ಬಡ ಮಹಿಳೆಯ ಬಗರ್‌ಹುಕುಂ ಜಮೀನು ತೆರವಿಗೆ ಗ್ರಾಮಸ್ಥರಿಂದ ತೀವ್ರ ವಿರೋಧ

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೌಖಿಕ ಆದೇಶಕ್ಕೂ ಬೆಲೆ ಇಲ್ಲವೇ..!
ಜೆಸಿಬಿ ಯಂತ್ರ ಅಡ್ಡಗಟ್ಟಿದ ರೈತ ಮಹಿಳೆಯರು
ನಿಸ್ಸಹಾಯಕ ಒಕ್ಕಲಿಗ ಮಹಿಳೆಯ ರಕ್ಷಣೆಗೆ ನಿಂತ 20ಕ್ಕೂ ಹೆಚ್ಚು ಈಡಿಗ ಕುಟುಂಬಗಳು
ಕೇವಲ 4 ಗುಂಟೆ ಜಾಗ ತೆರವಿಗೆ ಆದೇಶದ ಸವಾರಿ



ಮಂಡಗದ್ದೆ ಹೋಬಳಿ ನಾಯದವಳ್ಳಿ ಗ್ರಾಮದ ಸ.ನಂ.114ರಲ್ಲಿ ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸರೋಜಮ್ಮ ಹಾಗೂ ಆಕೆಯ ಮಗ ಕೃಷಿ ಕೂಲಿ ಕಾರ್ಮಿಕ ಯೋಗೇಂದ್ರ ಕೇವಲ 4 ಗುಂಟೆ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಆದರೆ ಇವರ ಬಗರ್‌ ಹುಕುಂ ಸಾಗುವಳಿ ಪ್ರದೇಶ ಅಕ್ರಮ ಎಂದು ತೀರ್ಥಹಳ್ಳಿ ತಹಶೀಲ್ದಾರ್‌ ಆದೇಶ ಹೊರಡಿಸಿ ಆ ಪ್ರದೇಶದ ತೆರವಿಗೆ ಮುಂದಾದಾಗ ಇಡೀ ಗ್ರಾಮವೇ ಒಗ್ಗಟ್ಟಾಗಿ ನಿಂತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಿಮ್ಮೆಟ್ಟಿಸಿದ ಘಟನೆ ಬುಧವಾರ ನಡೆದಿದೆ.

ಬಡತನದ ಕಾರಣ ತೀರಾ ಶಿಥಿಲಾವಸ್ಥೆ ತಲುಪಿರುವ ಅಪಾಯಕಾರಿ ಮನೆಯಲ್ಲಿ ಬೇರೆ ದಾರಿ ಕಾಣದೆ ಜೀವನ ನಡೆಸಿಕೊಂಡು ಬರುತ್ತಿರುವ ಈ ತಾಯಿ ಮಗ ಇಬ್ಬರು ತಾವು ನೆಲೆನಿಂತ ಜಾಗದಲ್ಲಿ ಚಿಕ್ಕ ಬೇಲಿ ನಿರ್ಮಿಸಿಕೊಂಡು ವಾಸಿಸುತ್ತಿದ್ದು ಅಷ್ಟೇ ಪ್ರದೇಶದಲ್ಲಿ ಬೆಳೆಸಿಕೊಂಡಿರುವ ಅಡಿಕೆ ಮತ್ತು ತೆಂಗಿನ ಗಿಡಗಳೇ ಜೀವನಾಧಾರ. ಸರೋಜಮ್ಮ ಕೆಲಸ ಮಾಡದಷ್ಟು ವೃದ್ಧರಾಗಿದ್ದು ಮಗ ಯೋಗೇಂದ್ರನ ಕೂಲಿ ಕೆಲಸದಿಂದಲೇ ಜೀವನ ಸಾಗಬೇಕಿದೆ.

ಆದರೆ ಗುಬ್ಬಿಮೇಲೆ ಬ್ರಹ್ಮಾಸ್ತ್ರ ಎಂಬಂತೆ ತಹಶೀಲ್ದಾರ್‌ ಆದೇಶ ಎಂದು ಬೆಜ್ಜವಳ್ಳಿ ಉಪ ತಹಶೀಲ್ದಾರ್‌ ಶಿವಪ್ರಸಾದ್‌, ರಾಜಸ್ವ ನಿರೀಕ್ಷಕ ಸುಧಾಕರ್‌, ಗ್ರಾಮ ಲೆಕ್ಕಿಗ ರಾಜಶೇಖರ್‌ ಜೆಸಿಬಿ ಯಂತ್ರದ ಮೂಲಕ ಒಕ್ಕಲೆಬ್ಬಿಸಲು ಬಂದಾಗ ಗ್ರಾಮದ ಎಲ್ಲಾ ಮಹಿಳೆಯರು ಅಡ್ಡಗಟ್ಟಿದರಲ್ಲದೇ ಜೆಸಿಬಿ ಯಂತ್ರದ ಮೇಲೆ ಕುಳಿತು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತ್ತು. ಗ್ರಾಮಸ್ಥರು ಎರಡು ಎಕರೆಗಿಂತ ಕಡಿಮೆಯ ಬಗರ್‌ಹುಕುಂ ಸಾಗುವಳಿಯನ್ನು ತೆರವು ಮಾಡಕೂಡದು ಎಂಬ ಕೋರ್ಟ್‌ ಆದೇಶವನ್ನು ಪ್ರದರ್ಶಿಸಿದಾಗ ಅದನ್ನು ಆರ್‌ಐ ಒಪ್ಪಲಿಲ್ಲ. ತಮಗೆ ಮೇಲಿನ ಆದೇಶವೆಂದು ವಾದಕ್ಕಿಳಿದರು. ಪ್ರತಿಯಾಗಿ ಗ್ರಾಮಸ್ಥರು ಒಕ್ಕಲೆಬ್ಬಿಸುವುದಾದರೆ ನಮ್ಮ ಜೀವದ ಮೇಲೆಯೇ ಜೆಸಿಬಿ ಯಂತ್ರ ಹಾಯಿಸಿ ಎಂದು ಗಟ್ಟಿ ನಿಂತಾಗ ಬೇರೆ ದಾರಿ ಕಾಣದ ಅಧಿಕಾರಿಗಳು ಹಲವು ಹೊತ್ತಿನ ಮಾತುಕಥೆ ನಂತರ ಕ್ರಮ ಕೈಗೊಳ್ಳದೇ ಎಚ್ಚರಿಕೆ ನೀಡಿ ವಾಪಾಸ್ಸಾದರು. ವಿಶೇಷವೆಂದರೆ ಆ ಊರಿನಲ್ಲಿ ಸರೋಜಮ್ಮನದು ಮಾತ್ರ ಒಕ್ಕಲಿಗ ಕುಟುಂಬವಾಗಿದ್ದು ಉಳಿದವರು ಈಡಿಗ ಸಮೂದಾಯದವರು. ತೀರಾ ಇತ್ತೀಚೆಗೆ ಸ್ವತಃ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬದುಕಿಗಾಗಿ ಕಾನೂನು ತಿಳುವಳಿಕೆ ಇಲ್ಲದೆ ಅಲ್ಪ ಪ್ರಮಾಣದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡಿರುವವರ ಮೇಲೆ ದಬ್ಬಾಳಿ ಮಾಡ ಕೂಡದು ಎಂದು ಸ್ಪಷ್ಟವಾಗಿ ಮೌಖಿಕ ಆದೇಶ ನೀಡಿದ್ದರು. ಅದು ನಮಗೆ ಸಂಬಂಧಿಸಿಯೇ ಇಲ್ಲ ಎಂಬಂತೆ ಈ ಘಟನೆಯ ವಿಚಾರದಲ್ಲಿ ತೀರ್ಥಹಳ್ಳಿ ತಹಶೀಲ್ದಾರ್‌ ವರ್ತಿಸಿರುವುದು ಇಲ್ಲಿನ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿತ್ತಲ್ಲದೇ ಇಂತಹ ನಿಸ್ಸಾಹಾಯಕ ವೃದ್ಧ ಮಹಿಳೆಯ ಒತ್ತುವರಿ ತೆರವು ವಿಚಾರದಲ್ಲಿ ವಿಶೇಷ ಕಾಳಜಿ ಏಕೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಇತ್ತ ಕಾನೂನಿನ ತಿಳುವಳಿಕೆ ಇಲ್ಲದೆ ಸದ್ಯ ಗ್ರಾಮಸ್ಥರ ಮಾನವೀಯ ಕಳಕಳಿಯಿಂದಾಗಿ ತಾಕ್ಕಾಲಿಕವಾಗಿ ಒತ್ತುವರಿ ತೆರವಿನಿಂದ ಬಚಾವಾಗಿರುವ ಸರೋಜಮ್ಮ ದಿನನಿತ್ಯವೂ ಆತಂಕದಿಂದಲೇ ಜೀವನ ನಡೆಸುವಂತಾಗಿದೆ. ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಸಾವಿರಾರು ಕಿಲೋ ಮೀಟರ್‌ ಪಾದಯಾತ್ರೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ನಿಸ್ಸಹಾಯಕ ಮಹಿಳೆಯ ನೆರವಿಗೆ ನಿಲ್ಲುವರೇ ?

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post