ಕೊನೆಗೂ ದೃಢ ನಿಶ್ಚಯದಿಂದ ಕಣಕ್ಕಿಳಿದ ಈಶ್ವರಪ್ಪ

ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತ ಬಳಗಕ್ಕೆ ರೈತ ಚಿಹ್ನೆ
ಯಡಿಯೂರಪ್ಪ ಪಾಳಯದಲ್ಲಿ ಆತಂಕ
ದಿನಗಳೆದಂತೆ ಯುವಕರನ್ನು ಸೆಳೆಯುತ್ತಿರುವ ಹಿರಿಯ ನಾಯಕ

ಎಲ್ಲಾ ಉಹಾಪೋಹಗಳನ್ನು ಮೀರಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ್ದರಿಂದ ಈಶ್ವರಪ್ಪ ಸ್ಪರ್ಧೆಯ ಸದ್ದು ಟುಸ್‌ ಪಟಾಕಿಯಾಗಲಿದೆ. ಅಂತಿಮ ಕ್ಷಣದಲ್ಲಿ ಅವರು ಬಿಜೆಪಿ ಹೈಕಮಾಂಡ್‌ ಆದೇಶದಂತೆ ಚುನಾವಣಾ ಕಣದಿಂದ ಹಿಂದೆ ಸರಿದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಸ್ಪರ್ಧೆಗೆ ಅನುಕೂಲ ಮಾಡಿಕೊಡಲಿದ್ದಾರೆ. ಪ್ರತಿಫಲವಾಗಿ ಅವರು ಅಥವಾ ಅವರ ಪುತ್ರ ಕಾಂತೇಶರಿಗೆ ಸೂಕ್ತ ಸ್ಥಾನಮಾನವನ್ನು ಪಡೆದುಕೊಳ್ಳಲಿದ್ದಾರೆಂಬ ಊಹಾಪೋಹಗಳು ಅವರು ಸ್ಪರ್ಧಿಸುವ ದಿಟ್ಟ ನಿರ್ಧಾರ ಕೈಗೊಂಡ ಕಾರಣ ಹಿನ್ನೆಲೆಗೆ ಸರಿದಿದೆ. ವಿಶೇಷವೆಂದರೆ ಈಶ್ವರಪ್ಪರಿಗೆ ರೈತ ಗುರುತು ದೊರೆತಿದ್ದು ಸ್ಪರ್ಧೆಯ ಹುಮ್ಮಸ್ಸು ಇಮ್ಮಡಿಯಾಗುವಂತೆ ಮಾಡಿದೆ.

ಬಿಜೆಪಿಯ ಅತ್ಯಂತ ಬಲಶಾಲಿಯಾದ ಬೇರುಮಟ್ಟದ ನೆಟ್‌ವರ್ಕ್‌, ಹಣ ಹಾಗೂ ಕಾರ್ಯಕರ್ತರ ಬೆಂಬಲ ಜೊತೆಗೆ ಇಲ್ಲಿಯವರೆಗೂ ಯಡಿಯೂರಪ್ಪ ಕುಟುಂಬವನ್ನು ಕೈಬಿಡದ ಸಮುದಾಯದ ಬೆಂಬಲ ಎಲ್ಲವನ್ನು ಎದುರುಹಾಕಿಕೊಂಡು ಈಶ್ವರಪ್ಪ ನೇರ ನೇರಾ ಅವರ ಕುಟುಂಬದ ವಿರುದ್ಧ ಈ ಇಳಿ ವಯಸ್ಸಿನಲ್ಲಿ ತೊಡೆತಟ್ಟಿ ಫಂಥಾಹ್ವಾನ ನೀಡಿರುವುದು ಅವರ ಲೆಕ್ಕಾಚಾರವೇನು ಮತ್ತು ಹಿಂದಿರುವ ಶಕ್ತಿ ಯಾವುದು ಎಂಬ ಗೊಂದಲವನ್ನು ಯಡಿಯೂರಪ್ಪ ಪಾಳಯದಲ್ಲಿ ಹುಟ್ಟುಹಾಕಿದೆ ಮತ್ತು ಸ್ಪರ್ಧೆಯನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದೆ.


ಆರಂಭಿಕ ಹಂತದಲ್ಲಿಯೇ ಈಶ್ವರಪ್ಪ ಸ್ಪರ್ಧೆಯ ಕುರಿತು ಲೇವಡಿಯ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬಂದಿದ್ದವು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರೇ ಈಶ್ವರಪ್ಪರಿಗೆ ಕರಪತ್ರ ಹಿಡಿಯಲೂ ಕೂಡ ಕಾರ್ಯಕರ್ತರು ಸಿಕ್ಕುವುದು ಅನುಮಾನ. ಸ್ಪರ್ಧೆಯಿಂದ ಹಿಂದೆ ಸರಿದು ಗೌರವ ಉಳಿಸಿಕೊಳ್ಳಲಿ. ಅವರು ಸೋಲುವುದನ್ನು ನನ್ನ ಕಣ್ಣಲ್ಲಿ ನೋಡಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ ಹಠ ಬಿಡದ ಈಶ್ವರಪ್ಪ ಒಂದು ಕಡೆ ಪ್ರದಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಗೂ ಹಿಂದುತ್ವದ ವಿಚಾರವನ್ನೇ ಪ್ರಬಲವಾಗಿ ಪ್ರತಿಪಾದಿಸುತ್ತಾ ಅದಕ್ಕೆ ಸೂಕ್ತ ಉದಾಹರಣೆಗಳನ್ನು ಕೊಡುತ್ತಾ ಹಂತಹಂತವಾಗಿ ಕಟ್ಟಾ ಹಿಂದುತ್ವವಾದಿ ಯುವಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ದಿನವೊಂದಕ್ಕೆ ಅಧಿಕೃತ ಹಾಗೂ ಅನಧಿಕೃತವಾಗಿ 20ಕ್ಕೂ ಹೆಚ್ಚು ಸಭೆಗಳನ್ನು ಅವಿರತವಾಗಿ ನಡೆಸುವ ಮೂಲಕ ಕಾರ್ಯಕರ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಹಿಂದುತ್ವವಾದಿಗಳ ಧ್ವನಿಯನ್ನು ದಮನ ಮಾಡಲಾಗುತ್ತಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಯ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧ ಇರುವ ಕುಟುಂಬ ರಾಜಕಾರಣವನ್ನು ತಂದು ಪ್ರಶ್ನಿಸುವವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಈಶ್ವರಪ್ಪ ನಿಲುವು ಈಗ ಬಿಜೆಪಿಯಲ್ಲಿರುವ ಕಟ್ಟಾ ಹಿಂದುತ್ವವಾದಿಗಳಿಗೆ ಸತ್ಯ ಎಂದು ಎನಿಸತೊಡಗಿರುವುದು ಈಶ್ವರಪ್ಪರ ಸ್ಪರ್ಧೆಯನ್ನು ಯಡಿಯೂರಪ್ಪ ಪಾಳಯ ಆತಂಕದಿಂದ ನೋಡುವಂತೆ ಮಾಡಿದೆಯಲ್ಲದೇ ಅವರ ಸ್ಪರ್ಧೆಯ ಕಾರಣಕ್ಕಾಗಿಯೇ ಶಿವಮೊಗ್ಗ ಕ್ಷೇತ್ರ ಈಗ ಕೇವಲ ರಾಜ್ಯ ಮಾತ್ರವಲ್ಲ ರಾಷ್ಟ್ರದ ಗಮನ ಸೆಳೆದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post