ಹಿಂದುತ್ವ ಮತ್ತು ಅನುಕಂಪದ ಅಲೆ ಏರಿ ಹೊರಟ ಈಶ್ವರಪ್ಪ

ಹಿಂದೂ ಕಾರ್ಯಕರ್ತರಲ್ಲಿ ಹೊಸ ಹುರುಪು

75ರ ಹರೆಯದಲ್ಲೂ ಕರಗದ ಹೋರಾಟದ ಕೆಚ್ಚು

ಬಿಜೆಪಿ ಹಿರಿಯ ನಾಯಕ ಮತ್ತು ಕಟ್ಟಾ ಹಿಂದುತ್ವ ವಾದಿಗಳ ಪಾಲಿನ ವಿಶ್ವಸನೀಯ ನಾಯಕ ಕೆ.ಎಸ್.‌ ಈಶ್ವರಪ್ಪ ಯಾವ ಬೆದರಿಕೆಗೂ ಜಗ್ಗದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣ ಕಣಕ್ಕೆ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ರಾಷ್ಟ್ರಭಕ್ತ ಬಳಗದಿಂದ ರೈತನ ಗುರುತಿನಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಾಗೂ ನಿರೀಕ್ಷೆಯಂತೆ ಉಚ್ಚಾಟನೆಗೂ ಒಳಗಾಗಿದ್ದಾರೆ.

ಈಶ್ವರಪ್ಪ ಘರ್ಜನೆ ಕೇವಲ ಸುದ್ದಿಗಾಗಿ ಖಂಡಿತ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎನ್ನುತ್ತಿದ್ದವರೆಲ್ಲ ಈಗ ಈಶ್ವರಪ್ಪ ಮರ್ಮ ಏನು ಎಂದರಿಯದೆ ಗೊಂದಲಕ್ಕಿದ್ದಾಗಿದ್ದಾರೆ. ಅತ್ತ ಯಡಿಯೂರಪ್ಪ ಪಾಳಯ ಮೇಲ್ನೋಟಕ್ಕೆ ಕಾರ್ಯಕರ್ತರು ಧೃತಿ ಗೆಡಬಾರದು ಎನ್ನುವ ಕಾರಣಕ್ಕೆ ಈಶ್ವರಪ್ಪ ನಮಗೆ ಲೆಕ್ಕವೇ ಅಲ್ಲ ಎಂದು ಹೇಳುತ್ತಿದೆಯಾದರೂ ಭಯ ಹುಟ್ಟಿರುವುದಂತೂ ಸತ್ಯ ಎನ್ನುತ್ತಿವೆ ಮೂಲಗಳು.

ಕಾರಣ ಈಶ್ವರಪ್ಪ ಯಡಿಯೂರಪ್ಪರಷ್ಟೇ ಹಿರಿಯ ನಾಯಕ ಬಿಜೆಪಿಯ ಚುನಾವಣಾ ತಂತ್ರ ಮಂತ್ರ, ಬಾಣ, ತಿರುಗ ಬಾಣ ಎಲ್ಲವೂ ಕರಗತ ಮತ್ತು ಅವರು ಕೈ ಹಾಕುವುದು ಕೂಡ ಬಿಜೆಪಿ ಮತಗಳಿಗೆ ಹಾಗಾಗಿ ಅಕಸ್ಮಾತ್ ಗೆದ್ದರೂ ಭಾರಿ ಸುದ್ದಿ ಒಂದು ವೇಳೆ ಸೋತು ರಾಘವೇಂದ್ರರನ್ನು ಸೋಲಿಸಿದರು ಅದು ಮತ್ತೂ ದೊಡ್ಡ ಸುದ್ದಿ.

ಅಂದ ಹಾಗೆ ಹೈಕಮಾಂಡನ್ನು ತನ್ನ ಇಷಾರೆಗೆ ತಕ್ಕ ಹಾಗೆ ಕುಣಿಸುತ್ತಿರುವ ಯಡಿಯೂರಪ್ಪ ಸೋಲಲಿ ಎಂದು ಬಿಜೆಪಿಯಲ್ಲಿ ಬಯಸುತ್ತಿರುವರ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಮತ್ತೂ ಅವರಿಗೆ ಈಶ್ವರಪ್ಪ ಹೊಸ ಧ್ವನಿಯಾಗಿ ಉದಯಿಸಿದ್ದಾರೆ.

ಯಾವಾಗ ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ, ಬಸವನ ಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ, ಸದಾನಂದ ಗೌಡ,... ಹೀಗೆ ಪಕ್ಷದ ಫೈರ್ ಬ್ರಾಂಡ್ ನಾಯಕರೆಲ್ಲ ಮುಂದೆ ತಮ್ಮ ಪುತ್ರ ವಿಜೇಯೇಂದ್ರ ಏಳಿಗೆಗೆ ಅಡ್ಡಿ ಎನ್ನುವ ಕಾರಣಕ್ಕೆ ಮೂಲೆಗೆ ಸರಿಸಲ್ಪಪಟ್ಟರೋ ಅಲ್ಲಿಗೆ ಯಡಿಯೂರಪ್ಪಗೆ ಬಿಜೆಪಿ ಹಿತಕ್ಕಿಂತಲೂ ಕುಟುಂಬದ ಹಿತವೇ ಮುಖ್ಯ ಎನ್ನುವುದು ಸ್ಪಷ್ಟವಾಗಿ ಹೋಗಿದೆ ಎನ್ನುತ್ತಾರೆ ಪಕ್ಷದ ಮೂಲ ಕಾರ್ಯಕರ್ತರು.

ಯಡಿಯೂರಪ್ಪ ಕುಟುಂಬ ಪ್ರೇಮದ ಕಾರಣ ಸದಾ ಕಾಲ ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ದೊಡ್ಡ ದನಿಯಲ್ಲಿ ಟಿಕೀಸುತ್ತಿದ್ದ ಬಿಜೆಪಿಗೆ ಈಗ ಆ ನೈತಿಕತೆ ಉಳಿದಿಲ್ಲ.

ಬಿಜೆಪಿ ಕುಟುಂಬ, ಸಮುದಾಯ ಮುಂದೆ ಮಾಡಿದ ನಾಯಕರನ್ನು ಕ್ಷಮಿಸಿದ ಉದಾಹರಣೆ ಇಲ್ಲವೇ ಇಲ್ಲ. ಜೊತೆಗೆ ಪಕ್ಷಕ್ಕೆ ಸಡ್ಡು ಹೊಡೆದು ಹೊಸ ಪಕ್ಷ ಕಟ್ಟಿ ಮಾತೃ ಪಕ್ಷವನ್ನೇ ಸೋಲಿಸಿದವರನ್ನು ಆದರಿಸಿದ ಉದಾಹರಣೆಯೂ ಕಡಿಮೆ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಹೈ ಕಮಾಂಡ್ ನಿಸ್ಸಾಹಾಯಕವಾಗಿ ಮಂಡಿಯೂರಿ ಕೂರುವಂತೆ ಆಗಿರುವುದು ಹಿಂದುತ್ವ, ಸಿದ್ಧಾಂತ ಮತ್ತು ಪಕ್ಷ ನಿಷ್ಠೆಗಾಗಿ ಜೀವನವನ್ನೇ ತ್ಯಾಗ ಮಾಡಿದ ಕಾರ್ಯಕರ್ತರು ಕೆರಳುವಂತೆ ಮಾಡಿದೆ. ಇದು ಮುಂದುವರೆದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬದಲು ಯಡಿಯೂರಪ್ಪರ ಕೆಜಿಪಿ ಪಕ್ಷ ಬಿಜೆಪಿ ಮುಸುಕು ಹಾಕಿಕೊಂಡು ಬೇರು ಬಿಡಲಿದೆ. ಯಡಿಯೂರಪ್ಪಗೆ ವಯಸ್ಸಾಗಿದೆ. ಆದರೆ ವಿಜೇಯೇಂದ್ರ ಇನ್ನೂ ಹುಡುಗ ಅಂತೂ ಮುಂದಿನ ನಲವತ್ತು ವರುಷ ಮತ್ತೆ ಇದೇ ರೀತಿಯ ಅವಮಾನ ಸಹಿಸಿ ಇರಬೇಕಾಗುತ್ತದೆ ಎನ್ನುವ ಗೊಣಗಾಟವೂ ಪಕ್ಷದೊಳಗೆ ರಾಜ್ಯ ಮಟ್ಟದಲ್ಲಿಯೇ ಆರಂಭವಾಗಿದೆ.

ಯಡಿಯೂರಪ್ಪ ಸಮುದಾಯ ಇರುವುದು ಉತ್ತರ ಕರ್ನಾಟಕದಲ್ಲಿ ಆದರೆ ಅವರ ಸಂಖ್ಯೆಯೇ ಇರದ ದಕ್ಷಿಣ ಕನ್ನಡ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಕೂಡ ಬಿಜೆಪಿ ಸದಾಕಾಲ ಗೆದ್ದಿದೆ ಇದಕ್ಕೆ ಕಾರಣ ಬಿಜೆಪಿ ಕಾರ್ಯಕರ್ತರ ಅಚಲ ಪಕ್ಷನಿಷ್ಠೆ ಮತ್ತು ಅಹರ್ನಿಶಿ ಪರಿಶ್ರಮ ಹಾಗೂ ಮೋದಿ ಹೆಸರು. ಇದು ಗೊತ್ತಿದ್ದಾಗಲೂ ಸಮುದಾಯದ ಹೆಸರಿನಲ್ಲಿ ಪದೇ ಪದೇ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪರ ಮುಂದೆ ಲಾಗ ಹೊಡೆಯುವುದು ಏಕೆಂಬುದು ನಿಷ್ಠಾವಂತರ ಪ್ರಶ್ನೆಯಾಗಿದೆ.

ಯಡಿಯೂರಪ್ಪಗೆ ಹೋಲಿಸಿದ್ದಲ್ಲಿ ಈಶ್ವರಪ್ಪ ಬಿಜೆಪಿ ಕಟ್ಟಾಳು. ಎಂದೂ ಪಕ್ಷದ ಆಜ್ಞೆ ಮೀರಿಲ್ಲ, ಹೊಸ ಪಕ್ಷ ಕಟ್ಟಿಲ್ಲ, ಅವಮಾನಕಾರಿಯಾಗಿ ಅಧಿಕಾರದಿಂದ ಇಳಿಸಿದಾಗಲು ಪಕ್ಷದ ವಿರುದ್ಧ ಮಾತಾಡಿಲ್ಲ. ಮಾಧ್ಯಮಗಳು ಖಳ ನಾಯಕನ ರೀತಿ ಬಿಂಬಿಸಿದಾಗಲು ಹೆದರದೆ ಹಿಂದುತ್ವ ಪರ ಮಾತನಾಡುವುದು ಬಿಟ್ಟಿಲ್ಲ. ಎಲ್ಲೆ ಹಿಂದೂ ಹುಡುಗರಿಗೆ ತೊಂದರೆ ಆದರೂ ತಕ್ಷಣ ಅಲ್ಲಿಗೆ ಧಾವಿಸಿ ನೆರವು ನೀಡುವುದು ಈಶ್ವರಪ್ಪ. ಎಂದಿಗೂ ಅವರ ಪಕ್ಷದ ತೀರ್ಮಾನ ಪ್ರಶ್ನೆ ಮಾಡಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟಿ ಹಿಂದುಳಿದವರ ಸಂಘಟನೆಗೆ ಮುಂದಾದಾಗ ಪಕ್ಷ ಕೂಡದು ಎಂದಾಕ್ಷಣ ಅದನ್ನು ಕೈಬಿಟ್ಟಿದ್ದರು. 90ರ ದಶಕದಲ್ಲಿ ದೂರದ ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ದೇವೇಗೌಡರ ವಿರುದ್ಧ ಸೆಣಸಬೇಕು ಎಂದಾಗ ಹಿಂದೆ ಮುಂದೆ ನೋಡದೆ ಒಪ್ಪಿದ್ದರು. ಈಗ ಪಕ್ಷದ ತೀರ್ಮಾನದಂತೆ 75 ವರ್ಷ ಮೇಲ್ಪಟ್ಟ ನಾಯಕರಿಗೆ ಟಿಕೆಟ್‌ ನೀಡುವುದಿಲ್ಲ ಎಂದಾಕ್ಷಣ ಅದನ್ನು ಗೌರವಿಸಿ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದರು. ಇನ್ಯಾವ ರೀತಿಯಲ್ಲಿ ಪಕ್ಷ ನಿಷ್ಠೆ ತೋರಬೇಕಿತ್ತು. ಈಗ ಯಡಿಯೂರಪ್ಪ ಪಾಳಯ ಅವರ ಮಗ ಕಾಂತೇಶ್ ರಿಗೆ ಟಿಕೆಟ್ ನೀಡದ ಕಾರಣ ಈಶ್ವರಪ್ಪ ಬಂಡಾಯ ಹೂಡಿದ್ದಾರೆ. ಇದೆಂತ ಪಕ್ಷ ಪ್ರೇಮ ಎಂದು ಅಪ ಪ್ರಚಾರ ಮಾಡುತ್ತಿದೆ. ಆದರೆ ಅವರು ಮಗನಿಗೆ ಟಿಕೆಟ್ ಕೇಳಿದ್ದು ಅವರು ಚುನಾವಣ ಕಣದಿಂದ ನಿವೃತ್ತಿಯಾಗಿ ಒಬ್ಬರಿಗೆ ಒಂದು ಅವಕಾಶ ಎನ್ನುವ ಪಕ್ಷದ ಮೂಲ ಸಿದ್ಧಾಂತದ ಅಡಿಯಲ್ಲಿಯೇ. ಇದರಲ್ಲಿ ತಪ್ಪೇನಿದೆ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ.

ಶಂಕರಮೂರ್ತಿ ನಿವೃತ್ತಿ ಬಳಿಕ ಅವರ ಮಗನಿಗೆ ಅವಕಾಶ ಸಿಗುತ್ತೆ.. ಪಕ್ಷದ ಸಿದ್ಧಾಂತ ಗಾಳಿಗೆ ತೂರಿ ಯಡಿಯೂರಪ್ಪ ಹಾಗೂ ಅವರ ಇಬ್ಬರು ಗಂಡು ಮಕ್ಕಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇವರುಗಳಷ್ಟೇ ಸೇವೆ ಸಲ್ಲಿಸಿರುವ ಈಶ್ವರಪ್ಪ ವಿಚಾರದಲ್ಲಿ ಮಾತ್ರ ಮಲತಾಯಿ ಧೋರಣೆ ಏಕೆ? ಇದಕ್ಕಾಗಿಯೇ ಹಗಲು ರಾತ್ರಿ ಕಷ್ಟ ಪಟ್ಟ ಪಕ್ಷ ಕಟ್ಟಿದ್ದ ಎನ್ನುವುದು ಕಟ್ಟರ್ ಹಿಂದುತ್ವ ವಾದಿಗಳ ಅಭಿಪ್ರಾಯ.

ಹಾಗಾಗಿ ಈಶ್ವರಪ್ಪ ವಿಚಾರದಲ್ಲಿ ಅನ್ಯಾಯ ಆಗಿದೆ ಅಡ್ಜಸ್ಟ್ ಮೆಂಟ್ ರಾಜಕಾರಣಕ್ಕಿಂತ ಈಶ್ವರಪ್ಪರ ನೇರ ರಾಜಕಾರಣ ಮಾತ್ರ ಕಾರ್ಯಕರ್ತರಿಗೆ ಧೈರ್ಯ ತಂದು ಕೊಡುತ್ತದೆ ಎನ್ನುವ ಅಭಿಪ್ರಾಯ ಕೂಡ ಬಲವಾಗುತ್ತಿದೆ. ಹಾಗಾಗಿ ಈಶ್ವರಪ್ಪ ಪರವಾಗಿ ಅನುಕಂಪದ ಅಲೆ ಆರಂಭವಾಗಿದೆ.

ಪರಿಣಾಮ 74ರ ಹರೆಯದ ಈಶ್ವರಪ್ಪ ಕೆಚ್ಚಿನಿಂದ ಯಡಿಯೂರಪ್ಪ ಕುಟುಂಬಕ್ಕೆ ಸೆಡ್ಡು ಹೊಡೆದು ದಿನಕ್ಕೆ ಇಪ್ಪತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸುತ್ತ ನುಗ್ಗುತ್ತಿದ್ದಾರೆ.

ಎಲ್ಲ ಕಡೆ ಸಾವಿರಾರು ಜನ ಸೇರಿಲ್ಲ ನಿಜ ಆದರೆ ಒಮ್ಮೆ ಅವರ ಭಾಷಣ ಕೇಳಿದ ಹಿಂದೂ ಕಾರ್ಯಕರ್ತರು ಅವರಾಗಿಯೇ ಮತ್ತಷ್ಟು ಉತ್ಸಾಹಿಗಳನ್ನು ಒಗ್ಗೂಡಿಸುತ್ತಿದ್ದಾರೆ. ಕ್ರಮೇಣ ಈ ಸಂಖ್ಯೆ ಹೆಚ್ಚುತ್ತಿದೆ.

ಶಿವಮೊಗ್ಗ, ಶಿಕಾರಿಪುರ, ಸೊರಬ, ಭದ್ರಾವತಿ, ಬೈಂದೂರು ಕ್ಷೇತ್ರಗಳಲ್ಲಿ ಈಗಾಗಲೇ ಈಶ್ವರಪ್ಪ ಪರ ಸ್ಪಷ್ಟವಾದ ಅಭಿಪ್ರಾಯ ರೂಪುಗೊಳ್ಳತೊಡಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post