ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯ

ಮತ ಹಾಕುವ ಯಂತ್ರವಾಗಿ ಹಿಂದೂ ಕಾರ್ಯಕರ್ತರ ಬಳಕೆ
ಬಿಜೆಪಿಯಲ್ಲಿ ಆರಗ ಜ್ಞಾನೇಂದ್ರರಿಗೆ 10 ಬಾರಿ ಅವಕಾಶ ಸಿಕ್ಕಿದೆ
ಕೆ.ಎಸ್.‌ ಈಶ್ವರಪ್ಪ ಒಂದು ಬಾರಿ ಸಂಸದರಾಗಲು ಅಡ್ಡಿ ಯಾಕೆ..?
ಹಿಂದುತ್ವಕ್ಕಾಗಿ ವಿಜಯೇಂದ್ರ, ರಾಘವೇಂದ್ರ ಸ್ಥಾನ ತ್ಯಾಗ ಮಾಡಲಿ

ನಿಜವಾದ ಬಿಜೆಪಿ ಸಿದ್ದಾಂತದ ಪ್ರತಿಪಾದಕರಾಗಿ ಶಾಸಕ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಗೋಶಾಲೆ ನಿರ್ಮಾಣ ಮಾಡುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ಎಂದಿಗೂ ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ಅವರು ನಿಂತಿಲ್ಲ. ಈಗಲಾದರೂ ಈಶ್ವರಪ್ಪ ಪರವಾಗಿ ನಿಂತಿಕೊಂಡು ಗೆಲ್ಲಿಸಿಕೊಂಡು ಬರಲು ಯೋಗದಾನ ಮಾಡಬೇಕು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗವನ್ನು ಮತ ಹಾಕುವ ಯಂತ್ರದಂತೆ ಬಳಸಿಕೊಂಡಿರುವ ಅವರಿಗೆ 5 ದಶಕಗಳ ರಾಜಕೀಯದ ಅವಕಾಶ ಸಿಕ್ಕಿದೆ.  ಕ್ಷೇತ್ರದಲ್ಲಿ 10 ಬಾರಿ ಚುನಾವಣೆ ಎದುರಿಸಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಷ್ಟಾದರೂ ಅವರಿಗೆ ರಾಜಕೀಯ ಆಸೆ ತೀರಿಲ್ಲ. ಕಾಂಗ್ರೆಸ್‌ ಪಕ್ಷದಂತೆ ಬಿಜೆಪಿಯಲ್ಲಿ ವಂಶಾಡಳಿತ ವ್ಯವಸ್ಥೆ ಸ್ಥಾಪಿಸಲು ರಾಷ್ಟ್ರಭಕ್ತರ ಬಳಗ ಬಿಡುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಸದಸ್ಯ ಮೇಲಿನಕೊಪ್ಪ ಮಹೇಶ್‌ ಹೇಳಿದರು.
ಸೋಮವಾರ ಪಟ್ಟಣದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸಣ್ಣ ಕಾರ್ಯಕರ್ತರನ್ನು ಗುರುತಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಯಡಿಯೂರಪ್ಪ ವಂಶವೃಕ್ಷ ರಾಜಕೀಯ ಮಾಡುವುದನ್ನು ರಾಜ್ಯದ ಬಿಜೆಪಿ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶ ಇದೆ. ಒಬ್ಬ ಮಗ ಬಿಜೆಪಿ ರಾಜ್ಯಾಧ್ಯಕ್ಷ ಆದರೆ ಮತ್ತೊಬ್ಬ ಸಂಸದರಾಗಿದ್ದಾರೆ. ಬಿಜೆಪಿಯ ಕುಟುಂಬ ರಾಜಕಾರಣವನ್ನು ಜನ ಅಸಹ್ಯ ರೀತಿಯಲ್ಲಿ ಟೀಕಿಸುತ್ತಿದ್ದಾರೆ. ಇದನ್ನು ತಡೆಯುವುದು ಅನಿವಾರ್ಯ. ಪ್ರತಿಯೊಬ್ಬ ಕಾರ್ಯಕರ್ತರು ಸೆಟೆದು ನಿಲ್ಲಬೇಕು ಎಂದು ಕರೆ ನೀಡಿದರು.
ಮೋದಿ, ಅಮಿತ್ ಶಾ ಕೂಡ ಕುಟುಂಬ ರಾಜಕಾರಣ ವಿರೋಧಿಸಿಕೊಂಡು ಬಂದಿದ್ದರು. ಬಿಜೆಪಿಯಲ್ಲಿ ಕೂಡ ಅವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಯಡಿಯೂರಪ್ಪ ಟಿಕೆಟ್ ಹಂಚಿಕೆಯಲ್ಲಿ ಕೂಡ ಕೆಲಸ ಮಾಡಿದ್ದಾರೆ. ಹಾಗಿದ್ದು ಈಶ್ವರಪ್ಪ ಅವರಿಗೆ ಮೋಸ ಯಾಕೆ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದುತ್ವ ಉಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ ಇಬ್ಬರು ಹಿರಿಯರಿಗೆ ಸ್ಥಾನವನ್ನು ತ್ಯಾಗ ಮಾಡಬೇಕು. ಹಿಂದುತ್ವ ಉಳಿಸಲು ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಅವರಿಗೆ ಮೋಸ ಆಗಿದೆ. ಆದರೂ ಪಕ್ಷ, ಸಿದ್ಧಾಂತಕ್ಕಾಗಿ ಸುಮ್ಮನಿದ್ದರು. ಆಗ ಯಡಿಯೂರಪ್ಪ ನಿಮ್ಮ ಮಗನಿಗೆ ಹಾವೇರಿ ಟಿಕೆಟ್‌ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದರಿಂದ ಈಶ್ವರಪ್ಪ ಸಿಡಿದಿದ್ದಾರೆ. ಬಹುತೇಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದ ನಮ್ಮ ಹಿಂದುಳಿದ ನಾಯಕ ಈಶ್ವರಪ್ಪ ಹದಗತಿಗೆ ತರಲು ಯಡಿಯೂರಪ್ಪ ಕಾರಣ ಎಂದು ಟೀಕಿಸಿದರು.

ಮೈಸೂರಿನಲ್ಲಿ ಹಿಂದುತ್ವದ ಪ್ರತಿಪಾದಕ ಸಂಸದ ಪ್ರತಾಪ್‌ ಸಿಂಹ ಬದಲಿಗೆ ಮೈಸೂರು ರಾಜ ಯಧುವೀರ್‌ಗೆ ಟಿಕೆಟ್‌ ಕೊಡುವ ಅವಶ್ಯಕತೆ ಏನಿತ್ತು. ಹಾಗಾದರೆ ಸಣ್ಣಪುಟ್ಟ ಕಾರ್ಯಕರ್ತರು ಪಕ್ಷದ ಸೇವೆ ಮಾಡಿಕೊಂಡು ಇರಬೇಕೆ ಎಂದು ಪ್ರಶ್ನಿಸಿದ ಅವರು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಗೋ-ಬ್ಯಾಕ್‌ ಬಿಸಿ ಮುಟ್ಟಿತ್ತು. ಕಾರ್ಯಕರ್ತರಿಂದಲೇ ಭಹಿಷ್ಕರಿಸಿದ ಅವರನ್ನು ಸದಾನಂದ ಗೌಡರಿಗೆ ಟಿಕೆಟ್‌ ತಪ್ಪಿಸಿ ಬೆಂಗಳೂರು ಗ್ರಾಮಾಂತರ ಟಿಕೆಟ್‌ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು. ನಮಗೂ, ನಮ್ಮ ಕುಟುಂಬಕ್ಕೂ, ನಮ್ಮ ಒಡನಾಡಿಗಳಿಗೂ ಅವಕಾಶ ಮಾಡಿಕೊಡಬೇಕೆಂಬ ಧೋರಣೆ ಸರಿಯಲ್ಲ. ಇದನ್ನು ಪ್ರಶ್ನಿಸಲೇಬೇಕು ಎಂದು ಕಿಡಿಕಾರಿದರು.

ನಮ್ಮದೇ ನಿಜವಾದ ಬಿಜೆಪಿ ಪಕ್ಷ. ಈಗಿರುವುದು ಕಾಂಗ್ರೆಸ್ ಪಕ್ಷದ ಛಾಯೆ. ರಾಷ್ಟ್ರಭಕ್ತರ ಬಳಗದ್ದೇ ಒರಿಜಿನಲ್ ಬಿಜೆಪಿ. ನಮ್ಮ ಅಸ್ಥಿತ್ವಕ್ಕೂ ದಕ್ಕೆ ಆಗುತ್ತಿದೆ. ಹಿಂದೆ ಪಕ್ಷದ ಆಂತರಿಕ ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದೇವೆ. ಗೋಶಾಲೆ ಆಗುತ್ತೆ ಅಂತ ಅಂದಿದ್ರು. ಹಿಂದೂ ಕಾರ್ಯಕರ್ತರಿಗೂ ಅನ್ಯಾಯವಾಗಿದೆ. ನಮ್ಮ ಆತ್ಮ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇವೆ. ನ್ಯೂನ್ಯತೆ ಸರಿಪಡಿಸಲು ಹೇಳುತ್ತಿದ್ದೇವೆ. ಕೋಲಾರ, ಮಂಡ್ಯ, ಹಾಸನದಲ್ಲಿ ಬಿಜೆಪಿ ಚಿಹ್ನೆ ಇಲ್ಲದಿದ್ದರು ಬಿಜೆಪಿ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಮಾನಸಿಕವಾಗಿ ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್‌, ಬಿಜೆಪಿ ಬೆಂಬಲ ನೀಡುತ್ತದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.
ಜಿಲ್ಲೆ, ತಾಲ್ಲೂಕಿನಲ್ಲಿ ಲಾಭದ ವಿಚಾರದಲ್ಲಿ ಜಾತಿ, ಧರ್ಮದ ಭೇದ ಇಲ್ಲ‌. ಈಶ್ವರಪ್ಪ ಪಕ್ಷ ಕಟ್ಟಿದವರು, ಯಡಿಯೂರಪ್ಪ ಸಮಕಾಲೀನರು ಹಾಗಾಗಿ  ಆರಗ ಜ್ಞಾನೇಂದ್ರ ಬೆಂಬಲವನ್ನು ಕೇಳುತ್ತಿದ್ದೇವೆ. ಈಶ್ವರಪ್ಪ ಅವರಿಗೆ ಅವರದೇ ಆದ ತಾಕತ್ತು ಇದೆ. ಬಂಡಾಯಕ್ಕೆ ಅಂತಹ ಶಕ್ತಿ ಬೇಕು. ಬಿಜೆಪಿ ಪಕ್ಷದೊಳಗಿನ ಅಸಮಾಧಾನಿತರು ದೆಹಲಿ ಮಟ್ಟದಲ್ಲೂ ಇದ್ದಾರೆ. ಹಾಗಾಗಿ ವಿಚಾರ ತಣ್ಣಗೆ ಮಾಡುತ್ತಿಲ್ಲ. ಇದರ ಸ್ವರೂಪ ಬೇರೆಯದ್ದೇ ಆಗಿದೆ. ನಮಗೆಲ್ಲಾ ಈಶ್ವರಪ್ಪ ಗಾಡ್‌ ಫಾದರ್‌ ಇದ್ದಂತೆ. ಅಲ್ಲದೇ ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿ. ಹಿಂದುತ್ವಕ್ಕಾಗಿ ವಿಜಯೇಂದ್ರ, ರಾಘವೇಂದ್ರ ಸ್ಥಾನ ತ್ಯಾಗ ಮಾಡಲಿ. ಇದು ನಮ್ಮೆಲ್ಲರ ಒತ್ತಾಯ ಎಂದು ಹೇಳಿದರು.

ಜಿಲ್ಲಾ ಒಬಿಸಿ ಸದಸ್ಯ ಮಹೇಶ್ ಮೇಲಿನಕೊಪ್ಪ, ಸಾಲೂರು ಗ್ರಾ.ಪಂ. ಸದಸ್ಯ ರಾಘವೇಂದ್ರ, ಗರ್ತಿಕೆರೆ ಗ್ರಾ.‌ಪಂ. ಸದಸ್ಯ ಸಚಿನ್, ಹಿಂದೂ ಸಂಘಟನೆಯಲ್ಲಿ ಮದನ್ ಗೊರಕೋಡು, ಅವಿನಾಶ್ ಜಾದವ್, ಶಶಿ ಕುಂದರ್, ಪ್ರದೀಪ್ ಕೋದೂರು, ಚಿಡುವ ಸುರೇಶ್‌, ಅಭಿ ಕೋಣಂದೂರು ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post