ಕೆ.ಎಸ್. ಈಶ್ವರಪ್ಪಗೆ ಸಂಘಪರಿವಾರ‌ದ ಬೆಂಬಲ..?

ಬಿ.ಎಸ್.‌ ಯಡಿಯೂರಪ್ಪ ಪರಿವಾರದಲ್ಲಿ ಆತಂಕ
ಕುಟುಂಬ ರಾಜಕಾರಣದ ವಿರುದ್ಧ ಸೆಟೆದು ನಿಂತರೇ ಹಿಂದೂಗಳು
ಮಾಜಿ ಡಿಸಿಎಂ ತ್ಯಾಗಕ್ಕೆ ಬೆಲೆ ಇಲ್ಲವೇ…?

ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪರ್ಧೆಯಿಂದ ಬಾರೀ ರಂಗೇರಿದೆ. ಒಂದು ಕಾಲದ ಕುಚುಕು, ಚಿಗರಿ ದೋಸ್ತ್ ಬಿ.ಎಸ್. ಯಡಿಯೂರಪ್ಪ ವಿರುದ್ಧವೇ ತೊಡೆತಟ್ಟಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಪೆಟ್ಟು ತಿಂದ ಹಾವಿನಂತೆ ಬುಸುಗುಡುತ್ತಿರುವ ಈಶ್ವರಪ್ಪ ಹೇಗೆ ಯಾರಿಗೆ ಕಚ್ಚುತ್ತಾರೆ ಎಂಬುದೇ ತಿಳಿಯದ ರಹಸ್ಯವಾಗಿದೆ. ಮಗ ಕಾಂತೇಶ್ ಗೆ ಹಾವೇರಿ ಲೋಕಸಭಾ ಬಿಜೆಪಿ ಟಿಕೆಟ್ ತಪ್ಪಿಸಿರುವುದು ಕೇವಲ ನೆಪದಂತೆ ಕಾಣಿಸುತ್ತಿದ್ದು ಹಲವು ವರ್ಷಗಳ ಬಿಜೆಪಿ ಪಕ್ಷದೊಳಗಿನ ಅಸಮಾಧಾನವನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸುತ್ತಿದ್ದು ಅದಕ್ಕೆ ನಿದಾನವಾಗಿ ಬೆಂಬಲ ಕ್ರೋಡೀಕರಣವಾಗುತ್ತಿರುವುದು ಯಡಿಯೂರಪ್ಪ ಪರಿವಾರ ಚಿಂತೆಗೀಡಾಗುವಂತೆ ಮಾಡಿದೆ.

ಅಷ್ಟಕ್ಕೂ ಕೆ.ಎಸ್. ಈಶ್ವರಪ್ಪ ಎತ್ತುತ್ತಿರುವ ಪ್ರಶ್ನೆಯಲ್ಲಿ ನಿಜಕ್ಕೂ ಸತ್ಯಾಂಶ ಇದೆಯಾ ಅಂತ ಹಿಂದುತ್ವ ನಿಷ್ಟರಲ್ಲಿ ಕೇಳಿದರೆ ಹೌದು ಎನ್ನಲು ಯಾರು ಹಿಂಜರಿಯುತ್ತಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಕಟ್ಟಿ ಅದಕ್ಕೆ ನೀರೆಯುವ ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತಂದು ಕೂರಿಸಿದವರಲ್ಲಿ ನಿಸ್ಸಂಶಯವಾಗಿ ಸಿಂಹಪಾತ್ರ ವಹಿಸಿದವರು. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಪಕ್ಷವಿನ್ನು ಚಿತ್ರನ್ನ ಮೊಸರನ್ನ ಹಂತದಲ್ಲಿದ್ದಾಗ ಅವರೊಂದಿಗೆ ಅಂದು ಪಕ್ಷ ಕಟ್ಟಲು ಜೀವಮಾನವನ್ನೇ ತ್ಯಾಗ ಮಾಡಿ ಯಡಿಯೂರಪ್ಪಗೆ ಸರಿಸಮಾನವಾಗಿ ದುಡಿದದ್ದು ಇದೇ ಕೆ.ಎಸ್. ಈಶ್ವರಪ್ಪ ಅವರಲ್ಲವೇ ಎಂದು ಮೂಲ ಬಿಜೆಪಿಯಲ್ಲಿ ಕೇಳಿದರೆ ಇದು ಕೂಡ ಸತ್ಯ ಎನ್ನುತ್ತಾರೆ.

ಅಪ್ಪಟ ಸಮಾಜವಾದಿ ಹಾಗೂ ಕಾಂಗ್ರೆಸ್‌ ನೆಲವಾಗಿ ಗುರುತಿಸಿಕೊಂಡಿದ್ದ ಶಿವಮೊಗ್ಗವನ್ನು ಬಿಜೆಪಿಯ ಶಕ್ತಿ ಕೇಂದ್ರವಾಗಿ ರೂಪಿಸಿದ ಪೂರ್ಣ ಶ್ರೇಯಸ್ಸು ಡಿ.ಎಸ್.‌ ಶಂಕರಮೂರ್ತಿ, ಬಿ.ಎಸ್.‌ ಯಡಿಯೂರಪ್ಪ, ಈಶ್ವರಪ್ಪರಿಗೆ ಸಲ್ಲುತ್ತದೆ. ಶಂಕರಮೂರ್ತಿ ವಯಸ್ಸಿನ ಕಾರಣ ಹಿನ್ನೆಲೆಗೆ ಸರಿಯುತ್ತಿರುವ ಹೊತ್ತಿಗೆ ಅವರ ಪುತ್ರ ಡಿ.ಎಸ್.‌ ಅರುಣ್‌ ವಿಧಾನ ಪರಿಷತ್‌ ಸದಸ್ಯನಾಗಿ ರಾಜಕೀಯ ಭವಿಷ್ಯ ಕಂಡರು. ಯಡಿಯೂರಪ್ಪ ಇಬ್ಬರು ಮಕ್ಕಳಲ್ಲಿ ರಾಘವೇಂದ್ರ ಇದಾಗಲೇ 3ನೇ ಅವಧಿಯ ಸಂಸದರಾಗಿ ನಾಲ್ಕನೇ ಅವಧಿಗೆ ಸ್ಪರ್ಧಿಸಿದ್ದಾರೆ. ಕಿರಿಯ ಮಗ ಬಿ.ಎಸ್.‌ ವಿಜಯೇಂದ್ರ ಪಕ್ಷದ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿ ಎಲ್ಲಾ ಹಿರಿಯನ್ನು ಹಿಂದೆ ಹಾಕಿ ರಾಜ್ಯಾಧ್ಯಕ್ಷ ಪಟ್ಟದಲ್ಲಿ ವಿರಾಜಮಾನರಾಗಿದ್ದಾರೆ. ಇಂತಿರುವಾಗ ಇಲ್ಲಿಯ ತನಕ ಎಂದೂ ಪಕ್ಷ ಬಿಡದ ಯಾವತ್ತಿಗೂ ಸಡ್ಡು ಹೊಡೆಯದ ಈಶ್ವರಪ್ಪ ತನ್ನ ಪುತ್ರನಿಗೆ ಲೋಕಸಭಾ ಟಿಕೆಟ್‌ ಕಳಿದರೆ ತಪ್ಪೇನು? ಕುಟುಂಬ ರಾಜಕಾರಣದ ಸೂತ್ರ ಈಶ್ವರಪ್ಪಗೆ ಮಾತ್ರ ಅನ್ವಯವಾಗುವುದಾ. ರಾಜ್ಯದ ಬೇರಾವ ಬಿಜೆಪಿ ಮುಖಂಡರಿಗೂ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಮೂಲ ಬಿಜೆಪಿಯವರೇ ಮುಂದಿಡುತ್ತಿದ್ದಾರೆ.

ಈಶ್ವರಪ್ಪ ಎಲ್ಲಾ ಸಭೆಗಳಲ್ಲೂ ಹೇಳುತ್ತಿರುವ ಮಾತು ಒಂದೇ ಒಂದು. ಆದರೆ ಅದಕ್ಕೆ ಎಲ್ಲಾ ಮಾತಿಗಿಂತಲೂ ಹೆಚ್ಚಿನ ಶಕ್ತಿ ಮತ್ತು ಪ್ರೋತ್ಸಾಹ ನಿದಾನಕ್ಕೆ ರೂಪುಗೊಳ್ಳುತ್ತಿದೆ. ಅದೇನೆಂದರೆ ನನ್ನ ಜೊತೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡ ಮುಖಂಡರು ಇಲ್ಲದಿರಬಹುದು. ಆದರೆ ನನ್ನ ಹಿಂದೆ ಬೇಕಾದಷ್ಟು ಜನರ ಬೆಂಬಲ, ಆಶೀರ್ವಾದ ಇದೆ. ರಾಜ್ಯದ ಎಲ್ಲಾ ಮುಖಂಡರು ಬೆಂಬಲ ಸೂಚಿಸಿದ್ದಾರೆ. ನನ್ನ ಸ್ಪರ್ಧೆ ಕೂಡದು ಎನ್ನುವಂತಿದ್ದರೆ ದೆಹಲಿಗೆ ಗೃಹಸಚಿವ ಅಮಿತ್ ಶಾ ಕರೆದು ಸಂಧಾನ ಮಾಡುತ್ತಿದ್ದರು. ಅದರ ಬದಲು ಭೇಟಿಗೆ ಅವಕಾಶ ನೀಡಲಿಲ್ಲಾ ಎಂದರೆ ಚುನಾವಣೆಗೆ ನಿಲ್ಲಿ ಎಂದು ಅವರೇ ಪರೋಕ್ಷವಾಗಿ ಮೆಸೇಜ್ ಕೊಟ್ಟಂತೆ ಎನ್ನುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಣ್ಣಗೆ ಉರುಳಿಸಿರುವ ಈ ದಾಳದಿಂದ ಮೋದಿಯ ಕಟ್ಟಾ ಅಭಿಮಾನಿಗಳು, ಹಿಂದೂ ಕಾರ್ಯಕರ್ತರ ಪಾಲಿಗೆ ನೀಲಿಕಣ್ಣಿನ ವ್ಯಕ್ತಿಯಾಗಿ ಕಂಡು ಬರುತ್ತಿದ್ದಾರೆ.

ಇದಲ್ಲದೇ ಈಶ್ವರಪ್ಪ ಹಿಂದುತ್ವ ಮತ್ತು ಮೋದಿಯವರ ಭಾವಚಿತ್ರವನ್ನೇ ಬಳಸಿಕೊಂಡು ಭರ್ಜರಿ ಪ್ರಚಾರ ಮಾಡುತ್ತಿದ್ದು ಅದಕ್ಕೆ ದೊರಕುತ್ತಿರುವ ಪ್ರತಿಕ್ರೀಯೆ ನೋಡಿ ಯಡಿಯೂರಪ್ಪ ಪರಿವಾರ ನಿಧಾನಕ್ಕೆ ಬೆವರುತ್ತಿರುವುದಂತೂ ಸತ್ಯ. ಈಗಾಗಲೇ ಮೋದಿಯವರ ಫೋಟೋವನ್ನು ಈಶ್ವರಪ್ಪ ಬಳಸಬಾರದು ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ತಾಕೀತು ಮಾಡಿದ್ದಾರೆ. ಮತ್ತು ಮೋದಿ ಭಾವಚಿತ್ರ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ.

ಬಿಜೆಪಿ ಪಾಳಯದಲ್ಲಿ ಅವರೊಬ್ಬ ಅದ್ವಿತೀಯ ಸಂಸದ, ದೇಶದಲ್ಲಿ ನರೇಂದ್ರ ಮೋದಿ ಬಿಟ್ಟರೆ ಮತ್ತೊಬ್ಬರು ಹಗಲು ರಾತ್ರಿ ಅಭಿವೃದ್ಧಿಗೆ ದುಡಿದವರೆಂದರೆ ಅದು ಕೇವಲ ರಾಘವೇಂದ್ರ ಮಾತ್ರ ಎಂದೆಲ್ಲಾ ಪ್ರಚಾರ ಸಭೆಗಳಲ್ಲಿ ಬಣ್ಣಿಸಲಾಗುತ್ತಿದೆ. ಆದರೆ 15 ವರ್ಷಗಳ ಕಾಲ ಸಂಸದರಾಗಿ ಕೆಲಸ ಮಾಡಿದ್ದರೂ ಮಲೆನಾಡಿನ 60 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ, ಶರಾವತಿ ಇನ್ನಿತರ ಮುಳುಗಡೆ ಸಂತ್ರಸ್ತರು, ಅರಣ್ಯ ವಾಸಿಗಳ ಸಮಸ್ಯೆ ಮಾತ್ರ ಯಥಾಸ್ಥಿತಿಯಲ್ಲೇ ಮುಂದುವರಿದೆ. ಇದಲ್ಲದೇ ಹಿಂದುತ್ವ ಮತ್ತು ಕಾರ್ಯಕರ್ತರ ರಕ್ಷಣೆಯಲ್ಲಿ ಹಿಂದೆ ಮುಂದೆ ನೋಡದೆ ಈಶ್ವರಪ್ಪ ಧಾವಿಸಿದಂತೆ ರಾಘವೇಂದ್ರ ಸ್ಪಂದಿಸಿಲ್ಲ ಎಂಬ ಆರೋಪವೂ ಮೂಲ ಕಾರ್ಯಕರ್ತರಲ್ಲಿಯೇ ಇದೆ.

ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಟರು, ಸಂಘಪರಿವಾರದ ಮುಖಂಡರು ಈ ಬಾರಿ ಸ್ಪರ್ಧಿಸುವುದು ಬೇಡ ಎಂದಾಗ ಹಿಂದುಮುಂದು ನೋಡದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಪಕ್ಷದ ಉಳಿವಿಗಾಗಿ ತ್ಯಾಗ ಮಾಡಿ ತಮ್ಮದೇ ಶಿಷ್ಯ ಚನ್ನಬಸಪ್ಪ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಾಗಾಗಿ ಈಶ್ವರಪ್ಪ ವಿರುದ್ಧ ನೇರವಾಗಿ ಟೀಕೆ ಮಾಡುವ ವರ್ಗವೇ ಕಾಣಿಸುತ್ತಿಲ್ಲ. ಇದರಿಂದಾಗಿ ನಿಜವಾದ ಬಿಜೆಪಿ  ಮುಖಂಡರು ಎಲ್ಲಿದ್ದಾರೆ. ಯಾರಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂಬ ಗೊಂದಲ ಏರ್ಪಟ್ಟಿದೆ. ಪರೋಕ್ಷವಾಗಿ ಬಿಜೆಪಿ ಹಾಗೂ ಹಿಂದುತ್ವ ಗಟ್ಟಿಯಾಗಿ ನೆಲೆನಿಲ್ಲಲು ಈಶ್ವರಪ್ಪ ಚುನಾವಣೆ ಎದುರಿಸುವುದು ಅನಿವಾರ್ಯ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿದೆ. ಅಲ್ಲದೇ ಸಭೆಯಲ್ಲಿ ಕಾಣಿಸಿಕೊಂಡರೂ ಫೋಟೊ ತೆಗೆಸಿಕೊಳ್ಳಲು ಹಿಂಜರಿಯುತ್ತಿರುವ ಅನೇಕ ಮುಖಂಡರು ಕೂಡ ಭಿನ್ನಮತೀಯರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಂತೆ ಕಂಡು ಬರುತ್ತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post