ಮೋದಿ ಮುಸ್ಲಿಂ ಬಿಟ್ಟು ಕಾರ್ಯಕ್ರಮ ರೂಪಿಸಿಲ್ಲ

ಜಾತಿ ಒಡೆದು ಕಾಂಗ್ರೆಸ್‌ ಅಂಧ ದರ್ಬಾರ್  - ಆರಗ‌
ಮೋದಿ ಆಡಳಿತಕ್ಕೆ ಜನ ಬೆಂಬಲ – ಕುಣಜೆ ಕಿರಣ್‌ ಪ್ರಭಾಕರ್
ಜೆಡಿಎಸ್‌ ಮುಖಂಡ ಯಡೂರು ರಾಜಾರಾಂ ಗೈರು

ತೀರ್ಥಹಳ್ಳಿಯ ಕೊಪ್ಪ ಸರ್ಕಲ್‌ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಗುರುವಾರ ಜೆಡಿಎಸ್-ಬಿಜೆಪಿ ಜಂಟಿ ಪತ್ರಿಕಾಗೋಷ್ಟಿ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜೆಡಿಎಸ್‌-ಬಿಜೆಪಿ ಮೈತ್ರಿಯಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಶಕ್ತಿ ಬಂದಿದೆ. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.‌ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪುನಃ ದೇಶದಲ್ಲಿ ಯಶಸ್ವಿಯಾಗಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಡೂರು ರಾಜಾರಾಂ ಪತ್ರಿಕಾಗೋಷ್ಟಿಗೆ ಗೈರಾಗಿದ್ದರು. ಅವರು ವಿಧಾನಸಭಾ ಚುನಾವಣೆಯಲ್ಲಿ 2710 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಅಭ್ಯರ್ಥಿ ಸಾಮಾರ್ಥ್ಯ ಹೇಳುವಷ್ಟು ಚೆನ್ನಾಗಿರಲಿಲ್ಲ. ಯುವ ಅಭ್ಯರ್ಥಿ ಜೊತೆಗೆ ಚುನಾವಣೆ ಹೊಸ ಅನುಭವ ಆಗಿದ್ದರಿಂದ ಹೆಚ್ಚು ಲಾಭ ಆಗಲಿಲ್ಲ. ಮುಂದಿನ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್‌ ಮುಖಂಡರು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಎಲ್ಲಾ 28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. 10 ವರ್ಷದ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವದ ಶಕ್ತಿಯಾಗಿ ಹೊರ ಹೊಮ್ಮಿದೆ. 5ನೇ ಆರ್ಥಿಕ ಶಕ್ತಿಯಾಗಿ ಭಾರತ ನಿರ್ಮಾಣವಾಗಿದೆ. ಆರ್ಥಿಕ ಸಮಾನತೆ ಜನರ ನಡುವೆ ಹಂಚಿಕೆಯಾಗುತ್ತಿದ್ದು ನರೇಂದ್ರ ಮೋದಿ ಆಡಳಿತದಲ್ಲಿ ಶೇಕಡ 20 ರಷ್ಟು ಬಡವರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. ಆರ್ಥಿಕ ಚೈತನ್ಯದಿಂದ ಬಡವರ ಕೊಳ್ಳುವ ಸಾಮರ್ಥ್ಯ ವೃದ್ಧಿಸಿದೆ ಎಂದರು.

ಜನರಿಗೆ ಆಮೀಷ ಒಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ. ಗ್ಯಾರಂಟಿ ಯೋಜನೆಯನ್ನು ಆಮಿಷಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಆಪರೇಷನ್‌ ಕಮಲದ ಮೂಲಕ ಶಾಸಕರನ್ನೇ ಆಮಿಷಕ್ಕೆ ಒಳಪಡಿಸಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದು ಸಮಂಜಸವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಅದು ವರಿಷ್ಟರ ತೀರ್ಮಾನ ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದರು.

ಕೋಮುವಾದಿ ಶಕ್ತಿಗಳು ಬಾಂಬ್‌ ಸಿಡಿಸಿ ಖುಷಿ ಪಡುವುದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಜಾತಿ ಒಡೆದು ಅಂಧ ದರ್ಬಾರ್‌ ನಡೆಸುತ್ತಿದೆ. ನರೇಂದ್ರ ಮೋದಿ ಮುಸ್ಲಿಂ ಬಿಟ್ಟು ಯಾವ ಕಾರ್ಯಕ್ರಮ ರೂಪಿಸಿಲ್ಲ. ಭಾರತದಲ್ಲಿ ಮುಸ್ಲಿಂ ಸಮುದಾಯ ಸುರಕ್ಷಿತವಾಗಿದೆ. ದೇಶದಲ್ಲಿ ರೈಲ್ವೆ, ವಿಮಾನ, ಸಾರಿಗೆ ವ್ಯವಸ್ಥೆ ಸುಗಮವಾಗಿದೆ. ಕೋವಿಡ್‌-19 ಸಂದರ್ಭ ಜನರಿಗೆ ಉಚಿತ ವ್ಯಾಕ್ಸಿನ್‌ ನೀಡಿದೆ. ಅಭಿವೃದ್ಧಿ ಬಲಿಕೊಟ್ಟು ಅಧಿಕಾರದಲ್ಲಿ ಕುಳಿತುಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿ ಕಾಂಗ್ರೆಸ್‌ ತೊಡಗಿದೆ. ರಾಜ್ಯದಲ್ಲಿ ಕುಡಿಯುವ ನೀರು ಕೊಡದ ಹತಾಶ ಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆ. ಕೇಂದ್ರ ಸರ್ಕಾರ ಹಣ ಕೊಡಲಿಲ್ಲ ಎಂದು ಸುಪ್ರಿಂ ಕೋರ್ಟ್‌ ಮೊರೆ ಹೋಗುವುದರಲ್ಲಿ ಅರ್ಥವೇ ಇಲ್ಲ. ಕಾಂಗ್ರೆಸ್‌ ದುರಾಡಳಿತದಿಂ ಜನ ರೋಸಿ ಹೋಗಿದ್ದು ಎಲ್ಲಾ 28 ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳಲಿದೆ. ಶಿವಮೊಗ್ಗ ಜಿಲ್ಲೆಗೆ ಅಭಿವೃದ್ಧಿಯ ಮಹಾಪೂರವೇ ಬಂದಿದೆ. ಸಾವಿರಾರು ಕೋಟಿ ಅನುದಾನ ತಂದು ಶಿವಮೊಗ್ಗ ಸುಂದರ ನಗರವಾಗಿ ಪರಿವರ್ತನೆಯಾಗಿದೆ ಎಂದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಕುಣಜೆ ಕಿರಣ್‌ ಪ್ರಭಾಕರ್‌ ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ನಂತರ ಪ್ರಬಲ ನಾಯಕತ್ವ ಇರಲಿಲ್ಲ. 10 ವರ್ಷದ ಮೋದಿ ಸರ್ಕಾರದ ಅಭಿವೃದ್ಧಿಗೆ ಜನ ಬೆಂಬಲಿಸುತ್ತಾರೆ. ಕೋಮನ್ನು ತುಷ್ಟೀಕರಿಸುವ ಕಾಂಗ್ರೆಸ್‌ ಆಡಳಿತಕ್ಕೆ ವಾರಂಟಿ ಇಲ್ಲ. ಪ್ರಧಾನ ಮಂತ್ರಿಗಳ ಕಾಳಜಿಯುತ ನಿರ್ಣಯದಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮ ನಡೆದಿದೆ. ಒಂದು ಸಮುದಾಯವನ್ನು ತುಷ್ಟೀಕರಣ ಮಾಡುವವರು ಜಾತ್ಯಾತೀತರು ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ವೀಕ್ಷಕ ‌ಮಾಜಿ ಶಾಸಕ ರಘುಪತಿ ಭಟ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ನವೀನ್‌ ಹೆದ್ದೂರು, ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ನಾಗರಾಜ್‌, ಎಸ್‌ಸಿ.ಎಸ್ಟಿ ಘಟಕದ ಅಧ್ಯಕ್ಷ ಆನಂದ ಮುಖಂಡರಾದ ಸಾಲೇಕೊಪ್ಪ ರಾಮಚಂದ್ರ, ಚಂದವಳ್ಳಿ ಸೋಮಶೇಖರ್‌, ಬೇಗುವಳ್ಳಿ ಸತೀಶ್‌, ಮೋಹನ್‌ ಭಟ್‌, ಗುರುದತ್ತ, ಮೇದೊಳಿಗೆ ರಾಮಸ್ವಾಮಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post