ಈಶ್ವರಪ್ಪರಿಂದ ನಾನೇನು ಕಲಿಬೇಕಾಗಿಲ್ಲ

ನನ್ನಮ್ಮ, ಅತ್ತೆ ಸಂಸ್ಕೃತಿ ಕಲಿಸಿಕೊಟ್ಟಿದ್ದಾರೆ
ಶಿವಮೊಗ್ಗದಲ್ಲಿ ನನಗೆ ಮನೆ ಇಲ್ಲ ಅಂದವರ್ಯಾರು?
ಶಿವಮೊಗ್ಗ, ಕುಬಟೂರಿನಲ್ಲಿ ನನ್ನದೇ ಮನೆಗಳಿವೆ – ಗೀತಾ ಶಿವರಾಜಕುಮಾರ್‌

ಬೆವರಿನಿಂದ ಕುಂಕುಮ ಚೆದುರಿ ಹೋಗಿರುವುದನ್ನು ನಾನು, ಶಿವರಾಜಕುಮಾರ್ ಒರೆಸಿಕೊಂಡಿದ್ದೇವೆ.‌ ಅದಕ್ಕೆ ಕೆ.ಎಸ್.‌ ಈಶ್ವರಪ್ಪ ಕ್ಷಮೆ ಕೇಳಬೇಕು ಅಂತ ಅಂದಿದ್ದಾರೆ. ಅವರಿಂದ ನಾನೇನು ಕಲಿಬೇಕಾಗಿಲ್ಲ. ನನ್ನಮ್ಮ, ಅತ್ತೆ ಸಂಸ್ಕೃತಿ, ಪರಂಪರೆ ಕಲಿಸಿಕೊಟ್ಟಿದ್ದಾರೆ. ಇವತ್ತಿಗೂ ನಮ್ಮ ಮನೆಯಲ್ಲಿ ಹೊಸಲು, ತುಳಸಿ ಪೂಜೆ ಮಾಡುವುದು ನಾನೇ ಎಂದು ಮೇಲಿನಕುರುವಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಗುರು ಸಂಸ್ಥಾನ ನಿಟ್ಟೂರು ಇಲ್ಲಿ ಗುರುಗಳಿಂದ ಗೌರವ ಸ್ವೀಕರಿಸಿದರು.

ಯಾರು ಹೇಳಿದ್ದು ಶಿವಮೊಗ್ಗದಲ್ಲಿ ನನಗೆ ಮನೆ ಇಲ್ಲ ಅಂತ. ಕುಬಟೂರು ಮತ್ತು ಶಿವಮೊಗ್ಗದಲ್ಲಿ ನನ್ನದೇ ಮನೆಗಳಿವೆ. ಪ್ರಧಾನಿ ನರೇಂದ್ರ ಮೋದಿ ಹೆಣ್ಣಿನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಮಾಂಗಲ್ಯವನ್ನು ಕಿತ್ತು ಬೇರೆಯವರಿಗೆ ಯಾಕೆ ಕೊಡಬೇಕು. ಅವರ ಮಾತಿನ ಅರ್ಥ ಏನು? ಕೇಂದ್ರ ಸರ್ಕಾರ ರೈತರು, ಬಡವರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಮಹಿಳೆಯರ ದಿನಬಳಕೆ ವಸ್ತುಗಳಿಂದ ಹಿಡಿದು ಹಾಲು, ದವಸಧಾನ್ಯ, ಗ್ಯಾಸ್‌ ಬೆಲೆ ಏರಿಸಿದ್ದಾರೆ. ಅಡುಗೆ ಮಾಡುವುದು ಕೂಡ ಕಷ್ಟವಾಗಿದೆ. ಅವಕಾಶ ಕೊಟ್ಟರೆ ನಿಮ್ಮ ಸೇವೆ ಮಾಡುವೆ ಎಂದು ಮತಯಾಚಿಸಿದರು.

“ಮನೆಯ ಜವಾಬ್ದಾರಿ ಹೊತ್ತು 38 ವರ್ಷಗಳ ಕಾಲ ಸಂಸಾರ ನಡೆಸಿದ ಗೀತಾಗೆ ಆಡಳಿತದ ಅನುಭವ ಯಾಕೆ ಬೇಕು. ಅನುಭವ ಇದ್ದು ಭರವಸೆ ಕೊಟ್ಟವರು ಕೂಡ ಅಭಿವೃದ್ಧಿ ಮಾಡಿಲ್ಲ. ನಮಗೆ ಸಿನಿಮಾ ಎಲ್ಲವನ್ನು ಕೊಟ್ಟಿದೆ. ರಾಜಕೀಯದಿಂದ ಹಣ ಮಾಡುವ ಅಗತ್ಯ ಇಲ್ಲ. ಒಂದು ಅವಕಾಶ ಕೊಡಿ” ಎಂದು ನಟ ಶಿವರಾಜಕುಮಾರ್‌ ಕೋರಿದರು.

“ಶ್ರೀರಾಮ ಎಂದು ಪ್ರಚಾರ ಪಡೆಯುವ ನರೇಂದ್ರ ಮೋದಿ ತಮ್ಮ ಮನೆಯ ಸೀತೆ ಯಾರೆಂದು ಜಗತ್ತಿಗೆ ತಿಳಿಸಿಕೊಡಲಿ. ಉದ್ಯಮಿಗಳ ಪಾಲಿಗಷ್ಟೇ ಬಿಜೆಪಿ ಅಭಿವೃದ್ಧಿ ಕಾಣಬಹುದು. ಆರೋಗ್ಯ, ಶಿಕ್ಷಣ, ದೇಶದ ಆರ್ಥಿಕ ಸ್ಥಿತಿ, ಉದ್ಯಮ ಕ್ಷೇತ್ರ ಉದ್ದಾರ ಮಾಡಿಲ್ಲ. ಬಿಜೆಪಿಯ ಶ್ರೀಮಂತವರ್ಗ ಮಾತ್ರ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎಂದು ಅಪಹಾಸ್ಯ ಮಾಡುತ್ತಿದೆ. ದೇಶದ ಶ್ರಮಿಕ ಕಾರ್ಮಿಕ ವರ್ಗ ಪ್ರತಿದಿನ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ನಿಯಮವನ್ನು ಬಿಜೆಪಿ ಜಾರಿಗೆ ತಂದಿದೆ” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಟೀಕಿಸಿದರು.

“ಸುಳ್ಳು ಹೇಳುವುದು ಬಿಜೆಪಿ ಹುಟ್ಟು ಗುಣ. ಸುಳ್ಳು ಹೇಳುತ್ತಲೇ 20 ಸಾವಿರ ಇದ್ದ ಬಂಗಾರ ದರವನ್ನು 60 ಸಾವಿರಕ್ಕೆ ಏರಿಸಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ರೈತರ 600 ಕೋಟಿ ಬಡ್ಡಿ ಮನ್ನಾ ಮಾಡಿದೆ” ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಕಡಿದಾಳು ದಿವಾಕರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ ಮುಖಂಡರಾದ ಕಡ್ತೂರು ದಿನೇಶ್‌, ವಿಶ್ವನಾಥ ಶೆಟ್ಟಿ, ಟಿ.ಎಲ್.‌ ಸುಂದರೇಶ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post