ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ

“ ಶ್ರೀ ಮಾರಿಕಾಂಬ ಕಪ್-2024 “

ಗಣ್ಯರನ್ನು ಆಹ್ವಾನಿಸಿದ ಸ್ವಾಗತ ಸಮಿತಿ.


ಏಕಲವ್ಯ ಸ್ಪೋರ್ಟ್ಸ್‌ ಕ್ಲಬ್‌ (ರಿ), ತೀರ್ಥಹಳ್ಳಿ ಶ್ರೀ ಮಾರಿಕಾಂಬ ದೇವಸ್ಥಾನ ತೀರ್ಥಹಳ್ಳಿ ಇವರ ಸಹಭಾಗಿತ್ವದಲ್ಲಿ ಐತಿಹಾಸಿಕ ರಾಷ್ಟ್ರ ಮಟ್ಟದ ಖೋ-ಖೋ ಪಂದ್ಯಾವಳಿ “ಶ್ರೀ ಮಾರಿಕಾಂಬ ಕಪ್ -2024” ಎಂಬ ಹೆಸರಿನಲ್ಲಿ ಪಟ್ಟಣದ ಎ.ಪಿ.ಎಂ.ಸಿ ಪಕ್ಕದ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗಿದ್ದು, ಸಿದ್ದತೆಗಳು ಭರದಿಂದ ಸಾಗಿದೆ. ಇದರ ಪ್ರಯುಕ್ತ ಮಾರ್ಚ್ 04 ರ ಸೋಮವಾರದಂದು “ಗ್ರಾಮೀಣ ವಿಕಾಸ ಸೌಧ” ಕಟ್ಟಡದ ಉದ್ಘಾಟನೆಗೆ ಅಗಮಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಶಿಕ್ಷಣ ಮಂತ್ರಿ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಗೃಹ ಮಂತ್ರಿ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ ಭೇಟಿಯಾಗಿ ಏಕಲವ್ಯ ಸ್ಪೋರ್ಟ್‌ ಕ್ಲಬ್‌ ವತಿಯಿಂದ ಸಹಕಾರ ಕೋರಲಾಯಿತು.

ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಕ್ರೀಡಾ ಕೂಟದ ಕುರಿತು ಅಪಾರ ಆಸಕ್ತಿಯಿಂದ ಎಲ್ಲ ವಿಚಾರಗಳನ್ನು ತಿಳಿದುಕೊಂಡ ಸಂಸದ ರಾಘವೇಂದ್ರ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ದೇಸಿ ಕ್ರೀಡೆ ಖೋ-ಖೋ ಪಂದ್ಯಾವಳಿ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ. ಇದಕ್ಕೆ ನನ್ನಿಂದಾದ ಸಹಕಾರ ನೀಡುವ ಎಂದು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮೀಣ ವಿಕಾಸಸೌಧ “ಕಟ್ಟಡ ಉದ್ಘಾಟಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪರನ್ನು ಕೂಡ ಭೇಟಿಯಾಗಿ ಪಂದ್ಯಾವಳಿ ಕುರಿತು ವಿಚಾರಿಸಿದಾಗ ಅವರೂ ಕೂಡ “ಇದು ಕೇವಲ ತೀರ್ಥಹಳ್ಳಿ ತಾಲ್ಲೂಕು ಮಾತ್ರವಲ್ಲದೇ ಇದು ಜಿಲ್ಲೆಗೆ ಹೆಮ್ಮೆ ತರುವ ವಿಚಾರವಾಗಿದ್ದು ನನ್ನ ಎಲ್ಲ ರೀತಿಯ ಪ್ರೋತ್ಸಾಹ ಬೆಂಬಲವಿದೆ. ಮಾತ್ರವಲ್ಲದೆ ತಪ್ಪದೆ ಪಂದ್ಯಾವಳಿ ವೀಕ್ಷಿಸಲು ಆಗಮಿಸುವೆ ಎಂದು ಹೇಳಿದ್ದಾರೆ.

ಪಂದ್ಯಾವಳಿ ಏರ್ಪಡಿಸಿದ ಆರಂಭದಿಂದಲೂ ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಮಾಜಿ ಗೃಹಮಂತ್ರಿ ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ ಈ ಪಂದ್ಯಾವಳಿ ರಾಷ್ಟ್ರಮಟ್ಟದಲ್ಲಿ ಹೆಸರು ತರುವಂತಾಗಬೇಕು ಅಲ್ಲದೆ ಕಬಡ್ಡಿ ಆಟದಂತೆ ಇದರ ಜನಪ್ರಿಯತೆ ಕೂಡ ತೀರ್ಥಹಳ್ಳಿಯಿಂದಲೇ ಹೆಚ್ಚಾಗಬೇಕು. ಅದಕ್ಕೆ ಎಲ್ಲರೂ ಕ್ರೀಡಾ ಮನೋಭಾವದಿಂದ ಸಹಕರಿಸಬೇಕು ಎಂದರು.

ಮಾಜಿ ಶಿಕ್ಷಣ ಸಚಿವ ಮತ್ತು ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಕಿಮ್ಮನೆ ರತ್ನಾಕರ್ ಕೂಡ ಈ ಕ್ರೀಡಾ ಕೂಟದ ಸಲುವಾಗಿ ಭೇಟಿ ಮಾಡಲಾಗಿತ್ತು. ಎಲ್ಲ ವಿವರ‌ ಪಡೆದುಕೊಂಡ ಅವರು “ರಾಷ್ಟ್ರಮಟ್ಟದ ಪಂದ್ಯಾವಳಿ ತೀರ್ಥಹಳ್ಳಿಯಲ್ಲಿ ಏರ್ಪಡಿಸಿರುವುದು ಸಂತೋಷದ ವಿಷಯವಾಗಿದೆ. ಅಲ್ಲದೇ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ನಮ್ಮ ಕ್ಷೇತ್ರ ನೀಡಿದೆ. ಇದು ತೀರ್ಥಹಳ್ಳಿಯ ಘನತೆ ಹೆಚ್ಚಲಿದ್ದು ನನ್ನ ಸಹಕಾರ ಇರುತ್ತದೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೆ ಕ್ರೀಡಾಕೂಟದ ವಿಚಾರವಾಗಿ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥಗೌಡ್ರು ಕೂಡ ಭೇಟಿ ಮಾಡಲಾಗಿತ್ತು. ವಿವರಗಳನ್ನು ಕೇಳಿಸಿಕೊಂಡ ಅವರು ಇದೊಂದು ಸಾಂಸ್ಕೃತಿಕ ಹಬ್ಬವಾಗಬೇಕು. ರಾಷ್ಟ್ರೀಯ ಖೋ-ಖೋ ಫೆಡರೇಷನ್ ನಿರಂತರವಾಗಿ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿ ಏರ್ಪಡಿಸಲು ಸ್ಪೂರ್ತಿ ನೀಡಬೇಕು” ಎಂದು ಸಲಹೆ ನೀಡಿದರು ಮಾತ್ರವಲ್ಲದೆ “ಯಾವುದೇ ರೀತಿಯ ಸಹಕಾರ ನೀಡುವ ಜೊತೆಗೆ ಸದಾಕಾಲ ಸ್ಪಂದಿಸುವೆ” ಎಂದು ಭರವಸೆ ನೀಡಿದರು.

ಈ ಪಂದ್ಯಾವಳಿ ಸುಮಾರು 50 ಲಕ್ಷ ಅಂದಾಜು ವೆಚ್ಚದಲ್ಲಿ ಅದ್ದೂರಿಯಾಗಿ ಮಾರ್ಚ್‌ 14 ರಿಂದ 17ರ ತನಕ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ14 ತಂಡಗಳು ಸ್ಪರ್ಧಿಸಲಿದೆ. ಕಾಲಾವಕಾಶದ ಕೊರತೆಯಿಂದಾಗಿ ಮಾರ್ಚ್ 04 ರಂದು ತೀರ್ಥಹಳ್ಳಿಗೆ ಆಗಮಿಸಿದ್ದ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಮುಂತಾದವರನ್ನು ಏಕಲವ್ಯ ಸ್ಪೋರ್ಟ್‌ ಕ್ಲಬ್‌ನ ಸದಸ್ಯರಾದ


ರಾಮದಾಸ ಪ್ರಭು, ಬೆಲೋರಿಯನ್‌ ಡಯಾಸ್‌, ಸಂತೋಷ್‌ ಪೂಜಾರಿ, ಸುಧೀಂದ್ರ ಶೆಟ್ಟಿ, ನಾಗೇಂದ್ರ ಭಟ್‌, ಪ್ರಶಾಂತ್‌ ಪೂಜಾರಿ, ಪಂದ್ಯಾವಳಿಯ ಸ್ವಾಗತ ಸಮಿತಿಯ ಪ್ರಮುಖರು ಹಾಗೂ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸದಸ್ಯರುಗಳಾದ ಬಿ.ಗಣಪತಿ, ಅಮರನಾಥ ಶೆಟ್ಟಿ, ಚಂದವಳ್ಳಿ ಸೋಮಶೇಖರ್‌, ಬೆಟ್ಟಮಕ್ಕಿ ರಾಘವೇಂದ್ರ, ಜಯಕರ ಶೆಟ್ಟಿ, ಅಶ್ವಲ್‌ಗೌಡ ಏಕಲವ್ಯ ಸ್ಪೋರ್ಟ್‌ ಕ್ಲಬ್‌ ಅಧ್ಯಕ್ಷರಾದ ಹಾಗೂ ಮಾರಿಕಾಂಬಾ ದೇವಸ್ಥಾನ ಸಮಿತಿ ಸದಸ್ಯ ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ವೇದಿಕೆಗೆ ತೆರಳಿ ಹೃತ್ಪೂರ್ವಕವಾಗಿ ಆಹ್ವಾನಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post