ತೀರ್ಥಹಳ್ಳಿಯಲ್ಲಿ ಐತಿಹಾಸಿಕ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿ

ರಾಷ್ಟ್ರಮಟ್ಟದಲ್ಲಿ ಮಿಂಚಲಿದೆ ತೀರ್ಥಹಳ್ಳಿಯ ಹೆಸರು
ಖೋ-ಖೋ ಜಾತ್ರೆಗೆ 1 ಲಕ್ಷ ಕ್ರೀಡಾಭಿಮಾನಿಗಳು ಭಾಗಿಯಾಗುವ ನಿರೀಕ್ಷೆ
ಮಾರ್ಚ್‌ 14 ರಿಂದ 17ರ ವರೆಗೆ ಖೋ ಹಬ್ಬ


2024ರ ಮಾರ್ಚ್‌ 14 ರಿಂದ 17 ರವರೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರೆಯ ಅಂಗವಾಗಿ ಏಕಲವ್ಯ ಸ್ಪೋರ್ಟ್ಸ್‌ ಕ್ಲಬ್‌ ರಾಷ್ಟ್ರಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ-ಖೋ ಪಂದ್ಯಾಟವನ್ನು ಬಾಳೇಬೈಲಿನ ಎಪಿಎಂಸಿ ಪಕ್ಕದ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ. ಇಡೀ ಪಂದ್ಯಾವಳಿಯನ್ನು 50 ಲಕ್ಷ ರೂಗಳಿಗೂ ಹೆಚ್ಚಿನ ವೆಚ್ಚದಲ್ಲಿ ಆಯೋಜಿಸಲಾಗುತ್ತಿದ್ದು ಕ್ರೀಡಾವಳಿಯನ್ನು ಕ್ರೀಡೆ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ಬೆಸೆಯುವ ಅಪರೂಪದ ಪ್ರಯತ್ನ ರಾಷ್ಟ್ರಮಟ್ಟದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಡೆಯುತ್ತಿದೆ. ಮಾರ್ಚ್‌ 14 ರಿಂದ 17ರವರೆಗೆ 1 ಲಕ್ಷಕ್ಕೂ ಹೆಚ್ಚಿನ ಕ್ರೀಡಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೇ ಇದೆ ಎಂದು ಏಕಲವ್ಯ ಸ್ಪೋರ್ಟ್‌ ಕ್ಲಬ್‌ ಅಧ್ಯಕ್ಷ ಪತ್ರಿಕಾಗೋಷ್ಟಿಯಲ್ಲಿ ಬಿ.ಆರ್.‌ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಒಂದೆಡೆ ಪಂದ್ಯಾವಳಿ ನಡೆಯುತ್ತಿರುವಾಗಲೇ ಕ್ರೀಡಾಂಗಣ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆಯನ್ನು ನೆನಪಿಸುವ ಎಲ್ಲಾ ಮನೋರಂಜನೆಗಳು ಮತ್ತು ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಅಲ್ಲದೇ ವೀಕ್ಷಕರಿಗಾಗಿ ಅತ್ಯಂತ ಸಮರ್ಪಕವಾದ ಪಾರ್ಕಿಂಗ್‌ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಪಂದ್ಯಾವಳಿಯ ವಿವರಗಳನ್ನು ಪಡೆದುಕೊಂಡಿರುವ ರಾಷ್ಟ್ರೀಯ ಖೋ ಫೆಢರೇಷನ್‌ ಮೆಚ್ಚಿಗೆಯೊಂದಿಗೆ ಈ ಪಂದ್ಯಾವಳಿಗೆ ಅನುಮತಿ ನೀಡುವ ಮೂಲಕ ರಾಷ್ಟ್ರದ ಅತ್ಯುತ್ತಮ ಆಟಗಾರ ಮತ್ತು ಆಟಗಾರ್ತಿಯನ್ನು ಒಳಗೊಂಡ 14 ಬೇರೆ ರಾಜ್ಯಗಳ ತಂಡವನ್ನು ಕಳುಹಿಸಲಿದೆ. ಪುರುಷರ ವಿಭಾಗದಲ್ಲಿ 1 ಲಕ್ಷ ರೂ ಪ್ರಥಮ, 65 ಸಾವಿತ ದ್ವಿತೀಯ, 35 ಸಾವಿರ ತೃತೀಯ, 20 ಸಾವಿರ ನಾಲ್ಕನೇ ಬಹುಮಾನಗಳನ್ನು ಪಾರಿಷೋತ್ತಕದೊಂದಿಗೆ ನೀಡಲಾಗುತ್ತಿದೆ. ಮಹಿಳಾ ವಿಭಾಗದಲ್ಲಿ 75 ಸಾವಿರ ಪ್ರಥಮ, 40 ದ್ವಿತೀಯ, 20 ಸಾವಿರ ತೃತೀಯ, 10 ಸಾವಿರ ನಾಲ್ಕನೇ ಬಹುಮಾನವನ್ನು ನೀಡಲಾಗುತ್ತಿದೆ.

2,500 ಪ್ರೇಕ್ಷಕರು ಒಂದೇ ಕಡೆ ಕುಳಿತು ಆಟವನ್ನು ಸವಿಯುವಂತೆ ಮಾಡಲು ತಾತ್ಕಾಲಿಕ ವೀಕ್ಷಕರ ಗ್ಯಾಲರಿಯನ್ನು ನಿರ್ಮಿಸಿರುವುದು ಈ ಪಂದ್ಯಾಟದ ಪ್ರಮುಖ ಆಕರ್ಷಣೆಯಾಗಿದೆ. ರಾಷ್ಟ್ರೀಯ ಮಟ್ಟದ ತೀರ್ಪುಗಾರರು ತೀರ್ಪು ನೀಡಲಿದ್ದಾರೆ. ಮಾರ್ಚ್‌ 14 ರ ಸಂಜೆ 3 ಗಂಟೆಗೆ ಅದ್ದೂರಿ ವಿವಿಧ ವೇಷಭೂಷಣಗಳ ಮೆರವಣಿಗೆಯೊಂದಿಗೆ ಕುಶಾವತಿ ನೆಹರು ಪಾರ್ಕ್‌ನಿಂದ ಆಟಗಾರರು ಹಾಗೂ ಕ್ರೀಡಾಭಿಮಾನಿಗಳ ಮೆರವಣಿಗೆ ಮಾರಿಕಾಂಬಾ ದೇವಸ್ಥಾನ ತಲುಪಿ ಅಲ್ಲಿಂದ ಕ್ರೀಡಾ ಜ್ಯೋತಿ ಪಡೆದುಕೊಂಡು ಪಂದ್ಯಾವಳಿಯನ್ನು ಉದ್ಘಾಟಿಸಲಾಗುವುದು.


ಪುರುಷರ ವಿಭಾಗದಲ್ಲಿ ಮುಂಬೈ, ಪಶ್ಚಿಮ ರೈಲ್ವೆ, ಮಹಾರಾಷ್ಟ್ರ ಕೊಲ್ಲಾಪುರ, ಎಎಂಎಸ್‌ ಪುಣೆ, ಕೇರಳ, ಖೇಲೋ ಇಂಡಿಯಾ, ಆಂಧ್ರಪ್ರದೇಶ ಹಾಗೂ ಅತಿಥೇಯ ಕರ್ನಾಟಕ ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ ದೆಹಲಿ, ಕೇರಳ, ಮಹಾರಾಷ್ಟ್ರ ಕೊಲ್ಲಾಪುರ, ಆರ್‌ಎಫ್‌ ಮುಂಬೈ, ಉಸ್ಮನ್‌ ಬಾದ್‌, ಅತಿಥೇಯ ಕರ್ನಾಟಕ ತಂಡಗಳು ಈ ಲೀಗ್‌ ಮಾದರಿಯಲ್ಲಿ ಸ್ಪರ್ಧಿಸಲಿವೆ.

ಈಗಾಗಲೇ ತೀರ್ಥಹಳ್ಳಿ ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಸ್ಥಳೀಯ ಯುವಕ ಬೆಲೋರಿಯನ್‌ ಡಯಾಸ್‌ (ಬೆನ್ನಿ) ರಾಷ್ಟ್ರಮಟ್ಟದಲ್ಲಿ ಉತ್ತಮ ಕೋಚ್‌ ಆಗಿ ಹೆಸರು ಮಾಡಿದ್ದರೆ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳು ಇಲ್ಲಿನ ಖೋಖೋ ಆಟಗಾರರಿಗೆ ಸಂದಿವೆ. ಈ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದಲ್ಲಿ ಖೋ ಆಟಗಾರರಾಗಿ ಮಿಂಚಿದ್ದ ಕರ್ನಾಟಕ ಕ್ರೀಡಾ ರತ್ನ ದಿ.ವಿನಯ್‌ ಗೌಡ ಹಾಗೂ ನಂದಿಕೇಶ್ವರ ಶೆಟ್ಟಿ ಇವರುಗಳನ್ನು ಸ್ಮರಿಸಲಾಗುತ್ತಿದೆ. ಈಗಾಗಲೇ ಈ ಪಂದ್ಯಾಟ ಇಡೀ ತಾಲ್ಲೂಕಿನ ಗಮನ ಸೆಳೆದಿದ್ದು ಪಕ್ಷ ಧರ್ಮಾತೀತವಾಗಿ ಮೆಚ್ಚುಗೆ ಹರಿದುಬರುತ್ತಿದೆ.

ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಉದ್ಯಮಿ ಕಿಮ್ಮನೆ ಜಯರಾಮ್, ಸೂಡ ಅಧ್ಯಕ್ಷ ಹೆಚ್.ಎಸ್.‌ ಸುಂದರೇಶ್, ಬಂಗಾರಮಕ್ಕಿ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ.

ಪಂದ್ಯಾವಳಿ ವೇಳೆ‌ ಹಿರಿಯ ಸಹಕಾರಿ, ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ನಾಗರಾಜ ಶೆಟ್ಟಿ, ಫಾರ್ಮ ಉದ್ಯಮಿ ಶ್ರೀಧರ್‌ ಶೆಟ್ಟಿ, ಛಲಗಾರ ನಿಶಾಂತ್‌ ಜಿ, ಸಹಕಾರಿ ಹಾಗೂ ಹಿರಿಯ ಖೋ-ಖೋ ಆಟಗಾರ ಜೆ.ಮಂಜುನಾಥ ಶೆಟ್ಟಿ, ಉದ್ಯಮಿ ಹಾಗೂ ಕ್ರಿಕೆಟ್‌ ಕ್ಷೇತ್ರದ ಸಾಧಕ ಅಬ್ದುಲ್‌ ಕಲಾಂ ಆಜಾದ್‌, ಇಂಜಿನಿಯರ್‌ ನವೀನ್‌ ರಾಜ್ ಇವರುಗಳನ್ನು ಸನ್ಮಾನಿಸಲಾಗುತ್ತಿದೆ.‌ ಹಾಗೂ ಈ ಐತಿಹಾಸಿಕ ಪಂದ್ಯಾವಳಿಗೆ ಸ್ಥಳದಾನ ನೀಡಿದ ಕೆ.ಕೆ. ನಾಗರಾಜ್‌ ದಂಪತಿಯನ್ನು ಕೂಡ ವಿಶೇಷವಾಗಿ ಸನ್ಮಾನಿಸಲಾಗುತ್ತದೆ.

ಈ ಅದ್ದೂರಿ ಪಂದ್ಯಾವಳಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಸಮಿತಿ ಊಟೋಪಚಾರವನ್ನು ವ್ಯವಸ್ಥೆ ಮಾಡುವುದರೊಂದಿಗೆ ಹೃತ್ಪೂರ್ವಕ ಸಹಕಾರ ನೀಡಿದೆ. ಅಲ್ಲದೇ ರಾಜ್ಯ ಖೋ-ಖೋ ಫೇಡರೇಷನ್‌ ಅಧ್ಯಕ್ಷ ಲೋಕೇಶ್ವರ್‌, ಕಾರ್ಯದರ್ಶಿ ಮಲ್ಲಿಕಾರ್ಜುನ್, ಛೇರ್‌ಮನ್‌ ಪುರುಷೋತ್ತಮ್‌, ಜಿಲ್ಲಾ ಕಾರ್ಯದರ್ಶಿ ಸುರೇಶ್‌, ಕುವೆಂಪು ವಿವಿ ರವಿಗೌಡ, ಕೆಕೆಎಫ್‌ಐ ಕಾರ್ಯದರ್ಶಿ ತ್ಯಾಗಿ ಸೇರಿದಂತೆ ಇಡೀ ಫೆಡರೇಷನ್‌ ಸಂತೋಷದಿಂದ ಸಹಕರಿಸಿದೆ.

ಈ ಪಂದ್ಯಾಟ ಏಕಲವ್ಯ ಸ್ಪೋರ್ಟ್‌ ಕ್ಲಬ್‌ ಅಧ್ಯಕ್ಷ ಬಿ.ಆರ್.‌ ರಾಘವೇಂದ್ರ ಶೆಟ್ಟಿ, ಕಾರ್ಯದರ್ಶಿ ಬಾಳೇಬೈಲು ಸಂತೋಷ್‌ ಪೂಜಾರಿ, ಗೌರವಾಧ್ಯಕ್ಷ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್‌, ಉಪಾಧ್ಯಕ್ಷ ಸುಧೀಂದ್ರ ಶೆಟ್ಟಿ (ಕಂಡಿಲ್ ಪುಟ್ಟ), ಎನ್.ಆರ್.‌ ನಾಗರಾಜ್‌, ಬೆನ್ನಿ, ಪ್ರೀತಿ ಶರತ್‌, ಪ್ರಶಾಂತ್‌, ಚಂದ್ರಶೇಖರ್‌, ಮಸೂದ್‌, ನಾಗೇಂದ್ರ ಭಟ್‌ ಸೇರಿದಂತೆ ಎಲ್ಲರ ಪ್ರಯತ್ನದೊಂದಿಗೆ ನಡೆಯುತ್ತಿದ್ದು ಪಂದ್ಯಾವಳಿಗೆ ಮಾರಿಕಾಂಬಾ ದೇವಸ್ಥಾನ, ಸಿಟಿ ಕ್ರಿಕೆಟ್‌ ಕ್ಲಬ್‌, ನಿಶಾ ಸ್ಪೋಟ್ಸ್‌ ಕ್ಲಬ್‌, ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌, ಮಲ್ನಾಡ್‌ ಕ್ಲಬ್‌, ತೀರ್ಥಹಳ್ಳಿ ಟೌನ್‌ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಸಂಘಗಳು ಸಹಕಾರ ನೀಡಿದೆ.

ಪತ್ರಿಕಾಗೋಷ್ಟಿಯಲ್ಲಿ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಕಂಡಿಲ್ ಪುಟ್ಟ, ನಾಗೇಂದ್ರ ಭಟ್, ಮೋಹನ್ ಮುನ್ನೂರು, ರಾಮದಾಸ್ ಪ್ರಭು, ಲ.ಪಾಂಡುರಂಗಪ್ಪ, ಶಚೀಂದ್ರ ಹೆಗ್ಡೆ, ವಿಶಾಲ್ ಕುಮಾರ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post