ಕನ್ನಂಗಿ ಬ್ಯಾಂಕ್‌ನಲ್ಲಿ 2 ಕೋಟಿಗೂ ಹೆಚ್ಚು ದೋಖಾ?

ಕಂಪ್ಲೆಂಟ್‌ ಕೊಡಿ ದಾಖಲೆ ಸರಿ ಇದೆ ಎಂದ ಅಧಿಕಾರಿ!
ಗ್ರಾಹಕರ ಉಳಿತಾಯದ ಹಣಕ್ಕೆ ಪಂಗನಾಮ ?

ತೀರ್ಥಹಳ್ಳಿ ತಾಲ್ಲೂಕಿನ ಕನ್ನಂಗಿ ಬ್ಯಾಂಕ್‌ ಒಂದರಲ್ಲಿ ಗ್ರಾಹಕರು ಠೇವಣಿ ಇರಿಸಿದ್ದ ಕೋಟ್ಯಾಂತರ ರೂಪಾಯಿ ದೋಖಾ ನಡೆದಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿದೆ. 2 ಕೋಟಿಗೂ ಅಧಿಕ ಮೊತ್ತದ ಹಗರಣ ಇದಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯ ಬ್ಯಾಂಕ್‌ನಲ್ಲಿ ಅನೇಕ ವರ್ಷಗಳಿಂದ ವ್ಯವಹಾರ ಮಾಡಿಕೊಂಡು ಬಂದಿದ್ದ ಗ್ರಾಹಕರ ಹಣಗಳಿಗೆ ಲೆಕ್ಕ ಇಲ್ಲದಂತಾಗಿದೆ. ಬ್ಯಾಂಕ್‌ ಸಿಬ್ಬಂದಿಯೇ ಅಕ್ರಮ ಅವ್ಯವಹಾರ ಮಾಡಿದ್ದು ಇದೀಗ ಆತ ನಾಪತ್ತೆಯಾಗಿದ್ದಾನೆ ಎಂಬ ದೂರುಗಳು ಕೇಳಿ ಬಂದಿದೆ. ಸುಮಾರು ಮೂರು ತಿಂಗಳ ಹಿಂದಿನಿಂದಲೂ ಅಕ್ರಮ ಅವ್ಯವಹಾರದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದರೂ ಈವರೆಗೂ ಗ್ರಾಹಕರಿಗೆ ನಿರೀಕ್ಷಿತ ಉತ್ತರಗಳು ಲಭಿಸುತ್ತಿಲ್ಲ.

ಬ್ಯಾಂಕ್‌ ಸಿಬ್ಬಂದಿ ನಾಪತ್ತೆಯಾದ ಬಳಿಕ ಬ್ಯಾಂಕ್‌ನ ಪ್ರಮುಖ ಅಧಿಕಾರಿ ಹಣಗಳನ್ನು ಜೋಪಾನವಾಗಿ ಹಿಂದಿರುಗಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಕುಡುವಳ್ಳಿಯ ಒಬ್ಬರಿಗೆ 9.50 ಲಕ್ಷ ಹಣವನ್ನು ವಾಪಾಸ್ಸು ಕೊಡಿಸಿದ್ದಾರೆ. ಇದೀಗ ಕುಚ್ಚಲು ಗ್ರಾಮದ ಒಬ್ಬರು 2019ರಲ್ಲಿ ಇರಿಸಿದ್ದ 13.50 ಲಕ್ಷ ಹಣವನ್ನು ವಾಪಾಸ್ಸು ಕೊಡುವ ವಾಗ್ದಾನ ಮಾಡಿದ್ದರೂ ಇಂದಿಗೂ ವಾದ ನಿಭಾಯಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇವರಿಬ್ಬರು ಅಲ್ಲದೇ ಬ್ಯಾಂಕ್‌ನಲ್ಲಿ ಹತ್ತಾರು ಜನ ತಮ್ಮ ಉಳಿತಾಯವನ್ನು ಭದ್ರಪಡಿಸಿದ್ದರು. ಆದರೆ ಇಂದಿಗೂ ಕೂಡ ಅವುಗಳಿಗೆ ಲೆಕ್ಕ ಸಿಗದೆ ಅಲೆಯುವ ಸ್ಥಿತಿ ಎದುರಾಗಿದೆ.

ಬ್ಯಾಂಕ್‌ ಪ್ರಮುಖ ಅಧಿಕಾರಿಯೇ ಹಣದ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದರಿಂದ ಗ್ರಾಹಕರ ವಿಶ್ವಾಸ ಹೆಚ್ಚಿತ್ತು. ಇಂದಲ್ಲ ನಾಳೆ ಖಾತೆಗೆ ಹಣ ಸಂದಾಯವಾಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಆದರೆ ಇದೀಗ “ನೀವು ಕಂಪ್ಲೆಂಟ್‌ ಕೊಡುವುದಾದರೆ ಕೊಡಿ ಪರವಾಗಿಲ್ಲ. ನಾವು ದಾಖಲೆ ಸರಿಮಾಡಿಕೊಂಡಿದ್ದೇವೆ” ಎಂಬ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಇದೀಗ ನಾವು ಯಾರ ಬಳಿ ಹೋಗಬೇಕೆಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದೇವೆ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಒಂದರಲ್ಲೇ ಬಾರಿ ಪ್ರಮಾಣದ ಹಣದ ಅವ್ಯವಹಾರ ನಡೆದಿರುವುದು ಗ್ರಾಹಕರ ವಿಶ್ವಾಸದ ಪ್ರಶ್ನೆ ಉದ್ಭವಿಸಿದೆ. ಇಂತಹ ಘಟನೆಗಳು ಅನೇಕ ಬ್ಯಾಂಕ್‌ಗಳಲ್ಲಿಯೂ ನಡೆದಿರುವುದರಿಂದ ಗ್ರಾಹಕರು ತಮ್ಮ ಅಳಲು ಯಾರ ಬಳಿ ಹೇಳಿಕೊಳ್ಳಬೇಕೆಂಬ ಗೊಂದಲ ನಿರ್ಮಾಣವಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿಯೇ ದೋಖಾ ನಡೆದರೆ ತಮ್ಮ ಹಣವನ್ನು ಎಲ್ಲಿ ಇಡಬೇಕು ಎಂಬ ವಿಶ್ವಸನೀಯ ಪ್ರಶ್ನೆ ಉದ್ಭವಿಸುವಂತಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ವಿರುದ್ಧವೇ ಪೊಲೀಸ್‌ ಮೆಟ್ಟಿಲೇರುವ ದುಸ್ಥಿತಿ ಗ್ರಾಹಕರಿಗೆ ಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post