ಜಾತಿ ಬಲ ಇಲ್ಲದ ನಾನು ಗೆದ್ದಿರುವುದೇ ಹಿಂದೂ ಸಮಾಜದ ಆಶೀರ್ವಾದದಿಂದ

ಯಡಿಯೂರಪ್ಪರ ಬಿಜೆಪಿ-ಕಾಂಗ್ರೆಸ್‌ ಎರಡೂ ಹಿಂದೂ ಸಮಾಜದ ವಿರುದ್ದವಿದೆ
ಸೋಲಿನ ಭಯದಿಂದ ಶಿಕಾರಿಪುರದಲ್ಲಿ ಹಿಂದೂಗಳಿಗೆ ಬೆದರಿಕೆ – ಈಶ್ವರಪ್ಪ ಆರೋಪ
ತೀರ್ಥಹಳ್ಳಿಯಲ್ಲಿ ಈಶ್ವರಪ್ಪ ಭರ್ಜರಿ  ಚುನಾವಣಾ ಪ್ರಚಾರ

ಶಿವಮೊಗ್ಗದ ಮತದಾರರು ನನ್ನ ಜಾತಿ ನೋಡದೆ ಹಿಂದುತ್ವವಾದಿ ಎನ್ನುವ ಅಭಿಮಾನದಿಂದ ನಾನು ಅವರ ನಿರೀಕ್ಷೆಯನ್ನು ಎಂದಿಗೂ ಹುಸಿ ಮಾಡಿಲ್ಲ. ನನ್ನ ಋಣ ತೀರಿಸುವ ಕೈಲಾದ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಕೂಡ ರಾಜಕಾರಣದ ಸ್ವಾರ್ಥದಿಂದ ನಾನು ಚುನಾವಣೆಗೆ ಸ್ಪರ್ಧಿಸಿಲ್ಲ. ಬದಲಾಗಿ ಹಿಂದುತ್ವ ಉಳಿಯಬೇಕು, ಹಿಂದೂ ಕಾರ್ಯಕರ್ತರ ಹಿತ ರಕ್ಷಣೆ ಮಾಡಬೇಕು. ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಗಾಣಿಸಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಉಳಿಸಬೇಕು ಎಂಬ ಆಶಯದಿಂದ ಸ್ಪರ್ಧಿಸುತ್ತಿದ್ದೇನೆ. ಜಾತಿ ಬಲ ಇಲ್ಲದ ನನ್ನನ್ನು ಶಿವಮೊಗ್ಗ ಜಿಲ್ಲೆಯ ಜನತೆ 5 ಬಾರಿ ಗೆಲ್ಲಿಸಿದ್ದಾರೆ. ಈ ಬಾರಿ ಕೂಡ ಶಿವಮೊಗ್ಗ ಜಿಲ್ಲೆಯಿಂದ ಹಿಂದೂ ಕಾರ್ಯಕರ್ತರ ಪ್ರತಿನಿಧಿಯಾಗಿ ಸಂಸತ್ತಿಗೆ ತೆರಳುವೆ ಎಂದು ರಾಷ್ಟ್ರಭಕ್ತ ಬಳಗದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಹೇಳಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ, ಬೆಜ್ಜವಳ್ಳಿ, ದೇವಂಗಿ, ಮೇಲಿನಕುರುವಳ್ಳಿ, ಕೈಮರ, ಆಗುಂಬೆ, ಕೋಣಂದೂರುಗಳಲ್ಲಿ ರಾಷ್ಟ್ರಭಕ್ತ ಬಳಗದಿಂದ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಡಿಯೂರಪ್ಪ ಕುಟುಂಬ ಬಗ್ಗೆ ಬಹಳ ದೊಡ್ಡ ಮಟ್ಟದ ಆಕ್ರೋಶ ಇದೆ. ಮಗನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಜೀವದ ಹಂಗು ತೊರೆದು ಪಕ್ಷದ ತತ್ವ ಸಿದ್ಧಾಂತದ ಹಿಂದುತ್ವವಾದಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಸೋಲಿನ ಭಯದಿಂದ ಯಡಿಯೂರಪ್ಪ ಮತ್ತು ಅವರ ಪುತ್ರರು ಶಿಕಾರಿಪುರದಲ್ಲಿ ಹಿಂದೂ ಕಾರ್ಯಕರ್ತರನ್ನು ಬೆದರಿಸತೊಡಗಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಅಲ್ಲಿನ ಜನತೆ ಚುನಾವಣೆಯಲ್ಲಿ ನೀಡುತ್ತಾರೆ. ಯಡಿಯೂರಪ್ಪ ಮತ್ತು ಅವರ ಪುತ್ರರು ಹಿಂದೂ ಕಾರ್ಯಕರ್ತರ ಹಾಗೂ ನಿಜವಾದ ಬಿಜೆಪಿ ಅಭಿಮಾನಿಗಳ ನಂಬಿಕೆ ಕಳೆದುಕೊಂಡಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಲಿಂಗಾಯತ ಸಮಾಜದ ನಾಗರಾಜ್ ಗೌಡರನ್ನು ಹಾಗೂ ಹಿಂದುಳಿದ ಸಮಾಜದ ಗೋಣಿ ಮಾಲತೇಶ್ ಅವರನ್ನು ಮಗನ ಗೆಲುವಿಗಾಗಿ ಬಲಿ ಕೊಟ್ಟರು. ಇದು ಯಾವ ಸೀಮೆ ತತ್ವ ಮತ್ತು ಸಿದ್ಧಾಂತ ಎಂಬುದನ್ನು ಅವರು ರಾಜ್ಯದ ಜನತೆ ಮುಂದಿಡಬೇಕು.

ಅನಂತಕುಮಾರ್‌ ಹೆಗಡೆ, ಸಿ.ಟಿ. ರವಿ, ನಳೀನ್‌ ಕಟೀಲ್‌, ಸದಾನಂದ ಗೌಡ, ಪ್ರತಾಪ್‌ ಸಿಂಹ ಇಂತಹ ತತ್ವ ಸಿದ್ಧಾಂತ ನಿಷ್ಟ ಹಿಂದುತ್ವವಾದಿಗಳನ್ನು ಮೂಲೆ ಗುಂಪು ಮಾಡಿರುವುದಕ್ಕೆ ತಕ್ಕ ಪ್ರತಿಫಲವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿನ ಮೂಲಕ ಅನುಭವಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಪ್ರತಿ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅರವತ್ತು ಸಾವಿರ ಲೀಡ್ ಪಡೆಯುತ್ತಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ನೂರ ಐವತ್ತು ಕೋಟಿಗಳಷ್ಟು ಹಣ ಸುರಿದು ಕೇವಲ ಹತ್ತುಸಾವಿರ ಲೀಡ್ ಪಡೆದಿದ್ದಾರೆ ಇದು ಶಿಕಾರಿಪುರದ ಜನರ ಆಕ್ರೋಶ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ನೋಟು ಈಶ್ವರಪ್ಪಗೆ ವೋಟು ಎಂದು ಜನ ತೀರ್ಮಾನಿಸಿದ್ದಾರೆ ಎಂದರಲ್ಲದೇ ಕಾಂಗ್ರೆಸ್‌ ಗೀತಾ ಶಿವರಾಜಕುಮಾರ್‌ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಚಿತ್ರರಂಗದ ಹಿನ್ನಲೆಯ ಕಾರಣ ಗೀತಾರವರ ಸಭೆಗೆ ಜನ ಸೇರುತ್ತಿದ್ದಾರೆ. ನನಗೆ ಜನ ಸಾಮಾನ್ಯರೇ ಸ್ಟಾರ್‌ ಪ್ರಚಾರಕರೂ. ಅವರಿಂದಲೇ ನಾನು ಗೆಲ್ಲುತ್ತೇನೆ. ಒಂದು ಕಡೆ ನೇಹಾ ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸಿದ ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದ್ದರೇ ಯಡಿಯೂರಪ್ಪ ಕುಟುಂಬ ಹಿಂದೂವಾದಿಗಳನ್ನೇ ರಾಜಕೀಯವಾಗಿ ಮುಗಿಸುತ್ತಿದೆ. ಎಲ್ಲರಿಗೂ ಈ ಚುನಾವಣೆಯಲ್ಲಿ ರಾಷ್ಟ್ರಭಕ್ತರು ಪಾಠ ಕಲಿಸುತ್ತಿದ್ದಾರೆ ಎಂದರು.

ಸಭೆಗಳಲ್ಲಿ ಮಹೇಶ್ ಮೇಲಿನಕೊಪ್ಪ, ಶಿವು, ಸಾತ್ವಿಕ್ ಪೂಜಾರಿ, ಮಂಜುನಾಥ್ ಜೋಗಿ, ಗಣೇಶ್ ಪ್ರಸಾದ್, ಅವಿನಾಶ್, ರಾಜು, ನವುಶಾ, ಶಶಿ, ಉದಯ್, ಶಶಿ ಕುಂದರ್, ಅರುಣ್, ಕಿರಣ್, ಕವನ, ಪ್ರವೀಣ್, ನೀಲಕಂಠ, ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post