ಕಾಂಗ್ರೆಸ್‌ ಕೆಲ ಮುಖಂಡರು ಬಿಜೆಪಿಗೆ ಡೀಲ್‌ ?

ಇನ್ನೂ ಟೇಕಾಫ್‌ ಆಗದ ಪ್ರಚಾರ
ಫಲ ನೀಡದ ನನ್ನ ಬೂತ್‌ ನನ್ನ ಜವಾಬ್ದಾರಿ ?
ಗೆಲುವಿನ ಅವಕಾಶ ಕೈಚೆಲ್ಲಲಿದೆಯೇ ಕಾಂಗ್ರೆಸ್‌

ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕೇವಲ ರಾಜ್ಯ ಮಾತ್ರ ಅಲ್ಲ ಇಡೀ ದೇಶದ ಗಮನ ಸೆಳೆದಿದೆ. ಕಾರಣ ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್‌ ಎರಡನೇ ಬಾರಿಗೆ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಿರಂತರ ಮೂರು ಬಾರಿ ಗೆದ್ದು ಇದೀಗ ನಾಲ್ಕನೇ ಸಲ ಗೆಲ್ಲಲು ಹವಣಿಸುತ್ತಿರುವ ಬಿಜೆಪಿಯ ಶಕ್ತಿಕೇಂದ್ರ ಬಿ.ಎಸ್.‌ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ವಿರುದ್ಧ ಸೆಣಸುತ್ತಿದ್ದಾರೆ. ಕಾರ್ಯಕರ್ತರ ನೆಟ್‌ ವರ್ಕ್‌ ಹಣ, ಸಮುದಾಯದ ಬಲ ಎಲ್ಲವನ್ನು ಆರಂಭಿಕ ಹಂತದಲ್ಲಿ ನೋಡಿದಾಗ ರಾಘವೇಂದ್ರ ಗೆಲುವು ಈ ಬಾರಿ ಸುಲಭ ಸಾಧ್ಯ ಎಂದೇ ಪ್ರಚಾರವಾಗಿತ್ತು.

ಆದರೆ ಯಾವಾಗ ಯಡಿಯೂರಪ್ಪರ ಒಂದು ಕಾಲದ ಜಿಗ್ರಿ ದೋಸ್ತ್‌ ಬಿಜೆಪಿ ಕಟ್ಟಾಳು ಕೆ.ಎಸ್.‌ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಿದರೋ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆಯುವ ಲಕ್ಷಣ ಕಂಡು ಬಂದಿದ್ದು ಈಗ ಸ್ಪರ್ಧೆ ತ್ರಿಕೋನ ಎಂಬ ಹಂತ ತಲುಪಿದೆ. ಈಶ್ವರಪ್ಪ ಶಿಕಾರಿಪುರದಲ್ಲೇ ಭರ್ಜರಿ ಜನಸಂದಣಿ ಸೇರಿಸುವ ಮೂಲಕ ನೇರವಾಗಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ರಾಘವೇಂದ್ರ ವಿರುದ್ಧವೇ ರಣ ಕಹಳೆ ಮೊಳಗಿಸಿದ್ದಾರೆ. ಶತಾಯಗತಾಯ ರಾಘವೇಂದ್ರರನ್ನು ಸೋಲಿಸುವ ಮೂಲಕ ಯಡಿಯೂರಪ್ಪ ರಾಜ್ಯ ಬಿಜೆಪಿ ಮೇಲೆ ಸಾಧಿಸಿರುವ ಅಧಿಪತ್ಯವನ್ನು ಕೊನೆಗಾಣಿಸಬೇಕೆಂಬ ಹಠದಲ್ಲಿದ್ದಾರೆ. ವಿಶೇಷವೆಂದರೆ ಅವರ ಪ್ರಯತ್ನಕ್ಕೆ ಕಟ್ಟರ್‌ ಹಿಂದುತ್ವವಾದಿಗಳ ಬೆಂಬಲ ನಿರೀಕ್ಷೆಗೂ ಮೀರಿ ದೊರಕತೊಡಗಿರುವ ಲಕ್ಷಣ ಕಂಡು ಬರುತ್ತಿದೆ.

ಈಶ್ವರಪ್ಪ ಬಿಜೆಪಿ ಮತಗಳನ್ನೇ ಸೆಳೆಯುವ ಕಾರಣ ಏಕಾಏಕಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್‌ ಅದೃಷ್ಟ ಖುಲಾಯಿಸಬಹುದು ಎಂಬ ನಿರೀಕ್ಷೆ ಹೊತ್ತಿದ್ದು ಗೆಲುವಿನಂಚಿಗೆ ಸರಿಯಲಿದ್ದಾರೆ ಎನ್ನುವ ಅಭಿಪ್ರಾಯಗಳು ಕೂಡ ಹರಿದಾಡತೊಡಗಿದೆ. ಆದರೆ ಇಂತಹ ಸುವರ್ಣ ಅವಕಾಶವನ್ನು ಜೆಡ್ಡು ಗಟ್ಟಿದಂತಿರುವ ತೀರ್ಥಹಳ್ಳಿಯ ಕಾಂಗ್ರೆಸ್‌ ಕೈಚೆಲ್ಲುತ್ತಿದ್ದು ಶಿವಮೊಗ್ಗದಲ್ಲಿ ಈಶ್ವರಪ್ಪ ಕಾರಣಕ್ಕೆ ಕಡಿಮೆಯಾಗುವ ಮತಗಳನ್ನು ತೀರ್ಥಹಳ್ಳಿಯಲ್ಲಿ ತುಂಬಿಕೊಳ್ಳುವ ಯೋಜನೆಯನ್ನು ಬಿಜೆಪಿ ಥಿಂಕ್‌ ಟ್ಯಾಂಕ್‌ ರೂಪಿಸಿದ್ದಾರೆ. ಕಳೆದ ವಿಧಾನಸಭೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದ ಕೆಲವರು ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಅದರ ಫಲವಾಗಿ ಕೆಲ ಕಾಂಗ್ರೆಸ್‌ ಮುಖಂಡರು ತಟಸ್ಥರಾಗಿದ್ದಾರೆ. ಕಾಂಗ್ರೆಸ್‌ ಮುಖಂಡರ ಅಪರೇಷನ್‌ ಕಮಲ ಒಂದು ಹಂತಕ್ಕೆ ಯಶಸ್ವಿ ಆಗಿದೆ ಎಂದು ಕೆಲ ನಿಷ್ಠಾವಂತ ಕಾರ್ಯಕರ್ತರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಇಲ್ಲಿಯ ತನಕ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಬಂದಾಗ ಮಾತ್ರ ಬ್ಲಾಕ್‌ ಕಾಂಗ್ರೆಸ್‌ ಮುಖಂಡರಿಂದ ಹಿಡಿದು ಹೋಬಳಿ, ಗ್ರಾಮ ಮಟ್ಟದ ಮುಖಂಡರ ವರೆಗೆ ಮಧು ಬಂಗಾರಪ್ಪರಿಗೆ ಮುಖ ತೋರಿಸಲು ಓಡಿ ಬಂದಿದ್ದಾರೆ ಬಿಟ್ಟಿರೇ ಕಿಮ್ಮನೆ ರತ್ನಾಕರ್‌ ತಿಂಗಳ ಮುಂಚೆಯೇ ರೂಪಿಸಿದ ನನ್ನ ಬೂತ್‌ ನನ್ನ ಜವಾಬ್ದಾರಿ ಕರಪತ್ರವಾಗಲಿ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ರೂಪಿಸಿರುವ ಗ್ಯಾರಂಟಿ ಯೋಜನೆಗಳಾಗಲಿ ಇಲ್ಲಿಯವರೆಗೂ ಮನೆ ಮನೆಗೆ ತಲುಪಿಸುವಲ್ಲಿ ತೀರ್ಥಹಳ್ಳಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿದೆ. ಯುವ ಮುಖಂಡರನ್ನು ಸಂಪರ್ಕಿಸಿದಾಗ ಬ್ಲಾಕ್‌ ಕಾಂಗ್ರೆಸ್‌ನಿಂದ ತಮಗೆ ಯಾವುದೇ ರೀತಿಯ ಅಧಿಕೃತ ಸೂಚನೆ ಬಂದಿಲ್ಲ. ಅಲ್ಲದೇ ಇಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಆರ್‌.ಎಂ.‌ ಮಂಜುನಾಥ ಗೌಡ ಇಬ್ಬರೂ ಪ್ರಬಲ ನಾಯಕರಿರುವ ಕಾರಣ ಯಾರ ಸೂಚನೆಯನ್ನು ಪಾಲಿಸಬೇಕೆಂಬುದು ಗೊಂದಲವಾಗಿದೆ ಎಂದು ಪಿಸುಗುಡುತ್ತಾರೆ.

ಈ ಬಾರಿ ಕಾಂಗ್ರೆಸ್‌ ಮಹಿಳೆಯರಿಗೆ ಪ್ರತಿ ವರ್ಷಕ್ಕೆ 1 ಲಕ್ಷ ರೂಪಾಯಿ, ಯುವಕರಿಗೆ 1 ಲಕ್ಷ ಶಿಷ್ಯ ವೇತನ, 25 ಲಕ್ಷ ಆರೋಗ್ಯ ವಿಮೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ವಾಸ್ತವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಆ ದೃಷ್ಟಿಯಲ್ಲಿ ನೋಡಿದಾಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ನೀಡಿರುವ ಭರವಸೆ ಸರಿಯಾಗಿ ಮನೆ ಮನೆಗೆ ಪ್ರಚಾರವಾಗಿದ್ದಲ್ಲಿ ತೀರ್ಥಹಳ್ಳಿಯಲ್ಲಿ ಈ ಬಾರಿ ಕಾಂಗ್ರೆಸ್‌ ಭರ್ಜರಿ ಲೀಡ್‌ ಪಡೆಯುವುದು ಕಷ್ಟವೇನು ಇರಲಿಲ್ಲ. ಯಾಕೆ ಹೀಗೆ ಎಂದು ನಿಷ್ಠ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುವ ಪರಿಸ್ಥಿತಿ ಉದ್ಭವವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post