ಹೋರಾಟದ ವ್ಯಕ್ತಿತ್ವದಿಂದಲೇ ನೆನಪಲ್ಲಿ ಉಳಿದ ಮಂಜು

ಸಾವಿನೆದರು ಸೆಣಸಲಾಗದೆ ನಿಶ್ಚಲವಾದ ಪತ್ರಕರ್ತ

ಕಳೆದ ಎರಡು ತಿಂಗಳಿನಿಂದ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ ಅಂತಿಮ ಕ್ಷಣಗಳಲ್ಲಿ ನ್ಯೂಮೋನಿಯಾ ಉಲ್ಬಣಿಸಿ ಅಕಾಲಿಕ ಮರಣಕ್ಕೀಡಾದ ತೀರ್ಥಹಳ್ಳಿ ಮಿತ್ರ ವಾರಪತ್ರಿಕೆ ಸಂಪಾದಕ ಪಿ. ಮಂಜುನಾಥ್‌ ಅಂತ್ಯಕ್ರೀಯೆ ಮಂಗಳವಾರ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಚಿತಾಗಾರದಲ್ಲಿ ನಡೆಯಿತು.

ಪತ್ರಕರ್ತ, ಎಲೆಕ್ಟ್ರೀಷನ್‌, ಸೌಂಡ್ಸ್‌ ಮತ್ತು ಡೆಕೊರೇಟರ್‌, ತರಕಾರಿ ಅಂಗಡಿ ಸೇರಿದಂತೆ ಹೀಗೆ ಬದುಕಿಗಾಗಿ ನಾನಾ ರೀತಿಯ ಹೋರಾಟ ನಡೆಸಿದ್ದ ಮಂಜು ಕೊನೆಗೂ ಸಾವಿನೆದುರು ಹೋರಾಡಲಾಗದೆ ಕೈಚೆಲ್ಲಿ ನಿಶ್ಚಲವಾಗಿ ಮನೆಯಲ್ಲಿ ಮಲಗಿದ್ದನ್ನು ಕಂಡ ಸಾವಿರಾರು ಮಂದಿ ಮಮ್ಮಲ ಮರುಗಿದರು. ನೂರಾರು ಮಹಿಳೆಯರು ಕಣ್ಣೀರು ಹಾಕಿದರು. ಕಾರಣ ಬಹುತೇಕ ಕಾರ್ಮಿಕರು ಬಡವರೇ ಇರುವ ಆದರೆ ಮಾನವ ಮೌಲ್ಯಗಳು ಇನ್ನೂ ಜೀವಂತವಾಗಿರುವ ಮೇಲಿನ ಕುರುವಳ್ಳಿಯಲ್ಲಿ ಕಡು ಕಷ್ಟದಿಂದ ಬದುಕು ಕಟ್ಟಿಕೊಂಡಿದ್ದ, ಇನ್ನೂ ಕೇವಲ 38ರ ಹರೆಯದ ಮಂಜು ಇನ್ನಿಲ್ಲವೆಂಬ ಸತ್ಯವನ್ನು ಅರಗಿಸಿಕೊಳ್ಳಲು ಅವರಿಗೆ ಕಷ್ಟವಾಗಿತ್ತು. ಪತ್ರಕರ್ತನಾದ ಬಳಿಕ ಒಮ್ಮೆಲೆ ವೇಗವಾಗಿ ಪ್ರವರ್ಧಮಾನಕ್ಕೆ ಬಂದ ಮಂಜು ಅದರಿಂದ ಒಳ್ಳೆಯ ಹೆಸರು ಹಾಗೂ ಅಷ್ಟೇ ಪ್ರಮಾಣದ ಟೀಕೆಯನ್ನೂ ಕೂಡ ಎದುರಿಸಿದ್ದರು.

ಪತ್ರಕರ್ತನಾಗಿ ಕೆಲಸ ಮಾಡುವಾಗ ಬಹುತೇಕರು ಈ ಸನ್ನಿವೇಶವನ್ನು ಎದುರಿಸಿಯೇ ಇರುತ್ತಾರೆ. ಆದರೆ ಮಂಜು ಕೌಟುಂಬಿಕ ಹಿನ್ನಲೆಯ ದೃಷ್ಟಿಯಿಂದ ಆತನ ಬದುಕನ್ನು ಆಲೋಚಿಸಿದಾಗ ಹೋರಾಟ ಹಾಗೂ ತನಗಿರುವ ಮಿತ ಅವಕಾಶದಲ್ಲಿಯೇ ನಾಲ್ಕು ಮಂದಿ ಗುರುತಿಸುವಂತೆ ಬದುಕಬೇಕು ಎಂಬ ಆತನ ಕೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಆತನ ಅಪ್ಪ ಅಕಾಲಿಕ ಮರಣಕ್ಕೀಡಾದಾಗ ಮಂಜುವಿನ ವಯಸ್ಸು 6 ವರ್ಷವಷ್ಟೇ, ಮಂಜು ಹಾಗೂ ಮೂವರು ಸಹೋದರಿಯರ ಜವಾಬ್ದಾರಿಯನ್ನು ಪೂರ್ತಿಯಾಗಿ ಹೊತ್ತು ಇವರಿಗೆ ನೆಲೆ ಕಲ್ಪಿಸಲು ಸೆಣಸಿದ್ದು ತಾಯಿ ಗೀತಮ್ಮ. ಇಷ್ಟು ದೊಡ್ಡ ಕುಟುಂಬವನ್ನು ನಿಭಾಯಿಸಲು ತಾಯಿ ಕಷ್ಟಪಡುತ್ತಿದ್ದುದನ್ನು ಕಂಡ ಮಂಜು ಹೆಚ್ಚು ಓದಲು ಹೋಗಲಿಲ್ಲ. ಬದಲಾಗಿ ಕೈಗೆ ಸಿಕ್ಕ ಕೆಲಸ ಮಾಡುತ್ತಾ ತಾಯಿಯ ಶ್ರಮವನ್ನು ಕಡಿಮೆ ಮಾಡತೊಡಗಿದರು. ಬೆಳಿಗ್ಗೆ ಎದ್ದು ಪೇಪರ್‌ ಹಾಕುವುದು, ಬಳಿಕ ಎಲೆಕ್ಟ್ರೀಷನ್‌, ಸೌಂಡ್ಸ್‌ ಹೀಗೆ ಹೋರಾಡುತ್ತಲೇ ಸಹೋದರಿಯರನ್ನು ಮದುವೆ ಮಾಡಿ ನೆಲೆ ಕಾಣಿಸಿದ್ದು ಸಣ್ಣ ಸಂಗತಿಯೇನಲ್ಲ. ವಿಷಾದದ ಸಂಗತಿ ಎಂದರೆ ತಾಯಿ ಗೀತಮ್ಮ ತೀರಿಕೊಂಡು ಇನ್ನೂ 5 ತಿಂಗಳು ಕೂಡ ಕಳೆದಿಲ್ಲ.

ಅತ್ಯಂತ ಮಿತ ಆದಾಯದಲ್ಲೂ ಮನೆಯ ಯಾವುದೇ ಕಾರ್ಯವನ್ನು ಅದ್ದೂರಿಯಾಗಿ ಸುತ್ತಮುತ್ತಲಿನ ಜನರನ್ನು ಆತ್ಮೀಯವಾಗಿ ಆಹ್ವಾನಿಸಿ ನಡೆಸುವುದು ಮಂಜುವಿನ ಹವ್ಯಾಸವಾಗಿತ್ತು. ಮುಂದೆ ಪತ್ರಿಕೋದ್ಯಮಕ್ಕೆ ಬರಬೇಕೆಂದು ಕನಸು ಕಂಡಾಗ ಆತ ಶಿವಮೊಗ್ಗದ ದೈನಿಕ ನಮ್ಮನಾಡು ವರದಿಗಾರರಾಗುತ್ತಾರೆ. ಬಳಿಕ ವಿಶ್ವವಾಣಿ ದಿನಪತ್ರಿಕೆಯ ವರದಿಗಾರ ಬಳಿಕ ತಾನೆ ಸ್ವಂತ ಪತ್ರಿಕೆ ಮುನ್ನಡೆಸಬೇಕೆಂದು ಕನಸು ಕಂಡು ತೀರ್ಥಹಳ್ಳಿ ಮಿತ್ರ ವಾರಪತ್ರಿಕೆಯನ್ನು ಆರಂಭಿಸುತ್ತಾರೆ. ಹೈಸ್ಕೂಲ್‌ ಕೂಡ ಮುಗಿಸದ ಮಂಜು ಪ್ರಚಂಡ ಆತ್ಮವಿಶ್ವಾಸ ಮತ್ತು ಕಠೋರ ಹೋರಾಟದ ಬದುಕು ಕಲಿಸಿದ ಕಹಿ ಅನುಭವಗಳಿಂದಲೇ ಪತ್ರಿಕೆಯನ್ನು ದಿಟ್ಟತನದಿಂದಲೇ ಮುನ್ನಡೆಸಿ ಅದನ್ನು ಜನಪ್ರಿಯಗೊಳಿಸುತ್ತಾರೆ. ಮತ್ತು ಒಂದು ಜನಪ್ರಿಯ ಶೈಲಿಯ ಟ್ಯಾಬ್ಲೈಡ್‌ಗೆ ಬೇಕಾದ ಎಲ್ಲಾ ಆಕರ್ಷಣೆ ಪತ್ರಿಕೆಯೊಳಗೆ ಇರುವಂತೆ ನೋಡಿಕೊಂಡಿದ್ದು ಮತ್ತು ಪ್ರತಿವಾರ ಯಾವ ರೀತಿ ಕುತೂಹಲಕಾರಿ ವಿಚಾರವನ್ನು ಆರಿಸಿಕೊಳ್ಳಬೇಕೆಂಬ ಚಾಣಾಕ್ಷತನ ಆತನ ಪತ್ರಿಕೋದ್ಯಮದ ಸೂಕ್ಷ್ಮತೆಗೆ ಸಾಕ್ಷಿಯಾಗಿತ್ತು. ವಿಶೇಷ ಅಂದರೆ ಪ್ರತಿ ವಾರದ ಪತ್ರಿಕೆಯನ್ನು ಆತನೇ ಸ್ವತಃ ಪಟ್ಟಣದಲ್ಲಿ ಮನೆ ಮನೆಗೆ ತಲುಪಿಸುತ್ತಿದ್ದರು.

ಸಾವಿನ ಮನೆಯಲ್ಲಿ ಸೇರಿದ್ದ ಸಾವಿರಾರು ಜನರಲ್ಲಿ ಕುತೂಹಲಕ್ಕೆ ಕೆಲವರನ್ನು ಮಾತನಾಡಿಸಿದಾಗ ಮಂಜು ದಿಟ್ಟವಾಗಿ ಬರೆಯುತ್ತಿದ್ದುದು ಕಾನೂನು ಬಾಹೀರವಾಗಿ ದಂಧೆ ನಡೆಸುತ್ತಿದ್ದವರ ವಿರುದ್ಧವೇ ಹೊರತು ಒಳ್ಳೆಯವರಿಗೆ ತೊಂದರೆ ಕೊಟ್ಟಿರಲಿಲ್ಲ ಎಷ್ಟೋ ಜನಕ್ಕೆ ಆತನಿಂದ ಉಪಕಾರವೇ ಆಗಿತ್ತು. ಆದರೆ ಅದು ಪ್ರಚಾರಕ್ಕೆ ಬಾರದೇ ಕಾನೂನು ಬಾಹೀರವಾಗಿ ದಂಧೆ ನಡೆಸುವವರೇ ಆತನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದರು. ಆತ ನಾಲ್ಕು ಜನಕ್ಕೆ ಬೇಕಾದವನಾಗಿ ಬಾಳದಿದ್ದರೆ ಇಷ್ಟೊಂದು ಜನ ಏಕೆ ಇಲ್ಲಿ ಸೇರುತ್ತಿದ್ದರು ಮತ್ತು ಆತನ ಸಾವಿಗೆ ಮರುಗುತ್ತಿದ್ದರು ಎಂದು ಹೇಳುತ್ತಿದ್ದುದು ಮಂಜು ತನ್ನ ಭಾಗದಲ್ಲಿ ಸಾಕಷ್ಟು ಜನಪ್ರೀಯ ಆಗಿದ್ದರು ಎಂಬುದಕ್ಕೆ ಸಾಕ್ಷಿಯಂತಿತ್ತು.

ಪತ್ರಿಕೆಯಿಂದ ಕಾಸು ಮಾಡುವುದು ಅಸಾಧ್ಯ ಎಂಬ ಪ್ರಜ್ಞೆ ಇದ್ದ ಕಾರಣವೇ ಬದುಕಿಗಾಗಿ ಆತ ಸೌಂಡ್ಸ್‌ ಮತ್ತು ಡೆಕೋರೇಟರ್‌ ವೃತ್ತಿಯನ್ನೇ ನೆಚ್ಚಿಕೊಂಡಿದ್ದರು ಮತ್ತು ಅದನ್ನು ತನ್ನ ಹುಡುಗರಿಂದ ನಿಭಾಯಿಸುತ್ತಿದ್ದರು. ವಿಷಾದದ ಸಂಗತಿ ಎಂದರೆ ಆ ಎಲ್ಲಾ ಹುಡುಗರು ಯಾವ ದೊಡ್ಡ ವ್ಯಕ್ತಿಗೂ ಕಡಿಮೆ ಇಲ್ಲದಂತೆ ಸೌಂಡ್ಸ್‌ ಕೆಲಸಗಳಿಗೆ ಉಪಯೋಗಿಸುತ್ತಿದ್ದ ಪಿಕಪ್‌ ವಾಹನಕ್ಕೆ ಸುಂದರವಾದ ಹೂವಿನ ಅಲಂಕಾರ ಮಾಡಿ ಅಂತಿಮ ಯಾತ್ರೆಯನ್ನು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿ ಮಂಜುವನ್ನು ಬೀಳ್ಕೊಡುವ ಮೂಲಕ ಆತನ ಮೇಲೆ ತಮಗಿದ್ದ ಕಾಳಜಿ ಮತ್ತು ಮಮಕಾರವನ್ನು ತೋರಿದರು. ಮಂಜು ಇನ್ನು ಇತಿಹಾಸ ಮಾತ್ರ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post