ಕಾಂಗ್ರೆಸ್‌ ಕಾರ್ಯಕರ್ತರಿಂದ ಬಿ.ವೈ.ಆರ್‌.ಗೆ ಹಾರ

ಸಚಿವ ಮಧು ಬಂಗಾರಪ್ಪಗೆ ಮುಜುಗರ
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದ್ರಾ ಉಲ್ಟಾ..!
ಗ್ರಾಮೀಣಾಭಿವೃದ್ಧಿ ಭವನ ಲೋಕಾರ್ಪಣೆ

4 ವರ್ಷಗಳ ಹಿಂದೆ ಗುಜ್ಜುಕೊಟ್ಟು ತೊಲೆಗಳು, ಪಕಾಸಿಗಳು ಕೆಳಗೆ ಉದುರಬಾರದು ಎಂದು ನಿಲ್ಲಿಸಿದ್ದ ಬ್ರಿಟೀಷ್‌ ಕಾಲದ ಆಸ್ಪತ್ರೆ, ಹಳೆಯ ತಾಲ್ಲೂಕು ಪಂಚಾಯಿತಿ ಕಟ್ಟಡ ಇದ್ದ ಜಾಗದಲ್ಲಿ ಇದೀಗ ಭವ್ಯವಾದ ಮೂರು ಅಂತಸ್ಥಿನ ಕಟ್ಟಡ ತಲೆಎತ್ತಿ ನಿಂತಿದೆ. ಕಟ್ಟಡಕ್ಕೆ ಕಾಯಕಲ್ಪ ನೀಡಬೇಕು ಎಂದು ಅನೇಕ ರಾಜಕಾರಣಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಕಿಂಚಿತ್ತೂ ವ್ಯರ್ಥವಾಗಬಾರದು. ಒಂದೇ ಸೂರಿನಡಿಯಲ್ಲಿ ಹಲವಾರು ಇಲಾಖೆಗಳನ್ನು ಸೇರಿಸಿ ಜನರ ಓಡಾಟ ತಪ್ಪಿಸಬೇಕು ಎಂಬ ಮಹತ್ವಕಾಂಕ್ಷೆಯಡಿಯಲ್ಲಿ 13.5 ಕೋಟಿ ವೆಚ್ಚದ ಗ್ರಾಮೀಣಾಭಿವೃದ್ಧಿ ಭವನವನ್ನು ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಆದಂತಹ ಮಧು ಬಂಗಾರಪ್ಪ ಹಸ್ತಗಳಿಂದ ಉದ್ಘಾಟನೆಯಾಯಿತು. ಇದಕ್ಕೆ ಸಾಕ್ಷಿಯಾಗಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯ ಎಸ್‌. ರುದ್ರೇಗೌಡ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಕಡಿದಾಳು ದಿವಾಕರ್‌ ಮತ್ತಿತರರಿದ್ದರು.

ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿ ಗೆಲ್ಲುವ ಅವಸರದಲ್ಲಿರುವ ಸಂಸದ ಬಿ.ವೈ. ರಾಘವೇಂದ್ರ ಆರಂಭಿಕವಾಗಿ ಮೇಗರವಳ್ಳಿ – ಸೋಮೇಶ್ವರ ಮಾರ್ಗವಾಗಿ ಸುಮಾರು 10.5 ಕಿ.ಮೀ. ಅಂತರದ ಆಗುಂಬೆ ಘಾಟಿ ಸುರಂಗದ ನೀಲನಕ್ಷೆ ಸಿದ್ಧವಾಗಿದೆ. ಒಟ್ಟು 16 ಕಿ.ಮೀ ಉದ್ದದ ರಸ್ತೆ ಇರಲಿದ್ದು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಶಾಶ್ವತ ಮೂಲಸೌಕರ್ಯ ಒದಗಿಸುವ ಯೋಜನೆಗಳನ್ನು ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಗಾಂಧಿ ಕನಸು ಕಂಡಂತೆ ರಾಮರಾಜ್ಯ ಸೃಷ್ಟಿಯಾಗಬೇಕು ಎಂದು ಮಾತು ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಹಲವಾರು ಸರ್ಕಾರಿ ಗುತ್ತಿಗೆ ಕಾಮಗಾರಿ ಮಾಡುವ ಯುವ ಮುಖಂಡರು ಕೆಂಪು ಗುಲಾಬಿಗಳನ್ನು ಪೇರಿಸಿ ಮಾಡಿದ್ದ ಬೃಹತ್‌ ಹಾರವೊಂದನ್ನು ಸಂಸದರ ಕೊರಳಿಗೆ ಹಾಕಿದರು. ಅಲ್ಲೇ ಪಕ್ಕದಲ್ಲಿದ್ದ ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ಕಡೆಗೂ ತಿರುಗಿ ನೋಡಲಿಲ್ಲ. ಇದರಿಂದ ಅಲ್ಲೇ ಮುಜುಗರಕ್ಕೆ ಒಳಗಾಗಿ ಕೈಕಿವುಚಿಕೊಳ್ಳುತ್ತಿದ್ದ ಮಧು ಬಂಗಾರಪ್ಪ ಮತ್ತು ಆರ್‌.ಎಂ. ಮಂಜುನಾಥ ಗೌಡರು ಇದೇನ್‌ ಕಥೆ ಎಂದು ಯೋಚನೆಗೆ ಬಿದ್ದಂತೆ ಕಾಣಿಸುತ್ತಿತ್ತು. ಪ್ರೇಕ್ಷಕರೂ ಕಂಗಾಲಾಗಿ ಇದೇನು ನಡೆಯುತ್ತಿದೆ ಎಂದು ವೀಕ್ಷಿಸುತ್ತಿದ್ದರು.

ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ವಿಶ್ವಾಸ ಕಳೆದುಕೊಂಡು ಸಂಸದ ಬಿ.ವೈ. ರಾಘವೇಂದ್ರ ಓಲೈಕೆಗೆ ಇಳಿದರಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮನೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಇದರಿಂದ ಸುಸ್ತಾದಂತೆ ಕಾಣಿಸಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಪ್ರೇಕ್ಷಕರಿಂದ ತುಂಬಿದ ಸಭೆಯಲ್ಲಿ ಹೀಗೇಕೆ ಮಾಡಿದರು ಎಂಬ ಪ್ರಶ್ನೆಗಳು ಸಹಜವಾಗಿ ಮೂಡಿಸುವಂತಿತ್ತು.

ಕೊನೆಗೂ ಬಿತ್ತು ಆರಗಗೆ ಹಾರ ಇದರ ಹಿಂದಿದೆ ಏನಿದೆ ವಿಚಾರ

2018ರಲ್ಲಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಕಟ್ಟಡ ಕುಸಿದು ಬೀಳುವ ಹಂತದಲ್ಲಿದ್ದಾಗ ಶಾಸಕ ಆರಗ ಜ್ಞಾನೇಂದ್ರ ಅತ್ಯಂತ ಶ್ರಮವಹಿಸಿ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಅವರ ಪರಿಶ್ರಮದಿಂದಲೇ ಗ್ರಾಮೀಣಾಭಿವೃದ್ಧಿ ಭವನ ಸುಸಜ್ಜಿತವಾಗಿ, ವ್ಯವಸ್ಥಿತವಾಗಿ ನಿರ್ಮಾಣವಾಗಿದೆ. ಎಲ್ಲಾ ಇಲಾಖೆಗಳು ಒಂದೇ ಮಹಡಿಯ ಒಳಗೆ ಬರುವುದರಿಂದ ಬಡವರಿಗೆ ಅನುಕೂಲ ಆಗುತ್ತದೆ ಎಂದು ತಿಳಿದಿದ್ದ ಅವರು ಒಂದೇ ಕಟ್ಟಡಕ್ಕೆ ಹೆಚ್ಚಿಗೆ ಅನುದಾನ ಕ್ರೋಡೀಕರಿಸಲು ತಯಾರಿ ನಡೆಸಿದ್ದರು. ಇಲಾಖೆಗಳನ್ನು ಜಾಲಾಡಿ ಹಣ ಮಂಜೂರು ಮಾಡಿಸಿದ್ದರು. ಅವರಿಗೆ ಬಿಜೆಪಿ ಕಾರ್ಯಕರ್ತರು ಹಾರ ಹಾಕುವ ಮೊದಲೇ ಕಾಂಗ್ರೆಸ್‌ ಕಾರ್ಯಕರ್ತರು ತಾಮುಂದು, ನಾಮುಂದು ಎಂದು ಹಾರ ಹಾಕಿಯೇ ಬಿಟ್ಟರು. ಹಾರದ ವಿಚಾರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೀಸಿದ ಗಾಳದ ಹಿಂದೆ ವಿಚಾರ ಏನಿದೆ ಎಂದು ಸಭೀಕರು ಆಶ್ಚರ್ಯದಿಂದ ವೀಕ್ಷಿಸುತ್ತಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post