀರಾ ಅಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಪೃಥ್ವಿಶ್ರಮ ಕಲ್ಲುಗಣಿ ಮತ್ತು ನಿರ್ಮಾಣ ಶ್ರಮಿಕರ ಸರ್ವೋದಯ ಸಂಘ ಬಂಟರ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಭೆಗೆ ಯಾವುದೇ ರೀತಿಯ ಮಿತಿಯನ್ನು ಹಾಕಿಕೊಳ್ಳಬಾರದು. ನಿರಂತರ ಅಧ್ಯಯನ ವಿದ್ಯಾರ್ಥಿಗಳನ್ನು ಪ್ರಗತಿಯ ಹಾದಿಗೆ ಕೊಂಡೊಯ್ಯುತ್ತದೆ ಎಂದರು.

ಮಲೆನಾಡು ಪ್ರದೇಶಾಭಿವೃದ್ಧ ಮಂಡಳಿ ಅಧ್ಯಕ್ಷ ಆರ್.‌ಎಂ.ಮಂಜುನಾಥ ಗೌಡ ಮಾತನಾಡಿ ಶ್ರಮಿಕ ವರ್ಗದ ಪರಿಸ್ಥಿತಿ ಇಂದಿನ ದಿನದಲ್ಲಿ ಕಷ್ಟದಾಯಕವಾಗಿದೆ. ಮಕ್ಕಳ ಓದು ದುಬಾರಿಯಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾಳಜಿಯಿಂದ ಆ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಸುಖಿತಾ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ರಾಜ್ಯ ಸರ್ಕಾರದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಮಾಹಿತಿ ತಿಳಿದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪೃಥ್ವಿಶ್ರಮ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ಸಂಘವು ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಕಲ್ಯಾಣಕ್ಕಾಗಿಯೇ ಸ್ಥಾಪನೆಗೊಂಡಿದ್ದು ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ವಿವಿಧ ರೀತಿಯ ಪ್ರಾಯೋಜನಗಳನ್ನು ತಲುಪಿಸಲಾಗಿದೆ. ಆರಂಭಿಕ ವರ್ಷದಲ್ಲೇ ಬೆರಳೆಣಿಕೆಯಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುತ್ತಿದ್ದ ಸಂಘ ಈಗ ತಾಲ್ಲೂಕಿನಾದ್ಯಂತ 40ಕ್ಕೂ ಹೆಚ್ಚು ಮಕ್ಕಳನ್ನು ಒಂದೆಡೆ ಗುರುತಿಸಿ ಪ್ರೋತ್ಸಾಹಿಸುವ ಹಂತವನ್ನು ತಲುಪಿದೆ.

ಕಲ್ಲುಗಣಿ ಮತ್ತು ನಿರ್ಮಾಣ ಶ್ರಮಿಕ ವರ್ಗ ಆರ್ಥಿಕ ಹಾಗೂ ಸಾಮಾಜಿಕವಾಗಿ ದುಸ್ಥಿತಿಯಲ್ಲಿದೆ. ಅಲ್ಲದೇ ಆರೋಗ್ಯದ ವಿಚಾರದಲ್ಲೂ ಕೂಡ ಕಳವಳಕಾರಿ ಮಟ್ಟದಲ್ಲಿದೆ. ಸರ್ಕಾರ ಸಹಾನುಭೂತಿಯಿಂದ ಅವರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಈ ಎಲ್ಲರನ್ನೂ ಕೂಡ ಸಾಮೂಹಿಕ ಆರೋಗ್ಯ ವಿಮೆ ವ್ಯಾಪ್ತಿಗೆ ತರುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.

ನಿವೃತ್ತ ಸರ್ಕಲ್‌ ಇನ್ಸಪೆಕ್ಟರ್‌ ಜಿ.ವಿ. ಗಣೇಶಪ್ಪ ಸೇರಿದಂತೆ ಅನೇಕರು ಮಾತನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸತ್ಯವೇಲು, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್‌, ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ. ವೆಂಕಟೇಶ್‌, ಸದಸ್ಯರಾದ ಅನಿತಾ ಪ್ರವೀಣ್‌, ಆನಂದ ಉಪಸ್ಥಿತರಿದ್ದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post